ಸಾಪ್ತಾಹಿಕಪ್ರಭ

ಮೃತ್ಯು ಬಳಿ ಬಂತು!

Published On :

ಅಲ್ಲೊಂದು ರಾಜಕೀಯ ದೊಂಬರಾಟ. ಮಿತಿ ಮೀರಿದ ಮೇಲಾದ ಜ್ಞಾನೋದಯದ ವೇದಿಕೆಯಾಗಿ ಆಸ್ಪತ್ರೆ. ತನ್ನ ಇರುವಿಕೆ ಮರೆತು, ಪರಿಸರದವರ ಮೇಲೆ ಅನುಮಾನಿಸುತ್ತಾ ಸ್ವಂತಿಕೆಯನ್ನರಿಯಲು ಬಿಡುವಿಲ್ಲದ ಮಾಜಿ ಮುಖ್ಯಮಂತ್ರಿ ಅಲ್ಲಿ ದಾಖಲು. ಅಧಿಕಾರದ ಮದದಿಂದ ಮೆರೆದ ವೈಭವವನ್ನು ಮೆಲುಕು ಹಾಕುತ್ತಾ ವೃತ್ತಾಕಾರದ ಪ್ರಾಂಗಣದಲ್ಲಿ ಗಾಲಿ ಖುರ್ಚಿಯಲ್ಲಿ ಕ್ಯಾನ್ಸರ್ ಪೀಡಿತನಾಗಿ ಕುಳಿತಿದ್ದಾನೆ. 'ಮರಣ ಮೃದಂಗ'ದ ಮುಖ್ಯಪಾತ್ರಧಾರಿ.
ತಗ್ಗಿದ ರಾಜಕೀಯದ ಹವಾದ ನಡುವೆಯೂ ಮೊನ್ನೆ ಬೆಂಗಳೂರಿನ ರಂಗಶಂಕರದಲ್ಲಿ ರಾಜೇಂದ್ರ ಕಾರಂತರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ಜನಸಾಮಾನ್ಯರ ರಕ್ತವನ್ನು ಹೀರುತ್ತಾ, ಲಂಚತನದ ಪರಮೋಚ್ಚದಲ್ಲಿ ವಿಹರಿಸುತ್ತಾ 'ಸಾವಿನ' ಅರ್ಥ ತಿಳಿಯದೆ, ಬಡಬಗ್ಗರ ಕಷ್ಟ ಅರಿಯದೇ ತನ್ನ ಸಾವು ಹತ್ತಿರವಾಗುತ್ತಿದ್ದಂತೆ ಯಮನ ಆಹ್ವಾನಕ್ಕೆ ಹೆದರುವ ಮಾಜಿ ಮುಖ್ಯಮಂತ್ರಿಯ ಪಾತ್ರದಲ್ಲಿ ರಾಜೇಂದ್ರ ಕಾರಂತ ನಟಿಸಿದ್ದಾರೆ. ಹಿರಿಯ ಮುತ್ಸದ್ದಿಯ ಪಾತ್ರದಲ್ಲಿ ನಾಟಕದ ಕೇಂದ್ರ ಬಿಂದು ಅವರೇ. ಮುಖ್ಯಮಂತ್ರಿಯ ಸ್ನೇಹಿತನಾಗಿ, ಮಿತ್ರನಾಗಿ, ಹಿತೈಷಿಯಾಗಿ, ಆತ್ಮವಾಗಿಯೂ ಬ್ರಹ್ಮಯ್ಯ (ಡಿ.ಎಸ್. ಶ್ರೀನಾಥ್) ಪಾತ್ರ ನಾಟಕಕ್ಕೆ ಬಲತುಂಬುತ್ತದೆ.
ಮಾಜಿ ಮುಖ್ಯಮಂತ್ರಿಯ ಎಲ್ಲಾ ಲೋಪದೋಷಗಳನ್ನು ಕಟುವಾಗಿ ಎತ್ತಿ ಹಿಡಿಯುವ ಪಾತ್ರ ಪ್ರೇಕ್ಷಕರಿಗೆ ಹತ್ತಿರವಾಗುತ್ತೆ. ಪದವಿಯಲ್ಲಿರುವ ಸ್ನೇಹಿತನಿಂದ ಏನನ್ನು ನಿರೀಕ್ಷಿಸದ ಈ ಪಾತ್ರ ಸ್ನೇಹಿತನಿಗೆ ತನ್ನ ಪ್ರಾಣವನ್ನೇ ಧಾರೆಯೆರೆದು ತಾನು ಇಹಲೋಕ ವಾಸಿಯಾಗುವ ದೃಶ್ಯ ನಿಜವಲ್ಲದಿದ್ದರೂ ಪಾತ್ರದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲು ಸಹಕಾರಿಯಾಗಿದೆ. ಪ್ರೇಕ್ಷಕರ ಮನತಟ್ಟುತ್ತದೆ. ಕ್ಯಾನ್ಸರ್ಸ್ ಆಸ್ಪತ್ರೆಯ ಡಾಕ್ಟರ್‌ನ ಪಾತ್ರ (ರಾಘು) ಈ ಮಾಜಿ ಮುಖ್ಯಮಂತ್ರಿಯು ಅಧಿಕಾರದಲ್ಲಿದ್ದಾಗ ಲಂಚ ಕೇಳಿ ಕೊಡದಿದ್ದಾಗ ಕೆಲಸ ಮಾಡಿಕೊಡದಿದ್ದರೂ ರೋಗಿಯಾಗಿ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿಯನ್ನು ಡಾಕ್ಟರ್ ಆಗಿ ವಿಶೇಷ ಕಾಳಜಿಯಿಂದ ಶುಶ್ರೂಷೆ ನೀಡಿ ಮಾನವೀಯತೆ ಮೆರೆಯುತ್ತಾರೆ. ಈ ಡಾಕ್ಟರರ ಪ್ರೇಮ- ಫೇಲ್ಯೂರ್- ಲಾಜಿಕ್‌ಗಳ ಕಥೆ ನಾಟಕಕ್ಕೆ ಪೂರಕವಲ್ಲವೆನಿಸುತ್ತದೆ. ಕ್ಯಾನ್ಸರ್ ಆಸ್ಪತ್ರೆಯ ಒಳಗೆ ಇರುವ ಮತ್ತೆ ಕೆಲವು ರೋಗಿಗಳ ಕಥೆಯೂ ಇಲ್ಲಿ ಸೇರ್ಪಡೆಯಾಗಿ ಕಥೆಯ ನಡೆಗೆ ಸಹಕರಿಸುತ್ತದೆ. ಇದರಲ್ಲಿ ಬರುವ ಕಾಲೇಜು ಯುವಕನ ಪಾತ್ರ ಮಾತ್ರ ಪ್ರೇಕ್ಷಕರ ಹೃದಯವನ್ನು ಹಿಂಡಿ ಹನಿಸುತ್ತದೆ. ಹಾಡುಗಾರಿಕೆಯ ಮೈಗೂಡಿಸಿಕೊಂಡಿದ್ದ ಹುಡುಗ ಕ್ಯಾನ್ಸರ್‌ನ ಅಂತಿಮ ಹಂತದಲ್ಲಿ ಇದ್ದಾಗ ಹಾಡಲಾಗದೇ 'ಸಾವು'- ಕತ್ತಲುಗಳು ಭಯದಲ್ಲಿ ತತ್ತರಿಸಿ ಸಾಯುವ ಪಾತ್ರ ಪ್ರಸ್ತುತ ಪರಿಸ್ಥಿತಿಯ ಕನ್ನಡಿಯಾಗಿದೆ.
ಮಾಜಿ ಮುಖ್ಯಮಂತ್ರಿಯ ಪತ್ನಿ (ರಾಜೇಶ್ವರಿ) ಸಾಯುವ ಗಂಡನ ಬದುಕಿಸಿಕೊಳ್ಳಲು ಸ್ವಾಮಿಯ ಮೊರೆ ಹೋಗುವುದಲ್ಲದೆ ಅದನ್ನು ಚಾಚೂತಪ್ಪದೇ ಗಂಡನ ಮೇಲೆ ಪ್ರಯೋಗಿಸುವ ಪಾತ್ರ ಇಂದಿನ ಸಮಾಜದ ಮೌಢ್ಯದ ಪ್ರತಿಬಿಂಬ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸಾವು ಹತ್ತಿರವಾದಂತೆ ಸಾವಿನ ಬೆಲೆ ತಿಳಿಯುತ್ತದೆ ಎಂದು ಸಾರುವತ್ತಾ ಹಾಗೂ ಪದವಿ, ವೈಭೋಗ, ಅಧಿಕಾರ ಏನೆಲ್ಲ ಇದ್ದರೂ ಸಾವಿನ ದವಡೆಯಿಂದ ಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಿಲ್ಲ ಎಂಬ ಮಾರ್ನುಡಿ ಪ್ರೇಕ್ಷಕರಿಗೆ ತಲುಪುತ್ತದೆ. ಪ್ರಯೋಗಾತ್ಮಕ ನಾಟಕದ ಗುಂಪಿಗೆ ಸೇರಿ ಕಾಂಟೆಪ್ರರಿಯ ಸೊಗಡನ್ನು ಸೂಸುತ್ತದೆ.
ನಾಟಕಕ್ಕೆ ಪ್ರಮುಖ ಖದರ್ ಕೊಟ್ಟದ್ದು ಹಿನ್ನೆಲೆಯ ಸಂಗೀತ ಮತ್ತು ಹಾಡುಗಳು (ಪ್ರಣವ್ ಕಾರಂತ್) ಮುಸ್ತಾಫರವರ ಬೆಳಕು ವ್ಹೀಲ್‌ಛೇರನ್ನು ಅನುಕರಿಸಿ ಸಹಕರಿಸಿದೆ.

- ಸಂಕೇತ್ ಗುರುದತ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.