ಜೋಗಿಯ ಸಿಗರೇಟು, ಮೂವತ್ತು ಡೈವೋರ್ಸು!
ಯಾವ ಸಿಗರೇಟು ಸೇದಿದ ಬಾಯಿಯಿಂದ ವರ್ಣಿಸಬೇಕೋ ತಿಳಿಯುತ್ತಿಲ್ಲ. ಅದು ಅವರ ಉಪದೇಶಗಳಲ್ಲ; ತನ್ನ ಸಿಗರೇಟಿನ ಚಟದ ಬುಡಕ್ಕೆ ಎಸೆದ ಗ್ರೆನೇಡು ಅಂತಲೇ ಭಾವಿಸಿದ್ದರು ಜೋಗಿ. 'ಸಿಗರೇಟೆಷ್ಟು ಹಾನಿಕರ' ಎಂಬುದು ಎದುರಿಗಿದ್ದ ಯಜಮಾನರ ಬೋಧನೆಯ ದಾಳಿ. ಎದೆಸುಟ್ಟ ತಂಬಾಕಿನ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದ ಜೋಗಿ, ಅವತ್ತು ಮಾತ್ರ ತಮ್ಮ ಕಿವಿಗಳು ಸುಟ್ಟು ಹೋಗುತ್ತಿವೆಯೇನೋ ಎಂಬ ದಿಗಿಲಲ್ಲಿ ತುದಿ ಬೆರಳಿನಿಂದ ಮೂರ್ನಾಲ್ಕು ಬಾರಿ ಮುಟ್ಟಿ, ಕನ್ಫರ್ಮ್ ಮಾಡಿಕೊಂಡು ಖುರ್ಚಿಗೆ ಮತ್ತೆ ಪೃಷ್ಠ ಬಿಗಿಮಾಡಿ ಕೂತಿದ್ದರು.
ಅಗ್ನಿಸಾಕ್ಷಿಯಾಗಿ ಕೈಹಿಡಿದ ಸಿಗರೇಟಿನ ಚಟವನ್ನು ಹೀನಾಮಾನವಾಗಿ ಅಲ್ಲಗಳೆದಿದ್ದು ತಂಬಾಕಿನ ಫಲಾನುಭವಿಯಾಗಿ ಜೋಗಿಗೆ ಸರಿಕಾಣಲಿಲ್ಲ. ಆದರೂ, ವಿಧಿಯಿಲ್ಲ. ಅವರು ಹೇಳುತ್ತಲೇ ಹೋದರು. ಇವರೂ ಬಾಯಿ ಆಕಳಿಸಿ, ಕಿವಿ ಅಗಲಿಸಿ ಕೇಳಿಸಿಕೊಳ್ಳುತ್ತಲೇ ಹೋದರು. 'ಎದ್ದೇಳು ಮಂಜುನಾಥ'ದ ಜಗ್ಗೇಶ್ ನೆನಪಾದರೆ ನಿಮ್ಮ ಊಹೆಗೆ ಗೋಲಿಮಾರೋ!
ಜೋಗಿಯ ಸಿಗರೇಟಿನ ಚಟವನ್ನು ಸುಟ್ಟುಬೂದಿ ಮಾಡಲು ಹೊರಟಿದ್ದ ಆ ಯಜಮಾನರು ಕೊನೆಗೊಂದು ಪ್ರಶ್ನೆ ಕೇಳಿದರು, 'ಸಿಗರೇಟು ಸೇದೋದ್ರಿಂದ ನಿಮಗೇನು ಸಿಗುತ್ತೆ?'. 'ಬೂದಿ' ಅಂದರು ಜೋಗಿ!
'ಹೆಂಡ್ತಿ ಬೇಕಾದ್ರೂ ಬಿಡ್ತೀನಿ, ಸಿಗರೇಟು ಬಿಡಲ್ಲ' ಅಂತ ಬಂಗಾಳಿ ಲೇಖಕನಂತೆ ಹೇಳಿಕೊಳ್ಳಲು ಜೋಗಿಗೆ ಧೈರ್ಯ ಕಡಿಮೆ. ಆದರೆ, ಸಿಗರೇಟು ಸೇದಿದ್ರೆ ಶ್ವಾಸಕೋಶದಲ್ಲಿ ಕರಿಮೋಡ ಕಟ್ಟುತ್ತೆ ಅಂತ ಹೆದರಿಸುವ ಭಯೋತ್ಪಾಕರನ್ನು ಸೆರೆಹಿಡಿಯದ ಸರ್ಕಾರದ ಬಗ್ಗೆ ಸಿಟ್ಟಿದೆ. ಆ ಕ್ಷಣವನ್ನು ಅನುಭವಿಸುವುದಕ್ಕಾಗಿ ಜೋಗಿ ಧಂ ಎಳೆಯುತ್ತಾರೆ. ಅದು ಅವರಿಗೆ ಏಕಾಂತ ಸುಖ. ಸಿಗರೇಟು ತೊರೆದರೆ ಎಲ್ಲಿ ತಂಬಾಕು ಬೆಳೆವ ರೈತ ಬೀದಿಗೆ ಬರುತ್ತಾನೋ ಎಂಬ ಆತಂಕ. ಬಜೆಟ್ಟಲ್ಲಿ ಏರಿದ ಸಿಗರೇಟಿನ ಬೆಲೆ ಕಂಡು, ಕೋಪದಲ್ಲಿ ಸಿಗರ್ಲೈಟರ್ ಹೊತ್ತಿಸಿದ್ದೂ ಅವರ ಚರಿತ್ರೆಯಲ್ಲಿ ದಾಖಲು.
ಜೋಗಿಯ ಹೊಗೆಯ ಹಿನ್ನೆಲೆ ಕೆದಕಿದರೆ, ಕ್ರಿಸ್ತಶಕದ 33 ಕ್ಯಾಲೆಂಡರ್ಗಳು ಮಗುಚಿ ಬೀಳುತ್ತವೆ. ಎಂಟನೇ ಕ್ಲಾಸಿನಲ್ಲೇ ಗಣೇಶ ಬೀಡಿಗೆ ಕೊಳ್ಳಿಯಿಟ್ಟಿದ್ದಕ್ಕೂ ಅವರಲ್ಲಿ ಕಾರಣ ಕಾಣಿಸಿಕೊಳ್ಳುತ್ತದೆ. 'ಮೆಚ್ಯೂರ್ಡ್ ಆಗಿದ್ದೀನಿ' ಅಂತ ಆಗ ಅವರಿಗಷ್ಟೇ ಗೊತ್ತಿತ್ತಂತೆ. ಆದರೆ, ಎಲ್ಲರಿಗೂ ಗೊತ್ತಾಗಬೇಕಲ್ಲ. ಅದಕ್ಕೇ ಬೀಡಿ ಸೇದಲು ಶುರುಮಾಡಿದರಂತೆ! ಉಪ್ಪಿನಂಗಡಿಯಲ್ಲಿ ಐದು ಗಂಟೆಗೆ ಕ್ಲಾಸು ಬಿಟ್ಟರೆ, ಹಳ್ಳಿಯ ಮನೆಸೇರುವ ಹೊತ್ತಿಗೆ ರಾತ್ರಿ ಹನ್ನೊಂದು. ಅಲ್ಲಿ ಇಲ್ಲಿ ಸುತ್ತಿ, ಬೀಡಿಯ ಹೊಗೆಗಳ ಸುರುಳಿ ಸುತ್ತಿದರೆ ಹೊಟ್ಟೆ ಭರ್ತಿ. 'ಗುರುವಾಯನಕೆರೆ' ಕೃತಿಯಲ್ಲಿ ಬರುವ 'ಜಾನ್' ಇವರಿಗೆ ಸಿಗರೇಟು ಕಲಿಸಿದ. ಜೋಗಿ ಸೇದಿದ ಮೊದಲ ಸಿಗರೇಟು ಬ್ರಿಸ್ಟಲ್. ಅದೇ ಬ್ರಿಸ್ಟಲ್ ಕೊಳವೆಗೆ ಗಾಂಜಾ ತುರುಕಿ, ಜಾನ್ನೊಂದಿಗೆ ಮಜಾ ತೆಗೆದುಕೊಂಡಿದ್ದೂ ಇದೆ. ಆದರೆ, ಅದಷ್ಟು ಕಿಕ್ ಕೊಟ್ಟಿರಲಿಲ್ಲ.
ಮೊನ್ನೆ ಫೇಸ್ಬುಕ್ಕಿನಲ್ಲಿ ಜೋಗಿ ಹೀಗೆ ಅಂಟಿಸಿದ್ದರು. 'ಸಿಗರೇಟಿನೊಂದಿಗೆ ನನ್ನ ಸುದೀರ್ಘ ದಾಂಪತ್ಯ ಕೊನೆಯಾಗುತ್ತಿದೆ. 1980, ಜನವರಿ 23ರಂದು ನಾನು ಮೊದಲು ಸಿಗರೇಟು ಸೇದಿದ್ದು. ಆ ಕಾಲಕ್ಕೆ 10 ಸಿಗರೇಟಿನ ಬ್ರಿಸ್ಟಲ್ ಪ್ಯಾಕಿಗೆ ಒಂದೂವರೆ ರುಪಾಯಿ. ಈಗ ಸೇದಿದ ಇಂಡಿಯಾಕಿಂಗ್ ಬೆಲೆ ನೂರ ನಲವತ್ತು. ನಾ ಸುಟ್ಟ ಸಿಗರೇಟುಗಳ ಲೆಕ್ಕ, ಯಮ ನೋಡಿ ನಕ್ಕ'!
ಎಲ್ಲರೂ ಸೊಲ್ಲಾಡಿದರು, ಜೋಗಿ ಸಿಗರೇಟು ಬಿಟ್ಟರಂತೆ! ಆದರೆ, ಜೋಗಿ ಸುಳ್ಳನ್ನೂ ಕಥೆಯಂತೆಯೇ ಸೊಗಸಾಗಿ, ಸಲೀಸಾಗಿ ಗೀಚಬಲ್ಲರು! ಜೋಗಿ ಸಿಗರೇಟನ್ನು ಹೀಗೆ 30 ಬಾರಿ ಬಿಟ್ಟಿದ್ದಾರೆ! ಮೊನ್ನೆ ಕಠ್ಮಂಡುವಿಗೆ ಟ್ರಿಪ್ಪಿಗೆ ಹೋದಾಗ, ಮತ್ತೆ ಸಿಗರೇಟಿನ ಕೈಹಿಡಿದರು. ಚಟಕ್ಕೆ ವಿಚ್ಛೇದನ ಕೊಟ್ಟು ಬದುಕುವುದು ಅವರಿಗೂ ಕಷ್ಟ. ಹೀಗೆ ಡೈವೋರ್ಸ್ ಕೊಟ್ಟು, ಮತ್ತೆ ಸೇದುವುದರಿಂದ 'ನಾನೂ ಸಿಗರೇಟು ಬಿಡಬಲ್ಲೆ' ಎಂಬ ಭಾವ ಅವರೊಳಗೆ ಜೀವಂತವಾಗಿಯೇ ಇರುತ್ತಂತೆ. 'ಯಾವುದೇ ಅನುಭವಕ್ಕೆ ಅಪರಿಚಿತನಾಗಬಾರದು ಮತ್ತು ಯಾವುದೇ ಅನುಭವಕ್ಕೆ ದಾಸನಾಗಿರಬಾರದು' ಎಂಬ ಕಾರಂತರ ನುಡಿಯೇ ಈ ವಿಚ್ಛೇದನಗಳಿಗೆ ಸ್ಫೂರ್ತಿ.
'ಇನ್ನು ನನ್ನ ಜೇಬಲ್ಲಿ ಬೆಂಕಿಪೊಟ್ಟಣ ಇರಲ್ಲ. ಮುಂದೆ ಸಿಗರೇಟು ಸೇದಲ್ಲ' ಅಂತ ಮದುವೆ ವೇಳೆ ಪತ್ನಿ ಜ್ಯೋತಿ ಮಾಡಿಸಿದ ಪ್ರತಿಜ್ಞಾವಿಧಿ ಕೆಲವೇ ದಿನಗಳಲ್ಲಿ ಮರೆತುಹೋಯಿತು. 'ಕನ್ನಡಪ್ರಭ' ಕಚೇರಿಯಲ್ಲಿ ಸಿಗರೇಟು ಸೇದುತ್ತಿದ್ದ ಜೋಗಿಯನ್ನು ಲೈವ್ ಆಗಿ ಕಂಡ ನೆಂಟನೊಬ್ಬ, ಪತ್ನಿಗೆ ದೂರವಾಣಿಯಲ್ಲಿ ದೂರು ಕೊಟ್ಟನಂತೆ. 'ಮತ್ತೆಸಿಗರೇಟು ಶುರುಮಾಡ್ಕೊಂಡ್ರಾ?' ಎಂಬ ಪ್ರಶ್ನೆಯೊಂದಿಗೆ ಹೆಂಡ್ತಿಯ ಸ್ಟ್ರೈಕ್ ಒಂದೆರಡು ದಿನ ನಡೆಯಿತಷ್ಟೇ. ಇನ್ನು ಮಗಳು ಖುಷಿ ದೊಡ್ಡವಳಾದ ಮೇಲೆ ಎಲ್ಲಿ ಈ ಚಟ ಬಿಡು ಅಂತಾಳೋ ಎಂಬ ಭಯದಲ್ಲಿದ್ದಾರೆ ಜೋಗಿ. ಒಮ್ಮೆ ಫ್ಯಾಮಿಲಿ ಡಾಕ್ಟರ್ ನಿರಂಜನ್, ಸಿಗರೇಟು ನಿಲ್ಲಿಸಲು ಸೂಚಿಸಿದರು. ಅದಕ್ಕೆ ಜೋಗಿ, 'ಡಾಕ್ಟ್ರೇ ದಯವಿಟ್ಟು ಹಾಗೆ ಮಾತ್ರ ಹೇಳ್ಬೇಡಿ' ಎಂದರು. 'ಯಾಕೆ' ಅಂತ ಕೇಳಿದ ಡಾಕ್ಟರ್ಗೆ ಇವರ ಉತ್ತರದಿಂದ ಎದೆಬಡಿತ ಏರಿತ್ತು; 'ನನಗೆ ಸಿಗರೇಟು ಬಿಡು ಅಂತ ಇಬ್ಬರು ಡಾಕ್ಟ್ರು ಹೇಳಿದ್ರು. ಅವರೆಲ್ಲ ಕೂಡಲೇ ಸತ್ತು ಹೋದ್ರು. ನೀವು ಬದುಕಿರಬೇಕು ಡಾಕ್ಟ್ರೇ'!
ಬಹುತೇಕ ಸಾಹಿತಿಗಳೊಂದಿಗೆ ಹೊಗೆ ಬಿಟ್ಟ ಜೋಗಿಗೆ, ಸಿಗರೇಟಿನಲ್ಲಿ ಪಿಎಚ್ಡಿ ಆಗಿದೆ. ಮೇಷ್ಟ್ರು ಅನಂತಮೂರ್ತಿಯವರ ಜತೆ ಸೇದುವ ಆಸೆಯಿತ್ತು. ಆದರೆ, ಆ ವೇಳೆ ಮೇಷ್ಟ್ರೇ ಸೇದುವುದನ್ನು ನಿಲ್ಲಿಸಿದ್ದರು. ಜೋಗಿಯ ಜೇಬಿಗೆ ಕೈಹಾಕಿ, ಸಿಗರೇಟು ಸೇದಿ, 'ನಾ ಸಿಗರೇಟು ಸೇದ್ತೀನಿ ಅಂತ ಯಾರಿಗೂ ಹೇಳ್ಬೇಡ ಮಾರಾಯ' ಎಂದು ಹೇಳುವ ಇಬ್ಬರು ಪ್ರಮುಖ ಸಾಹಿತಿಗಳ ಹೆಸರು ಜೋಗಿಯ ನಾಲಗೆ ಮೇಲೆ ಅಡಗಿ ಕೂತಿದೆ.
ಒಂದು ವರ್ಷ ಸಿಗರೇಟು ಬಿಟ್ಟು ಬೆಟ್ಸ್ನಲ್ಲಿ ಗೆದ್ದ ಜೋಗಿಯವರ ಬಳಿ, ಗೆಳೆಯ ವಾಸು ಕೊಟ್ಟ 600 ರುಪಾಯಿಯ ಆ ಚೆಕ್ಕು ಇನ್ನೂ ಉಂಟು. ಕಥೆ, ಕಾದಂಬರಿ ಬರೆಯುವಾಗಲೆಲ್ಲ ಒಂದೆರಡು ಗಂಟೆಯ ಅಂತರದಲ್ಲಿ ವಿರಾಮ. ಆಗೊಂದಿಷ್ಟು ಸಿಗರೇಟುಗಳ ಹೋಮ. ಈ ಚಟ ಅವರಿಗೊಂಥರ ಧ್ಯಾನ. ಸಹಸ್ರ ಆಲೋಚನೆಗಳಿಗೆ, ಹತ್ತಾರು ಕಥೆಗಳಿಗೆ ತಿರುವು ಕೊಟ್ಟಿದೆ.
ಬಹುಶಃ ಜೋಗಿ ಸಿಗರೇಟು ಪೂರ್ತಿ ಬಿಟ್ಟರೆ, ನಂತರದ ಕಥೆಗಳು ನಮಗೆ ಕಿಕ್ ಕೊಡಲಿಕ್ಕಿಲ್ಲ!
- ಕೀರ್ತಿ
kolgarkeerthi@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

