ಸಾಪ್ತಾಹಿಕಪ್ರಭ

ರೇ ಹೆಮ್ಮರದ ಬಾಡದ ಬಳ್ಳಿ

ರೇ ಹೆಮ್ಮರದ ಬಾಡದ ಬಳ್ಳಿ
Published On :

ಸಿನಿಮಾ ಪ್ರಪಂಚಕ್ಕೆ ಭಾರತೀಯ ಚಿತ್ರರಂಗದ ಬಹು ದೊಡ್ಡ ಕೊಡುಗೆಗಳಲ್ಲಿ ನಿರ್ದೇಶಕ ಸತ್ಯಜಿತ್ ರೇ ಬಹು ಮುಖ್ಯ ನಕ್ಷತ್ರ. ಸಿನಿಮಾ ದೃಶ್ಯ ಕಲೆಗೆ ಮತ್ತೊಂದು ಹೆಸರು ಎನ್ನುವಂತೆ ಮೂಡಿ ಬಂದಿರುವ ಅವರ ಪ್ರತಿ ಚಿತ್ರವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ನೆಲದ ಸೊಗಡನ್ನು ಬಿಂಬಿಸಿವೆ. ವಾಣಿಜ್ಯವೇ ಪ್ರಧಾನ, ಹಣವೇ ಮುಖ್ಯ ಎಂದು ಅಕಾಶದಲ್ಲಿ ತಿರುಗುತ್ತಿದ್ದ ಸಿನಿಮಾ ಪರದೆಯನ್ನು ಧರೆಗಿಳಿಸಿದವರು ಸತ್ಯಜಿತ್. ಆ ಮೂಲಕ 'ಸಿನಿಮಾ ಎಲ್ಲಿಂದಲೋ ಉದುರಿ ಬಂದ ಕಿಡಿ ಅಲ್ಲ, ಅದು ನಮ್ಮೊಳಗಿನ ಜೀವನ, ಸುಖ ದುಃಖ, ಸಂತೋಷ, ಬದುಕಿನ ರೀತಿಗಳನ್ನು ಒಳಗೊಂಡಿರುವ ಸಾಮಾನ್ಯ ಜನರ ಕಲಾ ಮಾಧ್ಯಮ' ಎಂದವರು ರೇ.
ತನ್ನ 38 ವರ್ಷ ಸಿನಿ ಜೀವನದ ಪಯಣದಲ್ಲಿ 'ಪಥೇರ್ ಪಾಂಚಾಲಿ' ಚಿತ್ರದಿಂದ ಆರಂಭಗೊಂಡು, 'ಅಂಗತುಕ್‌' ಚಿತ್ರದವರೆಗೂ 30ಕ್ಕು ಹೆಚ್ಚು ಚಿತ್ರಗಳನ್ನು ಕೊಟ್ಟಿದ್ದಾರೆ. ದೇಶ, ವಿದೇಶ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನು ಗಳಿಸಿದ್ದಾವೆ ಎನ್ನುವ ವ್ಯಾಖ್ಯಾನಕ್ಕೆ ಮಾತ್ರ ಸತ್ಯಜಿತ್ ಚಿತ್ರಗಳು ಸೀಮಿತವಲ್ಲ. ಮಧ್ಯಮ ವರ್ಗದ ಜನರ ತಳಮಳಗಳನ್ನು ಸ್ಪರ್ಶಿಸುತ್ತಲೇ ಕಾಲೋನಿ ಬಿಟ್ಟು ಗಲ್ಲಿಗೂ ಇಳಿಯುವ ರೇ ಸಿನಿಮಾ ಕಥೆಗಳು ಯಾರಿಗೆ ತಾನೆ ಮೆಚ್ಚುಗೆಯಾಗಲ್ಲ? ರೇ ನಮ್ಮ ನೆಲದಲ್ಲೇ ಹುಟ್ಟಿದ್ದು ಭಾರತೀಯ ಚಿತ್ರರಂಗಕ್ಕೆ ಮಾತ್ರವಲ್ಲೇ ಪ್ರತಿಯೊಬ್ಬ ಚಿತ್ರ ಪ್ರೇಮಿಯ ಪುಣ್ಯ. ಸತ್ಯಜಿತ್ ರೇ ಅವರು ಕೊಟ್ಟ ಹತ್ತಾರು ಸಿನಿಮಾ ಮುತ್ತಗಳಲ್ಲಿ 'ಚಾರುಲತಾ' ನಮ್ಮ ಗಮನ ಸೆಳೆಯದೆ ಇರದು. ಭಾವನೆಗಳ ದಡದಲ್ಲಿ ಅರಳುವ ಚಿತ್ರ ಇದು.
 ಒಂದು ಸ್ತ್ರೀ ಪಾತ್ರದ ಮೂಲಕ ಸತ್ಯಜಿತ್ ಗಾಢವಾಗಿ ಪ್ರೇಕ್ಷಕನನ್ನು ಮುಟ್ಟುತ್ತಾರೆ. ಹೆಣ್ಣಿನ ಪಾತ್ರದ ಸುತ್ತ ಬೇರೆ ಬೇರೆ ಪಾತ್ರಗಳನ್ನು ಕಟ್ಟಿಕೊಟ್ಟರೂ ಪ್ರತಿ ದೃಶ್ಯವನ್ನೂ ಆಕೆಯ ನೆರಳಿನಲ್ಲಿ ನಿರೂಪಿಸುತ್ತ ಹೋಗುತ್ತಾರೆ. ಚಾರುಲತಾ ಪಾತ್ರವನ್ನು ತುಂಬಾ ಆಪ್ತವಾಗಿ ಅಧ್ಯಯನ ಮಾಡಿಯೇ ರೇ, ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಂದು ಹೆಣ್ಣಿನ ಒಂಟಿತನ, ಅವಳ ಮಾನಸಿಕ ತಳಮಳಗಳು, ಮನಸ್ಸಿನೊಳಗಿನ ಕೊರಗು, ಹೇಳಿಕೊಳ್ಳಲಾಗದ ಭಾವನೆಗಳು ಅಷ್ಟೇ ಭಾವುಕತೆಯಲ್ಲಿ ತೆರೆದುಕೊಳ್ಳುತ್ತವೆ. ಹೆಣ್ಣಿನ ಸ್ಥಿತಿಯನ್ನು ಈ ಮಟ್ಟಕ್ಕೆ ಪ್ರೇಕ್ಷಕನಿಗೆ ಹತ್ತಿರವಾಗಿಸುವ ಸತ್ಯಜಿತ್, ವಾಸ್ತವದಲ್ಲಿ ಎಂದೂ ಸ್ತ್ರೀವಾದವನ್ನಿಟ್ಟುಕೊಂಡು ಪ್ರತ್ಯೇಕ ಚಿತ್ರ ಮಾಡಲಿಲ್ಲ. ಆದರೆ, ಅವರ ಪ್ರತಿ ಚಿತ್ರಗಳಲ್ಲೂ ಹೆಣ್ಣಿನ ಪಾತ್ರವನ್ನು ವಿಶೇಷವಾಗಿ ಸಂಯೋಜಿಸಿರುತ್ತಾರೆ. ಹೀಗಾಗಿ ರೇ ಚಿತ್ರಗಳಲ್ಲಿ ಕಾಣುವ ಮಹಿಳಾ ಪಾತ್ರಗಳು ಕೇವಲ ಪ್ರದರ್ಶನದ ಗೊಂಬೆಗಳಲ್ಲ. ಮನಸ್ಸಿರುವ ಮನುಷ್ಯರು. ಇನ್ನು 'ಚಾರುಲತಾ' ಚಿತ್ರದ ಕಥೆ ಮೂಲಕ ಬೆಂಗಾಲಿ ಮಾತ್ರವಲ್ಲ, ನಮ್ಮ ನೆಲದ ಪ್ರತಿಯೊಂದು ಮಧ್ಯಮ ವರ್ಗದ ಕುಟುಂಬದ ಬದುಕನ್ನು ತೆರೆದಿಟ್ಟಿದ್ದಾರೆ. ಇದು ಸಾಮಾನ್ಯ ಹಾಗೂ ಮಧ್ಯಮರ್ಗದ ಮಹಿಳೆಯರು ಅನುಭವಿಸುತ್ತಿರುವ ಬದುಕಿನ ಚಿತ್ರಣ.
  1879ರ ಬೆಂಗಾಲಿ ಕುಟುಂಬವೊಂದರ ಕಥೆ ಇಲ್ಲಿದೆ. ಅಂದಹಾಗೆ ಇದು ರವಿಂದ್ರನಾಥ್ ಠಾಗೂರ್ ಬರೆದ ಕಥೆಯನ್ನು ಆಧರಿಸಿದ ಚಿತ್ರ. 1958ರಲ್ಲಿ ಠಾಗೂರ್ ಅವರ ಜೀವನ ಚರಿತ್ರೆಯನ್ನು ಸಂಶೋಧನೆ ಮಾಡಲು ಹೊರಟ ಸತ್ಯಜಿತ್‌ರಿಗೆ 'ನಾಸ್ತನಿರ್‌' ಎನ್ನುವ ಸಣ್ಣ ಕಾದಂಬರಿ ಸಿಗುತ್ತದೆ. ಇದರಲ್ಲಿ ಠಾಗೂರ್‌ರ ಜೀವನದ ಕೆಲ ಸನ್ನಿವೇಶಗಳನ್ನು ನೋಡಿದ ರೇ, ಇದನ್ನೇ ಸಿನಿಮಾ ಮಾಡುವ ಯೋಚನೆ ಮಾಡಿ ಅದಕ್ಕೆ ಚಿತ್ರಕಥೆ ಬರೆದರು. ಆದರೆ, ಚಿತ್ರಕ್ಕೆ ಚಾರುಲತಾ ಪಾತ್ರಧಾರಿಗೆ ತಾನು ಅಂದುಕೊಂಡ ನಟಿ ಸಿಗದಿದ್ದಕ್ಕೆ ಕಥೆಯನ್ನು ಬದಿಗಿಟ್ಟರು. ಹೀಗೆ ಮೂರು ವರ್ಷ ಮೂಲೆಗೆ ಬಿದ್ದ ಕಥೆಗೆ ಮತ್ತೆ ಜೀವ ಬಂದಿದ್ದು ಚಾರುಲತಾ ಪಾತ್ರಧಾರಿ ಸಿಕ್ಕ ಮೇಲೆ. ಮಾಧವಿ ಮುಖರ್ಜಿ ಅವರನ್ನು ನೋಡಿದ ಸತ್ಯಜಿತ್‌ರಿಗೆ, ಭಾರತೀಯ ಸ್ತ್ರೀಯೊಬ್ಬಳಿಗೆ ಇರಬೇಕಾದ ಗುಣ, ಲಕ್ಷಣಗಳು ಕಂಡಿದ್ದರಿಂದ 'ಚಾರುಲತಾ' ಚಿತ್ರವನ್ನು ಕೈಗೆತ್ತಿಕೊಂಡರು. ಕೋಲ್ಕತ್ತ ನಗರದ ಒಂದು ಮಧ್ಯಮವರ್ಗದ ಕುಟುಂಬ. ಮನೆ ಯಜಮಾನ ಭೂಪತಿ ದತ್ತು ತಾನೇ ನಡೆಸುವ ಒಂದು ಪತ್ರಿಕೆಯ ಸಂಪಾದಕ. ಈತನ ಪತ್ನಿಯೇ ಚಾರುಲತಾ. ಆದರೆ ಭೂಪತಿಗೆ ಮನೆ, ಹೆಂಡತಿ, ಸಂಸಾರಕ್ಕಿಂತ ಪತ್ರಿಕೆ, ಹೊರಗಿನ ಜಗತ್ತೇ ಹೆಚ್ಚಾಗುತ್ತದೆ. ಹೀಗಾಗಿ ದೊಡ್ಡ ಸಂಸಾರದಲ್ಲಿ ಚಾರುಲತಾಗೆ ತಾನೊಬ್ಬ ಒಂಟಿ ಹಕ್ಕಿ ಎನ್ನುವ ಭಾವನೆ ಕಾಡತೊಡಗುತ್ತದೆ.
 ಈ ನಡುವೆ ರಜೆ ದಿಗಳನ್ನು ಕಳೆಯಲು ಭೂಪತಿ ಸೋದರ ಸಂಬಂಧಿ ಅಮುಲ್ ಮನೆಗೆ ಬರುತ್ತಾನೆ. ಮೊದಲೇ ಸಾಹಿತ್ಯದ ಅಭಿಮಾನಿಯಾಗಿರುವ ಅಮುಲ್, ಬಹುಬೇಗ ಚಾರುಲತಾಳಿಗೆ ಸನಿಹವಾಗುತ್ತಾನೆ. ಇಬ್ಬರ ಗೆಳೆತನ ಬೇರೊಂದು ದಾರಿಯತ್ತ ಸಾಗುತ್ತದೆ. ಅಷ್ಟರಲ್ಲಿ ತನ್ನ ಮ್ಯಾನೇಜರ್‌ನಿಂದ ಭೂಪತಿ ಮೋಸ ಹೋಗಿರುತ್ತಾನೆ. ಇದನ್ನು ಅಮುಲ್ ಬಳಿ ಹೇಳಿ  ಕಣ್ಣೀರಾಗುತ್ತಾನೆ ಭೂಪತಿ. ಈ ಹೊತ್ತಿಗೆ ಅಮುಲ್ ಮತ್ತು ಚಾರುಲತಾ ನಡುವಿನ ಸಲಿಗೆ ಹೆಚ್ಚಾಗಿರುತ್ತದೆ. ಇದನ್ನರಿತ ಅಮುಲ್, 'ಅಣ್ಣನ ಸಂಸಾರ ತನ್ನಿಂದ ಮತ್ತಷ್ಟು  ಸಂಕಷ್ಟಕ್ಕೆ ಸಿಲುಕಬಾರದು' ಎಂದುಕೊಂಡು ಹೇಳದೆ ಮನೆ ತೊರೆಯುತ್ತಾನೆ.
  ಅಮುಲ್ ಪತ್ರವನ್ನು ಕೈಯಲ್ಲಿಡಿದು ದುಃಖ ಭರಿತವಾಗಿರುವ ಪತ್ನಿಯನ್ನು ನೋಡಿ ಭೂಪತಿ ಮೌನವಾಗಿಯೇ ಹೊರ ನಡೆಯುತ್ತಾನೆ. ಮತ್ತೆ ಬಂದು ಪತ್ನಿಯನ್ನು ತನ್ನೊಟ್ಟಿಗೆ ಕರೆದೊಯ್ಯಲು ಯತ್ನಿಸಿದಾಗ ಚಾರುಲತಾ ಒಪ್ಪಲ್ಲ. ಅಲ್ಲಿಗೆ ಇಬ್ಬರ ಸಂಬಂಧ ಮುರಿದು ಬೀಳುತ್ತದೆ. ಇದು ಮೂಲ ಕಥೆ. ಆದರೆ, ಅದನ್ನ ಸತ್ಯಜಿತ್ ಇಲ್ಲಿ ಬದಲಾಯಿಸಿದ್ದಾರೆ. ಮನೆಯಿಂದ ಆಚೆ ಹೋದ ಭೂಪತಿ ಮತ್ತೆ ಬರುತ್ತಾನೆ. ಪತ್ನಿ ಸಂತಸದಿಂದಲೇ ಮನೆಯೊಳಗೆ ಬರುವಂತೆ ಸೂಚಿಸುತ್ತಾಳೆ. ಪರಸ್ಪರ ಇಬ್ಬರು ತಮ್ಮ ಕೈಗಳನ್ನು ತಮ್ಮತ್ತ ಚಾಚುತ್ತಾರೆ. ಮದುವೆಯಾದ ಒಂದು ಹೆಣ್ಣು ತಾನು ಒಂಟಿ ಎನಿಸುವಾಗಿನ ಮನಸ್ಸಿನ ತುಮುಲಗಳು, ಭಾವನೆಗಳು ಹಾಗೂ ತನ್ನ ಜೊತೆ ಬೆರೆತು ಒಂಟಿತನವನ್ನು ದೂರ ಮಾಡುವ ಗಂಡಸಿನ ಬಗ್ಗೆ ಆಕೆ ತಾಳುವ ನಿಲುವುಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ಅದೇ ಸಂದರ್ಭದಲ್ಲಿ ಅದು ಎಲ್ಲೂ ಹದ್ದು ಮೀರದಂತೆ  ನೋಡಿಕೊಂಡಿರುವುದು ನಿರ್ದೇಶಕನ ಬಹುದೊಡ್ಡ ಶಕ್ತಿ. ಬೆಳ್ಳಿತೆರೆಯ ಕಡು ವ್ಯಾಮೋಹಿಯಂತೆ ರೂಪಿಸಿರುವ 'ಚಾರುಲತಾ' ಚಿತ್ರವನ್ನು ನೋಡದವರುಂಟೆ?

ಚಿತ್ರ: ಚಾರುಲತಾ (1964)
ಭಾಷೆ: ಬೆಂಗಾಲಿ
ನಿರ್ದೇಶನ: ಸತ್ಯಜಿತ್ ರೇ
ಅವಧಿ: 177 ನಿಮಿಷ
ತಾರಾಗಣ: ಸೌಮಿತ್ರ ಚಟರ್ಜಿ, ಮುಖರ್ಜಿ, ಮಾಧವಿ ಮುಖರ್ಜಿ, ದಿಲಿಪ್ ಬೋಸ್.

- ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.