ಕನಸು ಕರಗಿದ ಹಾಗೆ

ರೋಹ್ತಾಂಗ್ ಪಾಸ್, ರೋಹ್ತಾಂಗ್ ಪಾಸ್!
ಎಷ್ಟು ದಿನಗಳ ಕನಸು! ಹಿಮ ಮುಟ್ಟಿ, ಹಿಮದಲ್ಲಿ ಹೊರಳಾಡಿ, ಹಿಮ ಎಸೆದುಕೊಂಡು... ಕೋಲಾಹಲ ಎಬ್ಬಿಸಬೇಕೆಂಬ ಬಯಕೆ. ಆದರೆ ಎಲ್ಲಿ, ಎಲ್ಲಿ ಹಿಮ? ಹಿಮದ ದಪ್ಪ ದಪ್ಪ ಪದರಗಳೆಲ್ಲೋ ದೂರ ದೂರ, ಬೆಟ್ಟದ ಮೇಲುಮೇಲಕ್ಕೆ ಸರಿದಿದ್ದವು. ದಾರಿಯ ಅಕ್ಕಪಕ್ಕದಲ್ಲಿ, ಹಿಮದೇವತೆ ಕೃಪೆ ತೋರಿಸಿ ಉಳಿಸಿದ್ದ ಒಂದಿಷ್ಟು ಹೆಕ್ಕಳೆಗಳು ಉಳಿದಿದ್ದವು.
ಹಿಮದ ನಿರೀಕ್ಷೆಯಲ್ಲಿ ಬರಗೆಟ್ಟು ಹೋದವರು ನಾವು, ಅದರ ಮೇಲೇ ದಾಳಿ ಮಾಡಿದೆವು. ಆ ಹಿಮವೂ ಕೂಡ ಬಿಸಿಲಿನ ಹೊಡೆತಕ್ಕೆ ಕರಗಿ ನೀರಾಗಿ ಹರಿಯುತ್ತಿತ್ತು. 'ಶಿ, ಇಷ್ಟೆಯ?' ಎಂಬ ಉದ್ಗಾರಗಳೆಲ್ಲ ಕರಗಿ, ಇಷ್ಟಾದರೂ ಸಿಕ್ಕಿತಲ್ಲ ಎಂಬ ಉತ್ಸಾಹ ಮೈದುಂಬಿಕೊಳ್ಳತೊಡಗಿತು. ಅದರ ಮೇಲೆ ನಾಟ್ಯವಾಡಲು ಯತ್ನಿಸಿದೆವು. ಇಳಿಜಾರಿದ್ದುದರಿಂದ ಹಿಮ ಸಹಕರಿಸಲಿಲ್ಲ. ಕೂತೆವು, ಐಸ್ಪೀಸ್ಗಳಿಂದ ಹೊಡೆದುಕೊಂಡೆವು.
ಪ್ರಿಯಾಗೆ ಮತ್ತೂ ಆಸೆ. ಕೈಚಾಚಿದರೆ, ನಾಲ್ಕು ಹೆಜ್ಜೆ ನಡೆದರೆ ಸಿಕ್ಕೇ ಬಿಡುತ್ತದೆ ಎಂಬಂತಿದ್ದ ಹಿಮದ ಗ್ಲೇಶಿಯರ್ ಅನ್ನು ತೋರಿಸಿ ಕೇಳಿದಳು- 'ಅಲ್ಲಿಗೆ ವಾಕ್ ಮಾಡೋಣವಾ?' ತಶಿ ಉತ್ತರಿಸಿದ- 'ಅಲ್ಲಿಗೆ ಹೋಗಲು ಎರಡು ದಿನದ ಟ್ರೆಕ್ಕಿಂಗ್ ಮಾಡಬೇಕು!' ಉತ್ಸಾಹದ ಬೆಲೂನು ಟುಸ್ಸೆಂದಿತು.
ತಣ್ಣನೆಯ ತಾಣದಲ್ಲಿ ನಿಧಾನವಾಗಿ ಸುಡುವಾಸ್ತವ ನಮ್ಮೆದುರು ತೆರೆದುಕೊಳ್ಳತೊಡಗಿತ್ತು. ನಾವಿದ್ದ ತುಸುವೇ ಕೆಳಗಡೆ ಅಂಗಡಿಗಳಿದ್ದವು. ನೂರಾರು ವಾಹನಗಳು ಬೀಡುಬಿಟ್ಟಿದ್ದವು. ಪೊಲೀಸ್ ತಡೆದ. ಮುಂದೆ ರಾಣಿ ನಾಲಾ ಎಂಬಲ್ಲಿ ರಸ್ತೆ ಜರಿದಿತ್ತು, ರಿಪೇರಿ ನಡೆದಿತ್ತು. ಮನಾಲಿಯಿಂದ ಏರು ಹತ್ತುತ್ತಿದ್ದ ವಾಹನಗಳು ಅತ್ತ ಕಡೆಯಲ್ಲೂ, ಮನಾಲಿಯತ್ತ ಇಳಿಯುತ್ತಿದ್ದ ವಾಹನಗಳು ಇತ್ತ ಕಡೆಯಲ್ಲೂ ಕಾಯುತ್ತ ನಿಂತಿದ್ದವು. ಕುದುರೆ ಸವಾರಿಯವರು ಭರ್ಜರಿ ವ್ಯಾಪಾರ ನಡೆಸಿದ್ದರು. ಬೆಟ್ಟದ ಮೇಲೆ ಹತ್ತಿಸುತ್ತೇವೆ, ಹಿಮದಲ್ಲಿ ಉರುಳಾಡಿಸುತ್ತೇವೆ, 2,000 ರುಪಾಯಿ ಕೊಡಿ ಎಂದೆಲ್ಲ ಬೆಣ್ಣೆ ಹಚ್ಚತೊಡಗಿದರು. ಅಲ್ಲಿಂದಿಲ್ಲಿಗೆ ಒಂದು ವಿಮಾನ ಟಿಕೆಟ್ ಚಾರ್ಜು! ನಾವು ಜಾರಲಿಲ್ಲ. ರೋಹ್ತಾಂಗ್ ಆಗಾಗ ಮಳೆಮೋಡಗಳ ನಡುವೆ ಮರೆಯಾಗುತ್ತಿತ್ತು. ಆಗ ನಾವು, ವಾಹನಗಳು ಎಲ್ಲವೂ ಕಾಣಿಸದಾಗುತ್ತಿದ್ದವು. ಬೆಟ್ಟಗಳು, ಪಾತಾಳ, ಹಿಮ ಎಲ್ಲವೂ ಮರೆಯಾಗಿ, ಈಗಿಲ್ಲಿ ನಾವಷ್ಟೇ ಇದ್ದೇವೆ ಎಂಬ ಅನುಭೂತಿ. ರಸ್ತೆಯಿಂದ ತುಸು ಜರುಗಿ ಕಲ್ಲುಗಳ ಮೇಲೆ ಕೂತೆವು. ಸಣ್ಣಸಣ್ಣ ಹಳದಿ, ನೇರಳೆ ಹೂಗಳು ಅಲ್ಲೆಲ್ಲ ಬಿರಿದಿದ್ದವು. ನೇರಳೆ ಹೂ ತುಸುಮಟ್ಟಿಗೆ ನಮ್ಮ ಕುರಿಂಜಿಯನ್ನು ಹೋಲುತ್ತಿತ್ತು. ಚಳಿ. ಅಂಗಡಿಗಳ ಮುಂದೆ ಕುದುರೆ ಲದ್ದಿ, ಕಸ. ಅದರಲ್ಲೇ ಓಡಾಡುತ್ತ, ಕುರುಕುರೆ ತಿನ್ನುತ್ತ, ಕಡ್ಲೆಬೀಜ ತಿನ್ನುತ್ತ ಜನವೋ ಜನ. ಜನ ಎಲ್ಲೇ ಹೋದರೂ ಹೀಗೇ ಇರುತ್ತಾರೋ?
ರಾಧಿಕಾ, ಹೊಟ್ಟೆ ಸರಿಯಿಲ್ಲ ಎನ್ನುತ್ತ ನೀರಿನ ಬಾಟಲಿ ತಗೊಂಡು ಬಂಡೆ ಮರೆಗೆ ಹೋದಳು. ಅಲ್ಲೇನು, ರಸ್ತೆಯಿಂದಾಚೆಗೆ ಹೋದರೆ ಎಲ್ಲವೂ ಮರೆಗಳೇ. ಕಾಝಾಗೆ ಹೋಗುತ್ತಿದ್ದಾಗ ಪ್ರಿಯಾ ಈ ಕರ್ತವ್ಯವನ್ನು ಯಥೇಷ್ಟ ನಿರ್ವಹಿಸಿದ್ದಳು. ಈಗ ರಾಧಿಕಾ.
ಒಂದೂವರೆ ಗಂಟೆ ಹೀಗೆ ಕಳೆದಿರಬೇಕು. ಇದ್ದಕ್ಕಿದ್ದಂತೆ ಈ ಕಡೆಯಿಂದ ವಾಹನ ಬಿಟ್ಟರು. ವಾಹನ ಹತ್ತಿದೆವು. ನಮ್ಮ ಸಾರಥಿ ಹೇಗೆ ಗಾಡಿ ನುಗ್ಗಿಸತೊಡಗಿದ ಎಂದು ಹೇಳಿ ಪ್ರಯೋಜನವಿಲ್ಲ. ರೋಹ್ತಾಂಗ್ವರೆಗೆ ಅಷ್ಟೊಂದು ಸಾಧುವಾಗಿದ್ದ ಚಾಲಕ ಅದೇಕೆ ಈಗ ಹೀಗಾದನೋ ಗೊತ್ತಾಗಲಿಲ್ಲ. ಮನಾಲಿ ನಗರದ ಗಾಳಿ ತಾಗಿತೋ? ಸ್ಪಿಟಿಯ ಜನ ಸಾವಧಾನಿಗಳು ಎಂದುಕೊಂಡಿದ್ದ ನಮ್ಮ ಅನಿಸಿಕೆ ಸುಳ್ಳೋ ಹಾಗಿದ್ದರೆ?
ದಾರಿ ಕಡಿದಾಗಿತ್ತು. ಎದುರುಬದಿಯಿಂದಲೂ ವಾಹನ ಸಾಲುಗಟ್ಟಿದ್ದವು. ರಾಣಿ ನಾಲಾ ಬಳಿ ಕೆಲಸ ನಡೆದಿತ್ತು. ನಾಲೆಯ ಮೇಲೆ ನಿಂತು ನೋಡಿದರೆ ಎದೆ ಝಲ್ಲೆಂದಿತು. ಛೋಟಾಧಾರಾ ಬೇಡವೆಂದರೂ ನೆನಪಾಯಿತು. ಆದರಿದು ಸುಸಜ್ಜಿತ ಸೇತುವೆ, ರಸ್ತೆ. ಆದರೂ ಉತ್ಪಾತ ತಪ್ಪುವುದಿಲ್ಲ. ರಸ್ತೆ ಹದಿಮೂರು ಸಾವಿರ ಅಡಿ ಎತ್ತರದಿಂದ, ಏಳು ಸಾವಿರ ಅಡಿಗೆ ಇಳಿಯುತ್ತಿತ್ತು. ಶೀತ ಮರುಭೂಮಿಯ ಹಿಮವತ್ಪರ್ವತಗಳು ಮರೆಯಾಗಿ, ನಿತ್ಯ ಹಸಿರಿನ ಬೆಟ್ಟಗಳು ಸ್ವಾಗತಿಸಿದವು. ತಳದಲ್ಲೆಲ್ಲೋ ಬಿಯಾಸ್ ಅಬ್ಬರಿಸಲು ತೊಡಗಿತು. ಮನೆಗೆ ಅಷ್ಟಷ್ಟೇ ಹತ್ತಿರ, ಸ್ಪಿಟಿಯಿಂದ ಅಷ್ಟಷ್ಟೇ ದೂರ. ನಗ್ಗರ್ ಎಂಬ ಊರು ಕರೆಯುತ್ತಿತ್ತು.
- ಹರೀಶ್ ಕೇರ
harishkera@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


