ಸಾಪ್ತಾಹಿಕಪ್ರಭ

ಭ್ರೂಣದ ಸುತ್ತಾ...

Published On :

ಪು ಟ್ಟೀರಿ ಬಿಕ್ಕುತ್ತಲೇ ಇದ್ದಳು. ಹನುಮ ಮುಖ ಇಳೀಬಿಟ್ಕಂಡು ಕುಕ್ಕರಗಾಲಲ್ಲಿ ಕುಳಿತು 'ಬಿಡಮ್ಮಿ ಎಷ್ಟಳ್ತಿಯ, ಮೈಯಿಳಿದು ಸುಸ್ತಾಗಿದ್ದೀಯ. ಸುಮ್ನೆ ಮನಿಕ್ಕ ಮಗ ಎದ್ದಾನು' ಪುಟ್ಟೀರಿ ಸೆರಗಲ್ಲಿ ಮೂಗೊರೆಸಿಕೊಂಡು 'ಹೂಂ ಹೆಂಗೆ ಸುಮ್ನಾಗಲಿ, ಒಂದಲ್ಲ ಎರಡಲ್ಲ ಆರು ಕರಳುಕುಡಿ ಕೊಟ್ಟು ಬಂದ್ರಲ್ಲ ನಿನ್ಗೆ ನೋವಾಗಲ್ವಾ. ದುಡ್ಡಿಗೋಸ್ಕರ ಕಳ್ಳುಬಳ್ಳೀನ್ನೇ ಕಿತ್ತು ಕೊಡಬೇಕಾ? ಬೇರೆ ಕೆಲಸ ಮಾಡು ಇಲ್ಲ ನಾನಾರ ಕೂಲಿ ಹೋಗ್ತೀನೀಂದ್ರು ಕೇಳಲ್ಲ. ಏನಾದ್ರಂದ್ರೆ ಸ್ಮಶಾನ ಹುಡುಕ್ಕೊಂಡು ಹೋಗ್ತೀಯ. ಎಲ್ಲಾ ಹಣೆಬರ' ಪುಟ್ಟೀರಿ ಕಂಬಳಿ ಎಳ್ಕೊಂಡು ಮಲಗಿದಳು.     
ಹೌದು, ಹನುಮನ ಕೆಲ್ಸಾನೇ ಅದು. ಭ್ರೂಣಗಳನ್ನು ಮೆಡಿಕಲ್ ಕಾಲೇಜ್ ಶರೀರಶಾಸ್ತ್ರ ವಿಭಾಗ ಮುಖ್ಯಸ್ಥರಿಗೆ ಮಾರೋದು, ಸ್ಮಶಾನದಲ್ಲಿ ಹುಡುಕಿ ಮೂಳೆಗಳನ್ನು ತಂದು ಮೆಡಿಕಲ್, ಡೆಂಟಲ್ ಸ್ಟೂಡೆಂಟ್ಸ್‌ಗೆ ಕೊಡೋದು, ಬಂದ ಪುಡಿಗಾಸಿನಿಂದ ಜೀವನ. ಕೂಲಿ ಮಾಡ್ತಿದ್ದವನ ನೇಮ, ನಿಷ್ಠೆ ನೋಡಿ ಸಂಬಂಧಿಯೊಬ್ಬ  ಮಗಳ್ನಾ ಕರಿಯಮ್ಮನ ಗುಡೀಲಿ ಧಾರೆ ಎರೆದಿದ್ದ. ಜೋಡೆತ್ತು ಕೊಟ್ಟಿದ್ದ. ಹನುಮನೂ ಖುಸಿಯಿಂದ ಎತ್ತುಗಳನ್ನು ಬಾಡಿಗೆ ಹೊಡೆದು ಜೀವನ ಮಾಡ್ತಿದ್ದವನಿಗೆ ಬರಸಿಡಿಲಂತೆ ಬಡಿದಿದ್ದು ಹೆಂಡ್ರು ಲಚ್ಚಿ ಇದ್ದಕ್ಕಿದ್ದಂತೆ ಸತ್ತಿದ್ದು. ಬದುಕು ಶೂನ್ಯ ಎನಿಸಿತು. ಅಷ್ಟರಲ್ಲಿ ಸಿಕ್ಕಿದ್ದು ಪುಟ್ಟೀರಿ. ದಿಕ್ಕುದೆಸೆಯಿಲ್ಲದವಳನ್ನು ಯಾರೋ ಅತ್ಯಾಚಾರ ಮಾಡಿ ಕೊಲ್ಲೊ ಹಂತದಲ್ಲಿದ್ದಾಗ, ಪ್ರಾಣವನ್ನು ಕಾಪಾಡಿದ್ದ. ಮುಂದೆ ಅವಳೆ ಬಾಳಿಗೆ ಬೆಳಕಾದ್ಳು. ಮನೆಲಿಟ್ಟುಕೊಂಡಿದ್ದಕ್ಕೆ ಸಿಟ್ಟಾದ ಮಾವ ಜೋಡೆತ್ತು ಹೊಡ್ಕೊಂಡು ಹೋಗೇಬಿಟ್ಟಾ.
ರಾತ್ರಿನೇ ಊರು ಬಿಟ್ಟು ಪ್ಯಾಟೆ ಸೇರ್ಕಂಡ್ರು. ಹಿಂಗೆ ಕೆಟ್ಟು ಪಟ್ಟಣ ಸೇರು ಅಂತಾರೆ. ಹನುಮ ಕೆಡುವ ಮೊದ್ಲೆ ಪಟ್ಟಣ ಸೇರಿದ್ದ. ಬೆಂಗಳೂರಲ್ಲಿ ಕೂಲಿ ಕೆಲಸ ಮಾಡ್ತ ಜೀವನ ಮಾಡ್ತಿದ್ರು. ಇಷ್ಟಾಗುವಷ್ಟರಲ್ಲಿ ಪುಟ್ಟೀರಿಯಲ್ಲಿ ಅತ್ಯಾಚಾರದ ಫಲ ಅವಳ ಗರ್ಭದಲ್ಲಿ ಪುಟ್ಟಜೀವ ಬೆಳಿತಾ ಇತ್ತು. ಇದ್ದಕ್ಕಿದ್ದಂತೆ ಅವಳಿಗೆ ರಕ್ತಸ್ರಾವವಾಯ್ತು. ಆಸ್ಪತ್ರೆಲಿ ಡಾಕ್ಟರ್ ಗರ್ಭಪಾತ ಆಗಿದೆ ಅಂತ ಚಿಕಿತ್ಸೆ, ದುಡ್ಡು ಕೊಟ್ಟು ಕವರಲ್ಲಿ ಭ್ರೂಣ ಹಾಕಿ ವಿಳಾಸ ಬರೆದು ಆಟೊದಲ್ಲಿ ಕಳುಹಿಸಿದ್ರು. ಹನುಮ ಹೋಗಿದ್ದು ಮೆಡಿಕಲ್ ಕಾಲೇಜಿನ ಅಂಗರಚನಾ ಶಾಸ್ತ್ರ ಮುಖ್ಯಸ್ಥ ಡಾ. ರವಿ ಹತ್ತಿರ. ಅವನಿಗೆ ಸಾವ್ರ ರುಪಾಯಿ ಕೊಟ್ಟರು. ಭ್ರೂಣವನ್ನು ಮ್ಯುಸಿಯಂಗೆ ಕಳಿಸಿ, 'ಏನೋ ನಿನ್ನ ಹೆಸರು?'
'ಹನುಮ ಬುದ್ದಿ'
'ನಿನ್ಜೊತೆಗೆ ಯಾರಿದಾರೋ, ಮದುವೆ ಹೆಂಡ್ತಿ, ಮಕ್ಕಳು?'
'ಹೆಂಡ್ರು ಸತ್ತೋಗವ್ಳೆ. ಈಗ ಇನ್ನೊಂದು ಹೆಣ್ಣೈತೆ ಆದ್ರೆ ಮದ್ವೆ ಆಗಿಲ್ಲ ಬುದ್ದಿ' ಡಾ. ರವಿ ಮಾತಾಡಲಿಲ್ಲ, ಇವ್ರಿಗೆ ಊಟ ಕೊಡಿಸಿದ.   
ಸಂಜೆ ಡಾ. ರವಿ, ಒಂದೆರಡು ದಿನ ಇರಲಿಕ್ಕಂತ ಮನೆಯ ಔಟ್‌ಹೌಸ್‌ನಲ್ಲಿ ಬಿಟ್ಟರು. ಸುಸ್ತಾದ ಪುಟ್ಟೀರಿ ನಿದ್ರೆಗೆ ಜಾರಿದಳು.
ಹೆಂಡತಿ ಲತಾ 'ಪುಟ್ಟೀರಿ, ಹನುಮ ಯಾರೇ, ನಿನ್ನ ಗಂಡನೆ? ತಾಳಿ ಇಲ್ಲ, ಕದ್ದು ಓಡಿ ಬಂದ್ರ?'
'ಅವ್ವಾ, ಬಿಡ್ತು ಅನ್ನಿ. ದೇವ್ರಿದ್ದಂಗೆ. ಪ್ರಾಣಾ ಕಾಪಾಡೋವ್ರೆ' ಅಂದು ಪುಟ್ಟೀರಿ ತನ್ನ ಕಥೆ ಹೇಳಿದ್ಳು.
ಲತಾ 'ಹೌದೇನೆ, ದೇವ್ರು ಒಳ್ಳೆದು ಮಾಡ್ತಾನೆ. ಅವನನ್ನ ಮದುವೆ ಆಗು' ಅಂದಳು.
ಹೀಗೆ ತಿಂಗ್ಳು ಕಳೀತು. ಹನುಮ ಊರು ಸೇರಿ ಪುಟ್ಟೀರಿಗೆ ಕರಿಯಮ್ಮನ ಗುಡೀಲಿ ತಾಳಿ ಕಟ್ಟಿದ. ಪುಟ್ಟೀರಿ ಮನೆ ಕ್ಲೀನ್ ಮಾಡಿದ್ಲು. ಹನುಮ ಗೂಡಂಗಡಿಗೆ ಹೋಗಿ ಒಂದಿಷ್ಟು ಸಾಮಾನು ತಂದಾಕ್ದ.     
ದಿನ ಕಳೀತಾಯಿತ್ತು. ಪುಟ್ಟೀರಿ ಬಸರಾದ್ಲು. ಕೂಲಿಗೆ ಹೋಗೋ ಹಂಗಿಲ್ಲ. ಗಂಡ ಹೆಂಗೇಳ್ತಾನೋ ಹಂಗೆ ಕೇಳೋದಷ್ಟೆ. ಪ್ರಾಣ ಕಾಪಾಡವ್ನಲ್ಲ ಅಂತಿದ್ದವಳಿಗೆ ರಕ್ತಸ್ರಾವದಿಂದ ಗರ್ಭಪಾತ ಆಗಿತ್ತು. ಭ್ರೂಣವನ್ನು ಕವರಿಗೆ ಹಾಕ್ಕೊಂಡು ಡಾ. ರವಿ ವಿಳಾಸಕ್ಕೆ ಹೊರಟುಬಿಟ್ಟ.
ಡಾ. ರವಿ 3000 ರುಪಾಯಿ ಕೊಟ್ಟು 'ಹನುಮ, ಇದು ಭ್ರೂಣ. ಸ್ಟುಡೆಂಟ್ಸ್‌ಗೆ ಪಾಠ ಮಾಡಲಿಕ್ಕೆ ಬೇಕು. ಮನುಷ್ಯನ, ಮಕ್ಕಳ ಮೂಳೆ ತಗೊಂಡು ಬಾ. ದುಡ್ಡು ಕೊಡ್ತೀನಿ' ಅಂದ.  
ಪುಟ್ಟೀರಿ ಸುಸ್ತಾಗಿದ್ದಳು. ಹನುಮ ಒಂದಿಷ್ಟು ಗಂಜಿನೀರು ಮಾಡಿಕೊಟ್ಟ. ಸ್ವಲ್ಪ ಸುಧಾರಿಸಿಕೊಂಡ್ಲು. ಬೆಳಗೆದ್ದು ಸ್ಮಶಾನ ತಿರುಗಿ ತಲೆ ಬುರುಡೆ, ಕೈಕಾಲು ಮೂಳೆ ಗೋಣಿಚೀಲದಲ್ಲಿ ಹಾಕಿ ಬೆಳಿಗ್ಗೆ ಚೀಲ ತಗೊಂಡು ಪ್ಯಾಟೆಗೆ ಹೊರಟೇ ಬಿಟ್ಟ.
ಡಾ. ರವಿ ತಲೆಬುರುಡೆ ಮೂಳೆ ನೋಡಿ ಮತ್ತೆ ದುಡ್ಡು ಕೊಟ್ರು. 'ಹನುಮ ಕಾಫೀ ಕುಡಿತಿಯಾ' ಅಂತ ತರಿಸಿ ಕೊಟ್ಟರು. ಹನುಮ ಖುಷಿಯಿಂದ ಬರ್ತೀನಿ ಅಂತ ಊರಿಗೆ ಹೊರಟ.
ಈಗ ದುಡ್ಡು ಓಡಾಡುತ್ತಿತ್ತು. ಪುಟ್ಟೀರಿಗೆ ಮುಟ್ಟು ನಿಂತು 5 ತಿಂಗಳಿಗೆ ಗರ್ಭಪಾತವಾಯ್ತು. ಮತ್ತೆ ಹನುಮ ಡಾಕ್ಟರ್‌ಗೆ ಕೊಟ್ಟು ಹಣ ತಂದು 'ಪುಟ್ಟೀರಿ ತಗೋ ದುಡ್ಡು' ಅಂದ. ಆಕೆ ಜೋರಾಗಿ 'ಹಣನಾ ಹೆಣದ ಮೇಲೆ ಹಾಕು. ನಿಂಗೆ ಬುದ್ದಿ ಇಲ್ವಾ. ಕರಳು ಕುಡಿ ಸಾಯ್ತಾವೆ. ಅವನ್ನ ಮಾರ್ತೀಯ ಹೊಟ್ಟೆ ಹುರಿತೈತಲ್ಲಾ. ನಾಚಿಕೆ ಆಗಲ್ವಾ?' ಅಂತ ಬೈದ್ಲು. ಹನುಮ ತಲೆತಗ್ಗಿಸಿದ.
ಹೀಗೆ ದಿನ ಕಳೆದವು. ಮತ್ತೆ ಬಸಿರಾದಳು. ಹನುಮನೇ ಗರ್ಭ ನಿಲ್ಲೊ ನಾಟೀ ಔಷಧಿ ಕೊಡ್ಸಿದ. ಗರ್ಭಪಾತ ಆಗಲಿಲ್ಲ. ಹುಣ್ಣಿಮೆ ಚಂದ್ರನಂತ ಗಂಡುಮಗ ಹುಟ್ಟಿದ್ದ. ಹನುಮನಿಗೂ ಖುಷಿಯಾಯ್ತು. ಪುಟ್ಟೀರಿ ಕರಿಯಮ್ಮನಿಗೆ ಹಣ್ಣುಕಾಯಿ ಮಾಡಿಸಿಕೊಂಡು ಬಂದ್ಲು. ಮಗನಿಗೆ ಕರಿಯ ಅಂತ ಹೆಸರಿಟ್ಟ. ಮಗ ಹುಟ್ಟಿದ ಮೇಲೆ ದುಡಿಮೆ ಚೆನ್ನಾಗಿತ್ತು. ಮೂಳೆ ತಲೆಬುರುಡೆಗಳಿಂದ ಜಾಸ್ತಿ ದುಡ್ಡು ಬರ್ತಾ ಇತ್ತು.
ಪುಟ್ಟೀರಿಗೆ ಮೈಯಲ್ಲಿ ರಕ್ತ ಇಲ್ದೆ ಇದ್ರೂ ಮತ್ತೆ ಗರ್ಭ ಧರಿಸಿದಳು. 7 ತಿಂಗಳು ತುಂಬಿದಾಗ ಕಾಲುಜಾರಿ ಬಿದ್ದಿದ್ದೆ ನೆಪ, ಗರ್ಭಪಾತವಾಯ್ತು. ಮತ್ತೆ ಹನುಮ ತೆಗೆದುಕೊಂಡು ಪ್ಯಾಟೆಗೆ ಹೊರಟ.
'ತಗೋ ರೂ.10000, ಪುಟ್ಟೀರಿನ ಚನ್ನಾಗಿ ನೋಡ್ಕೋ. ಮಗನ್ನ ಓದ್ಸು' ಅಂದು ದುಡ್ಡು ಕೊಟ್ರು. ತಗಂಡು ಬಂದಾಗಲೇ ಪುಟ್ಟೀರಿ ಬಿಕ್ಕಿ ಅಳುತ್ತಲಿದ್ದಳು. ಹನುಮ 'ಬಿಡಮ್ಮಿ ಎಷ್ಟಳ್ತಿಯ, ಮೈಯಿಳಿದು ಸುಸ್ತಾಗಿದಿಯಾ. ತಗಾ ಹೋಟ್ಳೂದು ದ್ವಾಸೆ ತಿನ್ನು, ಮಗಂಗೆ ಜಿಲೇಬಿ ತಂದಿನಿ' ಅಂದ.
ಬಿಕ್ಕುತ್ತಾ ದ್ವಾಸೆ ತಿಂದು ಸೆರಗೆಳ್ಕೊಂಡು ಮಲಗಿದಳು. ಹನುಮನೂ ಅಡ್ಡಾದಾಗ ಕೋಳಿ ಕೂಗೊ ಹೊತ್ತಾಗಿತ್ತು.

- ಡಾ.ಪಾರ್ವತಿ ಚಿತ್ರದುರ್ಗ
chitradurgatho@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.