

ಫುಟ್ಬಾಲ್ ಪ್ರಪಂಚದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಜಗತ್ತಿನಲ್ಲೇ ದೊಡ್ಡ ಹೆಸರು. ಕಾಲು ಶತಮಾನಕ್ಕೂ ಹೆಚ್ಚಿನ ಅವಧಿಗೆ ಆ ತಂಡದ ಮ್ಯಾನೇಜರ್ ಆಗಿ, ತಮ್ಮ ಸಾಧನೆಯ ಫಲವಾಗಿಯೇ 'ನೈಟ್ ಹುಡ್' ಗಳಿಸಿದ ಸರ್ ಎಲಕ್ ಫರ್ಗುಸನ್ ನಿಜಕ್ಕೂ ಒಂದು ಮಹಾನಕ್ಷತ್ರದಂತೆಯೇ ಬಾಳಿ ಬದುಕಿದವರು.
ಫುಟ್ಬಾಲ್ ಅವರ ಜೀವನದ ಸರ್ವಸ್ವವಾಗಿತ್ತು. ಆ ಕ್ರೀಡೆಯಲ್ಲೇ ಫರ್ಗುಸನ್ ತಮ್ಮ ಜೀವನವನ್ನೇ ಸವೆಸಿದರು. ಮ್ಯಾಂಚೆಸ್ಟರ್, ಉತ್ತರ ಇಂಗ್ಲೆಂಡಿನ ಮಹಾನಗರ. ಅಲೆಕ್ ಫರ್ಗುಸನ್ ಸ್ಕಾಟ್ಲೆಂಡ್ ಮೂಲದವರು. ಆದರೂ ಮ್ಯಾಂಚೆಸ್ಟರ್ ಯುನೈಟೆಡ್ಗೆ ಅವರು ಮ್ಯಾನೇಜರ್ ಆಗಿ ಬಂದಾಗ ಎಲ್ಲ ಬಗೆಯ ವ್ಯತ್ಯಾಸಗಳೂ ಅಳಿಸಿ ಹೋದವು.
1941ರಲ್ಲಿ ಸ್ಕಾಟ್ಲೆಂಡ್ನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಫರ್ಗುಸನ್, ಏರು ಯೌವನದಲ್ಲಿ ಒಬ್ಬ ಅತ್ಯುತ್ತಮ ಕ್ರೀಡಾಪಟು. ಮುನ್ಪಡೆಯಲ್ಲಿ ಆಡುತ್ತಿದ್ದ ಈ ಯುವಕ ಆಗ ಗಳಿಸಿದ ಗೋಲುಗಳು, ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ.
ಆದರೆ ಅವರ ಪ್ರತಿಭೆ ಅಲ್ಲಿಗೇ ನಿಲ್ಲಲಿಲ್ಲ. ವಯೋಧರ್ವುಕ್ಕೆ ತಕ್ಕಂತೆ ಕ್ರೀಡಾಪಟುವಿನ ಜೀವನ ಬಿಟ್ಟು ಟೀಮ್ ಮ್ಯಾನೇಜರ್ ಪದವಿಗೇರಿದಾಗ ಅಲೆಕ್ಸ್ ಫರ್ಗುಸನ್ ಅವರ ಪ್ರತಿಭೆ ನಿಜ ಸ್ವರೂಪದಲ್ಲಿ ಪ್ರಕಾಶಕ್ಕೆ ಬಂದಿತ್ತು.
ಫುಟ್ಬಾಲ್ ಇತಿಹಾಸದಲ್ಲೇ ಅವರಷ್ಟು ಗೌರವ - ಪ್ರಶಸ್ತಿಗಳನ್ನು ಗಳಿಸಿದವರಿಲ್ಲ. ಹದಿಮೂರು ಪ್ರೀಮಿಯರ್ ಲೀಗ್, ಎರಡು ಚಾಂಪಿಯನ್ ಟ್ರೋಫಿ ಸೇರಿದಂತೆ ಮೂವತ್ತೆಂಟು ಟ್ರೋಫಿಗಳು ಅವರ ಪಾಲಾಗಿವೆ.
1974ರವರೆಗೂ ಅವರಿಗೆ ಎದುರಾಗಿದ್ದು ಸೋಲಿನ ಮಾಲೆಯೇ. ಆದರೂ ಛಲವಂತ. ತನ್ನ ಉಸ್ತುವಾರಿಯಲ್ಲಿದ್ದ ಆಟಗಾರರ ಯೋಗಕ್ಷೇವು ಕುರಿತಂತೆ ವಿಪರೀತ ಆಸಕ್ತಿ. ಆದರೆ ಆಟದ ಮೈದಾನದಲ್ಲಿ ತಪ್ಪು ಮಾಡಿದರೆ ಎರ್ರಾಬಿರ್ರಿ ತೆಗಳಿಕೆಗೆ ಸಿದ್ಧವಾಗಿರಬೇಕಾಗಿತ್ತು.
ಫರ್ಗುಸನ್ ಅವರಿಗೂ ಅಂತಹ ಅನುಭವ ಬೇಕಾದಷ್ಟಾಗಿತ್ತು. ಅವರು ಮೈದಾನದಲ್ಲಿ ಆಡುತ್ತಿದ್ದಾಗ, ಅವರ ಮ್ಯಾನೇಜರ್ಗಳೂ ಅವರನ್ನು ಹಾಗೇ ನಡೆಸಿಕೊಂಡಿದ್ದರು. ಈ ವರ್ಷದ ಮೇ 12, ಅವರ ಜೀವನದ ಪ್ರಮುಖ ದಿನ. ಮೇ 8ರಂದೇ ಅವರು ತಮ್ಮ ನಿವೃತ್ತಿಯ ಉದ್ದೇಶವನ್ನು ಪ್ರಕಟಿಸಿದ್ದರು. ಮೇ 12 ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಸ್ವಾನ್ಸಿಟಿ ತಂಡಗಳ ನಡುವೆ ಪ್ರೀಮಿಯರ್ ಲೀಗ್ನ ಕಟ್ಟ ಕಡೆಯ ಪಂದ್ಯ. ಅಲ್ಲಿಗೆ ಈಗಿನ ಫುಟ್ಬಾಲ್ ಸೀಸನ್ ಮುಗಿದಂತೆಯೇ.
ಆ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ನ ಆಟಗಾರರು ಎದುರಾಳಿಗಳ ವಿರುದ್ಧ ಗೆದ್ದು ತಮ್ಮ ಮ್ಯಾನೇಜರ್ಗೆ ಭವ್ಯ, ಭಾವನಾತ್ಮಕ ವಿದಾಯವನ್ನು ಹೇಳಿದ್ದರು. ಮ್ಯಾಂಚೆಸ್ಟರ್ ಯುನೈಟೆಡ್ನಲ್ಲಿ ಫರ್ಗುಸನ್ ಕಳೆದಿದ್ದು 26 ವರ್ಷಗಳ ಕಾಲ, 1499 ಮ್ಯಾಚ್ಗಳನ್ನು ಅವರು ಕಂಡಿದ್ದಾರೆ. ತಂಡ ಗೆದ್ದಾಗ ಸಂತಸ ಪಟ್ಟಿದ್ದಾರೆ, ಆನಂದ ಭಾಷ್ಪವನ್ನು ಸುರಿಸಿದ್ದಾರೆ, ಸೋತಾಗ ಕಂಬನಿಗರೆದಿದ್ದಾರೆ.
ಅವರ ಉಸ್ತುವಾರಿಯ ಕಟ್ಟಕಡೆಯ ಪಂದ್ಯದಲ್ಲಿ ಮಾಂಚೆಸ್ಟರ್ ಯುನೈಟೆಡ್ ಗೆದ್ದ ಅನಂತರ, ಪಂದ್ಯ ಮುಗಿದ ಮೇಲೆ, ಎರಡೂ ತಂಡಗಳ ಆಟಗಾರರು ಸಾಲಾಗಿ ನಿಂತು ಫರ್ಗುಸನ್ ಅವರಿಗೆ ಗೌರವ ರಕ್ಷೆಯನ್ನು ನೀಡಿದರು.
ಫುಟ್ಬಾಲ್ ಪ್ರಪಂಚದಲ್ಲೇ ಇದು ವಿರಳದಲ್ಲಿ ಅತಿವಿರಳವೆನ್ನುವ ಘಟನೆ. ಫುಟ್ಬಾಲ್ ದಾಖಲೆಗಳಲ್ಲಿ ಇಂತಹ ಇನ್ನೊಂದು ಘಟನೆಯಿಲ್ಲ. ಮ್ಯಾಂಚೆಸ್ಟರ್ ಯುನೈಟೆಡ್ಗೆ ಈಗ 150 ವರ್ಷಗಳಿಗೂ ಹೆಚ್ಚಿನ ಅವಧಿಯ ಇತಿಹಾಸವಿದೆ. ಅದು ಒಂದು ರೀತಿಯಲ್ಲಿ ಬ್ರಿಟಿಷ್ ಫುಟ್ಬಾಲ್ನ ಇತಿಹಾಸವೂ ಹೌದು. ಒಂದು ದೊಡ್ಡ ಪುಸ್ತಕವೇ ಕ್ಲಬ್ನ ಇತಿಹಾಸದ ರೂಪದಲ್ಲಿದೆ. ಅದರಲ್ಲೇ ಒಂದು ಕಡೆ ದಾಖಲಾಗಿರುವ ವಿಚಾರ;
ಇನ್ನು ಕೆಲವೇ ವರ್ಷಗಳಲ್ಲಿ ಸರ್ ಎಲೆಕ್ಸ್ ಫರ್ಗುಸನ್, ತಮ್ಮ ಮ್ಯಾನೇಜರ್ ಪದವಿಯಿಂದ ನಿವೃತ್ತರಾಗುತ್ತಾರೆ. ಅಂತಹ ಇನ್ನೊಬ್ಬ ಮ್ಯಾನೇಜರ್ ಸಿಗುವುದು ಕಷ್ಟ.
ಅಲೆಕ್ಸ್ ಫರ್ಗುಸನ್, ಸ್ಕಾಟ್ಲೆಂಡಿನ ತಂಡಗಳನ್ನು ಬಿಟ್ಟು ಇಂಗ್ಲೆಂಡಿನ ಮ್ಯಾಂಚೆಸ್ಟರ್ ಯುನೈಟೆಡ್ನ ಮ್ಯಾನೇಜರ್ ಆಗಿ ನೇಮಕಗೊಂಡಾಗ ಆ ತಂಡ ಹತ್ತೊಂಬತ್ತು ವರ್ಷಗಳಲ್ಲಿ ಒಂದು ಲೀಗ್ ಟ್ರೋಫಿಯನ್ನೂ ಗೆದ್ದಿರಲಿಲ್ಲ. ಅಂತಹ ಪರಿಸ್ಥಿತಿಯನ್ನು ರಾತ್ರಿ ಕಳೆದು ಬೆಳಗಾಗುವುದರ ಒಳಗೆ ಬದಲಾಯಿಸಬಲ್ಲ ಮಾಯಾದಂಡ ಫರ್ಗುಸನ್ ಕೈಯಲ್ಲಿ ಇರಲಿಲ್ಲ. ಒಂದು ಹಂತದಲ್ಲಿ ಈ ಪ್ರಖ್ಯಾತ ತಂಡ ಕೆಳಮಟ್ಟದ ಲೀಗ್ಗೆ ಇಳಿಯಬೇಕಾದ ಪರಿಸ್ಥಿತಿಯೂ ಎದುರಾಗಿತ್ತು.
ಆದರೆ ಹಾಗಾಗಲಿಲ್ಲ. ಮ್ಯಾನೇಜರ್ ಫರ್ಗುಸನ್ ತಮ್ಮ ಆಟಗಾರರಲ್ಲಿ ಉತ್ಸಾಹ ತುಂಬುವುದರ ಜತೆಗೇ ಹೊರಗಿನಿಂದಲೂ ಉತ್ತಮ ಆಟಗಾರರನ್ನು ಕರೆತಂದರು. ಕಟ್ಟುನಿಟ್ಟಿನ ಶಿಸ್ತನ್ನು ಜಾರಿಗೆ ತಂದರು. ಅಭ್ಯಾಸ ಕಡ್ಡಾಯವಾಯಿತು. ತಪ್ಪಿಸಿಕೊಂಡ ಆಟಗಾರರಿಗೆ ಶಿಕ್ಷೆ ಕಾದಿತ್ತು. ನಿಧಾನವಾಗಿ ಮ್ಯಾಂಚೆಸ್ಟರ್ ಯುನೈಟೆಡ್ ಎದ್ದು ನಿಂತಿತ್ತು. ಕೆಲವೇ ವರ್ಷಗಳಲ್ಲಿ ಫುಟ್ಬಾಲ್ ದೈತ್ಯ ಎನಿಸಿಕೊಂಡಿತ್ತು. ಆ ಕೀರ್ತಿಯ ಬಹುದೊಡ್ಡ ಪಾಲು ಫರ್ಗುಸನ್ ಅವರದ್ದೇ. ಸುಮಾರು ಒಂದು ದಶಕದ ಅವಧಿಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಗೆದ್ದ ಪಂದ್ಯಗಳಿಗೆ ಲೆಕ್ಕವೇ ಇಲ್ಲ. ಅನೇಕ ಪಂದ್ಯಗಳನ್ನು ತಂಡ ಸೋಲಿನ ದವಡೆಯಿಂದಲೇ ಕಸಿದುಕೊಂಡಿತ್ತು.
ಈಗ ಜಗತ್ತಿನ ಎಲ್ಲ ಕಡೆ ಮ್ಯಾಂಚೆಸ್ಟರ್ ಯುನೈಟೆಡ್ಗೆ ಅಭಿಮಾನಿಗಳ ತಂಡಗಳೇ ಇವೆ. ಟೆಲಿವಿಷನ್ನಲ್ಲಿ ಫುಟ್ಬಾಲ್ ಪಂದ್ಯಗಳನ್ನು ನೇರವಾಗಿ ಪ್ರಸಾರ ಮಾಡುತ್ತಿರುವುದರಿಂದ ಭಾರತದಲ್ಲೂ ಮ್ಯಾಂಚೆಸ್ಟರ್ ಯುನೈಟೆಡ್ನ ಅಭಿಮಾನಿಗಳ ಸಂಖ್ಯೆ ದೊಡ್ಡದೇ. ಅವರೆಲ್ಲರಿಗೂ ಅಲೆಕ್ಸ್ ಫರ್ಗುಸನ್ ಚಿರಪರಿಚಿತರಂತೆಯೇ ಆಗಿಬಿಟ್ಟಿದ್ದಾರೆ.
ಈಗ ಮ್ಯಾಂಚೆಸ್ಟರ್ ಯುನೈಟೆಡ್ ಜಾಗತಿಕವಾಗಿ ಸ್ಪರ್ಧಾತ್ಮಕವಾದ ವಾಣಿಜ್ಯ ಶಕ್ತಿಯನ್ನು ಪಡೆದಿದೆ. ಅದೊಂದು ಬ್ರ್ಯಾಂಡ್ ಆಗಿಬಿಟ್ಟಿದೆ.
ಈ ಪರಿವರ್ತನೆಯನ್ನು ಅಲೆಕ್ಸ್ ಫರ್ಗುಸನ್ ಕಣ್ಣಾರೆ ಕಂಡಿದ್ದಾರೆ. ಬ್ರಿಟಿಷ್ ಫುಟ್ಬಾಲ್ ಇತಿಹಾಸದಲ್ಲಿ ಅಲೆಕ್ಸ್ ಯುಗವೇ ಅಂತ್ಯವಾಗಿದೆ. ಅದೊಂದು ಚಿರಕಾಲ ನೆನಪಿನಲ್ಲಿ ಉಳಿಯುವಂತಹ ಘಟನೆ. ಪಂದ್ಯ ಮುಗಿದ ಅನಂತರ ಸೋತವರು - ಗೆದ್ದವರು ಸಾಲಾಗಿ ನಿಂತು ಒಬ್ಬ ಕ್ರೀಡಾ ನಾಯಕನಿಗೆ ಗೌರವ ರಕ್ಷೆಯ ವಿದಾಯ ಕೋರಿದ್ದು ಈಗ ಇತಿಹಾಸದ ಒಂದು ಭಾಗ ಮಾತ್ರ.
- ಸತ್ಯ