ಸಾಪ್ತಾಹಿಕಪ್ರಭ

ಸ್ವಾತಂತ್ರ್ಯ, ತಿಮ್ಮಾ ಮತ್ತು ನಾನು

Published On :

ಬೆಳಗ್ಗೆ ಏಳು ಗಂಟೆಗೆ ಅಂದ್ರೆ ಕರೆಕ್ಟಾಗಿ ಏಳು ಗಂಟೆಗೆ ಧ್ವಜಾರೋಹಣ ಆಗಬೇಕು. ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯವರು ಬರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರ ಶ್ರೀ ರಾಮಸ್ವಾಮಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಬೇಕು. 'ಸ್ವಾತಂತ್ರ್ಯ'ದ ಮಹತ್ವ ಕುರಿತು ಭಾಷಣ ಮಾಡುತ್ತಾರೆ. ಬೇಕಾದ ಎಲ್ಲ ಸಿದ್ಧತೆಗಳನ್ನು ನೀವು ಮಾಡಿಕೊಳ್ಳಿ ಎಂದು ಪ್ರಿನ್ಸಿಪಾಲರು ರಂಗಾಯಣ ರಘುವಿನ ಧಾಟಿಯಲ್ಲಿ ಹೇಳಿದಾಗ 'ಆಗಲಿ ಸಾ' ಎಂದು ತಲೆಯಾಡಿಸಿ ಆಫೀಸಿನಿಂದ ಹೊರಬಂದೆ. ಕಾಲೇಜಿನ ಆವರಣದಲ್ಲಿದ್ದ ಧ್ವಜದ ಕಟ್ಟೆಯ ಸುತ್ತ ನೆನ್ನೆಯೇ ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಲಾಗಿತ್ತು. ಎಲ್ಲವೂ ಸರಿಯಾಗಿ ಇದೆಯೇ ಎಂದು ಮತ್ತೊಮ್ಮೆ ವೀಕ್ಷಿಸಿದೆ. ಕಾರ್ಯಕ್ರಮಕ್ಕಾಗಿ ತಂದಿಟ್ಟಿದ್ದ ವಸ್ತುಗಳ ಪರೀಕ್ಷಿಸಿದೆ. ಎಲ್ಲವೂ ಸರಿಯಾಗಿತ್ತು. ಮತ್ತೊಮ್ಮೆ ಪ್ರಿನ್ಸಿಪಾಲರ ಭೇಟಿ ಮಾಡಿ 'ಸಾರ್, ನಾ ಬರ್ತೀನಿ' ಎಂದೆ. ತಮ್ಮ ದಪ್ಪ ಗ್ಲಾಸಿನ ಕನ್ನಡಕದಿಂದ ನನ್ನ ನೋಡುತ್ತಾ 'ಮುಂಜಾನೆ ಬೇಗನೆ ಬನ್ನಿ' ಎಂದರು.
ನಸುಕಿನ ನಾಲ್ಕು ಗಂಟೆಗೆಲ್ಲಾ ಎದ್ದು ಸ್ನಾನ, ಪೂಜೆ ಮುಗಿಸಿ ಆರು ಗಂಟೆಗೆ ಕಾಲೇಜಿನ ಕಡೆ ಹೆಜ್ಜೆಹಾಕತೊಡಗಿದಾಗ, ದಾರಿಯಲ್ಲಿ ನಮ್ಮೂರ ಗೌಡರ ಮನೆಯ ಜೀತದಾಳು ತಿಮ್ಮಾ ಎಂದಿನಂತೆ ತಲೆಯ ಮೇಲೆ ಕಸದ ತಟ್ಟಿಯ ಹೊತ್ತು ಎದುರಾದ. ತಿಮ್ಮನ ಪರಿಚಯ ನನಗಿತ್ತು. ಒಂದೆರಡು ಸಾರಿ ಗೌಡರ ಮನೆಗೆ ಹೋಗಿದ್ದಾಗ ನೋಡಿದ್ದೆ. ಮಾತನಾಡಿಸಿದ್ದೆ.
ಅವನ ವಯಸ್ಸು ಹನ್ನೆರಡರಿಂದ ಹದಿನೈದರ ಮಧ್ಯವಿರಬೇಕು. ಒಮ್ಮೆ ಮಾತನಾಡಿಸಿದರೆ ಸಾಕು ಅವರನ್ನು ಮರೆಯದೆ ಮತ್ತೆ ಮಾತನಾಡಿಸುವಷ್ಟು ಚುರುಕು ಸ್ವಭಾವದವನು. ಕಳೆದ ರವಿವಾರ ನಮ್ಮ ಊರಿನ ರಾಮಣ್ಣನ ಕಿರಾಣಿ ಅಂಗಡಿಯಲ್ಲಿ ಕುಳಿತಿದ್ದಾಗ, ಗೌಡರಿಗೆ ಸಿಗರೇಟ್ ಕೊಂಡು ಹೋಗಲು ಬಂದ ತಿಮ್ಮಾ ನನ್ನ ಗುರುತು ಹಚ್ಚಿ 'ನಾನು ಸಾ, ತಿಮ್ಮಾ, ಗೌಡರ ಮನೆಯ ಆಳು' ಎಂದ.
'ಏನಯ್ಯಾ ತಿಮ್ಮಣ್ಣ ಚೆನ್ನಾಕಿದ್ದೀಯಾ, ಗೌಡರು ಚನ್ನಾಕಿದ್ದಾರಾ?' ಎಂದೆ.
'ಹು...ಸಾ' ಎಂದ ತಿಮ್ಮ.
ಅಂಗಡಿ ರಾಮಣ್ಣ ಸಿಗರೇಟ್ ಕೊಡುವುದು ಕೊಂಚ ತಡವಾಗಿದ್ದರಿಂದ ತಿಮ್ಮನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ತಿಮ್ಮಾ, ಪಕ್ಕದೂರಿನ ರಂಗಣ್ಣನ ಮಗ, ಕಿತ್ತು ತಿನ್ನುವ ಬಡತನ, ಮನೆ ತುಂಬ ಮಕ್ಕಳು, ಮೈತುಂಬಾ ಸಾಲ, ತನ್ನ ದೊಡ್ಡ ಮಗಳನ್ನು ವಿವಾಹ ಮಾಡಲು ಗೌಡರ ಹತ್ತಿರ ಐದು ಸಾವಿರ ಸಾಲ ಪಡೆದಿದ್ದ ರಂಗಣ್ಣ ಸಾಲ ತೀರಿಸುವ ತನಕ ತನ್ನ ಮಗ ತಿಮ್ಮನನ್ನು ಗೌಡರ ಮನೆಯಲ್ಲಿ ಜೀತಕ್ಕಿಟ್ಟಿದ್ದ. ಕಸ ಬಳಿಯುವುದು, ದನ ಮೇಯಿಸುವುದು, ಹೊಲಗದ್ದೆಗಳಲ್ಲಿ ದುಡಿಯುವುದು ತಿಮ್ಮನ ನಿತ್ಯದ ಕಾಯಕ. ದಿನಕ್ಕೆ ಎರಡು ಹೊತ್ತು ಊಟ, ವರ್ಷಕ್ಕೆ ಎರಡು ಜತೆ ಬಟ್ಟೆ ತಿಮ್ಮನಿಗೆ ಗೌಡರ ಮನೆಯಿಂದ ಸಿಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಗೌಡರ ಮನೆಯಲ್ಲಿ ಜೀತದ ಕೆಲಸ ಮಾಡಿಕೊಂಡು ಬಂದಿದ್ದ.
ನಾನು ಅವಸರವಾಗಿ ಕಾಲೇಜಿನತ್ತ ಹೆಜ್ಜೆ ಹಾಕುತ್ತಿದ್ದುದನ್ನು ಗಮನಿಸಿದ ತಿಮ್ಮಾ, 'ಏನ್ ಸಾ, ಇವತ್ತು ಇಷ್ಟು ಬೇಗ ಶಾಲೆಗೆ?' ಎಂದ. ಅವನ ಪ್ರಶ್ನೆಗೆ ಉತ್ತರಿಸದೆ ಮುಂದೆ ಹೋಗಲು ಇಷ್ಟಪಡದೆ 'ತಿಮ್ಮಾ, ಇವತ್ತು ಸ್ವಾತಂತ್ರ್ಯ ದಿನಾಚರಣೆ. ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ' ಎಂದೆ. ಕೊಂಚ ಗೊಂದಲಗೊಂಡ ತಿಮ್ಮಾ, 'ಸ್ವತಂತ್ರ ಎಂದರೇನು?' ಎಂದ. ತಿಮ್ಮನ ಪ್ರಶ್ನೆಯಿಂದ ತಲೆ ಕೆರೆದುಕೊಳ್ಳುವ ಸರದಿ ನನ್ನದಾಯಿತು. ಶಾಲೆಯ ಮುಖ ನೋಡದ, ಅಕ್ಷರಜ್ಞಾನದ ಅರಿವಿಲ್ಲದ ತಿಮ್ಮನಿಗೆ 'ಸ್ವಾತಂತ್ರ್ಯ ಎಂದರೇನು?' ಎಂಬುದನ್ನು ಹೇಗೆ ಪರಿಚಯಿಸಬಹುದೆಂದು ಯೋಚಿಸಿದೆ, ಮಂಡೆ ಕೊಂಚ ಬಿಸಿಯಾಗತೊಡಗಿತು.
'ತಿಮ್ಮಾ, ನೀನೀಗ ಯಾರ ಮನೆಯಲ್ಲಿರುವೇ? ಏನು ಮಾಡುತ್ತಿರುವೆ?' ಎಂದು ತಿಮ್ಮನಿಗೆ ಪ್ರಶ್ನೆ ಹಾಕಿದೆ. ಅದಕ್ಕವನು, ಚೆನ್ನಾಗಿ ಓದಿಕೊಂಡಿದ್ದ ವಿದ್ಯಾರ್ಥಿ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುವಂತೆ 'ಗೌಡರ ಮನೆಯಲ್ಲಿದ್ದೇನೆ, ಅವರ ಮನೆಯಲ್ಲಿ ಆಳುಮಗನಾಗಿದ್ದೇನೆ' ಎಂದ.
'ಏಕೆ ಕೆಲಸದಾಳು ಆಗಿದ್ದೀಯಾ?' ಎಂದೆ.
'ಅಪ್ಪ ಮಾಡಿದ ಸಾಲಕೆ ಜೀತದಾಳಾಗಿ' ಎಂದ.
'ತಿಮ್ಮಾ, ನಿಮ್ಮ ಗೌಡರು ನಿಮ್ಮಪ್ಪ ಮಾಡಿದ ಸಾಲ ತೀರಿದೆ ಎಂದು ಹೇಳಿದರೆ ಏನು ಮಾಡುವೆ?' ಎಂದು ಕೇಳಿದೆ. ಕಣ್ಣರಳಿಸಿ, ಮುಖ ಹಿಗ್ಗಿಸಿದ ತಿಮ್ಮಾ ಖುಷಿಯಿಂದ 'ಓ, ನಾನೀಗಲೇ ನನ್ನೂರಿಗೆ ಓಡಿಹೋಗುವೆ. ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿಯರೊಂದಿಗೆ ನಲಿದಾಡುವೆ. ಎತ್ತು-ಎಮ್ಮೆ, ಕುರಿ-ಮರಿಗಳ ನಡುವೆ ಓಡಾಡುವೆ. ಹಕ್ಕಿ ಪಕ್ಷಿಗಳೊಂದಿಗೆ ಚಿಲಿಪಿಲಿಗುಟ್ಟುವೆ. ನಮ್ಮೂರ ಕೆರೆಯ ನೀರಲ್ಲಿ ಮೀನಾಗಿ ಈಜಾಡುವೆ. ನಾನು ನಾನಾಗುವೆ' ಎಂದು ಹೇಳುತ್ತಾ ಕಣ್ಮುಚ್ಚಿ ಕನಸು ಕಾಣುತ್ತಿದ್ದ ತಿಮ್ಮನ ಹತ್ತಿರ ಬಂದು ಅವನ ಭುಜವಿಡಿದು ತಟ್ಟಿ ಎಚ್ಚರಿಸಿ ಕೇಳಿದೆ 'ತಿಮ್ಮಾ, ಸ್ವಾತಂತ್ರ್ಯವೆಂದರೇನು? ನಿನಗೆ ಗೊತ್ತಾಯಿತೆ?'
ತಿಮ್ಮನೆಂದ 'ಆಹಾ! ಎಂತಹ ಚಂದಾ, ಆ ಸ್ವಾತಂತ್ರ್ಯದ ಆನಂದ.'
ನನಗೋ ಧ್ವಜಾರೋಹಣಕ್ಕೆ ಹೋಗಲು ವೇಳೆಯಾಗುತ್ತಿತ್ತು. 'ತಿಮ್ಮಾ ನಾನು ಬರಲೇ' ಎಂದೆ. ಕೈಯಲ್ಲಿದ್ದ ಕಸದ ತಟ್ಟಿಯ ಕೆಳಗೆ ಎಸೆದು ನನ್ನ ಹತ್ತಿರ ಬಂದ ತಿಮ್ಮಾ, ಕೇಳಿದ 'ಸಾ ನನಗೆ ಯಾವಾಗ ಸಿಗುವುದು ಆ ಸ್ವಾತಂತ್ರ್ಯದ ಆನಂದ?'
ತಿಮ್ಮನ ಪ್ರಶ್ನೆ ನನಗೆ ಬಾಣದಂತೆ ನಾಟಿತು. ಉಸಿರು ಕಟ್ಟಿದಂತಾಗಿ ಮಾತು ಮೌನದಲಿ ಮುಳುಗಿತು.
ಇದುವರೆವಿಗೂ ನನಗೆ ಯಾವ ವಿದ್ಯಾರ್ಥಿಯೂ ಕೇಳದ ಪ್ರಶ್ನೆಯ ತಿಮ್ಮಾ ಕೇಳಿದ್ದ! ತರಗತಿಯಲ್ಲಿ ಮಕ್ಕಳ ಪ್ರಶ್ನೆಗಳಿಗೆಲ್ಲ ಉತ್ತರ ನೀಡುತ್ತಾ ಬಂದಿದ್ದ ನಾನು ತಿಮ್ಮನ ಪ್ರಶ್ನೆಗೆ ಉತ್ತರಿಸಲಾಗದೆ ಮೌನವಾಗಿ ಕಾಲೇಜಿನತ್ತ ಹೊರಟೆ. ತಿಮ್ಮಾ ಮಾತ್ರ ತನ್ನ ನಿರಾಸೆಯ ಕಣ್ಣುಗಳಿಂದ ನನ್ನತ್ತಲೇ ನೋಡುತ್ತಾ ನಿಂತಿದ್ದ.

- ಎಚ್.ಎಸ್.ಸಿದ್ದಪ್ಪ
9731832603

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.