ಸಾಪ್ತಾಹಿಕಪ್ರಭ

ಕಾಡಿನ ಬೆಂಕಿ ದಾಂಡೇಲಿ ಕೆಂಡ

ಕಾಡಿನ ಬೆಂಕಿ ದಾಂಡೇಲಿ ಕೆಂಡ
Published On :

ಅರುವತ್ತು ವರ್ಷ ನಂತರ ದಾಂಡೇಲಿ ಭಾಗದಲ್ಲಿ ಬಿದಿರು ಬಾಡಿದೆ. ಬಾಡುವ ಮುನ್ನ ಬಿದಿರು ಹೂಗಳನ್ನು ಹೊರ ಚೆಲ್ಲಿ ಅಕ್ಕಿಯನ್ನು ಕಾಡಿಗೆ ಬಿತ್ತಿ 'ಅಗ್ನಿಬಾರ'ವನ್ನು ತಂದೊಡ್ಡಿದೆ. ಬಾಡಿದ ಬಿದಿರಿಗೆ ಕಾಳ್ಗಿಚ್ಚು ಅಂಟಿದೆ. ಬಿದಿರು ಅಕ್ಕಿ ಬಿಟ್ಟರೆ ಕ್ಷಾಮ ಬರುತ್ತದೆ ಎಂಬ ಮಾತು ವಿಬಿನ್ನ ರೀತಿಯಲ್ಲಿ ನಿಜವಾಗಿದೆ.
ನೀರಿಗೆ ಬರವಿಲ್ಲದಿದ್ದರೂ ಅಗ್ನಿಯ ಶಾಖ ಸಸ್ಯಸಂಕುಲ ಹಾಗೂ ಮೂಕಜೀವಿಗಳಿಗೆ ಬರಗಾಲಕ್ಕಿಂತಲೂ ಅಧಿಕ ಸಂಕಷ್ಟ ಒಡ್ಡಿದೆ. ಅಭಯಾರಣ್ಯವೆಂಬ ಸುಂದರ ಭವನಕ್ಕೆ ಅಗ್ನಿಶಿಲೆಯ ಹಾಸು ಹಾಸಿದಂತಾಗಿದೆ. ದಾಂಡೇಲಿ ಭಾಗದ ಜೋಯಿಡಾ, ಹೆಬ್ಬಾಳ, ಗದ್ದೆಮನೆ, ಅಣಶಿ, ಚಿಲುಮಿ, ಶಿವಪುರ, ಕರಿಯಾದಿ, ಚಂಚಗಡ, ಬೆಡ್ಸಗದ್ದೆ, ಶಿವಳ್ಳಿ, ಅವರ್ಲಿ, ನೇತ್ರಗಿ ಸೇರಿದಂತೆ ಸುತ್ತಲಿನ ನೂರೈವತ್ತು ಹೆಕ್ಟೇರ್ ಅಭಯಾರಣ್ಯದಲ್ಲಿ ಅಗ್ನಿ ರೌದ್ರಾವತಾರ ಮುಂದುವರೆದಿದೆ. ವರುಣನ ಮಾತಿಗೂ ಬೆಲೆ ನೀಡದ ಅಗ್ನಿ ತನ್ನ ಸುಳಿಯಲ್ಲಿ ಸಿಕ್ಕಿದ್ದನ್ನೆಲ್ಲ ಭೋಗಿಸುತ್ತಿದೆ.
ಬಿದಿರು ಒಣಗಿ ಕೆಲ ತಿಂಗಳೇ ಕಳೆದಿರಬಹುದು. ಬಿದಿರಿಗೆ ಹೇಗೆ ಬೆಂಕಿ ಬಿತ್ತು ಎಂದು ಪತ್ತೆ ಹಚ್ಚುವುದು ಕಷ್ಟ. ಸಾವಿರಾರು ಹೆಕ್ಟೇರ್ ಅರಣ್ಯದ ನಡುವೆ ಎಲ್ಲೋ ಒಬ್ಬಾತ ಕಡ್ಡಿ ಗೀರಿದರೂ ಸಾಕಾಗುತ್ತದೆ. ಶೇ.99 ಕಾಡಿನ ಬೆಂಕಿಗಳಿಗೆ ಮನುಷ್ಯನೇ ಮೂಲ. ಕೈತೋರಿಸಲಾಗುವ ಇತರ ಕಾರಣಗಳು ಸುಳ್ಳು ಅಥವಾ ಅರ್ಧಸತ್ಯ. ಇಲ್ಲಿ ಅಗ್ನಿ ಆರಿಸಲು ಅವಶ್ಯವಿರುವ ಮೂಲಭೂತ ಸೌಕರ್ಯಗಳೂ ಇಲ್ಲ.
1996ರಲ್ಲಿ ಈ ಭಾಗದ ಕಾಡುಗಳಲ್ಲಿ ಅಗ್ನಿ ಆಟವಾಡಿತ್ತಾದರೂ ಇಷ್ಟೊಂದು ಹಾನಿ ಮಾಡಿರಲಿಲ್ಲ. ಬಿದಿರು ಕಡಿದು ಕದ್ದು ಸಾಗಿಸಿದ ಅಪರಾಧ ಮುಚ್ಚಲು ಕೆಲ ಸಿಬ್ಬಂದಿಗಳೇ ಮಾಡಿದ ಕೃತ್ಯ ಅದಾಗಿತ್ತು.
ಈ ಸಲದ ಬೆಂಕಿಗೆ ಎಷ್ಟು ವನ್ಯಜೀವಿಗಳು ಸುಟ್ಟಿವೆಯೋ ತಿಳಿಯದು. ಒಳಹೊಕ್ಕರೆ ಸಾಕು, ಅರೆಬೆಂದ ಪ್ರಾಣಿ ಮಾಂಸದ ದುರ್ವಾಸನೆ ಬೀಸಿಬರುತ್ತದೆ. ಅಪರೂಪ ಹಾಗೂ ಅಮೂಲ್ಯವಾದ ಮರಗಳು ಬೇರಿನಿಂದ ತುದಿಯವರೆಗೂ ಸುಟ್ಟು ಕರಕಲಾದದ್ದು ಕಾಣುತ್ತದೆ.
ಪಕ್ಷಿಗಳ ಕೂಜನದಲ್ಲಿ ಪರಿವಾರ ಕಳೆದುಕೊಂಡ ರೋದನ ಕೇಳಿಸುತ್ತದೆ. ಹಾವು ಸುಟ್ಟ ಜಾಗದಲ್ಲಿ ಹಾವಿನ ಆಕಾರದಲ್ಲಿಯಲ್ಲಿಯೇ ಬೂದಿ ನಿಂತಿದೆ. ಸ್ಥಳೀಯ ಜಾನುವಾರುಗಳು ಮೇಯಲು ಕಾಡು ಹೊಕ್ಕಲು ಭಯಪಡುತ್ತಿವೆ. ನೀರನ್ನು ಬಯಸಿ ಕೆಲ ಮೃಗಗಳು ಕಾಳಿ ಹಿನ್ನೀರಿನತ್ತ ತಲೆ ಹಾಕಿವೆ. ಸಣ್ಣ ಜೀವಿಗಳು ಸುಟ್ಟು ಕರಕಲಾಗಿದ್ದರೆ, ಬೃಹತ್ ಜೀವಿಗಳು ಆಹಾರವಿಲ್ಲದೆ ಕಂಗೆಟ್ಟಿವೆ. ಇವೆಲ್ಲ ಮುಂದೆ ಯಾವ ಬಗೆಯ ಅನಾಹುತ ಸರಣಿಗೆ ನಾಂದಿಯೋ?

- ಅಚ್ಯುತಕುಮಾರ ಯಲ್ಲಾಪುರ
a14kumar@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.