ಅಭಯಾರಣ್ಯ

ಸೋಗಲಿ ಪುಟ್ಟ ನದಿಯ ದಂಡೆಯ ಮೇಲಿನ ಒಂದು ಕ್ಷೇತ್ರ. ಅದನ್ನು ಪರಮಾನಂದ ಪುಣ್ಯಾರಣ್ಯವೆಂದು ಕರೆಯುವರು. ಆ ಪುಣ್ಯಕ್ಷೇತ್ರದಲ್ಲಿ ಪರಮಾನಂದರೆಂಬ ಪುಣ್ಯ ಪುರುಷರು ತಪಸ್ಸು ಮಾಡಿದ್ದರಂತೆ. ಆ ಪುಣ್ಯಾರಣ್ಯ ನಿಜವಾಗಿಯೂ ಬಲು ಸುಂದರವಾಗಿದೆ. ಸುತ್ತಲೂ ಎತ್ತರವಾಗಿ ಬೆಳೆದ ಗಿಡಬಳ್ಳಿ ಹಚ್ಚ ಹಸುರಿನ ಹುಲ್ಲುಹಾಸಿನಿಂದ ಬಲು ರಮ್ಯವಾಗಿದೆ.
ಅಲ್ಲಿ ಯಾರೂ ಎಂದೂ ಗಿಡ, ಮರ ಕಡಿಯುವುದಿಲ್ಲ. ಪಶುಪಕ್ಷಿಗಳ ಬೇಟೆಯಾಡುವಂತಿಲ್ಲ. ಹಾಗೆ ಮಾಡಿದವರಿಗೆ ಒಳ್ಳೆಯದಾಗುವುದಿಲ್ಲ. ಅಷ್ಟೇ ಅಲ್ಲ ಇಲ್ಲಿ ಪ್ರಾಣಿಹಿಂಸೆ ಮಾಡಿದವರಿಗೆ ಉಳಿಗಾಲವಿಲ್ಲ. ಪರಮ ದಯಾಳು ಪರಮಾನಂದರು ಶಾಂತಿಪ್ರಿಯರಾಗಿದ್ದರು. ಅವರ ತಪೋಮಹಿಮೆಯಿಂದ ಪಶು ಪಕ್ಷಿ ಪ್ರಾಣಿಗಳೆಲ್ಲ ಯಾವ ಭಯವಿಲ್ಲದೇ ಬಾಳುತ್ತಿವೆ.
ಹೀಗಿರುವಾಗ ಎಲ್ಲಿಂದಲೋ ಬಂದ ಗೊಲ್ಲ ಗೊರಚರಿಗೆ ಆ ಪುಣ್ಯಾರಣ್ಯದ ಮಹಿಮೆ ಏನೊಂದೂ ತಿಳಿಯದು. ಅವರು ಊರ ಮುಂದೆ ಗುಡಿಸಲುಗಳನ್ನು ಕಟ್ಟಿಕೊಂಡು ಇರತೊಡಗಿದರು. ಒಂದು ದಿನ ಒಬ್ಬ ಬೇಟೆಗಾರ ಪಕ್ಷಿಗಳ ಬೇಟೆಯಾಡಲು ಅಭಯಾರಣ್ಯಕ್ಕೆ ಹೋದ. ಬಲೆಯ ಗೂಡನ್ನು ಆಶ್ರಮದ ಬಳಿ ಇಟ್ಟು ಗೂಡಿನೊಳಗೆ ಕಾಳುಗಳನ್ನು ಹರವಿ ದೂರದಲ್ಲಿ ಹಕ್ಕಿ ಪಕ್ಷಿಗಳಿಗೆ ಕಾಣದಂತೆ ಕುಳಿತುಕೊಂಡ. ಅಷ್ಟರಲ್ಲಿ ಅಲ್ಲಿಗೆ ಹಲವಾರು ಹಕ್ಕಿಗಳು ಹಾರಿಬಂದು ಬಲೆಯ ಸುತ್ತಲೂ ನೆರೆದವು. ಬಲೆಯ ಒಳಗೆ ಹರವಿದ್ದ ಬಗೆಬಗೆಯ ಕಾಳುಗಳನ್ನು ನೋಡಿದವು. ಆಗಲೇ ಅವುಗಳಿಗೆ ಕಾಳುಗಳನ್ನು ತಿನ್ನುವ ಆಸೆ ಹುಟ್ಟಿತು. ಹಿಂದುಮುಂದು ನೋಡದೆ ಜೋಡಿ ಕೌಜುಗ ಹಕ್ಕಿಗಳು ಬಲೆಯಲ್ಲಿ ನುಗ್ಗಿದವು. ಅವು ಬಲೆಯೊಳಗೆ ಹೋಗುತ್ತಲೇ ಗೂಡಿನ ಬಲೆಯ ಬಾಗಿಲು ಪಟ್ಟೆಂದು ಮುಚ್ಚಿಕೊಂಡಿತು. ಒಳಹೊಕ್ಕ ಹಕ್ಕಿಗಳಿಗೆ ಗಾಬರಿಯಾಯಿತು. ಹೊರಬರಲು ಹೆಣಗಿದವು. ಭಯದಿಂದ ನಡುಗಿದವು. ಜೋರಾಗಿ ಚೀರಿದವು. ಕೂಗನ್ನು ಕೇಳಿದ ಬೇಟೆಗಾರ ಓಡಿಬಂದು, ಬಲೆಯಲ್ಲಿ ಸಿಕ್ಕಿಬಿದ್ದ ದಷ್ಟಪುಷ್ಟ ಕೌಜುಗದ ಜೋಡಿ ಹಕ್ಕಿಗಳನ್ನು ಕಂಡು ಹಿರಿಹಿರಿ ಹಿಗ್ಗಿದ. ಕೂಡಲೇ ಬಲೆಯನ್ನು ಹೊತ್ತು ಊರದಾರಿ ಹಿಡಿದ.
ಬೇಟೆಗಾರ ಕೊರಚನ ಗುಡಿಸಲ ಬಾಗಿಲಲ್ಲಿ ಅವನ ಹೆಂಡತಿ ಆತನ ಬರುವನ್ನೇ ಕಾಯುತ್ತ ಕುಳಿತಿದ್ದಳು. ಹುರುಪಿನಿಂದ ಬಂದ ಅವನು ಹೊತ್ತು ತಂದ ಬಲೆಗೂಡನ್ನು ಅವಳ ಮುಂದೆ ಇರಿಸಿ ನಗುತ್ತ ನಿಂತ. ಅವನ ನಡತೆ ಹೆಂಡತಿಗೆ ವಿಚಿತ್ರವೆನ್ನಿಸಿತು. ಬಲೆಯಲ್ಲಿ ನೋಡಿದರೆ ಯಾವ ಬೇಟೆಯೂ ಇರಲಿಲ್ಲ. ಬದಲಾಗಿ ಎರಡು ಕಾಯ್ಕುಳ್ಳುಗಳು ಕಾಣಿಸಿದವು. ಆಗ ಅವಳು ಕಾಯ್ಕುಳ್ಳು ಬಿಟ್ಟು ಬೇರೇನೂ ಸಿಕ್ಕಲಿಲ್ಲವೇನು? ಎಂದು ಬೇಸರದಿಂದ ನುಡಿದಳು. 'ಕುಳ್ಳು ತರಲು ನಾನು ಮಳ್ಳನಲ್ಲ. ಕೌಜುಗ ಜೋಡಿಹಕ್ಕಿ ಹಿಡಿದು ತಂದಿದ್ದೇನೆ! ಕಣ್ಣುಬಿಟ್ಟು ನೋಡು!' ಎಂದು ತಾನೇ ಗೂಡಿನತ್ತ ಬಿಂಕದಿಂದ ನೋಡಿ ಮಂಕಾಗಿ ನಿಂತುಕೊಂಡನು. ತನ್ನ ಕಣ್ಣು ತಾನೇ ನಂಬದಂತಾದನು.
ಬಲೆಯ ಗೂಡಿನಲ್ಲಿ ಕೌಜುಗದ ಜೋಡಿ ಹಕ್ಕಿ ಸಿಕ್ಕಿಬಿದ್ದು ಕಿರುಚಿದ್ದು, ಹೊರಬರಲು ಒದ್ದಾಡಿದ್ದು ಎಲ್ಲವನ್ನೂ ಹೆಂಡತಿಗೆ ಹೇಳಿದನು. ಅದನ್ನು ಕೇಳದ ಅವನ ಹೆಂಡತಿ ಅವಾಕ್ಕಾಗಿ ನಿಂತಳು. ಎಲ್ಲಾ ಸುಳ್ಳು ಎಂದು ಕೂಗಾಡಿದಳು. ನೆರೆದ ಜನರೂ ಅವನ ಮಾತನ್ನು ನಂಬದಾದರು. ಇದರಿಂದ ಅವನಿಗೆ ಅವಮಾನವಾಯಿತು. ಸಿಟ್ಟಿನಿಂದ ಬಲೆಯಲ್ಲಿದ್ದ ಕಾಯ್ಕುಳ್ಳುಗಳನ್ನು ತೆಗೆದು ಬೇಸರದಿಂದ ದೂರಕ್ಕೆ ಎಸೆದನು. ಏನಾಶ್ಚರ್ಯ!
ದೊಪ್ಪೆಂದು ನೆಲಕ್ಕೆ ಬಿದ್ದ ಕಾಯ್ಕುಳ್ಳುಗಳು ಕೌಜುಗದ ಹಕ್ಕಿಗಳಾಗಿ ಪುರ್ರ್ ಎಂದು ಹಾರಿಹೋದವು. ಕಿಲಿಕಿಲಿ ಸದ್ದು ಮಾಡುತ್ತ ಅವನನ್ನು ಅಣಕಿಸಿಬಿಟ್ಟವು. ಅದನ್ನೆಲ್ಲ ನೋಡಿ ಅಲ್ಲಿ ಸೇರಿದ್ದ ಜನರಿಗೂ ಅಚ್ಚರಿಯಾಯಿತು. ಅದನ್ನೆಲ್ಲ ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ ಮುದುಕನೊಬ್ಬ ಹೇಳಿದ, 'ನೀನು ಹಿಡಿದು ತಂದ ಹಕ್ಕಿಗಳು ಪುಣ್ಯಾರಣ್ಯದವು. ಅಲ್ಲಿ ಯಾರೂ ಬೇಟೆಯಾಡುವಂತಿಲ್ಲ. ಪ್ರಾಣಿಗಳನ್ನು ಕೊಲ್ಲುವಂತಿಲ್ಲ. ಹಾಗೆ ಮಾಡಿದವರಿಗೆ ಕೇಡು ತಪ್ಪದು. ಈಗ ನಡೆದದ್ದು ಪರಮಾನಂದರ ಮಹಿಮೆ' ಎಂದು ಅವರ ಮಹಿಮೆಯನ್ನು ಕೊಂಡಾಡಿದ.
ಇಂದಿಗೂ ವಿಜಾಪುರ ಜಿಲ್ಲೆಯ ಹೂವಿನ ಹಿಪ್ಪರಗಿ ಪರಮಾನಂದರ ಪುಣ್ಯಕ್ಷೇತ್ರ ಅಭಯಾರಣ್ಯವಾಗಿ ಪಶು ಪಕ್ಷಿಗಳನ್ನು ರಕ್ಷಿಸುತ್ತಿದೆ. <
-ಕಂಚ್ಯಾಣಿ ಶರಣಪ್ಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


