ಸಾಪ್ತಾಹಿಕಪ್ರಭ

ಮಾಂಗಲ್ಯ ತಂತು

'ಅಮೆರಿಕ, ರಷ್ಯಾದವರು ಮಂಗಳ ಗ್ರಹಕ್ಕೆ ಹೋಗಿದ್ದಾರೆ. ನಾವೂ ಯಾಕೆ ಒಂದು ಕೈ ನೋಡಿ ಬಿಡಬಾರದು? ಜಗತ್ತಿಗೂ ನಮ್ಮ ದೇಶದ ವಿಜ್ಞಾನ ಕ್ಷೇತ್ರ ಎಷ್ಟು...

ಮಾಂಗಲ್ಯ ತಂತು
Published On :

ಭಾಗ-1
ಒಂದು ಕನಸು

'ಅಮೆರಿಕ, ರಷ್ಯಾದವರು ಮಂಗಳ ಗ್ರಹಕ್ಕೆ ಹೋಗಿದ್ದಾರೆ. ನಾವೂ ಯಾಕೆ ಒಂದು ಕೈ ನೋಡಿ ಬಿಡಬಾರದು? ಜಗತ್ತಿಗೂ ನಮ್ಮ ದೇಶದ ವಿಜ್ಞಾನ ಕ್ಷೇತ್ರ ಎಷ್ಟು ಮುಂದುವರಿದಿದೆ ಎಂಬ ಸಂದೇಶ ಕೊಟ್ಟಂತಾಗುತ್ತದೆ'
- ಇಂಥ ಒಂದು ಮಹತ್ವಾಂಕ್ಷೆ ಇಸ್ರೋದ ವಿಜ್ಞಾನಿಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯಲು ಆರಂಭಿಸಿದ್ದು 'ಚಂದ್ರಯಾನ-1'ರ ಸಮಯದಲ್ಲಿ.
ಆದರೆ, ಅಂಗಾರಕನತ್ತ ದೃಷ್ಟಿ ಹಾಯಿಸುವುದು ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ, ಅದು ಯೋಜನಾ ಪೂರ್ವವಾಗಿಯೇ ಚರ್ಚೆಯಾಗುತ್ತಾ ಬಂದಿತ್ತು. ಚಂದ್ರಯಾನ-1 ಯಶಸ್ಸು ಕಂಡದ್ದು 2008ರಲ್ಲಿ. ಅದರ ಜತೆಗೆ 2007ರಲ್ಲಿಯೇ ಈ ಬಗ್ಗೆ ಪೂರ್ವಭಾವಿಯಾಗಿ ವಿಜ್ಞಾನಿಗಳ ನಡುವೆಯೇ 'ಇಂಥ ಒಂದು ಕೆಲಸವನ್ನು ಯಾವ ರೀತಿ ಕೈಗೊಳ್ಳಬಹುದು' ಎಂಬುದು ಚರ್ಚೆಯಾಗುತ್ತಲೇ ಇತ್ತು. ಆದರೆ ತಪಸ್ಸಿನ ರೂಪಕ್ಕೆ ಬಂದದ್ದೇ ಕೇವಲ ಒಂದೂಕಾಲು ವರ್ಷಗಳ ಹಿಂದೆ!

ಚೀನಾ ಪ್ರೇರಣೆ
ಸ್ನೇಹದ ಸವಿ ಗುಳಿಗೆಯ ನೆಪದಲ್ಲಿ ಸದಾ ನಮ್ಮ ದೇಶಕ್ಕೆ ಕಹಿ ಗುಳಿಗೆ ಕೊಡುವ ಚೀನಾ 2011ರಲ್ಲಿ ಕೆಂಪು ಗ್ರಹ ಅಧ್ಯಯನಕ್ಕೆ ಮುಂದಾಗಿತ್ತು. ಅದಕ್ಕೆ ಪೂರಕವಾಗಿ ದೊಡ್ಡ ಮಟ್ಟದಲ್ಲಿ ಯೋಜನೆ ಸಿದ್ಧಪಡಿಸಿ, ಅದನ್ನು ಜಾರಿಗೊಳಿಸಿತು. ಕಮ್ಯುನಿಸ್ಟ್ ರಾಷ್ಟ್ರದ ದುರದೃಷ್ಟವೋ, ಅವರ ಯೋಜನೆ ದಯನೀಯವಾಗಿ ವೈಫಲ್ಯ ಕಂಡಿತು! ನಮ್ಮ ವಿಜ್ಞಾನಿಗಳಿಗೆ ಹಿಂದಿನಿಂದಲೇ ಕೊರೆಯುತ್ತಿದ್ದ ಸ್ಫೂರ್ತಿಯೋ 'ನಾವು ಒಂದು ಕೈ ನೋಡಿಯೇ ಬಿಡೋಣ' ಎಂಬ ಅಂಬೋಣವೋ? ಅಂತೂ ಮಂಗಳನತ್ತ ಯಾತ್ರೆ ಮಾಡುವ ಬಗ್ಗೆ ಪೂರ್ವ ನಿರ್ಧಾರಕ್ಕೆ ಬಂದಿದ್ದರು.

ಪೂರ್ವ ಪ್ರಾಥಮಿಕ ವಿಚಾರ
ಯೋಜನೆ ಎಂದರೆ ಸುಮ್ಮನೆಯೇ? ಅದಕ್ಕೆ ಎಲ್ಲ ರೀತಿಯ ಲೆಕ್ಕಾಚಾರ ಹಾಕಬೇಕಾಗುತ್ತದೆ. ಗರಿಷ್ಠ ಮಟ್ಟದ ರಹಸ್ಯ ಕಾಪಾಡಿಕೊಳ್ಳಬೇಕು. ಎಷ್ಟು ಸಮಯದ ಮಿತಿಯಲ್ಲಿ ಗುರಿ ಸಾಧಿಸಬೇಕು ಇತ್ಯಾದಿ ವಿಚಾರಗಳ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ಅದಕ್ಕಾಗಿ ಇಸ್ರೋದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ವಿ. ಆದಿಮೂರ್ತಿಯವರ ಅಭಿಪ್ರಾಯ ಕೇಳಲಾಗಿತ್ತು. ಕೇವಲ ಮೂರೇ ತಿಂಗಳಲ್ಲಿ ಉದ್ದೇಶಿತ ಮಂಗಳ ಗ್ರಹದತ್ತ ಪಯಣಕ್ಕೆ ಅಗತ್ಯವಿರುವ ಕಾರ್ಯಸಾಧ್ಯತೆ ವರದಿ ಕೊಟ್ಟರು.

ದುಡ್ಡು ಕೊಡುವ!
'ಹೌದ! ಮಂಗಳ ಯಾನಕ್ಕೆ ನಮ್ದು ಸಪೋರ್ಟ್ ಉಂಟು. ಖರ್ಚಿಗೆ ಮಂಡೆಬಿಸಿ ಬೇಡ' ಹೀಗೆಂದು ಬೆಂಬಲದ ಬಲ ಕೊಟ್ಟದ್ದು ಕೇಂದ್ರ ಸರ್ಕಾರ. ಕಳೆದ ವರ್ಷದ ಜುಲೈನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕಿತ್ತು. ಅಂದ ಹಾಗೆ ಯೋಜನೆಗೆ ಅಧಿಕೃತ ಅಂಗೀಕಾರದ ಮುದ್ರೆ ಬಿದ್ದ ದಿನ 2012ರ ಆ.3. ಅಧಿಕೃತ ಘೋಷಣೆಯಾದದ್ದು 2012ರ ಆ.15ರಂದು ಪ್ರಧಾನಿ ಮನಮೋಹನ್ ಸಿಂಗ್‌ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ. ಇದು ಇಷ್ಟು ಆರಂಭಿಕ ಯಶಸ್ಸು ಕಂಡ 'ಮಂಗಳಯಾನ'ದ ಹಿಂದಿನ ಕಥೆ.

ಭಾಗ - 2
ಮುಂದೇನಾಗುತ್ತದೆ?

ಮಂಗಳಯಾನದ ಹಿಂದಿನ ಕಥೆಯೇನೋ ಕೇಳಿದಿರಿ. ಆದರೆ ಮುಂದಿನ ಕಥೆಯೂ ರೋಮಾಂಚನಕಾರಿ.
ಮಂಗಳಯಾನದ ಹಿಂದೆ ಎಷ್ಟು ಪರಿಶ್ರಮವಿತ್ತೋ, ಮುಂದೆಯೂ ಅಷ್ಟೇ ಪರಿಶ್ರಮವಿರಬೇಕು. ಏಕೆಂದರೆ, ಇದು ಸುದೀರ್ಘ 10 ತಿಂಗಳ ಯಾನ.
ಸದ್ಯ ಮಾರ್ಸ್ ಆರ್ಬಿಟರ್ ಮಿಷನ್ ಭೂಕಕ್ಷೆಯ ನಾಲ್ಕನೇ ಹಂತದಲ್ಲಿದೆ. ನವೆಂಬರ್ 5ಕ್ಕೆ ಹೊರಟಿರುವ ಅದು, ಸ್ವಲ್ಪ ಸ್ವಲ್ಪವೇ ಕಕ್ಷೆಯಲ್ಲಿ ಮೇಲ್ಪಂಕ್ತಿಗೆ ಹೋಗುತ್ತಿದೆ. ಇದು ನವೆಂಬರ್ 6ರಿಂದ ಆರಂಭವಾಗಿದ್ದು, ನ.16ರವರೆಗೂ ಮೇಲ್ಮುಖವಾಗಿ ಚಲಿಸುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಪ್ರತಿ ಸೆಕೆಂಡ್‌ಗೆ 1.5 ಕಿ.ಮೀ. ವೇಗವಿರುತ್ತದೆ.
ಈ ಹಂತಕ್ಕೆ ವೈಜ್ಞಾನಿಕವಾಗಿ ಕಕ್ಷೆಯ ಮೇಲ್ಮುಖ ವ್ಯೂಹರಚನೆ
(ಒಆರ್‌ಎಂ) ಎಂದು ಕರೆಯಲಾಗುತ್ತದೆ.
ಈ ಪ್ರಕಾರ,
ನ.30/ಡಿ.1
ಮಂಗಳಯಾನದಲ್ಲಿ ಅತ್ಯಂತ ವಿಶೇಷವಾದ ದಿನಗಳಿವು. ಮಂಗಳಯಾನದ ಮಿಷನ್ ಭೂಕಕ್ಷೆ ಬಿಟ್ಟು ಹೊರಡುವ ದಿನಗಳಿವು. ಕ್ಷಿಪಣಿ ಪಥ ಬಿಟ್ಟು ಹೊರಡುವ ಮಿಷನ್, ಪ್ರತಿ ಸೆಕೆಂಡ್‌ಗೆ 1.3 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಸಂಕೇತ ಸ್ಥಳಕ್ಕಾಗಿ 700 ಮಿಲಿಯನ್ ಕಿ.ಮೀ. ಪ್ರಯಾಣ ಆರಂಭಿಸುತ್ತದೆ.

ಡಿ.1 ರಿಂದ ಸೆ.23,2014
ನೌಕೆಯು ಕ್ಷಿಪಣಿ ಪಥದಲ್ಲೇ ಸಾಗುತ್ತದೆ. ಬೆಂಗಳೂರಿನಲ್ಲಿರುವ ಸಂಕೇತ ಸ್ವೀಕಾರ ಕೇಂದ್ರ, ಸಂದೇಶಗಳನ್ನು ಸ್ವೀಕರಿಸುತ್ತಲೇ ಇರುತ್ತದೆ. ಈ ಹಂತದಲ್ಲೇ ನೌಕೆಯ ಸ್ಥಿತಿಯೂ ಗೊತ್ತಾಗುತ್ತದೆ. ಕೆಲವೊಂದು ಭಾಗಗಳಿಗೆ ತೊಂದರೆಯಾದರೆ ಸರಿಪಡಿಸುವ ವ್ಯವಸ್ಥೆಯೂ ಇಲ್ಲೇ ಆಗಬೇಕು. ಅಲ್ಲದೆ ಇದನ್ನು ಸರಿಪಡಿಸಲು ಹೆಚ್ಚುವರಿ ಇಂಧನವನ್ನೂ ಉಪಯೋಗಿಸಬೇಕಾಗಿರುವುದರಿಂದ ಹುಶಾರಾಗಿಯೇ ಇರಬೇಕು. ಸೆ.24ರ ಹೊತ್ತಿಗೆ ನೌಕೆ ಮಂಗಳನ ಕಕ್ಷೆ ಪ್ರವೇಶಿಸುವ ಸಾಧ್ಯತೆ ಇದೆ. ಇಲ್ಲಿಗೆ ಪ್ರತಿ ಸೆಕೆಂಡ್‌ಗೆ 1.11 ವೇಗದಲ್ಲಿ ಸೇರುತ್ತದೆ. ಮಂಗಳನಲ್ಲಿ ಇದು ಎಷ್ಟು ದಿನ ಇರುತ್ತೆ ಎಂದು ಇಸ್ರೋ ಹೇಳಿಲ್ಲ. 6 ತಿಂಗಳು ಇರಬಹುದು ಎಂದೇ ಹೇಳಲಾಗಿದೆ.

ಜರ್ಮನಿಯ ರಾಕೆಟ್ ಎಂಜಿನಿಯರ್ ಡಾ.ವೆರ್ನ್ಹರ್ ವಾನ್ ಬ್ರೌನ್ ಅವರನ್ನು ಸ್ಮರಿಸಿಕೊಳ್ಳದಿದ್ದರೆ ಮಂಗಳಗ್ರಹದತ್ತ ಮಾನವನ ಪಯಣದ ಕಥೆ ಅಪೂರ್ಣವಾದೀತು. ಅಲ್ಲಿಗೆ ಹೇಗೆ ಪ್ರಯಾಣಿಸಬಹುದು ಎನ್ನುವ ಕುರಿತು ರೂಪುರೇಷೆ ಹಾಕಿಕೊಟ್ಟವರೇ ಈತ.
ಮಹಾಯುದ್ಧದ ಬಳಿಕ ಅವರು ಅಮೆರಿಕಕ್ಕೆ ವಲಸೆ ಹೋಗಿದ್ದರು. 1952ರಲ್ಲೇ ಮಂಗಳಗ್ರಹಕ್ಕೆ ಮಾನವನನ್ನು ಕಳುಹಿಸುವ ಕನಸನ್ನು ಅವರು ಕಂಡಿದ್ದರು. ಇದಕ್ಕಾಗಿ ಅವರು ಅಂತರ್‌ಗ್ರಹಗಳ ನಡುವೆ ಸಂಚರಿಸುವ ವ್ಯೋಮನೌಕೆಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಹೊಂದಿದ್ದರು. ಈ ನೌಕೆಗಳ ಒಟ್ಟು ತೂಕ ಸಾವಿರಾರು ಟನ್‌ಗಳಷ್ಟಿತ್ತು. ಆ ಕಾಲಕ್ಕೆ ಇಷ್ಟೊಂದು ದೊಡ್ಡ ನೌಕೆಯನ್ನು ಮಂಗಳದತ್ತ ಕಳುಹಿಸುವುದು ಬಿಡಿ, ಭೂಕಕ್ಷೆಗೂ ಕಳುಹಿಸುವ ಯೋಚನೆ ಅಮೆರಿಕಕ್ಕಿರಲಿಲ್ಲ. ಸರ್ಕಾರ ಕೂಡ ಯೋಜನೆ ಕುರಿತು ಆಸಕ್ತಿ ತೋರಲಿಲ್ಲ. ಹಾಗಾಗಿ 1952ರ ಅವಧಿಯಲ್ಲಿ ಮಂಗಳಯಾನ ಕನಸಾಗಿಯೇ ಉಳಿಯಿತು. ಅ.4, 1957ರಂದು ಅಂದಿನ ಸೋವಿಯತ್ ರಷ್ಯಾ ಮೊದಲ ಉಪಗ್ರಹ ಸ್ಪುಟ್ನಿಕ್ ಅನ್ನು ಭೂಕಕ್ಷೆಯಲ್ಲಿ ಕೂರಿಸಿತು. ಇದು ಬಾಹ್ಯಾಕಾಶ ಕ್ಷೇತ್ರದ ದಿಕ್ಕನ್ನೇ ಬದಲಾಯಿಸಿತು. ಅಲ್ಲಿಂದ ಶುರುವಾದ ಅಮೆರಿಕ ಮತ್ತು ರಷ್ಯಾದ ಬಾಹ್ಯಾಕಾಶ ಸ್ಪರ್ಧೆ ಮಂಗಳನಲ್ಲಿಗೆ ಮನುಷ್ಯರನ್ನು ಕಳುಹಿಸುವ ಮಟ್ಟಿಗೆ ಬೆಳೆಯಿತು. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಕೆಲ ವರ್ಷಗಳಲ್ಲಿ ನಾಸಾ ಮಂಗಳನಂಗಳದಲ್ಲಿ ಗಗನಯಾತ್ರಿಗಳನ್ನು ಇಳಿಸಲಿದೆ.

ಮಂಗಳವೇ ಏಕೆ ಕಾಡುತ್ತೆ?

  •     ಇತ್ತೀಚೆಗಷ್ಟೇ ಮಂಗಳಕ್ಕೆ ಹೋಗಿರುವ ನಾಸಾದ ಕ್ಯೂರಿಯಾಸಿಟಿ ನೌಕೆ, ಅಲ್ಲಿ ನೀರಿನ ಅಂಶವಿದೆ ಎಂದು ಹೇಳಿದೆ. ಹೀಗಾಗಿ ಮನುಷ್ಯನ ಬದುಕಿಗೆ ಇದು ಸಹಾಯವಾಗಬಹುದು ಎಂಬ ಕ್ಯೂರಿಯಾಸಿಟಿ ನಮ್ಮ ವಿಜ್ಞಾನಿಗಳಿಗೆ.
  •     ನೀರಷ್ಟೇ ಅಲ್ಲ, ಇಲ್ಲಿರುವ ಮಣ್ಣಲ್ಲಿ ಸಲ್ಫರ್ ಡೈ ಆಕ್ಸೈಡ್, ಇಂಗಾಲದ ಡೈ ಆಕ್ಸೈಡ್ ಮತ್ತು ಆಮ್ಲಜನಕವಿದೆಯಂತೆ.
  •     ಹಿಮದ ಅಂಶವೂ ಇಲ್ಲಿ ಪತ್ತೆಯಾಗಿದೆಯಂತೆ.
  •     ಭೂಮಿ ಬಿಟ್ಟರೆ ಮಂಗಳವೊಂದೇ 24 ಗಂಟೆಗಳನ್ನೊಳಗೊಂಡ ದಿನವನ್ನು ಹೊಂದಿದೆ. ಇಲ್ಲಿನ ತಾಪಮಾನ ಕೂಡ ಭೂಮಿಯನ್ನು ಹೋಲುತ್ತದೆ.
ಮಂಗಳನ ಪರಿಚಯ
  •     ರೋಮ್‌ನ ಸಮರ ದೇವತೆಯ ಹೆಸರೇ ಈ ಮಂಗಳ(ಮಾರ್ಸ್)
  •     ಮಂಗಳನಲ್ಲಿ ಒಂದು ವರ್ಷವೆಂದರೆ ಭೂಮಿಯಲ್ಲಿ 687 ದಿನ
  •     ಭೂಮಿಯಿಂದ ಮಂಗಳಕ್ಕೆ 378 ದಶಲಕ್ಷ ಕಿ.ಮೀ.
  •     ತಾಪಮಾನ ಕನಿಷ್ಠ - 0 ಸೆಲ್ಸಿಯಸ್
  •      ಗರಿಷ್ಠ - 100 ಸೆಲ್ಸಿಯಸ್
  •     ಮಂಗಳನಿಗೆ 2 ಚಂದ್ರಗಳಿವೆ.
ಸಂಖ್ಯಾಶಾಸ್ತ್ರ
ಜ್ಯೋತಿಷ್ಯಶಾಸ್ತ್ರ
ಚಂದ್ರಯಾನ ಮುಂದಕ್ಕೆ
ಬೆಂಗಳೂರಿನ ಪ್ರಮುಖ ಪಾತ್ರ
ಮಂಗಳವೊಂದು, ನೌಕೆ ಎರಡು!
ಮಂಗಳನ ಬಗ್ಗೆ ಬುಕ್ಕು, ಸಿನಿಮಾ, ಟಾಕು...
ಪುಸ್ತಕಗಳು
  •     1898ರಲ್ಲಿ ಎಚ್.ಜಿ. ವೆಲ್ಸ್ 'ದಿ ವಾರ್ ಆಫ್ ದಿ ಕಲ್ಚರ್‌' ಎಂಬ ಪುಸ್ತಕ ಬರೆಯುವ ಮೂಲಕ ಮಂಗಳನ ಕುರಿತ ಕಲ್ಪನಾ ಲೋಕ ಬಿಚ್ಚಿಟ್ಟರು. ಈ ಪುಸ್ತಕದಲ್ಲಿ ಮಂಗಳನ ಅಂಗಳದ ಜನ ಇಲ್ಲಿಗೆ ಬರುತ್ತಾರೆ, ಅವರೇ ಏಲಿಯನ್‌ಗಳು ಎಂಬ ವಿವರಗಳೂ ಇದ್ದವು.
  •     ಓರ್ಶನ್ ವೆಲ್ಲಾಸ್ ಎಂಬ ಕಾದಂಬರಿ 1930ರಲ್ಲಿ ಪ್ರಕಟವಾಗಿದ್ದು, ರೇಡಿಯೋದಲ್ಲೂ ಈ ಬಗ್ಗೆ ಪ್ರಸಾರವಾಗಿತ್ತು. ಜನ ಯಾವ ಲೆಕ್ಕಾಚಾರದಲ್ಲಿ ಬೆದರಿದ್ದರೆಂದರೆ, ಹಾಲೋವೀನ್‌ಗೂ ಮುನ್ನ ಬೀದಿಗೆ ಓಡಿಬಂದಿದ್ದರಂತೆ.
  •     ಇದೇ ಕಾದಂಬರಿಯನ್ನು ಟಾಮ್ ಕ್ರೂಸ್ ಅವರನ್ನು ಹಾಕಿಕೊಂಡು 2005ರಲ್ಲಿ ಸಿನಿಮಾ ಮಾಡಲಾಗಿತ್ತು.
  • ಸಾಹಿತ್ಯ
  •     1950ರಲ್ಲಿ ಮಾರ್ಷಿಯನ್ ಕ್ರಾನಿಕಲ್ಸ್ ಅನ್ನು ರೇ ಬ್ರಾಡ್‌ಬರಿ ಎಂಬಾತ ಬರೆದಿದ್ದರು.
  •     ಗಲಿವರ್ಸ್ ಟ್ರಾವೆಲ್ಸ್ ಎಂಬ ಲೇಖನವನ್ನು 1726ರಲ್ಲಿ ಜೋನಾಥನ್ ಸ್ವಿಫ್ಟ್ ಬರೆದಿದ್ದರು. ಇದನ್ನು ಮಂಗಳ ಗ್ರಹವನ್ನು ಹುಡುಕುವ 100 ವರ್ಷಗಳ ಮುನ್ನವೇ ಬರೆಯಲಾಗಿತ್ತು.
ಸಿನಿಮಾ
  •     ಮಾರ್ಸ್ ಆಟ್ಯಾಕ್(1960)
  •     ಟೋಟಲ್ ರೀಕಾಲ್(1990)
  •     ಜಾನ್ ಕಾರ್ಟರ್(2012)
  •     ಮಿಷನ್ ಟು ಮಾರ್ಸ್(2000)
  •     ರೆಡ್ ಪ್ಲಾನೆಟ್(2000)
  •     ದೂಮ್(2005)
  •     ಲಾಸ್ಟ್ ಆನ್ ಮಾರ್ಸ್(2002)
  •     ಗೋಸ್ಟ್ ಆನ್ ಮಾರ್ಸ್(2001)
  •     ಮೈ ಫೆವರೇಟ್ ಮಾರ್ಷಿಯನ್(1999)
  •     ಸ್ಪೀಸಿಸ್ 2 (1998)
ಯಶಸ್ಸಿನ ನೇತಾರರು
  • ಡಾ.ಕೆ.ರಾಧಾಕೃಷ್ಣನ್: ಇಸ್ರೋ ಅಧ್ಯಕ್ಷರಾಗಿರುವ ಅವರು ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ. ಒಟ್ಟಾರೆ ಯೋಜನೆ ತಂಡವನ್ನು ಹುರಿದುಂಬಿಸಿ ಮುನ್ನುಗ್ಗಿಸುವ ಹೊಣೆ ಅವರ ಮೇಲಿತ್ತು.
  • ಎಂ.ಅಣ್ಣಾದೊರೆ:  ಮಂಗಳಯಾನದ ಯೋಜನಾ ನಿರ್ದೇಶಕ. ಖರ್ಚು ವೆಚ್ಚಗಳ ಮೇಲೆ ನಿಗಾ ಇರಿಸುವ ಹೊಣೆ, ವೇಳಾಪಟ್ಟಿ ನಿಗದಿ ಮತ್ತು ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು ಅವರ ಹೊಣೆಯಾಗಿತ್ತು.
  • ಎಸ್.ರಾಮಕೃಷ್ಣನ್:  ವಿಕ್ರಂ ಸಾರಾಭಾಯಿ ವ್ಯೋಮ ಕೇಂದ್ರ ಮತ್ತು ಮಂಗಳಯಾನಕ್ಕೆ ಅನುಮತಿ ನೀಡುವ ಸಮಿತಿ ಸದಸ್ಯ. ಅವರು ಉಡಾವಣಾ ವಾಹಕದ ತಾಂತ್ರಿಕ ವಿಚಾರಕ್ಕೆ ಸಂಬಂಧಿಸಿದ ನೇತೃತ್ವ ವಹಿಸಿದ್ದರು.
  • ಡಾ.ಎಸ್.ಕೆ.ಶಿವಕುಮಾರ್:  ಇಸ್ರೋದ ಉಪಗ್ರಹ ಕೇಂದ್ರದ ನಿರ್ದೇಶಕ. ಯೋಜನೆಗಾಗಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಹೊಣೆ ಅವರ ಮೇಲಿತ್ತು.
  • ಪಿ.ಕುಞಕೃಷ್ಣನ್:  ಒಂಬತ್ತನೇ ಬಾರಿಗೆ ಯೋಜನಾ ನಿರ್ದೇಶಕರಾಗಿರುವ ಹೆಗ್ಗಳಿಕೆ ಅವರದ್ದು. ಪಿಎಸ್‌ಎಲ್‌ವಿ ಪ್ರೊಗ್ರಾಮರ್. ಗಗನನೌಕೆ ವ್ಯತ್ಯಾಸವಾಗದಂತೆ ಕಕ್ಷೆಗೆ ಸೇರಿಸುವ ಹೊಣೆ ಅವರದ್ದು.
  • ಚಂದ್ರದಾತನ್:  ದ್ರವೀಕೃತ ಮುನ್ನೂಕುವಿಕಾ ವ್ಯವಸ್ಥೆ (ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್)ಯ ನಿರ್ದೇಶಕ.
  • ಎ.ಎಸ್.ಕಿರಣ್‌ಕುಮಾರ್:  ಉಪಗ್ರಹ ವ್ಯವಸ್ಥಾಪನಾ ಕೇಂದ್ರ (ಸ್ಯಾಟಲೈಟ್ ಅಪ್ಲಿಕೇಶನ್ ಸೆಂಟರ್)ದ ನಿರ್ದೇಶಕ. ಮೂರು ಕಕ್ಷಾ ಪೇಲೋಡ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿಯ ಹೊಣೆ.
  • ಎಂ.ವೈ.ಎಸ್.ಪ್ರಸಾದ್: ಸತೀಶ್ ಧವನ್ ಉಡಾವಣಾ ಕೇಂದ್ರ (ಉಪಗ್ರಹ ಉಡಾವಣಾ ಕೇಂದ್ರ, ಶ್ರೀಹರಿಕೋಟಾ) ಮತ್ತು ಮಂಗಳಯಾನ ಯೋಜನೆಗೆ ಅನುಮತಿ ನೀಡುವ ಸಮಿತಿ ಮುಖ್ಯಸ್ಥ. ಉಡಾವಣಾ ಕೇಂದ್ರದಲ್ಲಿನ ಎಲ್ಲ ವ್ಯವಸ್ಥೆಯ ನೇತೃತ್ವ.
  • ಎಸ್.ಅರುಣನ್:  ಮಂಗಳ ಯಾನ (ಮಾಸ್ ಆರ್ಬಿಟರ್ ಮಿಶನ್)ದ ಯೋಜನಾ ನಿರ್ದೇಶಕ. ವ್ಯೋಮನೌಕೆ ನಿರ್ಮಾಣ ತಂಡದ ನೇತೃತ್ವ. ಎಲ್ಲ ಪೇಲೋಡ್‌ಗಳು ಕಕ್ಷೆಗೆ ಸೇರುವಂತಾಗಲು ಎಲ್ಲ ಇಸ್ರೋ ಕೇಂದ್ರಗಳ ಜತೆ ಸಮನ್ವಯ ಸಾಧಿಸುವುದು ಅವರ ಹೊಣೆಯಾಗಿತ್ತು.
- ಸದಾಶಿವ ಕೆ./ಅಜಿತ್/ಸೋಮಶೇಖರ ಸಿ.ಜೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.