ಸಾಪ್ತಾಹಿಕಪ್ರಭ

ಮಿರ್ಚಿ ರಾಗ

ಮಿರ್ಚಿ ರಾಗ
Published On :

'ಸ್ವಿಚ್ ಹಾಕಿದರೆ ಲೈಟ್ ಹತ್ತಬೇಕು' ಗಾಯನಾಚಾರ್ಯ ಗುರುರಾವ್ ದೇಶಪಾಂಡೆಯವರು ಸದಾ ತಮ್ಮ ಶಿಷ್ಯರಿಗೆ ಹೇಳಿತ್ತಿದ್ದ ಮಾತು. 'ಹಾಗೆಯೇ, ತಂಬೂರಿ ಶಬ್ದ ಕೇಳುತ್ತಿದ್ದಂತೆ ಗಾಯನ ಪ್ರಾರಂಭವಾಗಿಬಿಡಬೇಕು'. ಅಂದರೆ , ಸ್ವಿಚ್ ಹಾಕು ಎಂದಾಗ , ಅಯ್ಯೋ ವಯರ್ ಸರಿ ಇಲ್ಲ, ಫ್ಯೂಸ್ ಇಲ್ಲ , ಬಲ್ಬ್ ಇಲ್ಲ, ಲೂಸ್ ಕನೆಕ್ಷನ್ ಎಂದೆಲ್ಲ ಆಗ ಸಿದ್ಧತೆ ಮಾಡತೊಡಗುವುದು ಎಂಥ ಹುಚ್ಚುತನವೋ ಹಾಗೆಯೇ ಹಾಡಲು ಕುಳಿತಾಗ ಮನಸ್ಸು- ಬುದ್ಧಿ- ಧ್ವನಿಯನ್ನು ಸಿದ್ಧಗೊಳಿಸುವುದಲ್ಲ, ಅವು ಸದಾ ಕಾಲ ಸಿದ್ಧವಾಗಿ ಸುಸ್ಥಿತಿಯಲ್ಲಿರಬೇಕು! ಇದೇ ಗ್ವಾಲಿಯರ್ ಘರಾನೆಯ ಖಾಸೀಯತ್- ಅದರ ವಿಶೇಷತೆ.
ಮಧ್ಯರಾತ್ರಿ ಇರಲಿ, ಚುಮು ಚುಮು ನಸುಕಿರಲಿ, ಕುಳಿತಿರಲಿ, ಮಲಗಿರಲಿ, ಊಟವಾಗಿರಲಿ, ಹಸಿದಿರಲಿ- ಏನೇ ಇರಲಿ... ತಂಬೂರಿಯ ನಾದ ಪ್ರಾರಂಭವಾಗುತ್ತಲೇ ಗ್ವಾಲಿಯರ್ ಹಾಡುಗಾರರ ಧ್ವನಿ ಕಾರಂಜಿಯಂತೆ ಪುಟಿಯುವ ಗುಣ ಹೊಂದಿರುತ್ತದೆ. ಹಾಗೆ ಅವರ ಬುದ್ಧಿ ಮತ್ತು ಧ್ವನಿಯನ್ನು ಅವರು ತಯಾರಿ ಮಾಡಿರುತ್ತಾರೆ. ಆ ಹಾಡು ಎಂದರೆ ಶುದ್ಧ ತೈಲ ಧಾರೆಯಂತೆ, ನಿರಾತಂಕ, ಸಹಜ, ನಿರಂತರ...
ಗುರುರಾವ್ ದೇಶಪಾಂಡೆಯವರು, ಅವರಿಗೆ ಸ್ವಲ್ಪ ವಯಸ್ಸಾದ ಮೇಲೆ, ತಮ್ಮ ಶಿಷ್ಯರಿಗೆ ಕಲಿಸುವಾಗ, ಕೆಲವೊಮ್ಮೆ ದಿಂಬಿಗೆ ಒರಗಿಕೊಂಡು, ಮಲಗಿಕೊಂಡು ಕಲಿಸುತ್ತಿದ್ದರಂತೆ! ತಂಬೂರಿ ಶ್ರುತಿಯಾಗುತ್ತಲೇ ನಿರಾಯಾಸವಾಗಿ, ಹಾಗೆ ಒರಗಿಕೊಂಡೇ ಹಾಡುತ್ತಿದ್ದ ಅವರ ಆ ಬಿಹಾಗ್ ರಾಗದ್ದೋ, ಪೂರಿಯಾ ರಾಗದ್ದೋ ಒಂದು ಸಂಗತಿಯನ್ನು ಮರಳಿ ಹಾಡಲು ಶಿಷ್ಯರೆಲ್ಲ ತಂಬೂರಿ ಹಿಡಿದು, ಸರಿಯಾಗಿ ಕುಳಿತು, ಗಂಟಲು ಸರಿಮಾಡಿಕೊಂಡು, ಹುಬ್ಬು ಗಂಟಿಕ್ಕಿಕೊಂಡು... ಹೀಗೆ ಸಾಕಷ್ಟು ಕಷ್ಟಪಟ್ಟು, ಸಾಕಷ್ಟು ಕಾಲ ಪ್ರಯತ್ನಮಾಡಬೇಕಾಗುತ್ತಿತ್ತಂತೆ! ಗ್ವಾಲಿಯರ್ ಗಾಯಕರು ಹಾಡುವಾಗ ಹಾಗೇ ಅನ್ನಿಸುತ್ತದೆ. ಎಷ್ಟು ಸರಳ! ಸುಲಭ ಬಾಯಿ ತೆಗೆದರೆ ನಾವೂ ಹಾಡಿಬಿಡಬಹುದು ಎಂಬಂತೆ! ಆದರೆ ಹಾಡಲು ಪ್ರಯತ್ನ ಪಟ್ಟಾಗ ಅದರ ಹಿಂದಿನ ಅವರ ಪರಿಶ್ರಮ, ಅಭ್ಯಾಸದ ಅರಿವಾಗುತ್ತದೆ.
ಕುರಂದವಾಡದ ಅಸ್ಥಾನ ಗಾಯಕ ಬಡೆ ರಹಿಮತ್ ಖಾನ್ ಸಾಹೇಬರು ಗ್ವಾಲಿಯರ್ ಘರಾನೆಯ ಉತ್ಕೃಷ್ಟ ಗಾಯಕರು. ಅವರದಂತೂ ಮಗುವಿನಂಥ ಸ್ವಭಾವ. ಅವರು ಎಲ್ಲೂ ದೂರ ಕಾಡಿನಲ್ಲೂ, ಬಂಡೆಯ ಮೇಲೂ ಎಲ್ಲೋ ತಮಗೆ ತಿಳಿದಲ್ಲಿ ಕುಳಿತು ಆ ಗಂಧರ್ವ ಗಾಯನವನ್ನು ಹಾಡುತ್ತಿದ್ದರೆ ಸಂಗೀತ ಪ್ರೇಮಿಗಳು ಅವರನ್ನು ಹಿಂಬಾಲಿಸಿ ಹೋಗಿ ಕದ್ದು ಕುಳಿತು ಅದನ್ನು ಸವಿಯುತ್ತಿದ್ದರು- ಅಂಥ ಗಾಯನ ಅವರದು!
ಒಮ್ಮೆ ಆಸ್ಥಾನದಲ್ಲಿ ಅವರ ಗಾಯನದ ಕಾರ್ಯಕ್ರಮ. ಕೇಳುಗರು, ಮಹಾರಾಜರು ಎಲ್ಲರೂ ಬಂದಿದ್ದಾರೆ. ಆದರೆ ರಹಿಮತ್ ಖಾನ್ ನರ ಸುಳಿವೇ ಇಲ್ಲ! ಅವರ ಮಗುವಿನ ಮುಗ್ಧತೆಯ ಅರಿವಿದ್ದ ಯಾರೋ ಕೇಳುಗರು ಅವರನ್ನು ಹುಡುಕುತ್ತ ಹೊರಟಾಗ, ಉಸ್ತಾದರು ಯಾವುದೋ ಗುಂಗಿನಲ್ಲಿ ಗೂಡಂಗಡಿಯೊಂದರಲ್ಲಿ ಮಿರ್ಚಿ ಅಸ್ವಾದಿಸುತ್ತ ಕುಳಿತುಬಿಟ್ಟಿದ್ದಾರೆ. ಅವರು ಹೋಗಿ ಹೇಳಿದರಂತೆ- 'ಬುವಾ, ಆಜ್ ಆಪ್ಕಿ ಗಾನಾ ಹೈ, ದರಬಾರ್ ಮೆ!'. ಅಷ್ಟು ಕೇಳಿದ್ದೇ ತಡ, 'ಕ್ಯಾ ಮುಝೆ ಅಭಿ ಗಾನಾ ಹೈ' ಎಂದವರೆ ಅವರ ಅತ್ಯಂತ ಪ್ರೀತಿಯ ಮಿರ್ಚಿಯ ಸಮೇತ ದರಬಾರಿಗೆ ಬಂದು ಕುಳಿತು ಹಾಡಲು ಪ್ರಾರಂಭವೇ! ಅಲ್ಲಿ ಯಾವ ಅಡೆತಡೆಯೂ ಇಲ್ಲ, ಆತಂಕವಿಲ್ಲ , ಗ್ರೀನ್ ರೂಮ್ ಬೇಕಿಲ್ಲ... ಸಹಜತೆಯ ಪರಾಕಾಷ್ಟೆ ಇದು.
ಆ ದಿನದ ಆ ಕಾರ್ಯಕ್ರಮವನ್ನು, ಅದರ ಆನಂದದ ಅನುಭವವನ್ನು ಕುರಿತು ಇಂದಿಗೂ ಜನ ಅಲ್ಲಿ ಮಾತನಾಡಿಕೊಳ್ಳುತ್ತಾರೆ, ಕಣ್ಣು ತುಂಬಿ ನೆನಪಿಸಿಕೊಳ್ಳುತ್ತಾರೆ.
ಅದಕ್ಕೇ ಏನೋ, ಇವತ್ತಿಗೂ ಅವರ ನೆನಪಿನಲ್ಲಿ ಅಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಮೊದಲು ಬಂದ ಎಲ್ಲ ಕಲಾವಿದರೂ, ಕೇಳುಗರೂ ಚೆನ್ನಾಗಿ ಪೂರಿ, ಶ್ರೀಖಂಡ, ಮಿರ್ಚಿ ಎಲ್ಲ ತಿಂದು, ಎಲೆ ಅಡಕೆ ಹಾಕಿಕೊಂಡು ನಂತರವೇ ಕಾರ್ಯಕ್ರಮ ಶುರುವಾಗುತ್ತದೆ!

- ಶ್ರುತಿ ಭಟ್
shrutikbhat@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.