ಈಗಿನ ಪುಸ್ತಕಗಳು

ಈಗಿನ ಪುಸ್ತಕಗಳು
Updated on: 

ಹಸಿಯಾದ ಜೇಡಿಮಣ್ಣನ್ನು ಕೈಕಲಾವಿದ ಹೇಗೆಬೇಕೋ ಹಾಗೆ ಬಳಸಿ ತನಗೆ ಬೇಕಾದ ಪ್ರತಿಮೆಗಳನ್ನು ಮಾಡಿಕೊಳ್ಳುವ ಹಾಗೆ ನಾನು ಈಗಿನ ಎಂಬ ಪದವನ್ನು ಬಳಸಿಕೊಂಡು ಸಮಕಾಲೀನತೆಯ ವಸ್ತುಸ್ಥಿತಿಯೊಂದನ್ನು ಪರಿಚಯಿಸಲು ಇಚ್ಛಿಸುತ್ತೇನೆ. ಈಗಿನ ಅಂದರೆ ಇಂದಿನ ದಿನವೂ ಆಗಿರಬಹುದು. ಈಗ್ಗೆ ಕೆಲವು ತಿಂಗಳು ಅಥವಾ ಕೆಲವು ವರ್ಷಗಳ ಹಿಂದಿನದೂ ಆಗಿರಬಹುದು. ಅದು ಸಾಂದರ್ಭಿಕವಾಗಿರುತ್ತದೆ, ಅಷ್ಟೆ. ಹಾಗಾಗಿ, ನಾನು ಈಗಿನ ಪುಸ್ತಕಗಳು ಎಂದು ಹೇಳುವಾಗ ಅಂದಾಜು ಹತ್ತು-ಹದಿನೈದು ವರ್ಷಗಳಿಂದ ಹಿಡಿದು ಇಂದಿನವರೆಗೂ ಎಂದು ನಮ್ಮ ಓದುಗರು ಅರ್ಥೈಸಿಕೊಂಡರೆ ಸಾಕು.
ಈ ವರ್ಷಗಳಲ್ಲಿ ಕನ್ನಡ ಗ್ರಂಥಗಳ ಪ್ರಕಟಣೆ ಬಲು ಹುಲುಸಾಗಿ ಬೆಳೆಯುತ್ತಿದೆ (ಹೊಲಸಾಗಿ ಎಂಬುದು ಕೆಲವರ ಕುಹಕ.) ಹುಲುಸು ಗುಣಮಟ್ಟದ ಫಸಲನ್ನೂ ಕೊಡುತ್ತಿದೆಯೆ ಎಂಬುದು ಚರ್ಚಾಸ್ಪದ ಸಂಗತಿ. ಅದೇನೆ ಇರಲಿ, ಇಂದಿನ ಸಾಹಿತ್ಯ, ವಿಜ್ಞಾನ, ವೈಚಾರಿಕ, ವೈದ್ಯಕೀಯ, ಪ್ರವಾಸ, ವಾಸ್ತು, ಜ್ಯೋತಿಷ ಶಾಸ್ತ್ರ ಈ ನಾನಾ ಬಗೆಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವರ್ಷವೊಂದಕ್ಕೆ ಹಲವು ನೂರು ಅಥವಾ ಕೆಲವು ಸಾವಿರ ಗ್ರಂಥಗಳು ಪ್ರೆಸ್ಸುಗಳಲ್ಲಿ ಉತ್ಪತ್ತಿಯಾಗಿ ಸರಕಾರಿ ಪ್ರಾತಿನಿಧಿಕ ಸಂಸ್ಥೆಗಳಾದ ಗ್ರಂಥಭಂಡಾರಗಳಲ್ಲಿ ಬಂದು ಠಿಕಾಣಿ ಹೂಡಿಬಿಡುತ್ತವೆ. ಆ ಪೈಕಿ ಹಲವು ಆ ಗ್ರಂಥಾಲಯ ಕಟ್ಟಡಗಳನ್ನು ಕೆಡವಿ ಅಥವಾ ಸ್ಥಳಾಂತರಿಸುವವರೆಗೂ ಅವು ಕುಳಿತ ಸ್ಥಳದಿಂದ ಜಪ್ಪಯ್ಯ ಅಂದರೂ ಅಲುಗಾಡುವುದಿಲ್ಲ. ಕುಳಿತಲ್ಲೇ ಸ್ಥಾವರರೂಪಿಯಾಗಿ 'ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ' ಎಂಬ ಬಸವಣ್ಣನ ಮಾತನ್ನು ಸುಳ್ಳು ಮಾಡಿಬಿಡುತ್ತವೆ. ಅದು ಹೇಗೆಂದರೆ, ಗುಣಮಟ್ಟವುಳ್ಳ ಪುಸ್ತಕಗಳು ಜಂಗಮ ಸ್ವರೂಪಿಗಳಾಗಿ ಓದುಗರೆಂಬ ಗ್ರಾಹಕರ ಕೈಯಲ್ಲಿ ಓಡಾಡಿ ಕ್ರಮೇಣ ಅಳಿದುಹೋಗಿ, ಮತ್ತೆ ಹೊಸ ಪ್ರತಿಗಳಿಗೆ ಅವಕಾಶ ಮಾಡಿಕೊಡುತ್ತವೆ. ಆದರೆ, ಇವು ಹಾಗಲ್ಲ. ಕುಳಿತಲ್ಲೇ ಸ್ಥಾವರವಾಗಿ ಸ್ವಸ್ಥವಾಗಿ ಉಳಿದುಬಿಡುತ್ತವೆ. ಇಲ್ಲಿ ಸ್ಥಾವರವೇ ಜಂಗಮ. ಜಂಗಮವೇ ಸ್ಥಾವರ ಈ ಎಲ್ಲ ತಳಕಂಪಳಕ ಪರಿಸ್ಥತಿಗೆ ದಿಢೀರ್ ಅಂತ ಹುಟ್ಟಿಕೊಳ್ಳುತ್ತಿರುವ ಇಂದಿನ ಲೇಖಕರು ಹಾಗೂ ಪ್ರಕಾಶಕರ ಕೂಟವೇ ಕಾರಣವಲ್ಲದೆ ಬೇರೇನಲ್ಲ. ಈಗಿನ ದಿನಗಳಲ್ಲಿ ದಿಢೀರ್ ಸಾಂಬಾರ್, ದಿಢೀರ್ ಇಡ್ಲಿ, ದಿಢೀರ್ ಮದುವೆ ಈ ಮುಂತಾದವುಗಳು ತತ್‌ಕ್ಷಣದಲ್ಲಿ ಹುಟ್ಟಿ, ಆಮೇಲೆ ನಾಪತ್ತೆಯಾಗುವುದಿಲ್ಲವೆ ಹಾಗೆ?
ಈಗ ಸಾಹಿತ್ಯ ಪ್ರಕಾರವನ್ನೇ ತೆಗೆದುಕೊಳ್ಳಿ. ಕನ್ನಡ ಸಾಹಿತ್ಯ ಇತಿಹಾಸ ಸಾಕಷ್ಟು ದೀರ್ಘ ಪರಂಪರೆಯನ್ನು ಹೊಂದಿದೆ ಎಂಬ ಬಗ್ಗೆ ಎರಡು ಮಾತಿಲ್ಲ. ಆದಿಕವಿ ಪಂಪ, ಕುಮಾರವ್ಯಾಸ, ರತ್ನಾಕರ, ಕುವೆಂಪು ಈ ಮುಂತಾದವರೆಲ್ಲ ತಮ್ಮ ಜೀವಿತಾವಧಿಯಲ್ಲಿ ಒಂದೊಂದು ಮಹಾಕಾವ್ಯವನ್ನು ಬರೆಯುವುದರಲ್ಲಿ ತಮ್ಮ ಶಕ್ತಿಸಾಮರ್ಥ್ಯವನ್ನೆಲ್ಲ ವಿನಿಯೋಗಿಸಿದರು. ಹಾಗಾಗಿಯೇ ವಿಕ್ರಮಾರ್ಜುನ ವಿಜಯ, ಕುಮಾರವ್ಯಾಸ ಭಾರತ, ಭರತೇಶ ವೈಭವ, ಶ್ರೀ ರಾಮಾಯಾಣ ದರ್ಶನಂ ಈ ಮೊದಲಾದ ಕೃತಿಗಳು ಕನ್ನಡದಲ್ಲಿ ಚಿರಸ್ಥಾಯಿಯಾಗಿ ನೆಲೆಯೂರಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದೇನು ಮಹಾ - ಅನ್ನುವ ರೀತಿ ಮಹಾಕಾವ್ಯದ ಹೆಸರಿನಲ್ಲಿ ದಪ್ಪದಪ್ಪ ಕಾವ್ಯಗಳು ಒಂದಾದಮೇಲೊಂದರಂತೆ ತುಪುತಪುನೆ ಉದುರುತ್ತಿವೆ. ಒಬ್ಬೊಬ್ಬರು ಒಂದು, ಆಮೇಲೊಂದೊಂದು, ಅದಾದಮೇಲೊಂದು ಎಂಬಂತೆ ದಪ್ಪಕಾವ್ಯಗಳು ಎಲ್ಲೆಂದರಲ್ಲಿ ಧುತ್ತನೆ ಉದುರುತ್ತಿವೆ. ಅವುಗಳ ಲೇಖಕರಾದರೋ ನಾವು ಮಹಾಕವಿಗಳು ಅಂತ ಅವರಿಗವರೇ ಬಿರುದಾಂಕಿತರಾಗಿ ಬಿಡುತ್ತಿದ್ದಾರೆ. ಅದನ್ನು ನೋಡಿ ಕನ್ನಡದ ನೈಜ ಸಾಹಿತಿಗಳು ಬೆಕ್ಕಸಬೆರಗಾಗಿದ್ದಾರೆ. ಆದರೆ, ಅವರು ಬರೆದ ದಪ್ಪಕಾವ್ಯಗಳು ಕೂಡ ಗ್ರಂಥಾಲಯಗಳನ್ನು ಹೊಕ್ಕು ಗಿಂಡಾಯನಮಃ ಎಂದು ಕೂತು, ಯಾರಾದರೂ ಓದುಗರು ಬಂದು ತಮ್ಮ ಬೆನ್ನನ್ನೊಮ್ಮೆ ನವುರಾಗಿ ಸವರಿ, ಪುಟಗಳನ್ನೊಮ್ಮೆ ತಿರುವಿ ಅಚ್ಚಾದ ತಪ್ಪಿನ ಪಾಪವಿಮೋಚನೆ ಮಾಡುವರೆ ಎಂದು ಹಿಂದೆ ತನ್ನ ಶಾಪ ವಿಮೋಚನೆಗಾಗಿ ಶ್ರೀರಾಮ ಬರುವುದನ್ನೇ ಅಹಲ್ಯೆ ಕಾಯ್ದಂತೆ ಇವು ಓದುಗರನ್ನು   ಕಾತರದಿಂದ ನಿರೀಕ್ಷಿಸುತ್ತವೆ.
ಇನ್ನು ಕೆಲವು ಕನ್ನಡ ಪದ್ಯ ಬರೆಯುವವರು (ಕರಾರುವಕ್ಕಾಗಿ ಹೇಳುವುದಾದರೆ ಪದ್ಯದ ಹಾಗೆ ಒಂದರ ಕೆಳಗೊಂದು ಸಾಲನ್ನು ಬರೆಯುವವರು. ಬೇಕಾದರೆ ಅವರ ಬರಹಗಳನ್ನು ಸಾಲು ಬರಹಗಳು ಎಂದು ಹೆಸರಿಸೋಣ) ತಮಗೆ ಮಧ್ಯವಯಸ್ಸಾಗುತ್ತಿದ್ದುದನ್ನೇ ಕಾಯ್ದು, ತಮ್ಮ  ಹಳೆಯ-ಪಳೆಯ ಪದ್ಯ ಸಂಕಲಗಳನ್ನೆಲ್ಲ ಒಟ್ಟಾಗಿ ಸೇರಿಸಿ 'ಸಮಗ್ರಕಾವ್ಯ'ವೆಂದು ಗ್ರಂಥಾಲಯಗಳಿಗೆ ಹೊಂದಿಕೊಳ್ಳುವಂಥ ಹಾಗೂ ಶೋ ಕೇಸುಗಳಿಗೆ ಅಲಂಕಾರಭೂಷಿತವಾದ ಹೆಬ್ಬೊತ್ತಿಗೆಗಳನ್ನು ಪ್ರಕಟಿಸಿ ತಂದು ತುಂಬಿಬಿಡುತ್ತಾರೆ. ಅವು ಕೂಡ ಕೂತಲ್ಲೇಕೂತು ಶಾಶ್ವತ ಸಾಹಿತ್ಯವಾಗಿ ಉಳಿದುಬಿಡುತ್ತವೆ. ಆಮೇಲೆ ಯಾರಾದರೂ ಅವುಗಳ ತಂಟೆಗೆ ಹೋದರೆ ಕೇಳಿ.
ಇದೇನು ನಾನು ಕೇವಲ ಪದ್ಯ ಪ್ರಕಾರಕ್ಕೇ ದುಂಬಾಲು ಬಿದ್ದಿದ್ದೇನೆ ಎಂದೇನು ನೀವು ಕೆಕ್ಕರಿಸಿಕೊಂಡು ನನ್ನನ್ನು ನೋಡಬೇಡಿ. ನಿದರ್ಶನಕ್ಕಾಗಿ ಇದನ್ನು ತೆಗೆದುಕೊಂಡಿದ್ದೇನೆ, ಅಷ್ಟೆ. ಸಾಹಿತ್ಯದ ಇತರ ಪ್ರಕಾರಗಳಲ್ಲೂ ಇದೇ ಪರಿಸ್ಥಿತಿ ಇದೆ ಅನ್ನುವುದು ಯಾವುದೇ ಗ್ರಂಥಭಂಡಾರ ಹೊಕ್ಕರೂ ನಿಮಗೆ ಮನದಟ್ಟಾಗದೆ ಇರದು. ಹಾಗಾದರೆ, ಗುಣಮಟ್ಟದ ಕೃತಿಗಳು ಬರುತ್ತಲೇ ಇಲ್ಲವೆ ಎಂದೇನೂ ಆತಂಕಕ್ಕೆ ಒಳಗಾಗಬೇಕಿಲ್ಲ. ಹಲವು ಸುಳ್ಳರ ನಡುವೆ ಒಬ್ಬ ಅಣ್ಣಾಹಜಾರೆ ಇಲ್ಲವೆ? ಹಾಗೆ ಇವು ಕೂಡ.
ಈಗ ವಿಜ್ಞಾನ ಪುಸ್ತಕಗಳತ್ತ ಬನ್ನಿ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ನಮಗೆ ಪಾಶ್ಚಾತ್ಯರ ಸಂಸರ್ಗದಿಂದ ಬಂದದ್ದು ಎಂಬ ಬಗ್ಗೆ ಅನುಮಾನವಿಲ್ಲ. ಅವನ್ನು ಕರಗತ ಮಾಡಿಕೊಂಡು, ಕನ್ನಡಿಗರಿಗೆ ಸರಳ ಹಾಗೂ ಖಚಿತ ಭಾಷೆಯಲ್ಲಿ ವಿಜ್ಞಾನ ಬರಹಗಳನ್ನು ನೀಡಲು ಆರ್.ಎಲ್.ನರಸಿಂಹಾಚಾರ್, ಶಿವರಾಮ ಕಾರಂತ, ಜೆ.ಆರ್.ಲಕ್ಷಣರಾವ್ ಮುಂತಾದವರು ಪ್ರಾಮಾಣಿಕ ಪ್ರಯತ್ನ ಮಾಡಿರುವುದು ನಮಗೆ ಕಂಡುಬರುತ್ತದೆ. ಆಧುನಿಕ ವಿಜ್ಞಾನದ ಸಂಶೋಧನೆಗಳು ಕನ್ನಡದಲ್ಲೂ ಲಭ್ಯವಾಗುವಂತೆ ಆಧುನಿಕ ವಿಜ್ಞಾನ ಬರಹಗಾರರನೇಕರು ಮಾಡುತ್ತಿರುವ ಕೆಲಸ ಶ್ಲಾಘನೀಯ ಸಂಗತಿಯೇ ಸರಿ. ಮೌಲ್ಯಯುತವಾದ ಲೇಖನಗಳು, ಪುಸ್ತಕಗಳು ಆಗಾಗ್ಗೆ ಪ್ರಕಾಶನಗೊಳ್ಳುತ್ತಿರುವುದು ಉತ್ತಮ ಲಕ್ಷಣವೇ ಸರಿ.
ಆದರೆ, ಆಧುನಿಕವಾದ ಕಂಪ್ಯೂಟರ್ ನಮ್ಮ ಬಳಕೆಗೆ ಬಂದು ಜನಜೀವನದ ಮೇಲೆ ಅದರ ಪ್ರಭಾವ ಆಗಿರುವುದು ಅನೇಕ ಬಗೆಗಳಲ್ಲಿ. ಅದು ಕೆಲವು ದಿಢೀರ್ ವಿಜ್ಞಾನ ಬರಹಗಾರರ ಜೊತೆ ಕೈಜೋಡಿಸಿ, ಎಂಥ ವಿಚಿತ್ರ ಪರಿಸ್ಥಿತಿಯನ್ನು ಉಂಟುಮಾಡಿದೆ ನೋಡಿ. ಕಂಪ್ಯೂಟರ್ ಮುಂದೆ ಕುಳಿತು, ಅಂತರ್ಜಾಲವನ್ನು ಜಾಲಾಡಿಸಿ, ವಿಜ್ಞಾನದ ಯಾವ ಪ್ರಕಾರದ ಪುಸ್ತಕ ಬೇಕೆಂದರೆ ಆ ಪ್ರಕಾರದ ಪುಸ್ತಕವನ್ನು, ಕೆಲವೇ ದಿನಗಳಲ್ಲಿ ಸಿದ್ಧಪಡಿಸಿಕೊಡುವ ಶೀಘ್ರವಿಜ್ಞಾನ ಲೇಖಕರು ಈಗ ಕಂಪ್ಯೂಟರ್‌ಗಳ ಮುಂದೆಯೇ ಲಭ್ಯವಾಗುತ್ತಾರೆ. ಸರ್ಕಾರದ ಅಥವಾ ಗ್ರಂಥಾಲಯಗಳ ಯಾವ ಸ್ಕೀಮಿಗೆ ಎಷ್ಟು ಗಾತ್ರದ ಪುಸ್ತಕ ಬೇಕು? ಭಾಷೆ ಹೇಗಿರಬೇಕು? ಚಿತ್ರ ಎಷ್ಟಿರಬೇಕು? ಇತ್ಯಾದಿ ಸಂಕ್ಷಿಪ್ತ ವಿವರಣೆಗಳನ್ನು ಅವರಿಗೆ ನೀಡಿದರೆ ಸಾಕು. ತಗೊ ಅಂತ ವಿಜ್ಞಾನಬರಹದ ಹಸ್ತಪ್ರತಿ ಸಿದ್ಧ. ಅದಕ್ಕೆ ಇಂತಿಷ್ಟು  ಸಂಭಾವನೆ ಅಂತ ಲೇಖಕ-ಪ್ರಕಾಶಕರ ನಡುವೆ ಕರಾರು-ಒಪ್ಪಂದವಾದರೆ ಸಾಕು.
ನನಗೊಬ್ಬ ಲೇಖಕ ಗೆಳೆಯನಿದ್ದಾನೆ. ಅವನನ್ನು ಸರ್ವವಿಷಯಗಳಲ್ಲೂ ಕೈ ಆಡಿಸಿ ಪ್ರಕಾಶಕರ ಅಗತ್ಯಕ್ಕೆ ತಕ್ಕಂತೆ ಹಸ್ತಪ್ರತಿ ಸಿದ್ಧಪಡಿಸಿಕೊಡುವ 'ಸವ್ಯಸಾಚಿ ಲೇಖಕ' ಅಂತ ಕರೆದರೆ ತಪ್ಪಾಗಲಾರದೇನೊ! ಯಾವ ವಿಷಯದ ಬಗ್ಗೆ ಬೇಕಾದರೂ ಸಲೀಸಾಗಿ ಮತ್ತು ಶರವೇಗದಲ್ಲಿ ಹಸ್ತಪ್ರತಿಗಳನ್ನು ಸಿದ್ಧಪಡಿಸಿಕೊಡುತ್ತಾನೆ. ಅಂತರ್ಜಾಲದಲ್ಲಿ ಈಗಾಗಲೇ ಲಭ್ಯವಿರುವ ಮಾಹಿತಿಗಳನ್ನು ಅನಾಮತ್ತಾಗಿಯೊ ಇಲ್ಲವೆ ವಾಕ್ಯಗಳ ಪದಗಳನ್ನು ಬದಲಾಯಿಸಿಯೊ, ಅನುವಾದ ಮಾಡಿಯೊ ಅಥವಾ ಈ ಅಂತರ್ಜಾಲತಾಣದಲ್ಲಿ ಲಭ್ಯವಾಗುವ ಲೇಖನಗಳನ್ನು ಹದವಾಗಿ ಮಿಶ್ರಣ ಮಾಡಿಯೊ ಹಸ್ತಪ್ರತಿಗಳನ್ನು ಸಿದ್ಧಪಡಿಸುವುದರಲ್ಲಿ ಅವನದು ಯಾವಗಲೂ ಎತ್ತಿದ ಕೈ. ಪ್ರಕಾಶಕರೊಂದಿಗೆ ಮೊದಲೆ ಕರಾರು ಒಪ್ಪಂದ ಆದಂತೆ ಅವನ ಕೈಗೆ ಇಂತಿಷ್ಟು ಅಂತ ಮುಂಗಡ ಹಣ ಬಂದುಬಿದ್ದರೆ ಸಾಕು. ಉಳಿದದ್ದು ಗ್ರಂಥಾಲಯಗಳಿಂದ ಆರ್ಡರ್ ಬಂದು ಪುಸ್ತಕಗಳು ಮಾರಾಟವಾದ ಮೇಲೇಯೇ ಅಂತ ನಾವಾದರೂ ಅಂಬೋಣ. ಹೀಗೆ ಅನ್ಯಭಾಷೆ ಅರ್ಥಾತ್ ಆಂಗ್ಲಭಾಷೆಯಿಂದ ನೇರವಾಗಿ ಕನ್ನಡಕ್ಕೆ ಭಟ್ಟಿ ಇಳಿಸುವ ಇಂಥ ಲೇಖಕರನ್ನು 'ಭಟ್ಟಿ ಲೇಖಕರು' ಅಥವಾ 'ಕಳ್ಳಭಟ್ಟಿ ಲೇಖಕರು' ಎಂದು ಬೇಕಾದರೂ ಹೆಸರಿಸಬಹುದು.
ದಿಢೀರ್ ಲೇಖಕ ಸಿದ್ದಪಡಿಸಿದ ಹಸ್ತಪ್ರತಿಗಳು ಈ ದಿಢೀರ್ ಪ್ರಕಾಶಕರ ಪ್ರಕಟಣೆಯಲ್ಲಿ ಪುಸ್ತಕ ರೂಪವಾಗಿ ಹೊರಹೊಮ್ಮುವುದೂ ಒಂದು ಸ್ವಾರಸ್ಯಕರ ಘಟ್ಟ ಅನ್ನಬಹುದು. ಆ ಸ್ವಾರಸ್ಯ ಹೀಗಿದೆ. ಲೇಖಕ ಹಸ್ತಪ್ರತಿ ಸಿದ್ಧಪಡಿಸಿ ಪುಸ್ತಕ ಪ್ರಕಾಶಕನಿಗೆ ನೀಡಿದ ಅನ್ನಿ. ಆ ದಿಢೀರ್ ಪ್ರಕಾಶಕ ಹಸ್ತಪ್ರತಿಯ ಡಿ.ಟಿ.ಪಿ. ತಯಾರುಮಾಡಿದನಂತರ ಐದೋ, ಹತ್ತೋ ಪುಸ್ತಕಗಳಾಗುವಷ್ಟು ಪ್ರಿಂಟೌಟ್ ತೆಗಿಸಿ, ಅಷ್ಟು ಪ್ರಮಾಣದ ಪುಸ್ತಕಗಳನ್ನು ತಯಾರಿಸಿಬಿಡುತ್ತಾನೆ. ಆನಂತರ, ಕೇಂದ್ರ ಗ್ರಂಥಾಲಯದಲ್ಲಿ ಸದರಿ ಕೃತಿಯನ್ನು ನೋಂದಾವಣೆ ಮಾಡಿಸಿ, ಪುಸ್ತಕ ಖರೀದಿಗೆ ಸಲ್ಲಿಸಬೇಕಾದ ಪ್ರತಿಗಳನ್ನು ಸಲ್ಲಿಸಿ, ಉಳಿದ ಕೆಲವು ಪ್ರತಿಗಳನ್ನು ಮಾದರಿಗಾಗಿ ತನ್ನಲ್ಲೇ ಉಳಿಸಿಕೊಳ್ಳುತ್ತಾರೆ. ಪುಸ್ತಕದ ಸರಬರಾಜು ಪತ್ರ ಬಂದಮೇಲೆ ಕಂಪ್ಯೂಟರ್‌ನಲ್ಲೊ ಸಿ.ಡಿಯಲ್ಲೊ ಹಾಯಾಗಿರುವ ಪುಸ್ತಕವನ್ನು ಅಗತ್ಯಕ್ಕಿಂತ ಒಂದಿಷ್ಟು ಹೆಚ್ಚು ಪ್ರತಿಗಳನ್ನು ಅಚ್ಚಿಸಿ ಗ್ರಂಥಾಲಯಕ್ಕೆ ಸರಬರಾಜು ಮಾಡುವುದು ಮತ್ತು ಲೇಖಕನಿಗೆ-ಲೇಖಕ ಪ್ರತಿಗಳನ್ನು ಹಾಗೂ ಉಳಿಕೆ ಸಂಭಾವನೆ ಸೇರಿಸಿಕೊಡುವುದೂ ಉಂಟು. ಅಲ್ಲಿಗೆ ಆ ಪುಸ್ತಕ ವ್ಯವಹಾರ ಮುಗಿಯಿತು. ಬೇರೆಲ್ಲಿಯಾದರೂ ಆ ಪುಸ್ತಕದ ಪ್ರತಿಯೊಂದನ್ನು ಕೊಂಡುಕೊಳ್ಳಲು ನೀವು ರಾಜ್ಯದ ಯಾವುದೇ ಪುಸ್ತಕದ ಅಂಗಡಿಗೆ ಹೋದರೂ ಅದು ದುರ್ಲಭ. ಯಾಕೆಂದರೆ, ದಿಢೀರ್ ಪ್ರಕಾಶಕರ ಅಂತಿಮ ಗುರಿ ಗ್ರಂಥಾಲಯವೇ ಮೊದಲಾದ ಸರ್ಕಾರಿ ಸಂಸ್ಥೆಗಳೇ ಆಗಿರುವುದರಿಂದ ಬೇರೆ ಕಡೆಗೆ ಪುಸ್ತಕಗಳ ಸರಬರಾಜು ಆಗುವುದೇ ಇಲ್ಲ ಮತ್ತು ಈ ದಿಢೀರ್ ಲೇಖಕ-ಪ್ರಕಾಶಕರ ಸಂಬಂಧ ಸಂಪೂರ್ಣ ವ್ಯಾವಹಾರಿಕವಾಗಿರುವುದರಿಂದ ಅಲ್ಲಿ ಸಾಹಿತ್ಯ - ಸಂಸ್ಕೃತಿಯ ಮಾತೇ ಬರುವುದಿಲ್ಲ.
ಇನ್ನು ಕೆಲವು ಪುಸ್ತಕ ಪ್ರಕಾಶಕರಿರುತ್ತಾರೆ. ಅವರು ಹೆಸರಾಂತ ಹಳೆ ಲೇಖಕರ ಪುಸ್ತಕಗಳನ್ನು ಅಚ್ಚುಹಾಕಿಸಿ ದೀರ್ಘಪರಂಪರೆಯ ಹೆಸರಿನಲ್ಲಿ ಗ್ರಂಥಾಲಯಗಳಿಗೆ ತೂರಿಸಿಬಿಡುವುದು ಇತ್ತೀಚಿನ ಪುಸ್ತಕ ಪ್ರಕಾಶನದ ಒಂದು ವಹಿವಾಟೇ ಆಗಿದೆ. ಅವರ ಈ ವಹಿವಾಟಿಗೆ ಅಥವಾ ಪುಸ್ತಕ ದಂಧೆಗೆ ಹಿಂದಿನ ತಲೆಮಾರಿನ ಹೆಸರಾಂತ ಲೇಖಕರ ಹೆಸರೇ ಶ್ರೀರಕ್ಷೆಯಾಗಿರುತ್ತದೆ ಎಂಬ ಬಗ್ಗೆ ಎಳ್ಳಷ್ಟೂ ಅನುಮಾನವಿಲ್ಲ.
ಈ ಜಾಡಿನಲ್ಲಿ ಕೆಲವು ಹೆಸರಾಂತ ಸಾಹಿತಿ-ಸಂಶೋಧಕರೂ ಸೇರಿಹೋಗಿದ್ದಾರೆಂಬುದು ಆಶ್ಚರ್ಯವೇ ಆದರೂ ವಾಸ್ತವಿಕ ಹೌದು. ಅಂಥವರು ತಮ್ಮ ಮಾರ್ಗಸೂಚಿಯಾದ ಬೃಹತ್ ಗ್ರಂಥಗಳನ್ನು ಪ್ರಕಾಶಕರ ಅಪೇಕ್ಷಗನುಗುಣವಾಗಿ ಹಾಗೂ ವಿಷಯಾನುಕ್ರಮಣಿಕೆ ಅನುನುಣವಾಗಿ ಬಿಡಿ ಪುಸ್ತಕಗಳನ್ನಾಗಿ ಮಾಡಿ, ಗ್ರಂಥಾಲಯದೊಳಕ್ಕೆ ಸಾರಾಸಗಟಾಗಿ ಸರಬರಾಜು ಮಾಡಿ, ಇಬ್ಬರೂ ಕೈತುಂಬ (ಅಥವಾ ಪ್ರಕಾಶಕ ಕೊಟ್ಟಷ್ಟು ಲೇಖಕನಿಗೆ) ಹಣ ತುಂಬಿಕೊಳ್ಳುವುದು ಇಂದಿನ ಪುಸ್ತಕ ವ್ಯವಹಾರದಲ್ಲಿ ಒಂದಾಗಿದೆ ಎಂಬುದು ಸರಿಯೇ ಸರಿ. ಈ ಎಲ್ಲ ಬಿಡಿಪುಸ್ತಕಗಳು ಒಗ್ಗಟ್ಟಾಗಿ ಒಂದೊ, ಎರಡೊ ಅಥವಾ ಕೆಲವಾರು ಬೃಹತ್ ಸಂಪುಟಗಳಾಗಿ ಹೊರಹೊಮ್ಮಿದ್ದಾಗ ಅವಕ್ಕೆ ಬಗೆಬಗೆಯ ಪ್ರಶಸ್ತಿಗಳು ಬಂದಿದ್ದರೂ ಬಂದಿರಬಹುದು. ಆದರೆ, ಬಿಡಿ ಪುಸ್ತಕಗಳಾಗಿ ಆಕಾರ ತಳೆದಾಗ ಹಣ ತರುವುದು ಮಾತ್ರ ಖಚಿತವೇ ಸರಿ. 'ಒಗ್ಗಟ್ಟಾಗಿದ್ದಾಗ ಪ್ರಶಸ್ತಿ, ಬಿಡಿಯಾಗಿದ್ದಾಗ ಹಣ' ಎಂದು ಇಂಥ ಪುಸ್ತಕಗಳನ್ನು ಹೆಸರಿಸಬಹುದೇನೊ.
ಮತ್ತೆ ಕೆಲವು ಲೇಖಕರು, ಪ್ರಕಾಶಕರೂ ಇರುತ್ತಾರೆ. ಅವರಿನ್ನೊಂದು ಬಗೆಯಲ್ಲಿ ಈ ಪುಸ್ತಕ ದಂಧೆಗೆ ಪ್ರವೇಶ ಮಾಡುತ್ತಾರೆ. ತಾವು ಬಹು ಹಿಂದೆ ಪ್ರಕಟಿಸಿದ, ಪ್ರಕಾಶಿಸದ ಆದರಿಂದಿಗೂ ಮಾರಾಟವಾಗದೆ ಉಳಿದಿರುವ ಬಾಕಿ ಪುಸ್ತಕಗಳ ರಟ್ಟು ಆಥವಾ ಮೇಲುಹೊದಿಕೆ ಮತ್ತು ಪ್ರಾರಂಭಿಕದ ಕೆಲವು ಪುಟಗಳನ್ನು ಕಿತ್ತು-ಸಮಕಾಲೀನಗೊಳಿಸಿ ಅಂದರೆ ಹೊಸ ಪುಸ್ತಕಗಳನ್ನಾಗಿ ಮಾರ್ಪಡಿಸಿ ಸರಬರಾಜು ಮಾಡುವಲ್ಲಿ ತಮ್ಮ ವ್ಯವಹಾರ ಚತುರತೆಯನ್ನು ಪ್ರದರ್ಶಿಸಿಬಿಡುತ್ತಾರೆ. ಇದನ್ನು ಬೇಕಾದರೆ 'ಹೊಸರಟ್ಟು, ಹಳೆಕಟ್ಟು' ಅಂತ ಹೆಸರಿಸಬಹುದೆಂದು ತೋರುತ್ತದೆ.
ವೆಲ್ಲ ಒಂದು ಬಗೆಯದಾದರೆ ಮತ್ತೆ ಕೆಲವು ಅಂಕಣ ಬರಹಗಾರರು ತಾವು ಸಾಂದರ್ಭಿಕವಾಗಿ ಬರೆದ (ಸಂತೆ ಹೊತ್ತಿಗೆ ಮೂರು ಮೊಳ ನೇಯ್ದ) ಅಂಕಣ ಬರಹಗಳ ಕಣಕಣವನ್ನೂ ಬಿಡದೆ ಅಚ್ಚಿಸಿ, ತಾವೋ, ಇಲ್ಲ ತಮಗನುಗುಣವಾದ ಪ್ರಕಾಶಕರ ಮೂಲಕವೋ ಪ್ರಕಾಶಿಸಿ, ಗ್ರಂಥಾಲಯದೊಳಕ್ಕೆ ತುಂಬಿಬಿಡುವುದು ಸಾಮಾನ್ಯವಾಗಿ ನಡೇದೇ ಇದೆ ಅನ್ನಿ.  ಹೀಗೆ, ನಾನಾ ಬಗೆಯ ಪುಸ್ತಕಗಳು, ನಾನಾ ರೂಪಗಳಲ್ಲಿ ಗ್ರಂಥಾಲಯಗಳನ್ನು ಪ್ರವೇಶಿಸಿ ಪುಸ್ತಕಗಳ ಬಾಹುಳ್ಯವನ್ನು ಹೆಚ್ಚಿಸಿಬಿಡುತ್ತಿವೆ. ಆದರೆ, ಗುಣಬಾಹುಳ್ಯದಲ್ಲೂ ಅವು ಶ್ರೀಮಂತಿಕೆಯನ್ನು ಹೇಗೆ ತಾನೆ ಹೊಂದಿರಲು ಸಾಧ್ಯ?

- ಹೊರೆಯಾಲ ದೊರೆಸ್ವಾಮಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com