ಸತ್ಯಾನ್ವೇಷಣೆ ಕಥನಗಾರಿಕೆಯ ಹೆಗ್ಗುರುತು
ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ಕೆ. ಸತ್ಯನಾರಾಯಣ ಅವರ ಹೊಸ ಕಥಾಸಂಕಲನ 'ಹೆಗ್ಗುರುತು' ಹತ್ತು ಕತೆಗಳನ್ನೊಳಗೊಂಡಿದೆ. ಈ ಸಂಕಲನದ ಮೂಲಕ ಕನ್ನಡ ಕಥನಕ್ರಿಯೆಯಲ್ಲಿ ಹೊಸ ಹೆಗ್ಗುರುತು ಮೂಡಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಈ ಸಂಕಲನಕ್ಕೆ ಮಲ್ಲಿಕಾರ್ಜುನ ಹಿರೇಮಠ ವಿಸ್ತಾರವಾದ, ಅಧ್ಯಯನಪೂರ್ಣ ವಿಮರ್ಶೆಯನ್ನು ಮುನ್ನುಡಿಯ ರೂಪದಲ್ಲಿ ಬರೆದಿರುವರು. ಹಿರೇಮಠ ಅವರು ಹೇಳದೆ ಬಿಟ್ಟ ಒಳನೋಟಗಳು ಏನಾದರೂ ಇವೆಯೇ ಎಂದು ನೋಡಿ ಹೇಳುವುದಕ್ಕೆ ಮಾಡಿರುವ ಪುಟ್ಟ ಪ್ರಯತ್ನ ಇದು.
ಕೆ. ಸತ್ಯನಾರಾಯಣ ಅವರು ಕಥಾರಚನೆಯನ್ನು ಒಂದು ಸವಾಲಿನ, ಸೃಜನಶೀಲ ಮನಸ್ಸಿನ ಪ್ರತಿಷ್ಠೆಯ ಕ್ರಿಯೆ ಎಂದು ಭಾವಿಸಿದವರು. ತಾವು ಹೇಳುವ ರೀತಿ ಹೊಸದಾಗಿರಬೇಕು ಎಂಬ ಪ್ರಯತ್ನಶೀಲತೆಯಲ್ಲಿ ನಂಬಿಕೆಯನ್ನಿಟ್ಟವರು. ಈ ಕಾರಣಕ್ಕಾಗಿಯೇ ಕತೆಯ ಶಿಲ್ಪ ಒಂದಕ್ಕಿಂತ ಒಂದು ಭಿನ್ನ. ಎರಡೂವರೆ ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಸತ್ಯನಾರಾಯಣರಿಗೆ ಕನ್ನಡದ ಆಸ್ತಿ ಮಾಸ್ತಿ ಎಂದರೆ ಅಚ್ಚುಮೆಚ್ಚು. ಕತೆ ಬರೆದರೆ ಮಾಸ್ತಿಯವರು ಬರೆದಂತೆ ಬರೆಯಬೇಕು ಎಂಬ ನಿಲವು ಅವರದು. ಈ ಸಂಕಲನದಲ್ಲಿ 'ಮಾಸ್ತಿಗನ್ನಡಿ' ಎಂಬ ಒಂದು ಕತೆ ಇದೆ. ಸತ್ತು ಸ್ವರ್ಗಕ್ಕೆ ಹೋದ ಮಾಸ್ತಿ ತಮ್ಮ ಪಾತ್ರಗಳ ನೆನಪಾಗಿ ಭೂಮಿಗೆ ಬರುತ್ತಾರೆ. ತಮ್ಮ ಪಾತ್ರಗಳನ್ನು ಅವರು ಭೇಟಿ ಮಾಡುತ್ತಾರೆ. ತಾವು ಬದುಕಿದ್ದಾಗಿನ ಕಾಲಕ್ಕೂ ಈಗಿನ ಕಾಲಕ್ಕೂ ಆಗಿರುವ ವ್ಯತ್ಯಾಸವನ್ನು ಅವರು ಗುರುತಿಸುತ್ತಾರೆ.
ಮಾಸ್ತಿಯವರು 'ಮಾಯಣ್ಣನ ಕನ್ನಡಿ' ಎಂಬ ತಮ್ಮ ನೂರನೆಯ ಕತೆಯನ್ನು ಬರೆದಿದ್ದರು. ಕನ್ನಡಿ ಎಂಬುದು ಒಂದು ಪ್ರತಿಮೆ. ಸಾಹಿತ್ಯವನ್ನು ಬದುಕಿನ ಪ್ರತಿಬಿಂಬ ಎಂದು ಹೇಳಿದವರಿದ್ದಾರೆ. ಪ್ರತಿಬಿಂಬ ಕಾಣಬೇಕಿದ್ದರೆ ಸಾಹಿತ್ಯವು ಕನ್ನಡಿಯಾಗಿರಬೇಕು. ಇಂಥ ಕನ್ನಡಿಯ ತೊಳಲಾಟ ನೋಡಿ; 'ಎಲ್ಲರ ಮನೆಯಲ್ಲೂ ನಾನಿದ್ದೇನೆ. ಕೈಗನ್ನಡಿಯಾಗಿ, ನಿಲುವುಗನ್ನಡಿಯಾಗಿ, ಬಚ್ಚಲುಮನೆಯ ಕನ್ನಡಿಯಾಗಿ. ಎಲ್ಲರ ಮನೆಯಲ್ಲೂ ಜನ ಕನ್ನಡಿ ಹತ್ತಿರ ಬಂದರೂ ಕನ್ನಡಿಯಲ್ಲಿ ತಮ್ಮನ್ನೇ ನೋಡಿಕೊಳ್ಳಲು ಇಷ್ಟಪಡುತ್ತಾರೆಯೇ ಹೊರತು ಕನ್ನಡಿ ಒಳಗಿರೋರನ್ನ ನೋಡೋಕೆ ಹೋಗೋಲ್ಲ. ಎದುರು ಕಾಣುವ ನೋಟ ಮುಖ್ಯವೇ ಹೊರತು ನೋಟದ ಹಿಂದಿರುವ ಭಾವವಲ್ಲ...' ಇದು ಇಡೀ ಸಾಹಿತ್ಯದ ಬಗ್ಗೆ ಒಂದು ವ್ಯಾಖ್ಯೆಯನ್ನು ಸೂತ್ರರೂಪದಲ್ಲಿ ನೀಡಿದಂತೆ ತೋರುತ್ತದೆ. ಕತೆ ಹೊರಗಿನದನ್ನು ಮಾತ್ರವಲ್ಲ ಅಂತರ್ಯವನ್ನು ಹಿಡಿದಿಡಬೇಕು ಎಂಬುದು ಮಾಸ್ತಿ ಭಾವ.
ಮಾಸ್ತಿಯವರು ಉತ್ತರರಾಮ ಚರಿತದ ಉಪನ್ಯಾಸದ ಪುಸ್ತಕದ ಪ್ರತಿಯನ್ನು ಕರಡು ತಿದ್ದುವುದಕ್ಕೆ ಶ್ಯಾಮಲೆಗೆ ಕೊಡಲಾರದೆ ಒದ್ದಾಡುತ್ತಿದ್ದಾರೆ. ಉತ್ತರರಾಮ ಚರಿತ್ರೆ ರಾಮನು ಸೀತೆಯನ್ನು ತ್ಯಜಿಸಿ ಕಾಡಿಗೆ ಕಳುಹಿಸಿದ ಕತೆ. ಶ್ಯಾಮಲೆಯ ಗಂಡನಿಂದ ಪರಿತ್ಯಕ್ತಳಾಗಿ ತಾನೇ ಸ್ಕೂಲ್ ಟೀಚರ್ ಆಗಿ ನೋವು ನುಂಗಿ ಸದಾ ನಗುತ್ತಿರುವಾಕೆ. ಅವಳಿಗೆ ಸೀತಾಪರಿತ್ಯಾಗದ ಕತೆಯ ಪ್ರೂಫ್ ತಿದ್ದುವುದಕ್ಕೆ ಕೊಟ್ಟರೆ ಅವಳಿಗೆ ತನ್ನ ದುಃಖ ನೆನಪಾಗುವುದಿಲ್ಲ ಎಂದು ಮಾಸ್ತಿ ಸಂಕಟವನ್ನು ಅನುಭವಿಸುತ್ತಾರೆ. ಒಬ್ಬ ಸಾಹಿತಿಗಿರಬೇಕಾದ ಸೂಕ್ಷ್ಮ ಮನಸ್ಸು ಮತ್ತು ವಿವೇಚನಾಶಕ್ತಿಯನ್ನು ಈ ಸನ್ನಿವೇಶದ ಮೂಲಕ ಸತ್ಯನಾರಾಯಣರು ಕಟ್ಟಿಕೊಡುತ್ತಾರೆ. ಸೃಜನಕ್ರಿಯೆಯ ಸವಾಲುಗಳನ್ನು ಪ್ರತೀಮಾತ್ಮಕ ಹೇಳಲು ಅವರು ಇಲ್ಲಿ ಪ್ರಯತ್ನಿಸಿದ್ದಾರೆ.
ತಮ್ಮ ಕತೆ ಒಂದೂ ಸುಳ್ಳಲ್ಲ. ಎಲ್ಲವೂ ಕಂಡದ್ದು, ಕಂಡವರಿಂದ ಕೇಳಿಸಿಕೊಂಡದ್ದು... ಕತೆ ನಿಜವಲ್ಲ ಎಂದೇ ಹೇಳಿಬಿಟ್ಟ ಮೇಲೆ ಕತೆ ಇನ್ನು ಎಲ್ಲಿ ಉಳಿಯುತ್ತೆ ಬೆಳೆಯುತ್ತೆ ಎಂದು ಮಾಸ್ತಿ ಆಲೋಚಿಸುತ್ತಾರೆ. ಮಾಸ್ತಿಯವರ ಮೂಲಕ ಕತೆಯ ವ್ಯಾಖ್ಯೆಯನ್ನು, ಕತೆ ಹೇಗಿರಬೇಕೆಂಬ ತಮ್ಮ ಅನಿಸಿಕೆಯನ್ನು ಸತ್ಯನಾರಾಯಣ ಮಂಡಿಸುತ್ತಾರೆ. ಸ್ವತಃ ಅವರು ಬರೆದಿರುವ ಇಲ್ಲಿಯ ಕತೆಗಳು ಕೂಡ ಕಂಡದ್ದು, ಕೇಳಿದ್ದು, ಅನುಭವಿಸಿದ್ದೇ ಆಗಿದೆ. ಜೀವನ ಸತ್ಯದ ಅನ್ವೇಷಣೆಯಾಗಿದೆ. ಈ ಸಂಕಲನದಲ್ಲಿ 'ಪೂರ್ವನಾಮದ ವಲಸೆ' ಮತ್ತು 'ಕೋನ' ಎಂಬ ಎರಡು ಕತೆಗಳಿವೆ. ದಲಿತ ಪಾತ್ರವೇ ನಾಯಕನಾಗಿರುವ ಕತೆಗಳು ಇವು. 'ಪೂರ್ವನಾಮದ ವಲಸೆ'ಯಲ್ಲಿ ಕೊಪ್ಪ ಮರಿಸ್ವಾಮಿ ಅಲಿಯಾಸ್ ಕೆ.ಎಂ. ಸ್ವಾಮಿ ಎಂಬವ ಮಂಡ್ಯದ ಕೊಪ್ಪ ಗ್ರಾಮದ ದಲಿತ. ಓದಿ ನೌಕರಿ ಸಂಪಾದಿಸಿ ಮುಂಬಯಿ ಸೇರಿದ್ದಾನೆ. ಆತನ ಮಗ ವಿದೇಶದಲ್ಲಿ ನೌಕರಿ ಮಾಡುತ್ತಿದ್ದಾನೆ. ಮುಂಬಯಿಯಲ್ಲಿ ಫ್ಲಾಟ್ ಖರೀದಿಸಿದ್ದಾನೆ. ತಾನು ದಲಿತನೆಂಬ ಕಾರಣಕ್ಕೆ ತನ್ನ ಮೂಲವನ್ನು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅದೇ ಕಾರಣಕ್ಕೆ ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ತಮ್ಮ ಊರಿನ ವ್ಯಕ್ತಿಯನ್ನೂ ಆತ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಕತೆಯ ಕೊನೆಯಲ್ಲಿ ತನ್ನ ಹದಿನೇಳನೆ ಮಹಡಿಯ ಫ್ಲ್ಯಾಟಿನ ಬಾಲ್ಕನಿಯಲ್ಲಿ ನಿಂತು ಸ್ವಾಮಿ ಹೇಳುವ ಮಾತು ಕೇಳಿ, 'ಬಾಲ್ಕನಿಯಲ್ಲಿ ನಿಂತರೆ ವಿಶಾಲವಾದ ಆಕಾಶ ಕೈಗೆ ಸಿಗುವ ಹಾಗಿರುತ್ತದಲ್ಲ, ಈ ರೀತಿ ನಮ್ಮ ಕೈಗೇ ಸಿಗುವ ಆಕಾಶವನ್ನು ಬೇಕೆಂದಾಗ ಬೇಕೆಂದಷ್ಟು ನೋಡಲು ಸಾಧ್ಯವಾಗುವುದು ಕೂಡ ಒಂದು ನಿರಂತರ ಬೋನಸ್... ಅಲ್ಲವೆ?' ಇದು ಕೇವಲ ಸ್ವಾಮಿಯೊಬ್ಬನ ಮಾತಲ್ಲ, ಇಡೀ ದಲಿತ ಸಮುದಾಯದ ಮಾತಾಗಿ ಭಾಸವಾಗುತ್ತದೆ.
ಇದರ ಮುಂದುವರಿಕೆಯ ಭಾಗವೆಂಬಂತೆ 'ಕೋನ' ಕತೆ ಇದೆ. ಪೂರ್ವಗ್ರಹ ಪೀಡಿತರಾಗಿ ಒಬ್ಬ ವ್ಯಕ್ತಿಯ ಬಗ್ಗೆ ಆತನ ಜಾತಿಯ ಕಾರಣಕ್ಕಾಗಿಯೇ ಒಂದು ನಿಲವು ತಳೆಯುವುದು ತಪ್ಪು ಎಂಬುದನ್ನು ಹೇಳುತ್ತಾರೆ. ಎಲ್. ರವೀಂದ್ರಕುಮಾರ್ ಒಂದು ಊರಿನಲ್ಲಿ ಅತ್ಯುತ್ತಮ ಕೆಲಸಗಾರನೆಂಬ ಹೆಸರು ಪಡೆದಿದ್ದರೆ ಇನ್ನೊಂದು ಊರಿನಲ್ಲಿ ಕೆಲಸಗಳ್ಳ, ಕಿರುಕುಳ ನೀಡುವವನು ಎನ್ನಿಸಿಕೊಳ್ಳುತ್ತಾನೆ. ಈ ಎರಡೂ ಅಭಿಪ್ರಾಯಗಳ ಆಚೆ ಕಚೇರಿಯ ಹೊರಗೆ ಆತ ಒಬ್ಬ ಸಭ್ಯ ಗೃಹಸ್ಥ. ಖ್ಯಾತ ಸಂಗೀತ ವಿದ್ವಾಂಸರ ಶಿಷ್ಯ. 'ಒಬ್ಬ ಮನುಷ್ಯ ಒಂದು ವಿದ್ಯಮಾನದ ಬಗ್ಗೆ ಕೂಡ ಸ್ಪಷ್ಟ ತಿಳಿವಳಿಕೆ ಮೂಡಿಸುವುದಿಲ್ಲವಲ್ಲ ಇಡಿ ಬದುಕಿನಲ್ಲಿ...' ಎಂಬ ವಿಷಾದವಿದೆ. ರವೀಂದ್ರ ಕುಮಾರ್ 'ನಾವು ತಿಳಿದಿರುವ ಹಾಗಲ್ಲ, ತಿಳಿದಿರುವಷ್ಟೇ ಅಲ್ಲ' ಎಂಬ ಸಾರ್ವತ್ರಿಕ ಸತ್ಯ ಈ ಕತೆಯಲ್ಲಿದೆ.
'ನಮ್ಮ ಖುಷಿಗಾಗಿ ಲಹರಿಗಾಗಿ ಇನ್ನೊಬ್ಬರನ್ನು ತೆರೆಯುವುದು ಕೂಡ ಭ್ರಷ್ಟಾಚಾರವಲ್ಲವೆ? ತಮ್ಮ ವ್ಯಕ್ತ್ತಿತ್ವದ ಕ್ಷುದ್ರ ಭಾಗವನ್ನು ತೆರೆಯುವುದರಿಂದ ನಮಗೆ ಸಂತೋಷವಾಗುತ್ತದೆ ಎಂದು ಎದುರಿಗಿರುವವರನ್ನು ಪ್ರೇರೇಪಿಸುವಂಥ ನಮ್ಮ ವ್ಯಕ್ತಿತ್ವದ ಭ್ರಷ್ಟ ಮೊತ್ತ ಎಷ್ಟು ಜುಗುಪ್ಸೆ ಹುಟ್ಟಿಸುತ್ತದಲ್ಲವೆ?'
ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಚಳವಳಿಯು ದೇಶದಲ್ಲಿ ಒಂದು ಸಲ ಬಿರುಗಾಳಿಯನ್ನು ಎಬ್ಬಿಸಿದ ಈ ಹೊತ್ತಿನಲ್ಲಿ ಭ್ರಷ್ಟಾಚಾರದ ವಿವಿಧ ಆಯಾಮಗಳ ಬಗ್ಗೆ ಚಿಂತಿಸಿ ಬರೆದ 'ಭ್ರಷ್ಟಾಚಾರ -ಃಕಃ-ಋಐಈಖಿಐಕಃ' ಎಂಬ ಕತೆಯಲ್ಲಿ ಬರುವ ಸಾಲುಗಳು ಇವು. ಈ ಕತೆಯನ್ನು ಹಜಾರೆಯವರೂ ಓದಿದರೆ ಒಳ್ಳೆಯದು. ಭ್ರಷ್ಟಾಚಾರದ ವ್ಯಾಪಕತೆ ಮತ್ತು ಅದು ಒಂದು ಅಧ್ಯಯನ ಶಿಸ್ತಾಗಿ ಬೆಳೆದ ರೀತಿ ಅನೂಹ್ಯವಾದದ್ದು. ಸತ್ಯನಾರಾಯಣ ಅವರು ಈ ವಿಷಯವನ್ನು ಕತೆಯಲ್ಲಿ ನಿರ್ವಹಿಸಿದ ರೀತಿ ಅವರ ಕಥನಗಾರಿಕೆ ಮಾಗಿದ ಪರಿಯನ್ನು ಸೂಚಿಸುತ್ತದೆ.
ಕತೆಯೂ ಕೃತಿಯೊಂದಕ್ಕೆ ವಿಮರ್ಶೆಯಾಗಬಲ್ಲುದು ಎಂಬುದನ್ನು 'ನಿಜ ಕವಲು' ಕತೆಯ ಮೂಲಕ ಸತ್ಯನಾರಾಯಣ ಅವರು ಸಾಬೀತುಪಡಿಸುತ್ತಾರೆ. ಎಸ್.ಎಲ್. ಭೈರಪ್ಪನವರ ಕಾದಂಬರಿ 'ಕವಲು' ಪ್ರಸಿದ್ಧವಾದದ್ದು. ದುಡಿಯುವ ವರ್ಗದ ಮಹಿಳೆಯ ಬಗ್ಗೆ ಭೈರಪ್ಪ ಕರ್ಮಠರಾಗಿ ಚಿಂತಿಸಿ ಕೃತಿ ರಚಿಸಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿವೆ. ದುಡಿಯುವ ಮಹಿಳೆಯ ಬದುಕನ್ನು ಚಿತ್ರಿಸುವ ಮೂಲಕ ಕವಲು ಅದಲ್ಲ, ನಿಜ ಕವಲು ಇಲ್ಲಿದೆ ಎಂಬುದನ್ನು ಹೇಳಿದಂತೆ ಭಾಸವಾಗುತ್ತದೆ. ರಾಜಮ್ಮನೆಂಬ ಕಂಡಕ್ಟರ್ ರಾತ್ರಿ ಡ್ಯೂಟಿಗೆ ಹೋಗುವುದು, ಅವಳ ಗಂಡನಿಗೆ ಮತ್ತು ಮಕ್ಕಳಿಗೆ ಅವಳನ್ನು ಕಂಡಕ್ಟರ್ ಎಂದು ಇತರರಿಗೆ ಪರಿಚಯಿಸಲು ಇಷ್ಟವಿಲ್ಲದಿರುವುದು, ಆದರೆ ಆಕೆಯ ಆದಾಯದ ಮೇಲೆ ಹಕ್ಕು ಸ್ಥಾಪಿಸುವುದು, ಇಷ್ಟೆಲ್ಲ ಇರುಸು ಮುರಿಸಿನ ನಡುವೆಯೂ ಕೆಲಸ ಮಾಡುವ ಸಂಸ್ಥೆಯಲ್ಲಿ, ಬದುಕುವ ಮನೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಸಂಸಾರ ರಥವನ್ನು ಎಳೆಯುವುದು ಎಲ್ಲವನ್ನೂ ಬಿಡಿಬಿಡಿಯಾಗಿ ವಿವರಿಸುವರು. ಮೂಡುವ ಸೂರ್ಯ ದಶ ದಿಕ್ಕುಗಳಿಗೂ ಕವಲಾಗಿ ಹೊರಡುವ ಸಂಭ್ರಮವನ್ನು ವರ್ಣಿಸುವ ರಾಜಮ್ಮ ಕವಲಿನ ಅರ್ಥವಿಸ್ತಾರವನ್ನು ಬೋಧಿಸುವ ಪರಿ ವಿಸ್ಮಯವನ್ನುಂಟುಮಾಡುತ್ತದೆ. ಮಾಸ್ತಿಯವರ ಒಂದು ಪಾತ್ರವೇ ರಾಜಮ್ಮ ಎನ್ನುವ ಹಾಗೆ ಹೂಬೇಹೂಬಾಗಿ ಸತ್ಯನಾರಾಯಣ ಕಟ್ಟಿಕೊಟ್ಟಿದ್ದಾರೆ. ಜೋನ್ ಪಿ. ಸೈಲೋ ಉರ್ಫ್ ಜೆಪಿ ಎಂಬ ಮಹಿಳೆ ತನಗೆ ಆಫೀಸಿನಲ್ಲಿ ಕಿರುಕುಳ ನೀಡುತ್ತಿದ್ದ ಮೇಲಧಿಕಾರಿಯಿಂದ ತಪ್ಪಿಸಿಕೊಳ್ಳಲು ಬೇರೆ ವಿಭಾಗಕ್ಕೆ ತನ್ನನ್ನು ವರ್ಗಾಯಿಸುವಂತೆ ಕೋರಿಕೆ ಸಲ್ಲಿಸಿದಾಗ ನಿರೂಪಕ ಆತನನ್ನು ಹೈದ್ರಾಬಾದಿಗೆ ವರ್ಗಾಯಿಸುತ್ತಾನೆ. ಆದರೆ ತನಗೆ ಕಿರುಕುಳ ಕೊಟ್ಟವನ ಮನೆಯಲ್ಲಿ ತೊಂದರೆಯಿದೆ. ಆತನ ಮಗ ಅಂಗವಿಕಲ. ಆತನ ವರ್ಗವಾದರೆ ಅವರ ಕುಟುಂಬಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣವನ್ನು ನೀಡಿ ಜೆಪಿ ಈ ವರ್ಗಾವಣೆಯನ್ನು ವಿರೋಧಿಸುತ್ತಾಳೆ. ತುಂಟಾಟ ಮಾಡುವ ಮಗುವನ್ನು ಲಘುವಾಗಿ ಶಿಕ್ಷಿಸುವ ತಾಯಿಯಂತೆ ಜೆಪಿ ಭಾಸವಾಗಿ 'ಚಿಕ್ಕತಾಯಿ' ಎಂಬ ಶೀರ್ಷಿಕೆಯನ್ನು ಸಮರ್ಥಿಸುತ್ತದೆ.
'ಡಾಕ್ಟರ್ನ ಹುಚ್ಚುಮಗು' ಕೂಡ ಇಂಥ ಮಾನವೀಯ ನೆಲೆಯಲ್ಲಿಯೇ ತೆರೆದುಕೊಳ್ಳುವುದು. ಪ್ರೀತಿಯ ಮೂಲವನ್ನು ಶೋಧಿಸುವ ಈ ಕತೆ ನಮ್ಮ ಅಂತರಂಗವನ್ನು ಕಲಕಿಬಿಡುತ್ತದೆ. ಆರ್ಥಿಕ ಸಾಮ್ರಾಜ್ಯಶಾಹಿ ಅಮೆರಿಕದ ವಿರುದ್ಧ ಭಾರತದ ರಸ್ತೆಬದಿಯ ಗೂಡಂಗಡಿಯವನು ಹೇಗೆ ಸ್ಪರ್ಧಿಸಬಲ್ಲ ಎಂಬುದನ್ನು 'ಓಬಳಯ್ಯನ ಸುತ್ತಮುತ್ತ' ಕತೆಯಲ್ಲಿ ವಿವರಿಸುವರು.
'ಹೆಗ್ಗುರುತು' ಕತೆಯೂ ಹಣದ ಸರ್ವವ್ಯಾಪಕತೆ, ಹಣದ ಕಾರಣದಿಂದಲೇ ಬಡವರನ್ನು ಅನುಮಾನಿಸುವುದು, ಹಣವಿದ್ದವರೇ ಬಡವರಿಗೆ ಅಗ್ಗದಲ್ಲಿ ಔಷಧ ದೊರಕದಂತೆ ಮಾಡುವುದರ ಕಥನದ ಕೊನೆಯಲ್ಲಿ ಆಶಾವಾದದ ಒಂದು ಸಂದೇಶವಿದೆ. ಕೆಲವು ಕೃತಿಗಳನ್ನು ವಿಮರ್ಶೆಯ ಸಿದ್ಧ ಮಾನದಂಡಗಳಿಂದ ಒರೆಗೆ ಹಚ್ಚಬಹುದು. ಇನ್ನು ಕೆಲವು ಕೃತಿಗಳು ಅವುಗಳನ್ನು ವಿಮರ್ಶಿಸಬೇಕಾದ ಮಾನದಂಡಗಳನ್ನು ತಮ್ಮ ಅಂತರ್ಯದಲ್ಲೇ ಹೊಂದಿರುತ್ತವೆ. ವಿಮರ್ಶೆಯ ಪಾರಿಭಾಷಿಕಗಳೂ ಅದರೊಳಗೇ ಇರುತ್ತವೆ. ಸತ್ಯನಾರಾಯಣರ ಈ ಕೃತಿಯು ಎರಡನೆಯ ವರ್ಗಕ್ಕೆ ಸೇರಿದ್ದು. ಈ ಕಾರಣಕ್ಕಾಗಿಯೇ ಅವರು ಇತರ ಕತೆಗಾರರಿಂದ ಭಿನ್ನವಾಗಿ ನಿಲ್ಲುತ್ತಾರೆ.
ಕೃತಿ: ಹೆಗ್ಗುರುತು, ಪ್ರಕಾರ: ಕತೆಗಳು
ಏಕೆ ಓದಬೇಕು?: ಜೀವನ ಸತ್ಯ ಅರಿಯಲು
ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ,
ಪುಟಗಳು 160 ಬೆಲೆ ರು. 120
ನಮಗೆ ನಾವೇ ಪರಕೀಯರು
ನಮ್ಮ ದೇಶದಲ್ಲಿ ಬಹುಸಂಖ್ಯಾತರು ಹಿಂದೂಗಳು. ಬಹುಸಂಖ್ಯಾತರು ಎನ್ನುವ ಕಾರಣಕ್ಕಾಗಿಯೇ ಹಿಂದೂಗಳನ್ನು ಗುಮಾನಿಯಿಂದ ಕಾಣುವ ಮತ್ತು ಎಲ್ಲ ಸಾಂಸ್ಕೃತಿಕ ಅನಿಷ್ಟಗಳಿಗೂ ಹಿಂದೂಗಳೇ ಕಾರಣ ಎಂದು ಆರೋಪಿಸುವ ಪಿಡುಗು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಮಾನಂದ ಐನಕೈಯವರು ಹಿಂದೂ ಧರ್ಮ ಎಂದರೇನು? ಸನಾತನ ಧರ್ಮ ಯಾವುದು? ಬುದ್ಧ ಹಿಂದೂ ಧರ್ಮವನ್ನು ವಿರೋಧಿಸಿದ್ದನೆ? ಜಾತಿವ್ಯವಸ್ಥೆಯ ಅನಿಷ್ಟ ತೊಡೆಯುವುದು ಹೇಗೆ? ಭಾರತೀಯ ಧರ್ಮಗಳಿಗೂ ಇತರ ಧರ್ಮಗಳಿಗೂ ಇರುವ ವ್ಯತ್ಯಾಸವೇನು? ಜೀವನ ವಿಧಾನವೇ ಧರ್ಮ ಎನ್ನುವ ವಿಶಾಲವಾದ ಗ್ರಹಿಕೆ ಹಾಗೂ ಧರ್ಮರಹಿತವಾದ ಜಗತ್ತು ಪರಿಕಲ್ಪನೆ, ಧರ್ಮಮೂಲವಾದ ಹಿಂಸಾಚಾರ ಇತ್ಯಾದಿಗಳನ್ನು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. 'ಧ್ಯೇಯನಿಷ್ಠ ಪತ್ರಕರ್ತ' ವಾರಪತ್ರಿಕೆಗೆ ಬರೆದ ಅಂಕಣ ಬರೆಹ ಇದು. ಪ್ರೊ.ಎಸ್.ಎನ್. ಬಾಲಗಂಗಾಧರರ ವಿಚಾರಗಳನ್ನು ತಮ್ಮ ಅನುಭವದ ಮೂಲಕ ಇಲ್ಲಿಯ ಬರೆಹಗಳಲ್ಲಿ ರಮಾನಂದರು ವಿವರಿಸಿದ್ದಾರೆ.
ಕೃತಿ: ನಮಗೆ ನಾವೇ ಪರಕೀಯರು
ಪ್ರಕಾರ: ಸಂಸ್ಕೃತಿ ಸಂಕಥನ, ಏಕೆ ಓದಬೇಕು?: ನಮ್ಮನ್ನು ನಾವು ಅರಿಯಲು
ಪ್ರ: ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು, ಪುಟಗಳು 168 ಬೆಲೆ ರು. 80
ಕಲಾ ಸಂಸ್ಕೃತಿ
ಭಾರತೀಯ ಕಲೆಯ ಬಗ್ಗೆ ಆಳವಾದ ಪರಿಜ್ಞಾನವಿರುವ ಎಂ.ಎಚ್. ಕೃಷ್ಣಯ್ಯ, ಕಲೆಯನ್ನು ಪರಿಚಯಿಸುವ 'ಕಲಾ ಸಂಸ್ಕೃತಿ' ಕೃತಿಯನ್ನು ಹೊರತಂದಿದ್ದಾರೆ. ಕಲೆಯು ಸಂಸ್ಕೃತಿಯ ಪ್ರತಿಬಿಂಬವಾಗಿರುತ್ತದೆ. ಯಾವ ಸಂಸ್ಕೃತಿಯು ಶ್ರೀಮಂತವಾಗಿರುತ್ತದೋ ಅಲ್ಲಿ ಮೂಡುವ ಕಲೆಯೂ ಶ್ರೀಮಂತವಾಗಿರುತ್ತದೆ. ಕಲೆಯ ಮೇಲೆ ಅದು ಅರಳುವ ಪರಿಸರ ಪ್ರಭಾವ ಬೀರುತ್ತದೆ. ಕಲೆಯು ತನ್ನ ಕಾಲದ ಜನಾಂಗವನ್ನೇ ಪ್ರಭಾವಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆಧುನಿಕ ಕಲೆಯೆಂದರೆ ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿರುವಂಥದ್ದು ಎಂಬ ಭಾವನೆಯು ಬೆಳೆದಿದೆ. ಆ ವಿಚಾರವನ್ನು ಬದಲಿಸುವಂಥ ಭಾರತೀಯ ಚಿತ್ರಕಲೆಯಲ್ಲಿ ಶೃಂಗಾರ ಲಹರಿ, ಕರ್ನಾಟಕದಲ್ಲಿ ಚಿತ್ರಕಲಾ ಪರಂಪರೆ, ಕಲೆ ಮತ್ತು ಪ್ರಾಯೋಗಿಕ ವಿಮರ್ಶೆ, ಡಿ.ವಿ.ಜಿ.ಯವರ ಸೌಂದರ್ಯ ಮೀಮಾಂಸೆ, ಅಮೂರ್ತತೆ ಮತ್ತು ಅಮೂರ್ತ ಕಲೆ ಸೇರಿದಂತೆ ಹನ್ನೊಂದು ಲೇಖನಗಳು ಇದರಲ್ಲಿವೆ. ಸಾಂದರ್ಭಿಕ ಚಿತ್ರಗಳೂ ಇಲ್ಲಿವೆ. ಚಿತ್ರಕಲೆಯ ವಿದ್ಯಾರ್ಥಿಗಳಿಗೆ ಮತ್ತು ಅಭ್ಯಾಸಿಗಳಿಗೆ ಇದು ಉಪಯುಕ್ತ ಕೃತಿಯಾಗಿದೆ.
ಕೃತಿ: ಕಲಾ ಸಂಸ್ಕೃತಿ
ಪ್ರಕಾರ: ಕಲಾವಿಮರ್ಶೆ
ಏಕೆ ಓದಬೇಕು?: ಕಲೆಯನ್ನು ಅರಿಯಲು
ಪ್ರ: ಸಪ್ನ ಬುಕ್ಹೌಸ್, ಬೆಂಗಳೂರು, ಪುಟಗಳು 102 ಬೆಲೆ ರು. 120
ಕಾಮಕೂಪ
ರಷ್ಯಾದ ಪ್ರಸಿದ್ಧ ಬರೆಹಗಾರರಲ್ಲಿ ಅಲೆಗ್ಸಾಂಡರ್ ಕುಪ್ರಿನ್ ಕೂಡ ಒಬ್ಬರು. ಬದುಕನ್ನು ಹಸಿಹಸಿಯಾಗಿ ಕಟ್ಟಿಕೊಡುವುದರಲ್ಲಿ ಈತ ಎತ್ತಿದ ಕೈ. ಸಾಹಿತ್ಯಕ್ಕೂ ಜೀವನಕ್ಕೂ ನಡುವೆ ಇರುವ ಗಡಿಯನ್ನು ಅಳಿಸಿ ಹಾಕಿ ತಾನು ಕಂಡ ಬದುಕಿನ ನಗ್ನಸತ್ಯಗಳನ್ನು ಅಚ್ಚರಿಯೆನ್ನಿಸುವಂತೆ ತೆರೆದಿಡುತ್ತಾರೆ. ಇಲ್ಲಿಯ ವಸ್ತು ರಷ್ಯಾ ಸರ್ಕಾರದ ಅನುಮತಿಯಿಂದಲೇ ನಡೆಯುವ ಕೆಂಪುದೀಪದ ವ್ಯವಹಾರ. ಇದರಲ್ಲಿ ಸಿಲುಕಿಕೊಂಡವರ ನೋವಿನ ವಿವಿಧ ಮುಖಗಳನ್ನು 'ಕಾಮಕೂಪ'ವೆಂಬ ಈ ಕಾದಂಬರಿಯಲ್ಲಿ ಅವರು ವರ್ಣಿಸುತ್ತಾರೆ. ಮೂರು ಭಾಗಗಳಲ್ಲಿ ವಿಭಿನ್ನ ವಸ್ತುಗಳ ಮೂಲಕ ಮುನ್ನಡೆವ ಈ ಕಾದಂಬರಿಯು ಬಾಲವೇಶ್ಯೆಯರ ಶೋಷಣೆಯ ಕರುಣಾಜನಕ ಕತೆಯನ್ನು ಹೇಳುತ್ತದೆ. ವೇಶ್ಯಾವೃತ್ತಿಯೇ ಇಲ್ಲಿ ಪ್ರಧಾನ ಪಾತ್ರವಾಗಿರುವುದು ವಿಶೇಷ. ಇದನ್ನು ಓದಿ ಮುಗಿಸಿದಾಗ ವೇಶ್ಯೆಯರ ಕುರಿತ ಕೀಳು ಭಾವನೆ ಮಾಯವಾಗಿ ಒಂದು ವಿಷಾದದ ನಿಟ್ಟುಸಿರು ಹೊರಬೀಳುತ್ತದೆ. ಇದನ್ನು ತೆಲುಗಿಗೆ ಅನುವಾದಿಸಿದವರು ರೆಂಟಾಲ ಗೋಪಾಲಕೃಷ್ಣ ಅವರು. ತೆಲುಗಿನಿಂದ ಕನ್ನಡಕ್ಕೆ ತಂದವರು ಟಿ.ಡಿ.ರಾಜಣ್ಣ ತೆಗ್ಗಿ.
ಕೃತಿ: ಕಾಮಕೂಪ
ಪ್ರಕಾರ: ಅನುವಾದ ಕಾದಂಬರಿ
ಏಕೆ ಓದಬೇಕು?: ವೇಶ್ಯೆಯರ ನೋವು ಅರಿಯಲು
ಪ್ರ: ದೇಸಿ ಪುಸ್ತಕ, ಬೆಂಗಳೂರು, ಪುಟಗಳು 352 ಬೆಲೆ ರು. 250
ಉಘೇ ವೀರಭೂಮಿಗೆ
ನಮ್ಮ ನಡುವಿನ ಯುವ ಪತ್ರಕರ್ತರಲ್ಲಿ ತೀವ್ರವಾಗಿ ರಾಷ್ಟ್ರವಾದಿ ವಿಚಾರಗಳನ್ನು ತಮ್ಮ ಅಂಕಣಗಳಲ್ಲಿ ಬರೆಯುತ್ತಿರುವವರಲ್ಲಿ ಸಂತೋಷ್ ತಮ್ಮಯ್ಯ ಅವರೂ ಒಬ್ಬರು. ಅವರ ಅಂಕಣ ಬರೆಹಗಳ ಸಂಕಲನ 'ಉಘೇ ವೀರಭೂಮಿಗೆ'ಯಲ್ಲಿ ಸಮಕಾಲೀನ ವಿಷಯಗಳನ್ನು ರಾಷ್ಟ್ರವಾದಿ ನೆಲೆಯಲ್ಲಿ ಚಿಂತಿಸಿ ಬರೆದ 32 ಲೇಖನಗಳಿವೆ. ಭಾವತೀವ್ರತೆ ಅವರ ಬರೆಹದ ಶೈಲಿ. ಇಲ್ಲಿಯ ಮೊದಲ ಬರೆಹ 'ಇಲ್ಲೇಕೆ ಅಲೆಕ್ಸಾಂಡ್ರಿಯಾ ನಗರವಿಲ್ಲ?' ಎಂಬುದು ಕುತೂಹಲಕಾರಿಯಾದ ಮಾಹಿತಿಯನ್ನು ಹೊಂದಿದೆ. ಅಲೆಕ್ಸಾಂಡರ್ ಭಾರತದಲ್ಲಿ ನಡೆದ ಯುದ್ಧದಲ್ಲಿ ಯೋಧನೊಬ್ಬನ ವಿಷಪೂರಿತ ಬಾಣ ತಾಗಿ ತೀವ್ರವಾಗಿ ಗಾಯಗೊಂಡು ಮರಳಿ ಹೋಗುವಾಗ ದಾರಿಯಲ್ಲೇ ಸಾವಿಗೀಡಾದನು ಎಂಬ ಮಾಹಿತಿಯನ್ನು ನೀಡುತ್ತಾರೆ. ಇತಿಹಾಸದ ಇಂಥ ಪ್ರಮುಖ ಅಂಶವನ್ನು ಮುಚ್ಚಿಡುವುದೇಕೆ ಎಂದು ಅವರು ಪ್ರಶ್ನಿಸುತ್ತಾರೆ. ಅದೇ ರೀತಿ ಕೊಡವ ಮಾಪಿಳ್ಳೆಗಳು ಮೂಲದಲ್ಲಿ ಹಿಂದೂಗಳೇ ಆಗಿದ್ದರು ಎಂಬ ವಿವರ. ಹೀಗೆ ಹತ್ತಾರು ನವೋನ್ಮೇಷ ವಿಚಾರಗಳು ಈ ಕೃತಿಯಲ್ಲಿವೆ.
ಕೃತಿ: ಉಘೇ ವೀರಭೂಮಿಗೆ,
ಪ್ರಕಾರ: ಅಂಕಣ ಬರೆಹ
ಏಕೆ ಓದಬೇಕು?: ದೇಶಾಭಿಮಾನಿಯಾಗಲು
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಪುಟಗಳು 208 ಬೆಲೆ ರು. 150
ಸ್ಪಂದನ
ಹಿರಿಯ ಪತ್ರಕರ್ತ ಮನೋಜ್ ಪಾಟೀಲ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ಶನಿವಾರ ಬರೆಯುತ್ತಿದ್ದ ಅಂಕಣ ಬರೆಹಗಳ ಸಂಕಲನ 'ಸ್ಪಂದನ'. ಸಮಾಜದಲ್ಲಿ ನಡೆಯುತ್ತಿರುವ ಸಮಕಾಲೀನ ಆಗುಹೋಗುಗಳಿಗೆ ಪ್ರಜ್ಞಾವಂತಿಕೆಯ ಪ್ರತಿಕ್ರಿಯೆ ಈ ಅಂಕಣಗಳು. ಈ ಅಂಕಣ ಬರೆಹಗಳು ಸಂಬಂಧಿಸಿದವರಿಗೆ ಚುರುಕನ್ನೂ ಮುಟ್ಟಿಸಬಲ್ಲವು. ಅಂಥ ಒಂದು ಘಟನೆ, ಇದರಲ್ಲಿ ಭೈರಪ್ಪನವರಿಗೆ ರಾಜ್ಯ ಸರ್ಕಾರ ಸನ್ಮಾನ ಮಾಡುವುದನ್ನು ಮರೆತಿದೆ ಎಂದು ಬರೆದಾಗ, ಆಗ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡರು ತಕ್ಷಣವೇ ಸನ್ಮಾನ ನಡೆಸಿದರು. ಇದರಲ್ಲಿ ಎಷ್ಟೋ ವ್ಯಕ್ತಿಚಿತ್ರಗಳೂ ಇವೆ. ಜ್ಞಾನದೇವ ದೊಡ್ಡಮೇಟಿ ರಾಜಕಾರಣಿಯಾಗಿದ್ದೂ ಹೇಗೆ ಮೌಲ್ಯಯುತ ಬದುಕನ್ನು ನಡೆಸುತ್ತಿದ್ದಾರೆ ಎಂಬುದನ್ನು ಅವರು ಚಿತ್ರಿಸುತ್ತಾರೆ. ಪ್ರಸಿದ್ಧರ ಖಾಸಗಿ ಬದುಕನ್ನು ಛಿದ್ರ ಮಾಡುವ ಪ್ರವೃತ್ತಿಯನ್ನು ಐಶ್ವರ್ಯ ರಾಯ್ ಬಚ್ಚನ್ ಬೇಗ ಗರ್ಭ ಧರಿಸದೆ ಇದ್ದಾಗ ಎದ್ದ ವದಂತಿಗಳ ಹಿನ್ನೆಲೆಯಲ್ಲಿ ಒರೆಗೆ ಹಚ್ಚುವರು. ಮನೋಜ್ ಪಾಟೀಲರ ಅಂಕಣ ಬರೆಹ ಆರೋಗ್ಯಕರವಾಗಿ ಸಮಾಜ ವಿಮರ್ಶೆಯನ್ನು ಮಾಡುವುದರಿಂದ ಇಷ್ಟವಾಗುತ್ತವೆ.
ಕೃತಿ: ಸ್ಪಂದನ
ಪ್ರಕಾರ: ಅಂಕಣ ಬರೆಹ
ಏಕೆ ಓದಬೇಕು?: ಸಮಕಾಲೀನ ಚರ್ಚೆಯಲ್ಲಿ ಭಾಗಿಯಾಗಲು
ಪ್ರ: ಪವನ ಪುಸ್ತಕ ಪ್ರಕಾಶನ, ಧಾರವಾಡ, ಪುಟಗಳು 304 ಬೆಲೆ ರು. 150
- ಡಾ. ವಾಸುದೇವ ಶೆಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

