ಸಾಪ್ತಾಹಿಕಪ್ರಭ

ದೇವುಡು ಮಹಾದರ್ಶನ

Published On :

ಕನ್ನಡ ಸಾಹಿತ್ಯದ ಅಗ್ರಗಣ್ಯ ಲೇಖಕರಲ್ಲಿ ಒಬ್ಬರಾಗಿದ್ದ ದೇವುಡು ನರಸಿಂಹ ಶಾಸ್ತ್ರಿಗಳ ವ್ಯಕ್ತಿತ್ವ ಹಾಗೂ ಕೃತಿಗಳ ದರ್ಶನ ಮಾಡಿಸುವ 'ದೇವುಡು ದರ್ಶನ' ಕೃತಿಯನ್ನು ಹೊ.ರಾ. ಸತ್ಯನಾರಾಯಣ ಮತ್ತು ಗಂಗಾಧರ ದೇವುಡು ಅವರು ಸಂಪಾದಿಸಿದ್ದಾರೆ. ದೇವುಡು ಅವರ ಜೀವನ ಒಂದು ಭಾಗ ಮತ್ತು ಅವರ ಸಾಹಿತ್ಯ ಕೃತಿಗಳ ವಿಮರ್ಶೆ ಎರಡನೇ ಭಾಗದಲ್ಲಿದೆ.
ನಿಟ್ಟೂರು ಶ್ರೀನಿವಾಸರಾಯರು, ವಿ. ಸೀತಾರಾಮಯ್ಯ, ಅ.ನ. ಕೃಷ್ಣರಾಯರು, ಬಿ. ಶಿವಮೂರ್ತಿಶಾಸ್ತ್ರಿಗಳು, ಎನ್.ಕೆ. ಕುಲಕರ್ಣಿ ಮೊದಲಾದವರ ಲೇಖನಗಳು ಈ ಭಾಗದಲ್ಲಿವೆ. ದೇವುಡು ಅವರೇ ಬರೆದಿರುವ ಆತ್ಮಕಥನವೂ ಇದರಲ್ಲಿದೆ.
ದೇವುಡು ನರಸಿಂಹ ಶಾಸ್ತ್ರಿಗಳ ಜನನ 29-12-1896ರಂದು ಮೈಸೂರಿನಲ್ಲಿ ಆಯಿತು. ಇವರು ಆರು ವರ್ಷದವರಿರುವಾಗಲೇ ಇವರ ತಂದೆ ಪ್ಲೇಗಿಗೆ ಬಲಿಯಾದರು. ಇವರಿಗೆ ಓದಿನ ಹಸಿವು. ಹನ್ನೆರಡು ವರ್ಷದ ವೇಳೆಗೇ ಅವರು ರಾಮಾಯಣ, ಭಾರತ, ಭಾಗವತ, ಬ್ರಹ್ಮಾಂಡಪುರಾಣಗಳನ್ನು ಓದಿಕೊಂಡಿದ್ದರು. ಹೈಸ್ಕೂಲಿಗೆ ಬರುವ ವೇಳೆಗೇ 'ಶಬ್ದಮಣಿ ದರ್ಪಣ' ಅವರಿಗೆ ಕಂಠಪಾಠವಾಗಿತ್ತು. ಬಂಕಿಮಚಂದ್ರರ ಕಾದಂಬರಿಗಳು ತುಂಬಾ ಇಷ್ಟವಾಗಿದ್ದವು. 1925ರಲ್ಲಿ ಅವರು ಬೆಂಗಳೂರಿಗೆ ಬರುತ್ತಾರೆ.
ಆಗಿನ ಸಾಹಿತಿಗಳ ಸ್ಥಿತಿ ಹೇಗಿತ್ತು ಎಂಬುದನ್ನು ದೇವುಡು ಅವರ ಮಾತುಗಳಲ್ಲೇ ಓದಿ. 'ಸಾಹಿತಿಯಾಗಿ ನಿಲ್ಲುವುದಕ್ಕೆ ಆಸೆಯಿದ್ದರೂ ಇನ್ನೂ ಸ್ಥಿತಿ ಚೆನ್ನಾಗಿ ಇರಲಿಲ್ಲ. ಇನ್ನೂ ಆಗ ಹೇಗಿರಬೇಕು? ಜೊತೆಗೆ ಜನತೆಯು ಇನ್ನು ಸಾಹಿತ್ಯದ ಸೊಬಗನ್ನೇ ಅರಿಯುವಷ್ಟು ಮಟ್ಟಕ್ಕೆ ಬಂದಿಲ್ಲ. ಐದು ಹತ್ತು ರುಪಾಯಿ ಕೊಟ್ಟು ಸಂಗೀತ ಕೇಳುವ ಜನ ಬೆಂಗಳೂರಲ್ಲಿ ಎಷ್ಟೋ ಸಾವಿರ ಇದ್ದಾರೆ. ಆದರೆ ಒಂದು ರುಪಾಯಿ ಕೊಟ್ಟು ಪುಸ್ತಕ ಕೊಳ್ಳುವ ಸಾವಿರ ಜನ ಕೂಡ ಸಿಕ್ಕುವುದಿಲ್ಲ. ನಾಟಕ- ಸಿನಿಮಾಗಳಲ್ಲಿದ್ದ ಲಾಭವು ಪುಸ್ತಕ ಬರೆಯುವುದರಲ್ಲಿಯೇ?..' ಎಂದು ಅವರು ಪ್ರಶ್ನಿಸಿದ್ದಾರೆ.
ಬರೆದೇ ಬದುಕುವೆನೆನ್ನುವಂಥ ಸ್ಥಿತಿ ಆಗಿರಲಿಲ್ಲ. ಜನರ ಅಭಿರುಚಿಯೂ ಭಿನ್ನವಾಗಿತ್ತು. ಆದರೆ ದೇವುಡು ಅವರು ರಾಜಿ ಮನೋಭಾವದವರಾಗಿರಲಿಲ್ಲ. 'ಕೆಲವರು ಜನಕ್ಕೆ ಹಿಡಿಯುವ ಪುಸ್ತಕ ಬರೆದರೆ ಯಾಕೆ ಆಗುವುದಿಲ್ಲ ಎನ್ನುತ್ತಾರೆ. ನಾನು ಓದುವವರ ಮಟ್ಟಕ್ಕೆ ಪುಸ್ತಕ ಇಳಿಸಿದರೆ ಹೋಟೆಲ್ ತಿಂಡಿಗೂ ಇದಕ್ಕೂ ವ್ಯತ್ಯಾಸವೇನು? ಓದುವವನು ಬರೆಯುವವನ ಮಟ್ಟಕ್ಕೆ ಏರಬೇಕು. ಬೇರು ನೆಲದಲ್ಲಿಯೇ ಬಿಟ್ಟರೂ ಹೂ ಮಾತ್ರ ಗಿಡದ ತಲೆಯಲ್ಲಿಯೇ ಬಿಡುವುದು. 'ಹಾಗೇ ಸಾಹಿತ್ಯ' ಎನ್ನುತ್ತೇನೆ...' ಎಂದು ಅವರು ಬರೆದಿದ್ದಾರೆ.
ದೇವುಡು ಅವರು ಸಾಹಿತಿಗಳೂ ಹೌದು, ಹಾಗೆಯೇ ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಭಾಗಿಯಾದವರು ಕೂಡ. ಬೆಂಗಳೂರು ಸಿಟಿ ಕಾರ್ಪೋರೇಟರ್ ಕೂಡ ಆಗಿದ್ದರು. ದೇವುಡು ಅವರ ಮನೆ ಮಾತು ತೆಲುಗು, ಅಧ್ಯಯನದ ಭಾಷೆ ಸಂಸ್ಕೃತ. ಬಳಕೆಯ ಭಾಷೆ ಕನ್ನಡವಾಗಿತ್ತು. ಆ ಬಳಕೆಯ ಭಾಷೆಯಲ್ಲಿಯೇ ಅವರು ಸಾಹಿತ್ಯವನ್ನು ರಚಿಸಿದರು. 'ಮಹಾಬ್ರಾಹ್ಮಣ', 'ಮಹಾಕ್ಷತ್ರಿಯ', 'ಮಹಾದರ್ಶನ' ಅವರ ಅಮರ ಕೃತಿಗಳು. ಕದಂಬರ ಮೂಲ ಪುರುಷ ಮಯೂರವರ್ಮನ ಕುರಿತ ಕಾದಂಬರಿ 'ಮಯೂರ'. ಅವರ 'ಮಹಾಕ್ಷತ್ರಿಯ' ಕಾದಂಬರಿಗೆ ಅವರ ಮರಣದ ನಂತರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಬಂತು.
ದೇವುಡು ಅವರು 14 ಕಾದಂಬರಿಗಳನ್ನು ಬರೆದಿರುವರು. ಇನ್ನೊಂದು ಕಾದಂಬರಿ ಅಪೂರ್ಣವಾಗಿದೆ. ಐದು ಸಣ್ಣ ಕತೆಗಳ ಸಂಕಲನ ಬಂದಿದೆ. 5 ನಾಟಕಗಳನ್ನು ಬರೆದಿರುವರು. ಮಕ್ಕಳ ಸಾಹಿತ್ಯದ 17 ಕೃತಿಗಳನ್ನು ಅವರು ಬರೆದಿರುವರು. ಕರ್ನಾಟಕ ಸಂಸ್ಕೃತಿ ಎಂಬ ಜಾನಪದ ಕೃತಿ, 6 ಸಂಗ್ರಹ ಕೃತಿಗಳು, 9 ಅನುವಾದಗಳು, ವಿಚಾರ ವಿಮರ್ಶೆ ಸಂಪಾದನೆಯ 6 ಕೃತಿಗಳು, ಭಾಮಿನಿ ಷಟ್ಪದಿಯಲ್ಲಿ ಕರ್ನಾಟಕ ವಿಶ್ವಾಮಿತ್ರ ಚರಿತ್ರೆಯನ್ನು ರಚಿಸಿರುವರು. ಅವರು ಪತ್ರಿಕೋದ್ಯಮಿಯೂ ಹೌದು.
ಹೀಗೆ ಬಹುಮುಖ ಪ್ರತಿಭೆಯ ದೇವುಡು ಅವರ ಸಾಹಿತ್ಯದ ಬಗ್ಗೆ ಕೀರ್ತಿನಾಥ ಕುರ್ತಕೋಟಿ, ಜಿ.ಎಸ್. ಆಮೂರ, ಜಿ. ವೆಂಕಟಸುಬ್ಬಯ್ಯ, ಕೆ. ನರಸಿಂಹಮೂರ್ತಿ, ಅ.ರಾ. ಮಿತ್ರ, ಮಲ್ಲೇಪುರಂ ಜಿ. ವೆಂಕಟೇಶ, ಗಿರಡ್ಡಿ ಗೋವಿಂದರಾಜ ಮೊದಲಾದವರು ಬರೆದಿದ್ದಾರೆ. ಇಲ್ಲಿಯ ಎಲ್ಲ ಬರೆವಣಿಗೆಗಳ ಒಂದು ಸಾಮಾನ್ಯವಾದ ಲಕ್ಷಣವೆಂದರೆ ಓತಪ್ರೋತವಾದ ಶೈಲಿ. ಹೊಗಳಿಕೆಯ ಹೊಳೆಯೇ ಹರಿದಿದೆ. ದೇವುಡು ಅವರ ಬದುಕಿನ ಹಲವು ಅಪರೂಪದ ಕ್ಷಣಗಳನ್ನು ದಾಖಲಿಸಿದವರೂ ಇದ್ದಾರೆ. ವಯಸ್ಕ ಶಿಕ್ಷಣಕ್ಕೆ ಅವರ ಕೊಡುಗೆಯ ಬಗ್ಗೆ ಇಲ್ಲಿ ಲೇಖನವಿದೆ. 'ಮಹಾಕ್ಷತ್ರಿಯ' ಮತ್ತು ಉಳಿದ ಎರಡು ಪೌರಾಣಿಕ ಕಾದಂಬರಿಗಳು, ಕಾದಂಬರಿ ಪ್ರಕಾರದಲ್ಲಿ ಹೊಸ ಸಾಧ್ಯತೆಗಳನ್ನು ಗುರುತಿಸಿರುವ ಪ್ರಯೋಗಗಳಾಗಿವೆ ಎಂಬ ನಿರ್ಧಾರಾತ್ಮಕ ಮಾತುಗಳನ್ನು ಗಿರಡ್ಡಿ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಅವರ ಸಾಹಿತ್ಯ ಕೃತಿಗಳ ಅತ್ಯುತ್ತಮ ವಿಮರ್ಶೆ ಇಲ್ಲಿ ನಡೆದಿದೆ.
ಇಂಥ ಸಂಪಾದನ ಕೃತಿಗಳಲ್ಲಿ ಮುಖ್ಯವಾಗಿ ಇರಬೇಕಾದದ್ದು ಆಯಾ ಲೇಖನಗಳನ್ನು ಬರೆದ ದಿನಾಂಕ ಮತ್ತು ಸಂದರ್ಭದ ವಿವರ ಹಾಗೂ ಯಾವುದರಲ್ಲಿ ಮೊದಲು ಪ್ರಕಟವಾಗಿತ್ತು ಎನ್ನುವುದರ ಉಲ್ಲೇಖ. ಇಲ್ಲಿಯ ಯಾವ ಲೇಖನದಲ್ಲಿಯೂ ಅದನ್ನು ನಮೂದಿಸದೇ ಇರುವುದು ಒಂದು ಕೊರತೆಯಾಗಿ ತೋರುತ್ತದೆ.
ದೇವುಡು ನರಸಿಂಹಶಾಸ್ತ್ರಿಗಳನ್ನು ಅರಿಯುವುದಕ್ಕೆ ಈ ಕೃತಿಯಲ್ಲಿ ಸಾಕಷ್ಟು ಮಾಹಿತಿ ಇದೆ. ಇಂಥದ್ದೊಂದು ಕೃತಿ ಆಗಲೇ ಬೇಕಿತ್ತು. ಇದು ದೇವುಡು ಅವರಿಗೆ ಸಂದ ನುಡಿಗೌರವ.

ಕೃತಿ: ದೇವುಡು ದರ್ಶನ
ಪ್ರಕಾರ: ಸಂಪಾದನೆ
ಏಕೆ ಓದಬೇಕು?: ದೇವುಡು ಅವರನ್ನು ಅರಿಯಲು
ಪ್ರ: ಹೇಮಂತ ಸಾಹಿತ್ಯ, ಬೆಂಗಳೂರು,
ಪುಟಗಳು 416 ಬೆಲೆ ರು. 220

ದೊಡ್ಡವರ ಸಾಹಿತ್ಯ ಪ್ರೀತಿ
ದೊಡ್ಡರಂಗೇಗೌಡರು ಮೂಲತಃ ಕವಿ. ಜೊತೆಗೆ ಸಾಹಿತ್ಯ ಚಿಂತಕರೂ ಹೌದು ಎನ್ನುವುದಕ್ಕೆ ಅವರ ಹೊಸ ಕೃತಿ 'ಸಾಹಿತ್ಯ ಸಿಂಧೂರ' ಸಾಕ್ಷಿ. ಇದರಲ್ಲಿ ಸಾಹಿತ್ಯದ ವಿಮರ್ಶೆಯೂ ಇದೆ. ಸಾಹಿತಿಗಳ ವ್ಯಕ್ತಿಚಿತ್ರಣವೂ ಇದೆ. ಒಟ್ಟು 56 ಲೇಖನಗಳಲ್ಲಿ ಸಾಹಿತ್ಯದ ಚಿಂತನೆಯನ್ನು ನಡೆಸಿದ್ದಾರೆ. ಮೊದಲ ಲೇಖನ 'ಕವಿ ಲೇಖನಿಗೆ ಯುಗಾದಿ ಬಣ್ಣದ ತೇಜ'ದಲ್ಲಿ ವಿವಿಧ ಕವಿಗಳು ಯುಗಾದಿಯನ್ನು ಹೇಗೆ ವರ್ಣಿಸಿದ್ದಾರೆ, ಅವರ ದರ್ಶನವೇನು ಎಂಬುದನ್ನು ಚರ್ಚಿಸುತ್ತಾರೆ. ದಾಸ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ಎಷ್ಟಿದೆ ಎಂಬುದನ್ನು ಮತ್ತೊಂದು ಲೇಖನದಲ್ಲಿ ಚರ್ಚಿಸುವರು. ನವೋದಯ ಕಾವ್ಯದಲ್ಲಿ ದಾಖಲಾದ ಮಹಾತ್ಮ ಗಾಂಧಿ ಅವರ ವ್ಯಕ್ತಿತ್ವದ ಚಿತ್ರಣದ ಬಗ್ಗೆ ಬರೆಯುವರು. ಕನ್ನಡದ ಆಯಾಮಗಳನ್ನು ಹಿಗ್ಗಿಸಿದ ಸೋಪಜ್ಞ ಕವಿ ಎಂದು ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅವರನ್ನು ವರ್ಣಿಸುತ್ತಾರೆ. ತೇಜಸ್ವಿ ಅಸೀಮ ಅನ್ವೇಷಕ, ಸಿಪಿಕೆ ಸವ್ಯಸಾಚಿ ಲೇಖಕ ಎನ್ನುವ ಗೌಡರು ಚೆನ್ನಣ್ಣ ವಾಲೀಕಾರ ಸಿಡಿಸಿದ ಕ್ರಾಂತಿಯ ಕಿಡಿಗಳನ್ನು ಗುರುತಿಸುತ್ತಾರೆ. ಕವಿ, ಕಾವ್ಯದ ಮೇಲಿನ ಪ್ರೀತಿಯೇ ಈ ಬರೆವಣಿಗೆಗೆ ಪ್ರೇರಣೆ.
ಕೃತಿ: ಸಾಹಿತ್ಯ ಸಿಂಧೂರ
ಪ್ರಕಾರ:ಸಾಹಿತ್ಯ ಚಿಂತನೆ
ಏಕೆ ಓದಬೇಕು?: ಸಾಹಿತ್ಯದ ಅರಿವಿಗೆ...
ಪ್ರ: ಹೇಮಂತ ಸಾಹಿತ್ಯ, ಬೆಂಗಳೂರು. ಪುಟಗಳು 224 ಬೆಲೆ ರು. 120

'ಶಿವ'ಮಸ್ತು
ಎನ್. ಶಿವರಾಮಯ್ಯನವರ ಎರಡು ಅನುವಾದ ಕೃತಿಗಳು ಈಗ ಬಂದಿವೆ. ಮೊದಲಿನದು 'ಮಾಘ ಕವಿ' ಎಂಬುದು. ಇದು ಮಾಘ ಕವಿಯ ಜೀವನವನ್ನು ಆಧರಿಸಿದ ಕಾದಂಬರಿ. ಇದರ ಮೂಲ ತೆಲುಗು. ಬರೆದವರು ವಿದ್ವಾನ್ ವನಮಾ ವೆಂಕಟರಣ ಗುಪ್ತ. ಮಾಘ ಕವಿಯನ್ನು ಕಾಳಿದಾಸ, ಭಾರವಿ, ದಂಡಿಗಳ ಪ್ರತಿಭೆ ಮೇಳೈಸಿಕೊಂಡವ ಎಂದು ಹೊಗಳಲಾಗುತ್ತಿತ್ತು. 'ಶಿಶುಪಾಲ ವಧ' ಆತನ ಪ್ರಸಿದ್ಧ ಕಾವ್ಯಗಳಲ್ಲಿ ಒಂದು. ಮಾಘನ ಚಾರಿತ್ರಿಕ ವಿಷಯಗಳು ಗೊತ್ತಿರುವವು ಬಹಳ ಸ್ವಲ್ಪ. ಅದಕ್ಕೆ ಕಲ್ಪನೆಯ ಸಂಗತಿಗಳನ್ನು ಸೇರಿಸಿ ಈ ಕೃತಿ ರಚಿಸಲಾಗಿದೆ. ಹೈಸ್ಕೂಲು ಮಕ್ಕಳಿಗಾಗಿ ರಚಿಸಿದ ಕಾದಂಬರಿ ಇದು. ಗುಪ್ತರು ಬಾಣ ಕವಿಯ ಹಾಗೆ ಪುಟಗಟ್ಟಲೆ ವರ್ಣನೆಯಲ್ಲಿ ತೊಡಗುವವರು. ಮಕ್ಕಳ ಭಾಷಿಕ ಸಂಪತ್ತನ್ನು ಹೆಚ್ಚಿಸುವುದು ಮೂಲ ಲೇಖಕರ ಗುರಿ ಇದ್ದಹಾಗಿದೆ. ಎನ್. ಶಿವರಾಮಯ್ಯನವರ ಇನ್ನೊಂದು ಅನುವಾದ ಕೃತಿ ಶರದಿಂದು ಬಂದೋಪಾಧ್ಯಾಯ ಅವರ ಬಂಗಾಳಿ ಕಾದಂಬರಿ 'ಕಾಲೇರ್ ಮಂದಿರಾ'. ಅದನ್ನು 'ಅದೃಷ್ಟದ ಆಟ' ಹೆಸರಿನಲ್ಲಿ ಅನುವಾದಿಸಿರುವರು. ಗುಪ್ತರ ಕಾಲದ ವಿವರಗಳನ್ನು ಹೊಂದಿರುವ ಇದರ ವಸ್ತು ಕಾಲ್ಪನಿಕ. ಆದರೆ ಇದನ್ನು ಓದಿದಾಗ ಐತಿಹಾಸಿಕ ಕೃತಿ ಎಂಬ ಭಾವನೆ ಮೂಡುತ್ತದೆ. ತೀವ್ರ ಕುತೂಹಲಕಾರಿಯಾದ ಈ ಕೃತಿಯನ್ನು ಓದುವ ಸುಖವೇ ಬೇರೆ. ಎರಡನ್ನೂ ಎನ್. ಶಿವರಾಮಯ್ಯ ಸಮರ್ಥವಾಗಿ ಅನುವಾದಿಸಿರುವರು. ಈ ಮೂಲಕ ತೆಲುಗು, ಬಂಗಾಳಿ ಮತ್ತು ಕನ್ನಡದ ತೌಲನಿಕ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವರು.
ಕೃತಿ: ಮಾಘ ಕವಿ/ ಅದೃಷ್ಟದ ಆಟ
ಪ್ರಕಾರ: ಕಾದಂಬರಿ, ಏಕೆ ಓದಬೇಕು?: ಮಾಘನ ಬಗ್ಗೆ ತಿಳಿಯಲು
ಪ್ರ: ಕಿರಣ್ ಬುಕ್ ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು. ಪುಟಗಳು 120/236 ಬೆಲೆ ರು. 80/160

ನೇಪಾಳದ ಹೊಸ ವಿಳಾಸ
ಪ್ರವಾಸಿಗರು ಇಷ್ಟಪಡುವ ತಾಣಗಳಲ್ಲಿ ನೇಪಾಳವು ಪ್ರಮುಖವಾದದ್ದು. ಅದಕ್ಕೆ ಎರಡು ಕಾರಣಗಳು. ಮೊದಲಿನದು ಅಲ್ಲಿಯ ಪ್ರಕೃತಿ ಸೌಂದರ್ಯ. ಎರಡನೆಯದು ಹಿಂದೂಗಳಿಗೆ ಅದೊಂದು ಪುಣ್ಯಕ್ಷೇತ್ರ. ಪಶುಪತಿನಾಥನ ನೆಲೆ. ಮುಂಬೈ ಕನ್ನಡಿಗ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ 2000 ಮತ್ತು 2011 ಹೀಗೆ ಎರಡು ಬಾರಿ ಆ ದೇಶಕ್ಕೆ ಹೋಗಿದ್ದರು. ಮೊದಲಬಾರಿ ಹೋದಾಗ ಅಲ್ಲಿ ಮಾವೋವಾದಿಗಳ ಹೋರಾಟ ಉಗ್ರರೂಪವನ್ನು ತಾಳಿತ್ತು. ಎರಡನೇ ಬಾರಿ ಹೋದಾಗ ಇಡೀ ನೇಪಾಳವನ್ನು ಸುತ್ತಿ ಹಲವು ವಿಷಯಗಳನ್ನು ಸಂಗ್ರಹಿಸಿಕೊಂಡರು. ನೇಪಾಳಕ್ಕೆ ಅವರು ರಸ್ತೆಯ ಮೂಲಕವೇ ಸಾಗಿದ್ದು ವಿಶೇಷ. ಇದರಿಂದ ಎಷ್ಟೋ ಸಂಗತಿಗಳನ್ನು ಅತ್ಯಂತ ನಿಕಟವಾಗಿ ಗಮನಿಸುವುದಕ್ಕೆ ಸಾಧ್ಯವಾಯಿತು. ವಿದ್ಯಾರ್ಥಿಗಳ ರ್ಯಾಲಿಯಲ್ಲಿ ಭಾರತದ ಬಗ್ಗೆ ರೋಷ ವ್ಯಕ್ತವಾಗಿದ್ದನ್ನು ಅವರು ನೋಡಿದ್ದಾರೆ. ಮಾವೋ ಚಳವಳಿ ನೇಪಾಳದಲ್ಲಿ ಹೇಗೆ ಹುಟ್ಟಿಕೊಂಡಿತು ಎಂಬ ಇತಿಹಾಸವನ್ನು ಅವರು ಕೆದಕಿದ್ದಾರೆ. ಇದು ಕೇವಲ ಅಂಕಿಅಂಶಗಳಿಂದ ದಟ್ಟಣಿಸದೆ ನೇಪಾಳದ ಒಳಮುಖವನ್ನು ತೆರೆದಿಡುತ್ತದೆ.
ಕೃತಿ: ಮಾವೋವಾದಿಗಳ ಹಿಂದೂ ರಾಷ್ಟ್ರ ನೇಪಾಳ
ಪ್ರಕಾರ: ಪ್ರವಾಸ ಕಥನ
ಏಕೆ ಓದಬೇಕು?: ನೇಪಾಳ ತಿಳಿಯಲು
ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು. ಪುಟಗಳು 170 ಬೆಲೆ ರು. 100

'ಹೇಮಂತ' ಋತು
ಕನ್ನಡದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿರುವ ಹೇಮಂತ ಸಾಹಿತ್ಯವು ತನಗೆ ಐವತ್ತು ವರ್ಷಗಳು ತುಂಬಿದ ನೆನಪಿಗೆ 'ಸುವರ್ಣ ಮಹೋತ್ಸವ ಮಕ್ಕಳ ಮಾಲೆ'ಯನ್ನು ಆರಂಭಿಸಿದೆ. ಇದರಲ್ಲಿ ನಾಡು ನುಡಿ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಕೃತಿಗಳನ್ನು ಪ್ರಕಟಿಸಲಿದೆ. ಈ ಯೋಜನೆಯ ಪ್ರಧಾನ ಸಂಪಾದಕರು ಶಾ.ಮಂ. ಕೃಷ್ಣರಾಯರು. ಸದ್ಯ ಈ ಮಾಲೆಯಲ್ಲಿ ಎಂಟು ಕೃತಿಗಳು ಬಂದಿವೆ. ಗಂಗೂಬಾಯಿ ಹಾನಗಲ್ ಕುರಿತು ಎಲ್.ಎಸ್. ಶಾಸ್ತ್ರಿ, ಬೇಂದ್ರೆ ಕುರಿತು ಬಿ.ಎನ್. ವೇಣುಗೋಪಾಲ, ಗೌರೀಶ ಕಾಯ್ಕಿಣಿ ಹಾಗೂ ಯಾಣದ ಬಗ್ಗೆ ವಾಸುದೇವ ಶಾನಭಾಗ, ಕರಾವಳಿಯ ಯಕ್ಷಗಾನ ಕುರಿತು ಡಾ.ಕೆ.ಎಂ. ರಾಘವ ನಂಬಿಯಾರ್, ಬನವಾಸಿ ಬಗ್ಗೆ ಆರ್.ಜಿ. ರಾಯ್ಕರ್, ಪರ್ವತವಾಣಿ ಕುರಿತು ಕೆ.ಎಂ. ವಿಜಯಲಕ್ಷ್ಮಿ, ಜನರಲ್ ಕೆ.ಎಸ್. ತಿಮ್ಮಯ್ಯ ಬಗ್ಗೆ ಬೆ.ಗೋ. ರಮೇಶ ಬರೆದ ಕೃತಿಗಳು ಹಲವು ಉಪಯುಕ್ತ ಮಾಹಿತಿಗಳನ್ನು ಹೊಂದಿವೆ. ಕ್ರೌನ್ 1/8 ಆಕಾರದ 64 ಪುಟಗಳನ್ನು ಹೊಂದಿರುವ ಈ ಕೃತಿಗಳ ಬೆಲೆ ರು. 30.
ಕೃತಿ: ಗಂಗೂಬಾಯಿ ಹಾನಗಲ್ ಮತ್ತು ಇತರ 7 ಪುಸ್ತಕ
ಪ್ರಕಾರ: ಪರಿಚಯ, ಏಕೆ ಓದಬೇಕು?: ಮಾಹಿತಿಗೆ, ಪ್ರ: ಹೇಮಂತ ಸಾಹಿತ್ಯ, ಬೆಂಗಳೂರು. ಪುಟಗಳು 64 ಬೆಲೆ ರು. 30

ದುರ್ಗಾಸ್ತಮಾನ ನಾಟಕ
ಪ್ರಸಿದ್ಧ ಕತೆಗಳನ್ನೋ ಕಾದಂಬರಿಗಳನ್ನೋ ನಾಟಕವನ್ನಾಗಿ ಪರಿವರ್ತಿಸಿ ಅವನ್ನು ರಂಗದ ಮೇಲೆ ತರುವ ರೂಢಿ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳಲ್ಲಿಯೂ ಇದೆ. ಹಾಗೇ ನಾಟಕಗಳನ್ನು ಕತೆಯ ರೂಪದಲ್ಲಿ ಓದುವುದಕ್ಕೆ ಪ್ರಕಟಿಸುವುದೂ ಇದೆ. ಕನ್ನಡದಲ್ಲಿ ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ರಂಗದ ಮೇಲೆ ತರುವ ಸಾಹಸ ಮಾಡಲಾಗಿದೆ. ಇದೀಗ ಕನ್ನಡದ ಪ್ರಮುಖ ಕಾದಂಬರಿಕಾರ ತರಾಸು ಅವರ ಐತಿಹಾಸಿಕ ಕಾದಂಬರಿ 'ದುರ್ಗಾಸ್ತಮಾನ'ವನ್ನು ಬಿ.ಎಸ್. ಕೇಶವರಾವ್ ಅವರು ನಾಟಕವಾಗಿ ಬದಲಿಸಿದ್ದಾರೆ. ಇದರ ರಂಗಪ್ರಯೋಗವೂ ನಡೆದಿದೆ. ಬೃಹತ್ ಕಾದಂಬರಿಯನ್ನು ನಾಟಕದ ಪ್ರಯೋಗ ಕಾಲ ಮಿತಿಗೆ ಒಳಪಟ್ಟು ಸಂಕ್ಷಿಪ್ತಗೊಳಿಸುವುದು ರೂಪಾಂತರಕಾರನ ಔಚಿತ್ಯ ಪ್ರಜ್ಞೆಗೆ ಒಂದು ಸವಾಲು. ಈ ಕೃತಿಯಲ್ಲಿ ಔಚಿತ್ಯ ಮೀರದಂತೆ, ಮೂಲ ಕೃತಿಯ ಆಶಯಗಳಿಗೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಲಾಗಿದೆ. ಮೂಲ ಕೃತಿಯಲ್ಲಿ ತರಾಸು ಅವರು ಬಳಸಿದ ಭಾಷೆಯನ್ನು ಇಲ್ಲಿಯೂ ಉಳಿಸಿಕೊಂಡಿರುವುದು ವಿಶೇಷ.
ಕೃತಿ: ದುರ್ಗಾಸ್ತಮಾನ,  ಪ್ರಕಾರ: ನಾಟಕ,
ಏಕೆ ಓದಬೇಕು?: ತರಾಸು ಅರಿಯಲು, ಪ್ರ: ಹೇಮಂತ ಸಾಹಿತ್ಯ, ಬೆಂಗಳೂರು. ಪುಟಗಳು 200 ಬೆಲೆ ರು. 100

ಕೊಂಕಣಿ ಕತೆಗಳು
ಗೋಕುಲದಾಸ ಪ್ರಭು ಅವರು ಕೊಂಕಣಿಯಲ್ಲಿ ಬರೆದ ಕತೆಗಳ ಅನುವಾದ 'ಋತುಸಂಕ್ರಮಣ'. ಗೀತಾ ಶೆಣೈ ಅವರು ಇದನ್ನು ಕನ್ನಡಿಸಿದ್ದಾರೆ. ಕೊಂಕಣಿ ಭಾಷೆಯಲ್ಲಿ ಇಂಥ ಅತ್ಯುತ್ತಮ ಕತೆಗಳು ಇವೆ ಎಂಬುದು ಇಲ್ಲಿಯ ಅನುವಾದಗಳಿಂದ ಗೊತ್ತಾಗುತ್ತವೆ. ಇದರಲ್ಲಿ ಹನ್ನೆರಡು ಕತೆಗಳಿವೆ. ಬಹುತೇಕ ಕತೆಗಳನ್ನು ಓದಿದಾಗ ನಮ್ಮ ಮನಸ್ಸು ಕಲಕಿ ಹೋಗುತ್ತದೆ. ಬಹುತೇಕ ಕತೆಗಳು ಸ್ತ್ರೀಕೇಂದ್ರಿತವಾಗಿವೆ. ಮೊದಲ ಕತೆ 'ಕಲೆಗಳು' ವೃದ್ಧಾಪ್ಯದಲ್ಲಿ ಮಗನಿಂದ ಪರಿತ್ಯಕ್ತಳಾದ ತಾಯಿ ದುರಪದ ಎಲ್ಲಿಯೂ ನೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುವ ವಿವರಣೆಯನ್ನು ಒಬ್ಬ ಹುಡುಗನ ಪ್ರಜ್ಞೆಯ ಮೂಲಕ ದಾಖಲಿಸುವುದರೊಂದಿಗೆ ಪರಿಣಾಮವನ್ನು ತೀವ್ರಗೊಳಿಸಲಾಗಿದೆ. ಇಲ್ಲಿಯ ಕತೆಗಳಲ್ಲಿಯ ಸ್ತ್ರೀಯರು ಶಾಲೆಯ ವಿದ್ಯಾರ್ಥಿನಿ, ಶಿಕ್ಷಕಿ, ಎಳೆತಾಯಿ, ಮುದಿತಾಯಿ, ಹೆಣ್ಣಾಳು, ಸಹೋದರಿ, ಪತ್ನಿ... ಹೀಗೆ. ಇವರ ದೈಹಿಕ ನೋವು, ಮಾನಸಿಕ ತುಮುಲಗಳನ್ನು, ತಮ್ಮದಲ್ಲದ ತಪ್ಪಿಗೆ ನೋವನುಭವಿಸಬೇಕಾದ ಸ್ಥಿತಿಯ ಚಿತ್ರಣವಿದೆ.
ಕೃತಿ: ಋತುಸಂಕ್ರಮಣ
ಪ್ರಕಾರ: ಕತೆಗಳು, ಏಕೆ ಓದಬೇಕು?: ಕೊಂಕಣಿ ಸಾಹಿತ್ಯ ಅರಿಯಲು
ಪ್ರ: ಕೊಂಕಣಿ ಭಾಸ ಅನಿ ಸಂಸ್ಕೃತಿ ಪ್ರತಿಷ್ಠಾನ, ಮಂಗಳೂರು. ಪುಟಗಳು 166 ಬೆಲೆ ರು. 125

ಸಂಸ್ಕೃತಿ ಚಿಂತನ
ಕನ್ನಡ ವಿದ್ವಾಂಸರೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾದ ಮುಖ್ಯಸ್ಥರೂ ಆಗಿರುವ ಡಾ.ಜಿ.ಎನ್. ಉಪಾಧ್ಯ ಅವರ ಆಯ್ದ ಸಂಶೋಧನ ಲೇಖನಗಳ ಸಂಪುಟ 'ಕರ್ನಾಟಕ ಸಂಸ್ಕೃತಿ ಚಿಂತನ' ಹೆಸರಿನಲ್ಲಿ ಪ್ರಕಟವಾಗಿದೆ. ಇದರಲ್ಲಿ ಮೂವತ್ತಮೂರು ಲೇಖನಗಳಿವೆ. ಮಹಾರಾಷ್ಟ್ರ ಸಂಸ್ಕೃತಿ ದರ್ಶನ, ಕರ್ನಾಟಕ ಸಂಸ್ಕೃತಿ ದರ್ಶನ, ಆಧುನಿಕ ಕನ್ನಡ ಸಾಹಿತ್ಯ ಸಂದರ್ಭ ಎಂಬ ಮೂರು ಭಾಗಗಳಲ್ಲಿ ಇಲ್ಲಿ ಲೇಖನಗಳನ್ನು ವಿಭಾಗಿಸಲಾಗಿದೆ. ಕನ್ನಡದ ಬಗ್ಗೆ ಪ್ರೀತಿ ಇದ್ದರೆ ಮಾತ್ರ ಇಂಥ ಲೇಖನಗಳನ್ನು ಬರೆಯುವುದು ಸಾಧ್ಯವಾಗುತ್ತದೆ. ಕನ್ನಡ ಸಂಸ್ಕೃತಿ ಕುರಿತ ಭಾಗ ಮಹತ್ವದ್ದಾಗಿದೆ. ಸಂಸ್ಕೃತಿ ಎಂಬುದು ಅಂತರಂಗದ ಚೆಲವು ಎಂಬ ಅರಿವಿನಲ್ಲಿ ಸಂಸ್ಕೃತಿಯ ಶೋಧ ಮತ್ತು ಚರ್ಚೆ ನಡೆದಿದೆ. 'ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಮಹತ್ವ' ಒಂದು ಬೆಲೆಯುಳ್ಳ ಸಂಶೋಧನೆಯಾಗಿದೆ. ಕನ್ನಡ ಭಾಷೆಯ ಧಾರಣ ಸಾಮರ್ಥ್ಯ ಹೇಗೆ ಈ ಆಧುನಿಕ ಕಾಲದಲ್ಲಿ ಹೆಚ್ಚಿದೆ ಎಂಬ ಒಳ ನೋಟವು ಈ ಕೃತಿಯಲ್ಲಿದೆ. ಬಹುತೇಕ ಲೇಖನಗಳು ವಿವಿಧೆಡೆ ಪ್ರಕಟವಾದವುಗಳು.  
ಕೃತಿ: ಕರ್ನಾಟಕ ಸಂಸ್ಕೃತಿ ಚಿಂತನ
ಪ್ರಕಾರ: ಸಂಶೋದನೆ
ಏಕೆ ಓದಬೇಕು?: ಸಂಸ್ಕೃತಿ ಅರಿಯಲು
ಪ್ರ: ಕನ್ನಡ ವಿಭಾಗ, ಮುಂಬೈ ವಿವಿ, ಪುಟಗಳು 368 ಬೆಲೆ ರು. 280

ನಗೆ ಬಂಡಿ
ಶರಣಗೌಡ ಎರಡೆತ್ತಿನ ಅವರು ಬಾಗಲಕೋಟೆ ಸೀಮೆಯ ಕನ್ನಡದಲ್ಲಿ ರಚಿಸಿರುವ 'ಕಿಲ್ಲೇಶ್ವರ ಮೋಟಾರು ಸರ್ವಿಸ್‌' ಹಾಸ್ಯ ಕಾದಂಬರಿಯು ಓದುಗರಿಗೆ ರಂಜನೆಯನ್ನು ನೀಡುತ್ತದೆ. ಆ ನೆಲದ ನುಡಿಗಟ್ಟುಗಳು ಗಾದೆಗಳು ಕಾದಂಬರಿಯ ಭಾಷೆಗೆ ಗಟ್ಟಿತನವನ್ನು ಒದಗಿಸಿದೆ. ಗ್ರಾಮೀಣ ಭಾಗದ ಸಾರಿಗೆ ಸಂಸ್ಥೆಯು ಅಲ್ಲಿಯ ಜನಸಾಮಾನ್ಯರ ಬದುಕಿನಲ್ಲಿ ಹೇಗೆ ಹಾಸುಹೊಕ್ಕಾಗಿದೆ, ಜನರ ಭಾವನೆಗಳನ್ನೂ ಅದು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಈ ಕೃತಿಯಲ್ಲಿ ಲೇಖಕರು ಹಾಸ್ಯಪೂರ್ಣವಾಗಿ ವರ್ಣಿಸಿದ್ದಾರೆ. 'ಕಚ್ಚಾ ರಸ್ತೆ ಮತ್ತು ಒರಟು ಡ್ರೈವಿಂಗ್‌ನಿಂದ ಬಸ್ಸಿನಲ್ಲಿದ್ದ ಹೆಂಗಸರಿಗೆ ಅವರ ಗಂಡಂದಿರು ಹೊಡೆದ ಪೆಟ್ಟಿಗಿಂತ ಹೆಚ್ಚು ನೋವಾಗಿತ್ತು...' ಎಂಬ ವರ್ಣನೆ ಕೇವಲ ನಗುವನ್ನು ಹುಟ್ಟಿಸದೆ ನಮ್ಮ ಸಮಾಜ ವ್ಯವಸ್ಥೆಯ ಕುರೂಪದ ಮೇಲೂ ಬೆಳಕು ಚೆಲ್ಲುತ್ತದೆ. ಕಾದಂಬರಿಯಲ್ಲಿ ಬಸ್ಸೂ ಒಂದು ಪಾತ್ರವೇ ಆಗಿದೆ. ಕನ್ನಡದಲ್ಲಿ ದಾಶರಥಿ ದೀಕ್ಷಿತ್, ಟಿ. ಸುನಂದಮ್ಮ ಮೊದಲಾದವರು ಹಾಸ್ಯ ಕಾದಂಬರಿಗಳನ್ನು ಬರೆದಿದ್ದರು. ಆ ಸಾಲಿಗೆ ಈ ಕೃತಿಯ ಮೂಲಕ ಶರಣಗೌಡರೂ ಸೇರುತ್ತಿದ್ದಾರೆ.
ಕೃತಿ: ಕಿಲ್ಲೇಶ್ವರ ಮೋಟಾರು ಸರ್ವಿಸ್
ಪ್ರಕಾರ: ಹಾಸ್ಯ ಕಾದಂಬರಿ
ಏಕೆ ಓದಬೇಕು?: ನಕ್ಕು ಹಗುರಾಗಲು
ಪ್ರ: ನೇಕಾರ ಪ್ರಕಾಶನ, ಸೊರಬ. ಪುಟಗಳು 168 ಬೆಲೆ ರು. 130

- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.