ಸಾಪ್ತಾಹಿಕಪ್ರಭ

ಮಡಿಲಲ್ಲಿ ಮಗಳಾಗಿ ನಾನು...

ಮಡಿಲಲ್ಲಿ ಮಗಳಾಗಿ ನಾನು...
Published On :

ಅದು ನಿಲ್ಲದ ಹುಡುಕಾಟ. ಎಲ್ಲರೊಳಗೂ ಹುಡುಕಿದ್ದೇನೆ. ಹುಡುಕುತ್ತಲೇ ಇದ್ದೇನೆ. ಇನ್ನೂ ಸಿಗುವುದು ಹಾಗಿರಲಿ, ಕನಿಷ್ಠ ಅದರ ಸುಳಿವೂ ಸಿಕ್ಕಿಲ್ಲವೆಂದರೆ ಅದರ ರಹಸ್ಯದ ಮರ್ಮಕ್ಕೆ ಏನೆನ್ನೋಣ?
ಒಮ್ಮೆಯೆಂದರೆ ಒಮ್ಮೆ, ಒಂದೇ ಒಂದು ಬಾರಿ ಸಿಕ್ಕರೂ ಸಾಕು. ಇಡಿಯಾಗಿ ದಿಟ್ಟಿಸಿ ನೋಡಿ, ಕಣ್ತುಂಬಿಕೊಂಡು ಬಿಡುತ್ತೇನೆ. ಅಷ್ಟು ಸಾಕಾಗಲಿಕ್ಕಿಲ್ಲ. ಮನದಲ್ಲಿ ಪ್ರತಿಷ್ಠಾಪಿಸಿಕೊಳ್ಳುತ್ತೇನೆ. ಆಮೂಲಾಗ್ರ ಅರಿತುಕೊಳ್ಳುತ್ತೇನೆ. ಇನಿತೂ ಬಿಡದಂತೆ ಆವಾಹಿಸಿಕೊಳ್ಳುತ್ತೇನೆ. ಮತ್ತೆ ಗೊಂದಲ ಎಂಬುದಕ್ಕೆ ಅವಕಾಶವೇ ಇಲ್ಲದಂತೆ ಹುಡುಕಾಟಕ್ಕೆ ಕೊನೆ ಹಾಡಿಬಿಡುತ್ತೇನೆ. ಹಾಗಿದೆ ನನ್ನ ಹುಡುಕಾಟದ ಹಾದಿ...
ನನ್ನವನ ಮುದ್ದುಮುದ್ದು, ಮುಗ್ಧ ಸವಿ ಮಾತುಗಳಲ್ಲಿ, ಕೆಣಕುವ ಕಣ್ಣ ಕುಡಿನೋಟದಲ್ಲಿ, ಆತನ ಕೆದರಿದ ಮುಂಗುರುಳಿನಲ್ಲಿ, ಆತ ನಕ್ಕಾಗ ಬೀರಿದ ಬೆಳಕಲ್ಲಿ, ಆ ಬೆಳಕ ಬೆನ್ನ ಹಿಂದೆಯೇ ಗೋಚರಿಸಿದ ಕೆನ್ನೆಯ ಗುಳಿಯಲ್ಲಿ, ಆತನ ಮುದ್ದಾದ ಕ್ಲೀನ್‌ಶೇವ್ಡ್ ರಸಗುಲ್ಲದ ಗಲ್ಲದಲ್ಲಿ, ಶಂಕೆ ಇಲ್ಲದ ಸೌಂದರ್ಯದ ಶಂಖಾಕೃತಿಯ ಕೊರಳಲ್ಲಿ, ಆತನ ಹರವಾದ ಎದೆಯಲ್ಲಿ, ಅದರ ನಡುವಿನ ಕೆಣಕುವ ಹುಲ್ಲುಗಾವಲುಗಳಲ್ಲಿ, ನುಣುಪಾದ ಒಡಲಿಗೆ ಭೂಷಣವಾಗಿ ಕೆರಳಿಸುವ ಆ ಹೊಕ್ಕುಳ ಕುಳಿಯಲ್ಲಿ, ಸುಖದ ಶಿಖರಾಗ್ರಕ್ಕೆ ತಲುಪಿಸುವ ಬೆಚ್ಚನೆಯ ತಾಣದಲ್ಲಿ, ಆತನ ಬಲಾಢ್ಯ ತೋಳುಗಳಲ್ಲಿ, ಇಡೀ ರಾತ್ರಿಯನ್ನು ಕ್ಷಣದಲ್ಲಿ ಕರಗಿಸುವ ಶಕ್ತಿಯಿರುವ ಆತನ ಬಿಸಿಯಪ್ಪುಗೆಯಲ್ಲಿ ಕಳೆದು ಹೋಗಿದ್ದಿರಬಹುದೆಂದು ಮತ್ತೆ ಮತ್ತೆ ಆತನ ಬಳಿ ಸಾಗಿದ್ದೇನೆ. ಹಗಲು ಇರುಳೆನ್ನದೇ ತಡಕಾಡಿ ಕಂಗಾಲಾಗಿದ್ದೇನೆ. ಜಾಲಾಡಿದಷ್ಟೂ ಹೊರಬರಲಾಗದೇ ಆತನ ಮೋಹ ಪಾಶದಲ್ಲಿ ಬಿಗಿದುಕೊಂಡಿದ್ದೇನೆ. ನನಗಾಗಿ ಎಲ್ಲವನ್ನೂ ತೊರೆದು, ನಾನೊಬ್ಬಳೇ ಸರ್ವಸ್ವವೆಂದು ಭಾವಿಸುವ ಆ ಸಮರ್ಪಣೆಯಲ್ಲಿ, ನನ್ನ ಸುಖದಲ್ಲೇ ಆತ ಕಾಣುವ ಸೌಖ್ಯದಲ್ಲಿ, ನನ್ನ ಏಳಿಗೆಯಲ್ಲೇ ಅವನು ಕಂಡುಕೊಳ್ಳುವ ಸಾರ್ಥಕತೆಯಲ್ಲಿ, ನನಗಾಗೇ ಮೀಸಲಿಟ್ಟ ಆತನ ಬದುಕಲ್ಲಿ ಹುಡುಕಲು ಹೋಗಿ ನಾನೇ ಕುಬ್ಜನಾಗಿದ್ದೇನೆ.
ಮತ್ತೆ ಕೈ ಹಿಡಿದು ಬರೆಯಿಸಿ, ತಿದ್ದಿ ತೀಡಿ ಬದುಕು ಕಲಿಸುತ್ತೇನೆಂದ ಆ ಗುರವಿನ ಮಡಿಲಲ್ಲಿ ತಲೆಯಿಟ್ಟು ಅಳುವಾಗೊಮ್ಮೆ ಹುಡುಕಿದ್ದೇನೆ. ಬದುಕಿನ ಜ್ಯೋತಿಯೇ ಅವರೆಂದುಕೊಂಡು ನಂಬಿ ಸಾನ್ನಿಧ್ಯಕ್ಕೆ ಹಾತೊರೆದಿದ್ದೆ. ರೇಗಲಿ, ಕೆಲವೊಮ್ಮೆ ಅತಿರೇಕದಿಂದ ರೇಜಿಗೆ ಹುಟ್ಟಿಸಲಿ, ದೌರ್ಬಲ್ಯಗಳ ಮಡುವಾಗಿ ಮುಖೇಡಿಯಾಗಿ ನಿಲ್ಲಲಿ. ದಿನದ ಕೊನೆಗೊಮ್ಮೆ ಅವರು ಕರೆದು ಕುಳ್ಳಿರಿಸಿಕೊಂಡು ನೀಡುತ್ತಿದ್ದ ಮೃದು, ಮಧುರ ನೇವರಿಕೆಯಲ್ಲಿ ವರ್ಷಾನುಗಟ್ಟಲೆ ಹುಡುಕಿದ್ದೇನೆ. ಪ್ರಯೋಜನ ಶೂನ್ಯ. ಬದಲಿಗೆ ಅವರ ದೌರ್ಬಲ್ಯಗಳಿಗೆ ನಾನು ಅಸ್ತ್ರವಾಗಿ ಪರಿತಪಿಸಿದ್ದೇನೆ. ಇನ್ನು ಅಮ್ಮ ಹಾಡುವ ಸುಶ್ರಾವ್ಯ ಇಂಪು ಇಂಪು ಜೋಗುಳದಲ್ಲಿ, ವಾತ್ಸಲ್ಯ ಧಾರೆಯಾಗಿ ನನ್ನೊಳಗೆ ಚೇತನವನ್ನು ತುಂಬಿದ, ಹೃದಯವಾಹಿನಿಯಾದ ಸಿಹಿ ಅಮೃತದ ಹಾಲಿನಲ್ಲಿ, ಮತ್ತೆಂದೂ ಬೆಚ್ಚದ ಹಾಗೆ ನನ್ನ ಬಿಗಿದಪ್ಪಿ ಹಿಡಿದ ಅಡಗಿಸಿಟ್ಟುಕೊಂಡ ಆ ಪವಿತ್ರ ಮಡಿಲಲ್ಲಿ, ನನ್ನ ಉದ್ದಗಲಕ್ಕೂ ಆಸರೆಯಾಗಿ ಹರವಾದ ಅಮ್ಮನ ಚಕ್ಕಳಮಕ್ಕಳದಲ್ಲಿ ಹುಡುಕಿಹುಡುಕಿ ಸೋತಿದ್ದೇನೆ. ಆದರೆ ಆಕೆಯೇ ಬೃಹದಾಕಾರದಲ್ಲಿ ಕಂಗೊಳಿಸಿ ಮಂಕಾಗಿದ್ದೇನೆ. ನನ್ನ ಒಂದೊಂದೂ ಪುಟ್ಟ ನೋವಿಗೂ ಆತಂಕ ಪಡುವ ಆ ಆತ್ಮಬಂಧು ಚಿಕ್ಕಪ್ಪನ ವಾತ್ಸಲ್ಯದಲ್ಲಿ, ಪುಟ್ಟ ಕಣ್ಣೀರ ಹನಿಗೂ ತಾನೇ ಕೋಡಿಯಾಗಿ ಹರಿಯುವ ಆ ಕರುಣೆಯಲ್ಲಿ, ಹುಡುಗಾಟಿಕೆಗೆ ಮರುಗುವ ಸ್ವಚ್ಛ ಮನದಲ್ಲಿ, ನನ್ನ ಒಂದೊಂದು ಹೆಜ್ಜೆಯನ್ನೂ ಮಹಾನ್ ಸಾಧನೆಯೆಂಬಂತೆ ಹೇಳಿಕೊಂಡು ಬೀಗುವ ಆತನ ಹೆಮ್ಮೆಯಲ್ಲಿ ಉಳಿದು ಹೋಗಿದ್ದಿರಬಹುದೆಂದು ಮತ್ತೆ ಮತ್ತೆ ಅವನ ಸಾನ್ನಿಧ್ಯವನ್ನು ಬಯಸಿದ್ದೇನೆ.
ಹೋಗಲಿ ಎಂದರೆ, ನನ್ನದೇ ಪ್ರತಿರೂಪವಾಗಿ ಬೊಚ್ಚುಬಾಯಿ ಬಿಟ್ಟುಕೊಂಡು ನಗುವ ನನ್ನ ಕರುಳ ಕುಡಿಯ ಮುಗ್ಧತೆಯಲ್ಲಿ, ಅದರ ಕಣ್ಣುಗಳಲ್ಲಿ ಕ್ಷಣಕ್ಷಣಕ್ಕೂ ಅರಳುವ ಬೆರಗಿನಲ್ಲಿ, ಮನದಲ್ಲಿ ಇನ್ನಿಲ್ಲದಂತೆ ಉದಯಿಸುತ್ತಲೇ ಇರುವ ಕುತೂಹಲದಲ್ಲಿ, ಮುಗಿಯದ ತುಂಟಾಟದಲ್ಲಿ, ರಚ್ಚೆ ಹಿಡಿದು ಸಹನೆ ಪರೀಕ್ಷಿಸುವ ಹಠದಲ್ಲಿ, ಸಣ್ಣಗೆ ಗದರಿದರೂ ಸಾಕು ಮುಖ ಹುಳ್ಳಹುಳ್ಳೆ ಮಾಡಿಕೊಂಡು, ಹಿಪ್ಪಳಿಸಿಕೊಂಡು ಅಳುವಾಗ ಮುತ್ತಿನಂತೆ ಅದರ ಕಣ್ಣುಗಳಿಂದ ಉದುರುವ ಹನಿಗಳಲ್ಲಿ, ಜೇನಿಗೂ ಸವಾಲೆಸೆಯುವ ಮಧುರ ಜೊಲ್ಲಿನಲ್ಲಿ, ಹೂವಿನ ಪಕಳೆಗಳನ್ನೂ ನಾಚಿಸುವ ಮೃದುವಾದ ಅದರ ಕೈಬೆರಳುಗಳಲ್ಲಿ, ಮನೋಹರವಾಗಿ ನಿದ್ರಿಸುವಾಗ ಕಾಣುವ ಅದರ ಅಮಿತ ಸೌಂದರ್ಯದಲ್ಲಿ ಇದ್ದೇ ಇರಬೇಕೆಂದು ನಿರುಕಿಸಿದ್ದೇನೆ. ಮತ್ತೆಲ್ಲವನ್ನೂ ಮರೆತು ನಾನೇ ಅದರೊಂದಿಗೆ ಮಗುವಾಗಿಬಿಟ್ಟಿದ್ದೇನೆ.
ಇಷ್ಟಕ್ಕೇ ನಿಲ್ಲಲ್ಲಿಲ್ಲ ಹುಡುಕಾಟ. ಅಜ್ಜನ ವಾತ್ಸಲ್ಯದಲ್ಲಿ, ಅವ ತೋರುವ ಕಕ್ಕುಲತೆಯಲ್ಲಿ. ಹಠಮಾಡಿದಾಗಲೂ, ರಚ್ಚೆ ಹಿಡಿದಾಗಲೂ ಗೋಳಾಡಿಸಿ ಆಯಾಸಕ್ಕೆ ದೂಡಿದಾಗಲೂ ಒಂದಿನಿತೂ ತಾಳ್ಮೆ ಕಳಕೊಳ್ಳದೇ ನನ್ನ ಮುದ್ದಾಡಿದ, ಇಳಿವಯಸ್ಸಿನಲ್ಲೂ ನನ್ನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಕಥೆ ಹೇಳಿ ಕೊನೆಗೊಮ್ಮೆ ನನ್ನ ಕಾಲ ಮೇಲೆಯೇ ಪ್ರಾಣ ಬಿಟ್ಟ ಅಜ್ಜನಲ್ಲಿ ಅವ ಇರಲೇಬೇಕೆಂದುಕೊಂಡು ಹಠಕ್ಕೆ ಬಿದ್ದು ಅಂಟಿಕೊಂಡದ್ದು ಸುಳ್ಳಲ್ಲ. ಆದರೆ ಆತನ ಪ್ರಾಣವೇ ನನ್ನಿಂದ ದೂರಾಗಿಬಿಟ್ಟಿತಲ್ಲ. ಅಜ್ಜಿಯ ನಿಷ್ಠೆಯಲ್ಲಿ, ಆಕೆಯ ಕಾಳಜಿಯಲ್ಲಿ, ಬಿಸಿಬಿಸಿಯಾಗಿ ಬಡಿಸುವ ಅವಳ ಕೈರುಚಿಯ ಅಡುಗೆಯಲ್ಲಡಗಿದ ಅಪಾರ ಪ್ರೀತಿಯಲ್ಲಿ, ನನ್ನೆಲ್ಲ ಅಪಸವ್ಯಗಳನ್ನೂ ಸಹಿಸಕೊಂಡು ಆಕೆ ತೋರುವ ತಾಳ್ಮೆಯಲ್ಲಿ....
ಸಾಲದೆಂಬಂತೆ, ಸೋದರಿಯ ಅಕ್ಕರೆಯಲ್ಲಿ, ಬಂಧುಗಳ ಬಣ್ಣದ ಮಾತುಗಳಲ್ಲಿ, ಗೆಳೆಯನ ಆಪ್ತತೆಯಲ್ಲಿ, ಸೋದರನ ಸರಸ-ವಿರಸಗಳಲ್ಲಿ...ಎಲ್ಲೆಲ್ಲೂ ನನ್ನಪ್ಪನನ್ನು ನಾನು ಹುಡುಕಿಕೊಂಡಿದ್ದೇನೆ. ಅಲ್ಲೆಲ್ಲಾ ನನಗೆ ಕಂಡದ್ದು ಅವರೆಲ್ಲರಿಗಿಂಥ ಅಗಾಧ ಶಕ್ತಿಯ ಪ್ರವಾಹವಾಗಿಯೇ ನನ್ನ ಅಪ್ಪ ನಿಂತರೇ ಹೊರತೂ ಅವರ್ಯಾರೊಳಗೂ ನನ್ನ ಅಪ್ಪ ಸಿಗಲೇ ಇಲ್ಲ. ಕೊನೆಗೆ ನನ್ನ ಪುಟ್ಟ ಅಸ್ತಿತ್ವದಲ್ಲಾದರೂ ಅಪ್ಪಾ ನೀವು ಸಿಕ್ಕೀರೆಂದು ತಪಸ್ಸು ಮಾಡುತ್ತಲೇ ಇದ್ದೇನೆ. ನಿರಂತರ ಸುಧೆಯಾದ ಅಂಥ ಜೀವವಾಹಿನಿಯೊಳಗೆ ನಾನೆಲ್ಲಿ ಕೊಚ್ಚಿ ಹೋಗಿದ್ದೇನೆಂಬುದೇ ಇಂದಿಗೂ ಅರ್ಥವೇ ಅಗಿಲ್ಲ. ಅರ್ಥವಾದದ್ದು ಇಷ್ಟೇ, ಅಪ್ಪಾ ನೀನಿಲ್ಲದೇ ನಾನಿಲ್ಲ, ಬೇರಾರೂ ನನ್ನಪ್ಪ ಆಗಲು ಸಾಧ್ಯವೇ ಇಲ್ಲ.

-  ರಾಧಾ ಸೋಚನಿ
abhyagatha@yahoo.co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.