ಚಂದ್ರ ನೀನೋಬ್ಬನೆ
ಸೂರ್ಯ ಬರಲೇ ಇಲ್ಲ
ಚಂದ್ರನಿಲ್ಲದ ಅಮವಾಸ್ಯೆ ರಾತ್ರಿ
ತಾರೆಗಳು ಆಕಾಶದುದ್ದಗಲ ರಂಗೋಲಿ ಶೃಂಗರಿಸಿ
ರಾತ್ರಿ ಇಡೀ ಒಂದು ಕ್ಷಣವೂ ಕಣ್ಮುಚ್ಚದೆ
ಸೂರ್ಯ ಬಂದಾನೆಂದು
ಎಷ್ಟು ಕಾದರು ಅವನು ಬರಲೇ ಇಲ್ಲ.
ಬೆಳಗಾದ ಮೇಲೆ ಮಹರಾಯ ಬಂದಾಗ
ಕಣ್ಣು ಬಿಡಲಾಗದ ಗಾಢ ನಿದ್ದೆಯಲ್ಲಿದ್ದ
ತಾರೆಯರಿಗೋ ಅವನು ಕಾಣಲೇ ಇಲ್ಲ
ಚಂದ್ರನ ವಿವರಣೆ
ಸೂರ್ಯ ದಿನ ಇಡೀ ಕಾಯ್ಸಿದ್ದನ್ನೆಲ್ಲ
ತಂಪಾಗಿಸೋದು ಎಷ್ಟು ಕಷ್ಟದ ಕೆಲಸ
ಯಾರಿಗಾದ್ರೂ ಗೊತ್ತಾ.
ಏನೋ ತಿಂಗಳಿಗೊಂದು ಅಮವಾಸ್ಯೆ ನಾನು
ರಜ ಹಾಕಿದ್ರೆ ಅದಕ್ಯಾಕ್ರಿ ತಕರಾರು
ಸೂರ್ಯನಿಗೆ ರಜವೂ ಬೇಕಿಲ್ಲ
ಮಜವೂ ಗೊತ್ತಿಲ್ಲ ಯಾಕೆಂದ್ರೆ
ಯಾವಾಗಲೂ ಹೊತ್ತಿಕೊಂಡು ಉರಿಯೋದೊಂದೆ
ಅವನ ದರಬಾರು
ಬೇರೆ ಏನಿದೆ ಹೇಳಿ ಅವನಿಗೆ ಕಾರುಬಾರು?
ಹೇಗೆ ಹೇಳಲಿ?
ಹಗಲಿಗೆ ಸೂರ್ಯ
ರಾತ್ರಿಗೆ ಚಂದ್ರ
ಲಕ್ಷ ನಕ್ಷತ್ರ
ಗಾಳಿ ಬೆಂಕಿ ನೀರೆಂಬ ವಿಚಿತ್ರ
ಕಾಲಕಾಲಕ್ಕೆ ಮಳೆ ಬೆಳೆ ಸಮೃದ್ಧವಾದಿಳೆ
ಇಷ್ಟಿದ್ದರೂ ನೀನು ಹಗಲೂ ರಾತ್ರಿ
ಮುನ್ನೂರ ಅರುವತ್ತೈದು ದಿನವೂ
ಸುತ್ತುವುದೇಕೆಂದು ಕೇಳುವ
ನನ್ನ ಮಕ್ಕಳ ಪ್ರಶ್ನೆ ಕೇಳಿ
ನಗಲೋ ಅಳಲೋ? ಏನು ಮಾಡಲಿ
ಇದೆಲ್ಲವೂ ಇರುವುದು ನಾನು ಸುತ್ತುವುದರಿಂದ
ಎಂದು ಅರ್ಥನಾಗುವಂತೆ ಅವರಿಗೆ ಹೇಗೆ ಹೇಳಲಿ?
- ಕೆ.ಎಚ್.ಶ್ರೀನಿವಾಸ್