ಸಾಪ್ತಾಹಿಕಪ್ರಭ

ಓದುಗನ ಮೇಲೆ ಮುಗಿಬೀಳಿ

Published On :

ಅಧುನಿಕ ವೈಜ್ಞಾನಿಕ ಕಥನ ಲೋಕದ ಪಿತಾಮಹ ಎಚ್.ಜಿ.ವೆಲ್ಷ್. ಟೈಮ್ ಮಶೀನ್, ವಾರ್ ಆಫ್ ದಿ ವರ್ಲ್ಡ್ಸ್ ಈತನ ಜನಪ್ರಿಯ ಕೃತಿಗಳು. ಲಲಿತ ಪ್ರಬಂಧ ಬರೆಯುವ ಕಲೆಯ ಬಗ್ಗೆ ಈತ ಬರೆದಿರುವುದನ್ನು ಓದಿ:  
ಪ್ರಬಂಧ ಬರೆಯುವ ಕಲೆ ಬಹಳ ಸರಳ. ಎಷ್ಟು ಸರಳ ಎಂದರೆ, ಎಲ್ಲರೂ ಯಾಕೆ ಪ್ರಬಂಧಕಾರರಾಗಿಲ್ಲವೋ ಎಂದು ನಾನು ಆಗಾಗ ಆಶ್ಚರ್ಯಚಕಿತನಾಗುವುದುಂಟು. ಪ್ರಬಂಧಕ್ಕೆ ವಸ್ತು ಮುಖ್ಯ ಅಲ್ಲವೇ ಅಲ್ಲ, ಅದರ ಮೂಡ್, ಭಾವವೇ ಮುಖ್ಯ. ಯಾವುದೇ ವಿಷಯಕ್ಕೆ ಅಂಟಿಕೊಂಡಿರಲು ತಿಣುಕಾಡಬೇಡಿ. ಸಂಪಾದಕ ಅಥವಾ ಓದುಗನ ಬಗ್ಗೆ ಆಲೋಚಿಸಬೇಡಿ. ನಿಮ್ಮ ಪ್ರಬಂಧ ಆ ಕ್ಷಣ ಮೂಡಿದ ಬಯಲಿನ ಲಿಲ್ಲಿ ಹೂವಿನಂತಿರಲಿ.
ವ್ಯಾಖ್ಯಾನ ಒಂದನ್ನು ಹೊರತುಪಡಿಸಿ, ಇನ್ನು ಹೇಗೆ ಬೇಕಾದರೂ ನೀವು ಆರಂಭಿಸಬಹುದು. ದಿಢೀರ್ ಆರಂಭ ಒಳ್ಳೆಯದೇ, ಕಿಟಕಿಯಿಂದ ವಿದೂಷಕ ಒಳ ನುಗ್ಗಿದಂತೆ. ನಂತರ ಒಮ್ಮೆಲೇ ನಿಮ್ಮ ಓದುಗನ ಮೇಲೆ ಮುಗಿಬೀಳಿ. ಆತನ ತಲೆಯ ಮೇಲೆ ಮೊಟಕಿ, ಅತನನ್ನು ಮೂಟೆಕಟ್ಟಿ ನಿಮ್ಮೊಂದಿಗೆ ಒಯ್ಯಿರಿ; ಅವನೆಲ್ಲಿದ್ದಾನೆ ಎಂಬುದು ಅವನಿಗೇ ಗೊತ್ತಾಗಕೂಡದು. ಬಳಿಕ ಆತನಿಗೆ ನೋವಾಗದಂತೆ ನೀವೇನು ಮಾಡಿದರೂ ಪರವಾಗಿಲ್ಲ. ನೀವು ಸಂತೋಷವಾಗಿದ್ದಷ್ಟು ಹೊತ್ತು ಅವರೂ ಖುಷಿಯಾಗಿರುತ್ತಾರೆ.
ಆದರೆ ಒಂದು ನಿಯಮವನ್ನು ಮರೆಯಕೂಡದು: ಪ್ರಬಂಧದ ಕೊನೆ, ಒಡೆಯನನ್ನು ಮೆಚ್ಚಿಸಬಯಸುವ ನಾಯಿಯ ಬಾಲದಂತೆ, ಸೊಗಸಾಗಿ, ತಮಾಷೆಯಾಗಿ, ಚಿಕ್ಕದಾಗಿದ್ದಷ್ಟೂ ಲೇಸು. ಆದರೆ ಒಂದು ನಿಯಮವನ್ನು ಮರೆಯಕೂಡದು: ಪ್ರಬಂಧದ ಕೊನೆ, ಒಡೆಯನನ್ನು ಮೆಚ್ಚಿಸಬಯಸುವ ನಾಯಿಯ ಬಾಲದಂತೆ, ಸೊಗಸಾಗಿ, ತಮಾಷೆಯಾಗಿ, ಚಿಕ್ಕದಾಗಿದ್ದಷ್ಟೂ ಲೇಸು. ಕೊನೆಗೊಳಿಸುವುದರಲ್ಲಿರುವುದೇ ಪ್ರಬಂಧದ ರಹಸ್ಯ. ಬೇಗ ಸಾಯುವಂಥ ಪ್ರಬಂಧವೇ ಜನಪ್ರಿಯವಾಗುವುದು.

ಹೀಗೊಂದು ಓದು
ಒಮ್ಮೆ ಒಂದು ಕತೆ, ಕತೆಗಾರನನ್ನು ಬರೆಯಲು ಕುಳಿತಿತು. ಕಾಗದ ತೆಗೆದುಕೊಂಡು ಪೆನ್ನಿನ ಮೇಲೆ ಬರೆಯತೊಡಗಿತು. ಬರೆಯುತ್ತಿದ್ದಂತೆ ಓದುಗರ ಕಣ್ಣುಗಳು ಅಲ್ಲಿ ಮೂಡತೊಡಗಿದವು. ಆ ಕಣ್ಣುಗಳನ್ನು ಓದುಗರ ಮುಖದಲ್ಲಿದ್ದ ಅಕ್ಷರಗಳು ಓದಿದವು.

ಪ್ರತಿಮೆಗಳು
ನಮ್ಮ ಬೀದಿಯ ತಿರುವಿನಲ್ಲಿ ಒಂದು ಪಾರ್ಕ್ ಇದೆ. ಅಲ್ಲಿ ಮರವೊಂದರ ಸುತ್ತ ಕೈ ಕೈ ಹಿಡಿದು ಕುಣಿಯುತ್ತಿರುವಂತೆ ಕಾಣುವ ನಾಲ್ಕು ಕಲ್ಲಿನ ಮೂರ್ತಿಗಳನ್ನು ನಿಲ್ಲಿಸಿದ್ದಾರೆ. ಹಗಲಿನ ಬೆಳಕಿನಲ್ಲಿ ನಿಶ್ಚಲವಾಗಿರುವ ಅವು, ರಾತ್ರಿ ಯಾವುದೋ ಒಂದು ಹೊತ್ತಿನಲ್ಲಿ ಕುಣಿಯುತ್ತವೆ ಎಂದು ನನಗೆ ಗೊತ್ತಾಯಿತು. ಅದು ಹೇಗೆ ಗೊತ್ತಾಯಿತೆಂದು ನೀವು ಕೇಳಬಹುದು. ಹೀಗೆ:
ಮೊದಲು ಎಡಗಡೆಯ ಟೊಣಪನ ಕೈ ಪಕ್ಕದ ಸುಂದರಿಯ ಹೆಗಲ ಮೇಲೆ ಇತ್ತು. ಇಂದು ಬೆಳಗ್ಗೆ ಅದು ಎರಡಿಂಚು ಕೆಳಕ್ಕೆ ಸರಿದಿದೆ. ಬಲಗಡೆಯ ಮುದುಕಿಯ ಒಂದು ಹೆಗಲು ಆಕಾಶಕ್ಕೆ ಎತ್ತಿದಂತಿತ್ತು. ಅದು ಇಂದು ಬೆಳಗ್ಗೆ ಕೆಳಕ್ಕೆ ಜಗ್ಗಿ ಬೀಳುವಂತಾಗಿತ್ತು. ನಡುಮಧ್ಯದಲ್ಲಿದ್ದ ಒಬ್ಬ ತರುಣನ ಕಣ್ಣಂಚಿನಲ್ಲಿ ಇಂದು ಮುಂಜಾನೆ ಹನಿಗಳಿದ್ದವು.
ಅವು ಯಾಕೆ ಕುಣಿಯುತ್ತವೆ, ಹೇಗೆ ಅವುಗಳಿಗೆ ಜೀವ ಬರುತ್ತದೆ ಎಂದು ಊಹಿಸುವ ಕೆಲಸ ನಿಮ್ಮದು. ಕತೆ ನಿಮ್ಮದೂ ಆಗಬೇಕಾದರೆ ನೀವೂ ಕೊಂಚ ನನ್ನ ಜತೆ ಕೈಜೋಡಿಸಿ ಕುಣಿಯಬೇಕು ಅಲ್ಲವೆ?

- ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.