

ಅಂತೂ ರಮೇಶ ನಾಳೆ ನಾಡಿದ್ದೇ ಪೋಲೀಸ್ ಔಟ್‌ಪೋಸ್ಟಿಗೆ ಬಂದು ಶಸ್ತ್ರಾಸ್ತ್ರ ಒಪ್ಪಿಸಿ ಶರಣಾಗುವುದಾಗಿ ಒಪ್ಪಿಕೊಂಡಿದ್ದ. ಯುಗ ಗೆದ್ದ ಸಂತೋಷ ನನ್ನದು. ಆ ದಿನ ತ್ರಿಕಾಲ ಸತ್ಯ ಎನ್ನಿಸಿಕೊಂಡಿರುವ ಶೋಷಣೆ ಮತ್ತು ಪ್ರತೀಕಾರದ ಮೇಲೇ ನನ್ನ ಮತ್ತು ಅವನ ನಡುವೆ ಚರ್ಚೆ ಆರಂಭವಾಗಿತ್ತು. ಏನಾದರೇನು ಒಟ್ಟಿಗೆ ಒಪ್ಪಿದನಲ್ಲಾ ಎಂಬ ಸಂತೋಷದ ಜೊತೆಗೆ ಜಗತ್ತಿನಿಂದಲೇ ನಕ್ಸಲರು ಮತ್ತು ನಕ್ಸಲ್‌ವಾದ ಮರೆಯಾದಂತೆ ಭ್ರಮೆಯಲ್ಲಿರುವಾಗಲೇ ಚಾದಂಗಡಿಯ ತಿಮ್ಮಪ್ಪ ಭಟ್ಟರು ಎದುರಿಗೆ ನಿಂತಿದ್ದರು.
'ಹ್ಯಾಗಿದೆ ಭಟ್ಟರೇ ವ್ಯಾಪಾರ...?'. 'ವ್ಯಾಪಾರ ಅಡ್ಡಿಲ್ಲಾ ಮಾರಾಯ ಮೊದ್ಲಿಗಿಂತ ಚೆನ್ನಾಗಿತ್ತ್. ಅದೂ ಈ ನಕ್ಸಲ್ ಪೊಲೀಸ್ರು ಬಂದ ಮ್ಯಾಲೆ... ದಿನಕ್ಕೆ ಒಂದು ಐದು ಕೇಜಿ ಅಕ್ಕಿ ಚಿತ್ರಾನ್ನ ಖಾಲಿ ಆತ್ತ್'. ಕವಳದ ರಸ ತುಂಬಿದ ಬಾಯಲ್ಲಿ ಚೂರೂ ಒಸರದಂತೆ ಎಚ್ಚರದಿಂದ ಹೇಳಿ ಸರಸರನೆ ಎದುರಿನ ಮರದ ಹತ್ತಿರ ಹೋಗಿ ಪಿಚಕ್ಕೆನಿಸಿ ಬಂದು ಮತ್ತೆ ಶುರುಮಾಡಿದರು, 'ಮೊದ್ಲಿಗಿಂತ ಅಡ್ಡಿಲ್ಲ.. ಮೊದ್ಲಾದ್ರೆ ಕಟ್ಟಿಗೆ ಹೊರೋ ಹೆಂಗಸ್ರು ಬರ್ತಿದ್ರು. ಈಗ ಈ ಸಮಸ್ಯೆ ಸುರುವಾದ ಮೇಲೆ ಯಾರೂ ಕಾಡಿಗೆ ಹೋಪುದಿಲ್ಲೆ. ಫಾರೆಸ್ಟ್ ಡಿಪಾರ್ಟ್‌ಮೆಂಟಿನ ಫಾರೆಷ್ಟ್ರು, ಗಾರ್ಡ್, ವಾಚರ್ ಕೂಡ ಈ ಬದಿಗೆ ಬಪ್ಪುದು ಬಿಟ್ಟೀರು'. ಅವರ ಮಾತಿನ ಮಧ್ಯ ನಾನಂದೆ 'ಹಾಗಾದ್ರೆ ಕಾಡಿನ ಗತಿ..'. 'ಅದೆಂಥದೂ ಇಲ್ಲೆ. ಕಳ್ಳ ನಾಟ ಕಡುವವರೂ ಈಗ ಹೆದರಿ ಕಾಡಿಗೆ ಹೋಗುದಿಲ್ಲೆ..'. ಒಳಕ್ಕೆ ಹೋಗಿ ಸ್ಟೌ ಮೇಲೆ ಚಹಾಕ್ಕೆ ನೀರಿಟ್ಟು ದಬದಬನೆ ನಾಲ್ಕಾರು ಬಾರಿ ಪಂಪು ಹೊಡೆದರು. ಸ್ಟೌ ಭರ್ರೋ.. ಎಂದು ಸದ್ದು ಮಾಡತೊಡಗಿತು. ಅಡುಗೆ ಕಟ್ಟೆಯಿಂದ ಈಚೆ ಬಂದು ನನ್ನ ಹತ್ತಿರವೇ ನಿಂತು ಹೆಗಲಿನ ಮೇಲಿನ ಪಾಣಿಪಂಚೆಯಿಂದ ಮುಖದ ಬೆವರೊರೆಸಿಕೊಂಡು ಬಾಯಲ್ಲಿನ ಕವಳ ಜಗಿಯುತ್ತಾ ಭುಜದ ಮೇಲಿನಿಂದ ಕೆಳಗಿಳಿಯುತ್ತಿದ್ದ ಜನಿವಾರವನ್ನು ಅದರ ಸ್ವಸ್ಥಾನಕ್ಕೇರಿಸಿದರು. ಎದುರಿಗಿದ್ದ ಕಲ್ಲಿನ ಬಾನೆಯಲ್ಲಿ ಕಟ್ಟೆಯ ಮೇಲಿದ್ದ ಚಾ ಕುಡಿದ ಲೋಟ ತೊಳೆಯಲು ಶುರುಮಾಡಿಕೊಂಡರು.
'ಅಲ್ಲಾ ಭಟ್ರೇ ಯಾರೂ ಹುಡುಗರಿಲ್ವಾ..?'. 'ಯಾರು ಬರ್ತಾರೆ ಮಾರಾಯ... ಅದೂ ಇಲ್ಲಿಗೆ. ಆರು ತಿಂಗಳ ಹಿಂದಿನವರೆಗೆ ನಮ್ಮ ಸಂಸಾರ ಇತ್ತು. ಆಗ ಒಂದು ದಿನ ಐದಾರು ಜನ ಬಂದು ಚಾ ತಗೊಂಡು ಕುಡೀತಾ ಇದ್ರು. ತಕ್ಷಣ ಪೊಲೀಸರು ಆ ಬದಿಯಿಂದ ಅದೇ ಆ ತೋಟದ ಕಡೆಯಿಂದ ಗುಂಡು ಹಾರಿಸ್ಲಿಕ್ಕೆ ಶುರುಮಾಡಿದ್ರು. ಇವರೂ ತಂದ ಗೋಣಿ ಚೀಲದಿಂದ ಕೋವಿ ತೆಗೆದು ಗುಂಡು ಹಾರಿಸಿದ್ರು. ನಾನು ನನ್ನ ಸಂಸಾರ ಅಡುಗೆ ಕಟ್ಟೆ ಹಿಂದೆ ಅಡಗಿ ಕೂತು ಆನೆಗುಡ್ಡೆ ಗಣಪತಿ ಸ್ಮರಣೆ ಮಾಡಿ ಬದುಕಿದ್ರೆ ಸ್ಥಳಕ್ಕೆ ಬರ್ತೀವಿ ಅಂತ ಹರಕೆ ಮಾಡ್ಕಂಡೊ.. ಈ ಬಾಗ್ಲ ಇತ್ತಲ್ಲಾ ಇಲ್ಲಿ ಒಬ್ಬ ಸತ್ ಬಿದ್ದಿದ್ದ,.. ಅಲ್ಲಿ... ಆ ಕಟ್ಟೆ ಮೇಲೆ ಒಬ್ಬ. ಬಾಕಿ ಇದ್ದವ್ರು ಓಡಿ ಹೋದ್ರು'. ತೊಳೆದ ಲೋಟವನ್ನು ಅಡುಗೆ ಕಟ್ಟೆಯ ಮೇಲೆ ಒಂದೊಂದಾಗಿ ಬೋರಲಾಗಿ ಜೋಡಿಸುತ್ತಾ 'ಆಗ ಹೆದ್ರಿ ಓಡಿ ಹೋದ ನಮ್ಮ ಲೋಟ ತೊಳು ಹುಡ್ಗ ಮತ್ತೆ ಬರ್ಲೆ ಇಲ್ಲೆ. ಕೆಲವರು ಅವ್ನು ಸರ್ಕಾರಿ ಶಾಲೆ ಸೇರಿದ ಅಂದ್ರೆ ಇನ್ನೂ ಕೆಲವರು ಬೆಂಗ್ಳೂರು ಸೇರ್ದ ಅಂತ್ರಪ್ಪಾ. ಹಿಂದೆ ಕಟ್ಟಿಗೆ ಹೊರುವ ಹೆಂಗಸ್ರು ಚಾ ಕುಡ್ದು ಲೋಟ ತೊಳ್ದಿಟ್ಟು ಹೋಗ್ತಿದ್ರು. ಆದ್ರೆ ಈಗ ಪೊಲೀಸ್ನೋರು, ಅದೆಲ್ಲಾ ಇಲ್ಲ. ನಾನೇ ಎಲ್ಲಾ ಮಾಡ್ತೆ, ಜೀವನೋಪಾಯ ಒಂಥರಾ ಮೂಕಪಾತ್ರಾಭಿನಯ ಅಲ್ಲ ಏಕಪಾತ್ರಾಭಿನಯ...' ಯಕ್ಷಗಾನದ ಹಾಸ್ಯಗಾರನ ಧಾಟಿಯಲ್ಲಿ ಹೇಳಿ ನಗೆಯ ಅವಶ್ಯಕತೆ ಇಲ್ಲದಲ್ಲಿಯೂ ನಕ್ಕರು. 'ಅಲ್ದನಾ ಈ ಬೆಂಗಳೂರು ಇನ್ನೆಷ್ಟು ಜನಾನ ಸೇರ್ಸ್ಕಳ್ಳತ್ತಾ ಮಾರಾಯಾ... ನಮ್ಮ ಕಟ್ಗೆ ಹೊರು ಹೆಂಗಸ್ರೂ...' ಅವರ ಮಾತಿನ ಮಧ್ಯದಲ್ಲೇ 'ಹಾಗಾದ್ರೆ ಈಗ ನಕ್ಸಲರ ಕಾಟ ಇಲ್ಲವಾ...?' ಎಂದೆ. 'ಅದೆಂತದ್ದೋ ಮಾರಾಯ... ನಾನು ಮಾತ್ರ ಹೆಂಡತಿ ಮಕ್ಕಳನ್ನ ಪೇಟೇಲಿ ಬಿಟ್ಟಿದ್ದೆ. ಬೆಳಗಾದ್ರೆ ಈ ಸೈಕಲ್ಲಲಿ ಬತ್ತೆ. ಚಿತ್ರಾನ್ನ ಇಲ್ಲೆ ಮಾಡ್ತೆ. ವಡೆ ಒಂದೈವತ್ತು ಮನೇಲೇ ಮಾಡ್ಕೊಂಡ್ ತರ್ತೆ. ಒಟ್ಟಿಗೆ ಜೀವನಕ್ಕೆ ಮೋಸ ಇಲ್ಲ.'
'ಅದಿರ್ಲಿ ಭಟ್ರೆ ಆ ಮಳ್ಳ ನಿಂಗ ಎಲ್ಹೋದ..?'. 'ಅಯ್ಯೋ ಅವನಾ ಈ ಹೊಸ ಪೋಲೀಸರು ಬಂದವ್ರು ನಕ್ಸಲ್ ಮಾಹಿತಿದಾರ ಅಂತ ಹಿಡ್ಕೊಂಡು ಹೋಗಿ ಹೊಡ್ದು ಬಡ್ದು ಮಾಡಿ ಕೊನೆಗೆ ಕಂಕನಾಡಿ ಹುಚ್ಚಾಸ್ಪತ್ರೆ ಡಾಕ್ಟ್ರು ಪರೀಕ್ಷೆ ಮಾಡಿ ಹುಚ್ಚ ಅಂತ ರಿಪೋರ್ಟ್ ಕೊಟ್ಟ ನಂತರವೇ ಮತ್ತೆ ತಂದು ಇಲ್ಲಿ ಬಿಟ್ರು. ಅವನು ಅಲ್ಲಿ ಇಲ್ಲಿ ಅಲೆದಾಡಿ ಪೊಲೀಸರನ್ನ ಕಂಡು ಅವರು ಹಿಂದೆ ಹೊಡೆದ ಹೊಡೆತ ನೆನೆಸಿಕೊಂಡೇ ಹೆದರಿ ಕಾಡು ಹತ್ತಿದ. ಅದೇನೋ ಆಂಧ್ರದವರಂತೆ. ಹೊಸ ನಕ್ಸಲರ ಗ್ಯಾಂಗ್ ಇತ್ತೀಚೆಗೆ ಈ ಕಾಡಿಗೆ ಬಂದದ್ದಂತೆ. ಇವನನ್ನ ಪೋಲೀಸ್ ಮಾಹಿತಿದಾರ ಅಂತ ಮರಕ್ಕೆ ಕಟ್ಟಿ ಗುಂಡು ಹೊಡ್ದ್ರು ಅಂತಾರಪ್ಪಾ. ಮನುಷ್ಯರು ಇರ್ಲಿ ಮಾರಾಯ, ಬೀದಿ ನಾಯಿಗಳಿಗೂ ಇಲ್ಲಿ ಉಳಿಗಾಲ ಇಲ್ಲ. ಪೊಲೀಸರ ಕಂಡ್ರೆ ಬೊಗಳತ್ತೆ ನಕ್ಸಲರಿಗೆ ಸುಳಿವು ಸಿಕ್ಕತ್ತೆ ಅಂತ ಪೋಲೀಸರು, ತಮ್ಮನ್ನ ಕಂಡು ಬೊಗಳಿದ್ರೆ ಪೊಲೀಸರಿಗೆ ಸುಳಿವು ಸಿಕ್ಕತ್ತೆ ಅಂತ ನಕ್ಸಲ್ರು ಇಬ್ರೂ ನಾಯಿಗಳಿಗೆ ಗುಂಡು ಹೊಡ್ದೂಹೊಡ್ದು ಸಾಯ್ಸಿ ಈಗ ಕಾಂಬೂದಕ್ಕೂ ಒಂದು ನಾಯಿ ಇಲ್ಲದಂಗಾಗಿದೆ...'.
ಸ್ಟೌ ಮೇಲಿನ ಚಹಾ ಉಕ್ಕಿತ್ತು. ಭಟ್ಟರು ದಡಬಡನೆ ಓಡಿದರು. ಅದನ್ನ ತಮ್ಮ ಹಳೇ ಚಹಾದ ಅಂಡೆಗೆ ಹಾಕಿ ನಾಲ್ಕು ಚಮಚ ಸಕ್ಕರೆ ಹಾಕಿ ಆಳೆತ್ತರಕ್ಕೆ ಬೆರೆಸಿ ಲೋಟದಲ್ಲಿ ಹಾಕಿ ತಂದಿಟ್ಟರು. 'ಅಲ್ಲಾ ಮಾರಾಯ ಆ ಹುಡುಗ ರಮೇಶ ಬೇರೆ ಇದಕ್ಕೆ ಸೇರ್ಕಂಡಿದಾ ಅಂತಾರೆ ಹೌದಾ.. ಒಳ್ಳೆ ಹುಡುಗನಪ್ಪಾ.... ಎಲ್ಲಾ ಹಾಳು ಹಣೆಬರಹ ಅಷ್ಟೇ..' ಎನ್ನುತ್ತಲೇ ಗಾಜಿನ ಕಪಾಟಿನಲ್ಲಿದ್ದ ವಡೆಯನ್ನು ಪ್ಲೇಟಿಗೆ ಹಾಕಿ ಗಿರಾಕಿಗೆ ಕೊಡಲು ಹೋದರು. ಚಾ ಹೊಟ್ಟೆ ಸೇರುತ್ತಿದ್ದಂತೆ 'ಇನ್ನು ಇದೆಲ್ಲಾ ಇಲ್ಲಾ ಭಟ್ಟರೆ ನಕ್ಸಲ್ ನಾಯಕ ರಮೇಶನೇ ನಾಳೆ ಸರೆಂಡರ್ ಆಗ್ತಿದ್ದಾನೆ' ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವಾಗಲೇ ಅ ಮಲೆನಾಡಿನ ಮುಂಗಾರಿನ ತಣ್ಣನೆಯ ಸಣ್ಣನೆ ಹನಿಮಿಶ್ರಿತ ಗಾಳಿಯೊಂದಿಗೆ ರಮೇಶ ನಿಧಾನವಾಗಿ ತೆರೆದುಕೊಳ್ಳತೊಡಗಿದ.
'ಶತಮೂರ್ಖ ನೀನು.. ಆರ್ಥವೇ ಆಗದವನು... ಜೀವನದಲ್ಲಿ ಉದ್ಧಾರವಾದ ಹಾಗೇ ಬಿಡು...' ಕನ್ನಡ ಪಂಡಿತರು ಹೇಳಿದ್ದು ನೆನಪಿಗೆ ಬಂತು. ಗೌತಮ ಬುದ್ಧನ ಬಗ್ಗೆ ಪಾಠ ಮಾಡುತ್ತಾ 'ಬುದ್ಧ ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ..' ಎಂದು ವರ್ಣಿಸುವಾಗ ಹಿಂದಿನ ಬೆಂಚಿನಲ್ಲಿ ಕುಳಿತ ರಮೇಶ ಸಂಪೂರ್ಣ ನಿದ್ದೆಯಲ್ಲಿದ್ದ. ಕೈಯಲ್ಲಿದ್ದ ಚಾಕ್‌ಪೀಸನ್ನು ತೂರಿದರೂ ಎಚ್ಚರಾಗಿರಲಿಲ್ಲ. ಪಕ್ಕದ ಹುಡುಗ ತಟ್ಟಿ ಎಬ್ಬಿಸಿದಾಗಲೇ ಎಚ್ಚರ. ಆಗಲೇ ಕನ್ನಡ ಪಂಡಿತರು ಸಹಸ್ರನಾಮ ಶುರುಮಾಡಿದ್ದರು. 'ನಾಯಿ ಜನ್ಮದ್ದೇ ಬದುಕು ತೆರೆದುಕೊಳ್ಳುವ ವಯಸ್ಸು ನಿನ್ನದ್ದು. ಪರಿವರ್ತನೆಯ ಹರಿಕಾರನಾದ ಗೌತಮ ಬುದ್ಧನ ಬಗ್ಗೆ ಪಾಠ ಮಾಡುತ್ತಿದ್ದರೆ ನಿದ್ದೆಯಲ್ಲಿದ್ದೀಯಲ್ಲೋ... ನೀನು ಜೀವನದಲ್ಲಿ ಉದ್ಧಾರವಾಗುವುದು ಅಸಾಧ್ಯದ ಮಾತು ಬಿಡು...' ಎಂದಿದ್ದರು. ಆ ಮಟ್ಟದ ಮಾತು ಅರ್ಥವಾಗುವ ವಯಸ್ಸು ಅದಾಗಿರಲಿಲ್ಲವೋ ಏನೋ...?
ಅವನು ಭಾರ ಹೊತ್ತವ. ಭೂಮಿತೂಕದ ಭಾರ.. ಹತ್ತನೇ ತರಗತಿಯ ನೆನಪು, ಎಲ್ಲಾ ಮಾಸ್ತರರೂ ಅವನನ್ನು ನಿರುಪಯೋಗಿ ಎಂದೇ ಪರಿಗಣಿಸಿದ್ದಾಗ ಅವನು ಉಪಯೋಗಕ್ಕೆ ಬಂದದ್ದು ದೈಹಿಕ ಶಿಕ್ಷಕರಿಗೆ ಮಾತ್ರ. ರಾಜ್ಯಮಟ್ಟದ ಪಿರಾಮಿಡ್ ಸ್ಪರ್ಧೆಯಲ್ಲಿ ಶಾಲೆಗೆ ಬಹುಮಾನ ತಂದುಕೊಟ್ಟವನೇ ಅವನು. 'ಹಾಳು ಮೂಳು ತಿಂದು ಗಟ್ಟಿಯಾಗಿದ್ದಾನೆ ಶೂದ್ರಮುಂಡೇದು...' ಅಂದರು. ಅವನ ಹೆಗಲಿನ ಮೇಲೆ ನಾಲ್ಕು ಹುಡುಗರನ್ನು ಒಬ್ಬರ ಮೇಲೆ ಒಬ್ಬರಂತೆ ನಿಲ್ಲಿಸುವಾಗಲೂ ಕರುಣೆ ತೋರಲಿಲ್ಲ. ಅಲ್ಲಾಡಿದ್ದಕ್ಕೆ 'ಹಂದಿ ಮುಂಡೇದೇ... ಮೇಲಿನ ಹುಡುಗ್ರೆಲ್ಲಾ ಕೆಳಗೆ ಬೀಳ್ತಾವೆ ಅನ್ನೋ ಗ್ಯಾನ ಇದೆಯಾ ನಿನಗೆ...?' ಎಂದಿದ್ದರು. ಅವನು ಅಲ್ಲಾಡಲೇ ಇಲ್ಲ. ಸ್ಥಿತಪ್ರಜ್ಞನಾದ. ಕೊನೆಗೆ ಹತ್ತಿರದ ಧರ್ಮಸ್ಥಳ, ಕಾರ್ಕಳ, ವೇಣೂರಿನ ಬಾಹುಬಲಿಯ ವಿಗ್ರಹ ನೆನೆಸಿಕೊಂಡು ಕಲ್ಲಾದ. ಇವನ ಹೆಗಲ ಮೇಲೆ ರಾಮನಾಯ್ಕನ ಮಗ, ಅವನ ಹೆಗಲಮೇಲೆ ಅಂಗಡಿ ಶೆಟ್ಟರ ಮಗ ವೆಂಕಟ, ಕೊನೆಗೆ ರಮಾನಾಥ ಶಾಸ್ತ್ರಿಗಳ ಮಗ ಕ್ಲಾಸಿಗೆ ಮೊದಲಸ್ಥಾನದಲ್ಲಿದ್ದ ಹರಿಶಂಕರ ಶಾಸ್ತ್ರಿ. ಪಿರಾಮಿಡ್ ಆಕಾಶ ಮುಟ್ಟಿತು. ಗುಂಪಿನ ಪಂದ್ಯ ಆದ ಕಾರಣ ರಮೇಶ ಒಬ್ಬನ ಹೆಗಲ ಮೇಲೆ ಇಷ್ಟು ಹುಡುಗರು ನಿಂತಿದ್ದಾರೆ ಎಂದರೆ ತೊಂದರೆಯಾಗಬಹುದು ಎಂದು ಸುತ್ತಲೂ ನಾಲ್ಕಾರು ಬಿಳಿಯ ಮೇಲ್ವರ್ಗದ ಹುಡುಗರನ್ನು ನಿಲ್ಲಿಸಿದ್ದರು. ಅಗಲೇ ಪಿರಾಮಿಡ್ ಒಂಥರಾ ಸುಂದರವಾಗಿಯೂ, ಸಂಪೂರ್ಣವಾಗಿ ಗುಂಪಿನ ಆಟವಾಗಿ ಕಾಣಿಸಿದ್ದು. ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ. ಎಲ್ಲಾ ಹುಡುಗರೂ ಸರಿದಿದ್ದರು. ತಲೆಯಮೇಲಿನವರು ಒಬ್ಬೊಬ್ಬರಾಗಿ ಕೆಳಗಿಳಿದಿದ್ದರು. ಆದರೆ ರಮೇಶ ಹಾಗೇ ನಿಂತಿದ್ದ.
'ಏಯ್ ಎಚ್ಚರ ಮಾಡ್ರೋ ಆ ಶನಿ ಮುಂಡೇದನ್ನ..' ಎಂದಿದ್ದ ಪಿ.ಟಿ. ಮಾಸ್ತರರು 'ನಿಂತಲ್ಲೇ ನಿದ್ದೆ ಮಾಡ್ತಾನೇ ಸೂಳೆ ಮಗ' ಎಂದೂ ಬೈದಿದ್ದರು. ರಾಷ್ಟ್ರಮಟ್ಟದ ಸ್ಪರ್ಧೆಗೆ ಇನ್ನೂ ಇಬ್ಬರನ್ನ ಮೇಲೆ ನಿಲ್ಲಿಸಿ ಪಿರಾಮಿಡ್‌ನ ಎತ್ತರ ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಸಿದ್ದರು. ರಮೇಶ ಇದ್ಯಾವುದರ ಗೊಡವೆಯೂ ಇಲ್ಲದೇ ಮೈ ಕೊಡವಿಕೊಂಡು ಆಚೆ ಬಂದಿದ್ದ. ಬಹುಮಾನವನ್ನು ಎತ್ತರದಲ್ಲಿ ನಿಂತ ಹರಿಶಂಕರ ಶಾಸ್ತ್ರಿ ತಗೊಂಡು ಬಂದಾಗಲೂ ಚಪ್ಪಾಳೆ ತಟ್ಟಿದ. ಪಿ.ಟಿ. ಮಾಸ್ತರರು ಅಂದಿದ್ದರು 'ಎತ್ತರದಲ್ಲಿ ನಿಲ್ಲುವುದು ಅಂದರೆ ಸುಲಭದ ಕೆಲಸವಾ..?' ಆಗಲೂ ರಮೆಶನಿಗೆ ಅನ್ನಿಸಿರಲೇ ಇಲ್ಲ... ಈ ಎಲ್ಲರ ತೂಕವನ್ನು ಹೊರುವುದು ಸಾಮಾನ್ಯ ಕೆಲಸವಾ... ಎಂದು.
'ಯಾವಾಗ ಬಂದದ್ದು ರಾಯರ ಸವಾರಿ ಊರಿಗೆ..?' ಎಂದ ರಾಮನಾಯ್ಕರ ದನಿಗೆ ಎಚ್ಚರಾಗಿದ್ದೆ. 'ಈಗ ಎಲ್ಲಿರೋದು ಬೆಂಗಳೂರಲ್ಲೋ..? ತುಂಬಾ ಅಪರೂಪಕ್ಕೆ ಸಿಕ್ಕಿದ್ದೀರಿ... ಅಂದಹಾಗೆ ಮನೆಯಿಂದ ಬರುವಾಗ ಅಂಗಿ ಬದಲಾಯಿಸುವಾಗ ದುಡ್ದು ಹಾಕುವುದನ್ನ ಮರೆತೆ. ಹಾಗೇ ಒಂದು ನೂರು ರೂಪಾಯಿ ಕೊಡು ನೋಡುವಾ... ಮನೆಗೆ ಹೋದ ತಕ್ಷಣ ನಮ್ಮ ಹುಡುಗನ ಕೈಲಿ ಕಳಿಸ್ತೇನೆ...' ಎಂದರು. ಈ ರಾಮಾನಾಯ್ಕರು ಅಂಗಿ ಕಿಸೆಯಲ್ಲಿ ಹಣ ಮರೆತು ತೆಗೆದುಕೊಳ್ಳುತ್ತಿರುವ ಆರೋ ಏಳನೆಯದೋ ನೂರು ಇದು ಎಂದು ಗೊತ್ತಿದ್ದರೂ ಅವರು ಕೇಳುವ ದರ್ಪಕ್ಕೆ ಸೋತವನಂತೆ ನೂರು ರುಪಾಯಿ ಅವರ ಕೈಯಲ್ಲಿಟ್ಟೆ. 'ಮುದ್ದಾಂ ಕಳಿಸ್ತೇನೆ ನೂರು ರುಪಾಯಿ..' ಅಂದಾಗ 'ಅದರ ಜೊತೆಗೆ ಆ ಹಳೇ ಬಾಕೀನೂ ಕಳ್ಸಿ..' ಎಂದೆ. 'ಯಾಕೆ ಕೊಡಲಿಲ್ವಾ ನಮ್ಮ ಹುಡ್ಗ... ಅವತ್ತೇ ಕಳ್ಸಿದ್ದೆ... ದುಡ್ದು ವಾಪಸು ತಗೊಂಡು ನೀವೇ ಮರೀತೀರಾ ಹ್ಯಾಗೆ... ತುಂಬಾ ಬ್ಯುಸಿ ಇರೋರ ಹಣೆಬರಹಾನೇ ಹೀಗೆ...' ಗೊಣಗುತ್ತಲೇ ನಡೆದಿದ್ದರು. ಅವರು ಹೋದ ದಿಕ್ಕಿನಲ್ಲೇ ದಿಟ್ಟಿಸಿದೆ.
ಊರು ರಾಮನಾಯ್ಕರ ಬಟ್ಟೆಯ ಹಾಗಿದೆ. ಶುಭ್ರವಾಗಿ. ಸಂಪೂರ್ಣ ಸಾಕ್ಷರತೆ ಗರಿಯೊಂದಿಗೆ ಗುರುತಿಸಿಕೊಂಡ ಊರು. ಅಲ್ಲಲ್ಲಿ ಸಾಂಸ್ಕೃತಿಕ ಸಂಘಗಳು, ಪೊಲೀಸ್ ಔಟ್‌ಪೋಸ್ಟ್ ಅದೂ ಇತ್ತೀಚೆಗೆ ಬಂದದ್ದು. ಅದು ಬಂದಾಗಲೇ ಗುಮಾನಿಯಾದದ್ದು, ನಕ್ಸಲರು ಬಂದಿದ್ದಾರೆ ಅಂತ. ಅದರ ನಂತರವೇ ಊರಿನ ತೋಡಿಗೆ ಕಲ್ಲು ಸಂಕ, ಕಳ್ಳಿ ಬೇಲಿ ಜಾಗದಲ್ಲಿ ಕಲ್ಲಿನ ಪಾಗಾರ, ಹೆಚ್ಚು ಕಡಿಮೆ ಊರ ಹೊರಗೆ ಎನ್ನಬಹುದಾದ ಜಾಗದಲ್ಲಿ ಒಂದು ಬಾಗಿಲು ಹಾಕಿದ ಸರ್ಕಾರಿ ಆಸ್ಪತ್ರೆ (ನಕ್ಸಲ್‌ಪೀಡಿತ ಗ್ರಾಮದ ಅಭಿವೃದ್ಧಿ ಹೆಸರಿನಲ್ಲಿ ಇತ್ತೀಚೆಗೆ ಮಾಡಿದ್ದು ಅಲ್ಲದೇ ಡಾಕ್ಟರ್ ಸಿಟಿಯಲ್ಲಿ ಪ್ರಾಕ್ಟೀಸ್ ಮಾಡ್ತಿದ್ದಾರೆ) ಮತ್ತು ಬಿಸಿಯೂಟದ ಸಮಯದಲ್ಲಿ ಹಾಜರಾತಿ ಇದ್ದು ಊಟ ಮುಗಿದ ತಕ್ಷಣವೇ ನಾಪತ್ತೆಯಾಗುವ ಮೊದಲು ಆರು ಶಿಕ್ಷಕರಿದ್ದು ಈಗ ಏಕೋಪಾಧ್ಯಾಯ ಶಾಲೆಯಾಗಿರುವ ಶಾಲೆ, ಪೇಂಟ್ ಕಾಣದೇ ತುಕ್ಕು ಹಿಡಿದಿರುವ ಧ್ವಜಸ್ತಂಭ ಮತ್ತು ಗುಂಡಿನ ಚಕಮಕಿಯ ಕಲೆಗಳನ್ನೆ ಮೈಯ ಚಿತ್ತಾರವಾಗಿಸಿಕೊಂಡ ಶಾಲೆಯ ಗೋಡೆ.
ಹಿಂದೆ ಅವನೂ ಇಲ್ಲೇ ಶಿಕ್ಷಕನಾಗಿದ್ದ. ತಾನು ಓದಿದ ಶಾಲೆಯಲ್ಲೇ. ಅದೂ ದೈಹಿಕ ಶಿಕ್ಷಕನಾಗಿ. ಅದೇ ಪಿರಾಮಿಡ್ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ, ರಾಷ್ಟ್ರಮಟ್ಟದ ಬಹುಮಾನ ಬಂದ ಸರ್ಟಿಫಿಕೇಟ್‌ನ ಮುಖಾಂತರ ಸ್ಪೋರ್ಟ್ಸ್ ಕೋಟಾದಲ್ಲಿ ಇವನ ತಲೆ ಮೇಲೆ ನಿಂತವರೆಲ್ಲಾ ದೊಡ್ಡ ದೊಡ್ಡ ಉದ್ಯೋಗ ಅಲಂಕರಿಸಿದ್ದಾರೆ, ಶಾಸ್ತ್ರಿಯಂತೂ ವಿದೇಶದಲ್ಲಿದ್ದಾನೆ. ಈಗಲೂ ಊರಿಗೆ ಬಂದಾಗ ಆ ಎತ್ತರದ ಪಿರಾಮಿಡ್ಡನ್ನು ನೆನೆಸಿಕೊಳ್ಳುತ್ತಾನೆ. ರಮೇಶನ ನಿದ್ದೆಯ ಬಗ್ಗೆಯೂ ಕಿಡಿಯಾಡುತ್ತಾನೆ. ಶಾಲೆಯಲ್ಲಿ ತೂಗು ಹಾಕಿದ ಮರದ ಫಲಕದಲ್ಲಿನ ಕೊನೆಯ ಹೆಸರಿನ ರಮೇಶ ಮತ್ತೆ ಪಿರಾಮಿಡ್ ಕಟ್ಟಲು ಹೊರಟಿದ್ದ. ಆದರೆ, ಹುಡುಗ ಸಿಕ್ಕಬೇಕಲ್ಲಾ ಸ್ಥಿತಪ್ರಜ್ಞನಾದವನು. ಬುದ್ಧ ಎಚ್ಚರಾದಾಗಲೂ, ಜಗತ್ತೇ ಎಚ್ಚರಾದಾಗಲೂ ಹೋಗಲಿ ಮೇಷ್ಟ್ರು ಎಚ್ಚರಿಸಿದಾಗಲೂ ಎಚ್ಚರಾಗದವನು, ಭೂಮಿ ತೂಕ ಹೊರುವ ಆ ಹಂದಿ (ವರಾಹಾವತಾರ). ತಾರೀಪಿನ ಯುನಿಫಾರಂ ಧರಿಸಿದ ಲೇಸು ಬರ್ಗರು ಪಾನಿಪೂರಿ ತಿಂದ ನಾಲ್ಕನೇ ಕ್ಲಾಸಿನಲ್ಲೇ ತುಟಿಗೆ ಬೀಡಿ ಹಿಡಿದ ಹುಡುಗರ ಸಾಲಿನಲ್ಲಿ ಬುಡವಾಗುವ ಆ ಹುಡುಗ ದಕ್ಕಲೇ ಇಲ್ಲ. ಅಗ ಯೋಚನೆಗೆ ಬಂದದ್ದು ಟೀಂ ಗೇಮ್. ತಳದಲ್ಲಿ ಆರು ಹುಡುಗರು ಅವರ ಹೆಗಲ ಮೇಲೇ ನಾಲ್ಕು ಮೇಲೆ ಎರಡು ಹೀಗೆ. ಆಗ ಶುರುವಾದದ್ದು. ಕಾರಂತರು, ಜೋಯಿಸರು, ಐತಾಳರು ಬಂದರು, 'ಮೇಷ್ಟ್ರೇ ನಮ್ಮ ಹುಡುಗರು ತುಂಬಾ ವೀಕು. ಬುಡದಲ್ಲಿ ಅವರನ್ನ ಹಾಕಬೇಡಿ ಆಯ್ತಾ..'. ರಾಮನಾಯ್ಕರು ಬಂದರು, 'ನಮ್ಮ ಹುಡುಗರನ್ನ ಯಾವ ಕಾರಣಕ್ಕೂ ಬುಡದಲ್ಲಿ ಹಾಕಬೇಡಿ, ನೀವು ಪಿರಾಮಿಡ್ ಮಾಡಿಸದಿದ್ದರೂ ಸರಿಯೇ... ಇದೆಲ್ಲಾ ಎಂಥದ್ದಕ್ಕೆ ಹೇಳಿ.. ನಾಲ್ಕು ಅಕ್ಷರ ಕಲಿತರೆ ಸಾಕಪ್ಪಾ... ಇವ್ರೆಲ್ಲಾ ನಿಮ್ಮ ಹಾಗೇ ಪಿ.ಟಿ. ಮಾಸ್ತರರಾಗಬೇಕಾ'. ಅಂಗಡಿ ಶೆಟ್ಟರು 'ನಮ್ಮ ಹುಡುಗರಿಗೆ ಬೆನ್ನುಮೂಳೆ ಸರಿ ಇಲ್ಲಾ ಮಾರಾಯ್ರೆ. ಅದರಲ್ಲೂ ಅಂಗಡೀಲಿ ಕೂತು ಅಭ್ಯಾಸ ನೋಡಿ'. ಇನ್ನು ಉಳಿದವರು 'ಆಗಲ್ಲಾ ಅಂದ್ರೆ ಆಗಲ್ಲಾ ಮೇಷ್ಟ್ರೇ, ಈ ಮೇಲ್ವರ್ಗದವರನ್ನ ಹೆಗಲ ಮೇಲೆ ಹೊತ್ಕೊಳ್ಳೋ ದಿನ ನಿಮ್ಮ ಕಾಲಕ್ಕೇ ಮುಗಿದು ಹೋಗಿದೆ ಬಿಡಿ. ಇವೆಲ್ಲಾ ಮಾಡಿ ಮತ್ತೆ ವರ್ಣಾಶ್ರಮ ತರೋ ತರ್ಲೆ ಕೆಲ್ಸಕ್ಕೆ ಕೈ ಹಾಕ್ಬೇಡಿ.' ಆಟದಲ್ಲಿಯೂ ಜಾತಿ ಇಣುಕಿದ್ದು ಸ್ಪಷ್ಟವಾಗಿತ್ತು.
ಮತ್ತೇ ಪಿರಾಮಿಡ್ ಸಿದ್ಧವಾಯಿತು. ಶಾಲೆ ಸರ್ಕಾರದ್ದು. ಇಲ್ಲಿ ಜಾತಿ ಅದು ಇದು ಅಂತ ತರಬೇಡಿ ಎಂಬ ಆತನ ಮಾತಿಗೆ ಮಣಿದವರಂತೆ ಅಡಿಯಲ್ಲಿ ಗಟ್ಟಿಮುಟ್ಟಾದ ಹುಡುಗರು ನಿಂತರು. ಜೋಯಿಸ, ಕಾರಂತ, ಐತಾಳ ಹೀಗೆ... ಅವರ ಮೇಲೆ ಹನುಮ ನಾಯ್ಕ, ತಿಮ್ಮ ನಾಯ್ಕ, ಮೂರನೇ ಹಂತದಲ್ಲಿ ಅಂಗಡಿ ಶೆಟ್ಟರ ಮಕ್ಕಳು, ತುತ್ತ ತುದಿಯಲ್ಲಿ ಸಣಕಲನಾದ ಒಂದೇ ಹೊತ್ತಿನ ಬಿಸಿಯೂಟವೇ ಗತಿಯಾದ ಹರಿಜನರ ಗೋವಿಂದ. ಟೀಮು ಹೋಬಳಿ ಮಟ್ಟದಲ್ಲಿ, ಜಿಲ್ಲಾಮಟ್ಟದಲ್ಲಿ, ರಾಜ್ಯಮಟ್ಟದಲ್ಲೂ ಗೆಲುವು ಕಂಡಿತು. ಈಗ ಮತ್ತೆ ರಾಷ್ಟ್ರಮಟ್ಟ. ರಾಷ್ಟ್ರಮಟ್ಟದ ಸ್ಪರ್ಧೆಗೆ ಹೋಗುವಾಗ ಅವರವರ ಜಾತಿಸಂಘದವರು ಹುಡುಗರಿಗೆ ಶುಭ ಹಾರೈಸಿಯೇ ಕಳುಹಿಸಿದರು.
'ಈಗಲೂ ಇಲ್ಲಿ ಅದೇ ಕೆಲ್ಸಾನ ಮಾಡ್ತೀನಪ್ಪಾ... ಪಿರಾಮಿಡ್ ಕಟ್ಟೋದು. ಆದರೆ ಅಲ್ಲಾಡದ ಹಾಗೆ ನನ್ನ ಹಾಗೆ ನಿಲ್ಲುವವರು ಮೊದಲು ಇರಲಿಲ್ಲ. ನಾನು ಬಂದ ನಂತರ ಶುರುವಾಗಿದ್ದಾರೆ ನೋಡು' ಉಭಯ ಕುಶಲೋಪರಿಯಲ್ಲಿ ಅವನಾಡಿದ ಆ ಒಂದು ಮಾತು ಅವನು ಪಶ್ಚಿಮಘಟ್ಟ ಶ್ರೇಣಿಯ ನಕ್ಸಲರ ರೆಡ್ ಕಾರಿಡಾರ್‌ಗೆ ನಾಯಕನಾಗಿದ್ದುದಕ್ಕೆ ಉತ್ತರವಾಗಿತ್ತು. 'ಹಿಂದೆ ನನ್ನ ಜಾಗದಲ್ಲಿದ್ದವರು ಹೇಳುತ್ತಿದ್ದರು, ಒಬ್ಬರ ಮೇಲೊಬ್ಬರು ನಿಂತಾಗ ಕೆಳಗೆ ನಿಂತ ಪ್ರತಿಯೊಬ್ಬನಿಗೆ ಮೇಲೆ ನಿಂತ ಅನುಭವ ಮತ್ತು ಮೇಲೆ ನಿಂತವನು ಕೆಳಗೆ ನಿಂತವನ ಅನುಭವ ಪಡೆಯಬೇಕು.. ಎಂದು. ಆದರೆ ಅವರಿಂದ ಪಿರಾಮಿಡ್ ಕಟ್ಟಲು ಸಾಧ್ಯವಾಗಲೇ ಇಲ್ಲ. ನಾನು ಬಂದ ನಂತರ ಹೇಳಿದೆ... ನಿಲ್ಲುವುದೆನ್ನುವುದು ಮೇಲೆ ಕೆಳಗೆ ಎಂಬ ತಾರತಮ್ಯದ ಆಚೆಯದಾಗಿರಬೇಕು. ಗೆಳೆಯರೇ ನಮ್ಮ ನಿಲುವು ಗೊಮ್ಮಟನ ಹಾಗೆ ಅಲುಗಾಡದ ನಿಲುವಾಗಿರಬೇಕು. ಕಾಲಡಿಯ ನೆಲವನ್ನೇ ನಿಂತಾಗ ಮರೆತಲ್ಲಿ ಮಾತ್ರ ಆ ನಿಲುವು ಸಾಧ್ಯ. ಆ ಹಳೆಯ ನಾಯಕರೂ ಚಪ್ಪಾಳೆ ತಟ್ಟಿದ್ದರು...'. ರಮೇಶನ ಮಾತಿನ ನಡುವೆ ನಿಧಾನವಾಗಿ ನನಗೆ ಅವನ ಆ 'ನಿದ್ದೆ'ಯ ಅರಿವಾಗತೊಡಗಿತು. ಅದು ತಾನು ಮತ್ತು ತನ್ನತನದ ಆಚೆಯದು, ಅದು ನೋವು ನಲಿವಿನ ಹಂಗು ಮರೆತದ್ದು ಮತ್ತು ಬದುಕು ಎನ್ನುವ ಶಬ್ದದ ಪರಿಧಿಯ ಒಳಗೆ ದಕ್ಕದ್ದು. ಅದು ಯಾವುದು.. ಆ ನಿದ್ದೆ...? ಭೂಮಿ ತೂಕ ಹೇರಿದರೂ ಅಲುಗಾಡದ್ದು..? ಪರಿಸ್ಥಿತಿಯ ಅರಿವಾಗುತ್ತಲೇ ಜೀವ ನಡುಗತೊಡಗಿತು. ರಮೇಶನ ಪಿರಾಮಿಡ್ ನೋಡು ನೋಡುತ್ತಿದ್ದಂತೆ ಎತ್ತರ ಎತ್ತರಕ್ಕೆ ಬೆಳೆದಂತೆ. ಒಬ್ಬರ ಮೇಲೊಬ್ಬರು ಎತ್ತರ... ಎತ್ತರ... ಹಿಮಾಲಯದೆತ್ತರ, ಒಬ್ಬೊಬ್ಬರಾಗಿ ಇಡೀ ದೇಶದ ಜನ ಸರತಿ ಸಾಲಿನಲ್ಲಿ ಪಿರಾಮಿಡ್ ಕಟ್ಟಲು ನಿಂತಂತೆ...! ಪಿರಾಮಿಡ್‌ನ ತಳದತ್ತ ಕಣ್ಣು ಹಾಯಿಸಿದರೆ ಅದೇ ಅವನೇ ಆ ಒಬ್ಬ ವರಾಹಾವತಾರ (ಶಾಸ್ತ್ರಿ ಮಾಸ್ತರರ ಬೈಗುಳದ 'ಹಂದಿ..') ಬೆಚ್ಚಿಬಿದ್ದಿದ್ದೆ.
'ಹೋಗಲಿ ಸರ್ಕಾರಿ ಕೆಲ್ಸ ಯಾಕೆ ಬಿಟ್ಟೆಯೋ...?' ಆತಂಕ ನುಂಗಲು ಮಾತು ಬದಲಾಯಿಸಿದ ಅನಿವಾರ್ಯತೆಯ ಫಲ. ಅದೇ ಆ ರಾಷ್ಟ್ರಮಟ್ಟದ ಸ್ಪರ್ಧೆಯ ಬಗ್ಗೆ ಆತ ಮಾತನಾಡತೊಡಗಿದ. 'ತಳದಲ್ಲಿ ನಿಂತ ಹುಡುಗರು ಅವರ ಮೇಲೆ... ಹೀಗೆ ಎತ್ತ್ರಕ್ಕೆ ಏರುತ್ತಾ ಹೋಯಿತು. ಸರಿಸುಮಾರು ನಾಲ್ಕು ಸ್ತರದಲ್ಲಿ ಹುಡುಗರು ನಿಂತಿದ್ದರು. ತಡವರಿಸುತ್ತಾ, ತಡಕಾಡುತ್ತಾ ನಮ್ಮ ಬಿಸಿಯೂಟದ ಗೋವಿಂದ ತುದಿ ಮುಟ್ಟಿ ನಿಂತ. ಎಲ್ಲೆಲ್ಲೂ ಚಪ್ಪಾಳೆ. ಎಲ್ಲರ ದೃಷ್ಟಿಯೂ ಗೋವಿಂದನ ಮೇಲೆ. ಸಣಕಲನಾದರೂ ಚುರುಕು. ದುರ್ಬಲನಾದರೂ ಎತ್ತರಕ್ಕೆ ಏರಿದ...' ಎಂದು. ನೋಡು ನೋಡುತ್ತಿದ್ದಂತೆ ತಳದಲ್ಲಿ ನಿಂತ ಐತಾಳ, ಜೋಯಿಸ, ಕಾರಂತರ ಮಕ್ಕಳೆಲ್ಲಾ ಸರಿದರು. ಅವರ ಮೇಲೆ ನಿಂತ ನಾಯ್ಕರ ಮಕ್ಕಳೆಲ್ಲಾ ಕೆಳಕ್ಕೆ ಹಾರಿಕೊಂಡರು. ಅಂಗಡಿ ಶೆಟ್ಟರ ಮಕ್ಕಳು ನಾಯ್ಕರ ಮಕ್ಕಳ ಮೇಲೆ ಬಿದ್ದರು. ಆದರೆ ನಮ್ಮ ಹರಿಜನ ಗೋವಿಂದ ನಡುವೆ ಎತ್ತರದಲ್ಲಿದ್ದವನು, ನೇರವಾಗಿ ನೆಲಕ್ಕೆ ಬಿದ್ದ. ಬಡಪಾಯಿ ಜೀವ ಆಗಲೇ ದೇಹದ ಹಂಗು ತೊರೆದಿತ್ತು'.
'ಛೇ... ಛೇ... ಕೊನೆಗೂ ಬಹುಮಾನ ಸಿಕ್ತಾ... ಗೋವಿಂದನಿಗೆ ಅರ್ಪಿಸಿದಿರಾ..?' ನನ್ನ ಮಾತಿಗೆ 'ಇಲ್ಲಾ.. ಪಿರಾಮಿಡ್‌ನಲ್ಲಿಯೇ ಎರಡು ನಿಮಿಷ ನಿಂತಿರಬೇಕಿತ್ತು. ಆದರೆ ಅಷ್ಟು ಸಮಯ ಆಗಿಲ್ಲ ಎಂಬ ಕಾರಣಕ್ಕೆ ಬಹುಮಾನ ಬರಲಿಲ್ಲ. ಬದಲಾಗಿ ಹೆಣ ಬಂತು. ಹುಡುಗರು ನುಣುಚಿಕೊಂಡರು. ಅವರ ಅಪ್ಪ ಅಮ್ಮ ಕೊಟ್ಟ ಕುಮ್ಮಕ್ಕೂ ಕೂಡಾ. ದುರಾದೃಷ್ಟಕ್ಕೆ ಮಾಧ್ಯಮದವರೂ ವಿಷಯದ ಆಳಕ್ಕೆ ಇಳಿಯದೇ, ಮೇಷ್ಟ್ರು ಸರಿಯಾಗಿ ಟ್ರೈನಿಂಗ್ ಕೊಟ್ಟಿರಲಿಲ್ಲ. ಅವರ ನಿರ್ಲಕ್ಷ್ಯಕ್ಕೆ ಹುಡುಗ ಬಲಿಯಾಗಿದ್ದಾನೆ' ಎಂದು ವರದಿ ಮಾಡಿದರು. 'ಹುಡುಗ ದಲಿತರವನು' ಎಂಬ ಕಾರಣ ಇನ್ನೂ ಬಲವಾಗಿ ದಲಿತರಿಗೆ ಆದ ನೋವು ನಲಿವಿಗೆ ತಾವೂ ಪಾಲುದಾರರೆಂದು ಎಲ್ಲಾ ಮೇಲ್ವರ್ಗದವರೂ ಕೈಜೋಡಿಸಿ ಗೋವಿಂದನನ್ನು ಮೇಲಕ್ಕೇರಿಸಿದಕ್ಕೆ ಒಳಗೊಳಗೇ ತಮ್ಮ ಒಳಗಿರುವ ವಿಷ ಕಕ್ಕಿದ್ದರ ಪರಿಣಾಮ ನಾನು ಕೆಲಸ ಕಳೆದುಕೊಂಡೆ' ರಮೇಶನ ಮಾತು ಸಾಗಿಯೇ ಇತ್ತು.
ಒಟ್ಟಿಗೆ ಒಂದು ಯಶಸ್ಸು ರಾಜ್ಯ ಮಟ್ಟದ ನಕ್ಸಲ್ ನಾಯಕನನ್ನ ಮನವೊಲಿಸಿ ಸಮಾಜದ ಮುಖ್ಯವಾಹಿನಿಗೆ ತಂದ ಸಮಾಧಾನ. ಆದರೆ ಎಂಥ ದೃಢ ನಿಲುವು ಅವನದ್ದು. ಕಮ್ಯುನಿಸ್ಟ್ ವಿಚಾರಧಾರೆ, ಎಡಪಂಥೀಯ ವಾದ, ಸರ್ಕಾರದ ಅಭಿವೃದ್ಧಿ ಕಾರ್ಯಗಳು, ವೇದ ಆಗಮ ಉಪನಿಷದ್‌ನ ಕುರಿತ ಚರ್ಚೆ, ಧರ್ಮ ಗ್ರಂಥಗಳಲ್ಲಿನ ಉಲ್ಲೇಖಗಳು, ಗಾಂಧಿವಾದ, ಲೋಹಿಯಾ ವಿಚಾರಧಾರೆ, ಕೊನೆಗೆ ಮಾನವ ಸಂಬಂಧಗಳೂ ಅವನ ಮನವೊಲಿಸಲು ವಿಫಲವಾಗಿ, ಇನ್ನೇನು ಅಲ್ಲಿಂದ ಹೊರಡುವ ಮಟ್ಟದಲ್ಲಿದ್ದಾಗ ಅಚಾನಕ್ ಎಂಬಂತೆ ನನ್ನ ಕಾಲುಗಳ ಮೇಲೆ ಅವನ ಕಣ್ಣು ಬೀಳಬೇಕೇ...? ಇದೇ ಮೊದಲ ಬಾರಿ ನನ್ನ ಕಾಲುಗಳನ್ನು ನೋಡುವವನಂತೆ ದಿಟ್ಟಿಸಿ ನೋಡಿದ 'ನನಗೋಸ್ಕರ ಹೇಗೋ ಬಂದೆ ಇಷ್ಟು ದೂರ ಈ ಕಾಡಿನಲ್ಲಿ...?' ಮುಂದೆ ಮಾತನಾಡಲು ಅವನಿಂದ ಆಗಲಿಲ್ಲ. ಅವನ ಕಣ್ಣಂಚಿನಲ್ಲಿ ನೀರು ಮಡುಗಟ್ಟಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕ್ಷಣಕಾಲ ಸ್ತಭ್ಧನಾಗಿದ್ದ. ಕೈಯಲ್ಲಿದ್ದ ಕೋವಿಯನ್ನು ನನ್ನ ಕಾಲಬುಡದಲ್ಲಿಟ್ಟ. 'ಆಯ್ತು ಸರೆಂಡರ್ ಆಗ್ತೀನಿ...' ಅವನ ಗಂಟಲು ತುಂಬಿತ್ತು. ನಾನೂ ಅವನನ್ನು ದಿಟ್ಟಿಸಿದೆ. ಅವನ ಶಕ್ತತೆಯ ಶಿಖರದ ತಳಪಾಯವಾದ ಅವನ ಕಾಲುಗಳಿಗೆ ನನ್ನ ಕಾಲಿನ ಪೋಲಿಯೋ ನಿಧಾನವಾಗಿ ವ್ಯಾಪಿಸಿದಂತೆ, ಮಾಂಸ ಖಂಡಗಳು ಕರಗಿ ಮೂಳೆ ಚಕ್ಕಳವಾದಂತೆ ರಮೇಶ ನನ್ನ ಕಣ್ಣೆದುರೇ ನನ್ನ ಹಾಗೇ ತೆವಳುತ್ತಿದ್ದಾನೆ... ಅವನ ಕಾಲುಗಳನ್ನು ನನ್ನ ಕಾಲಿನ ಕಾಯಿಲೆ ಸಂಪೂರ್ಣವಾಗಿ ನುಂಗಿದಂತೆ... 'ನೋ...!!!' ಕಿರಿಚಿದ್ದೆ. ಅವನು ಬರೀ ನಕ್ಕಿದ್ದ.
'ಪೇಪರಿನವರು ಅಂತ ಕಾಣ್ಸುತ್ತೆ..' ಪೋಲೀಸಿನವನೊಬ್ಬ ಕೇಳಿದ್ದಕ್ಕೆ ಎಚ್ಚರಾಗಿದ್ದೆ. ಆಗಲೇ 30-40 ಜನ ಪೊಲೀಸರು ಭಟ್ಟರ ಹೋಟೆಲ್‌ಗೆ ಬಂದಿದ್ದರು. ಭಟ್ಟರು ಚಹಾವನ್ನು ಒಂದು ಅಂಡೆಯಿಂದ ಮತ್ತೊಂದಕ್ಕೆ ಆಳೆತ್ತರಕ್ಕೆ ಎತ್ತಿ ಬೆರೆಸುತ್ತಿದ್ದರು, ಅದರಲ್ಲಿನ ಸಕ್ಕರೆ ಸರಿಯಾಗಿ ಕರಗಲಿ ಅಂತ. ಅಷ್ಟು ದೂರ ಮರವೊಂದಕ್ಕೆ ಕಟ್ಟಿದ ಕಟ್ಟೆಯ ಮೇಲೆ ಪೊಲೀಸರೆಲ್ಲಾ ಕುಳಿತರು. ಅವರ ನಡುವಿನ ಮಾತು ಚರ್ಚೆ ಒಂಥರಾ ಗಜಿಬಿಜಿಯಾಗಿ ಗೌಜಿಯಾಗಿ ಕೇಳಿಸತೊಡಗಿತು. ನನ್ನ ಪಕ್ಕಕ್ಕೆ ಬಂದ ಪೊಲೀಸ್ ಮತ್ತೆ ಕೇಳಿದ, 'ಪೇಪರಿನವರಾ...?'. 'ಹ್ಞೂಂ' ಎಂದಷ್ಟೇ ಹೇಳಿದೆ. 'ಆಗಾಗ ಬರ್ತಾ ಇರ್ತಾರೆ. ಪೇಪರಿಗೆ ಬರ್ಕೊಂಡು ಹೋಗ್ಲಿಕ್ಕೆ..' ಅಂದ. 'ಇತ್ತೀಚೆಗೆ ಸ್ವಲ್ಪ ಕಡಿಮೆ ಇರಬೇಕು ನಕ್ಸಲರ ಕಾಟ, ಕೂಂಬಿಂಗ್ ಅದೂ ಇದೂ ಅಂತ ನಡೆಸಿದ ನಂತರ ಅಲ್ಲವಾ..?' ಎಂದೆ. ' ಹೌದು ಸಾರ್.. ಈಗ ನೋಡಿ ಮುಂಗಾರು ಶುರುವಾಗಿದೆ. ಕಾಡಿನ ಒಳಗೆ ಹೋದ್ರೆ ವಿಪರೀತ ಜಿಗಣೆ ಕಾಟ. ಕ್ಷಣ ಮರೆತರೆ ಕಾಲು ಲೀಟರ್ ರಕ್ತ ಹೀರ್ತದೆ. ಅದರಲ್ಲಿ ಹ್ಯಾಗೆ ಬದುಕ್ತಾರೋ ಕಾಣೆ... ಅಂದಹಾಗೆ ನೀವೆಲ್ಲಿಯವರು ಸಾರ್..?' ಎಂದ. 'ಬೆಂಗಳೂರು..' ಎಂದೆ. 'ನಾನೂ ಅಲ್ಲಿಗೆ ಹತ್ತಿರದ ನೆಲಮಂಗಲದವನು... ಈ ಕೆಲ್ಸಾ ನೋಡಿ ಇಲ್ಲಿಗೆ ಹಾಕಿದ್ದಾರೆ'. ಆತ್ಮೀಯನಾಗತೊಡಗಿದ. 'ರಜೇಲಿ ಹೋಗಿದ್ರಾ ಊರಿಗೆ..?'. 'ಎಲ್ಲಿ ರಜಾ ಸಾರ್, ರಜಾ ಕೇಳಿದ್ರೆ ಉರಿದು ಬೀಳ್ತಾನೆ ಇನ್ಸ್‌ಪೆಕ್ಟ್ರು. ಅವನು ಮಾತ್ರ ಡಿಪಾರ್ಟ್‌ಮೆಂಟಿನ ಜೀಪ್‌ನಲ್ಲೇ ವಾರ ವಾರ ಊರಿಗೆ ಹೋಗಿ ಬರ್ತಾನೆ. ಈ ನಕ್ಸಲರ ಜೊತೆಗೆ ನಾವೂ ಕಾಡುಪಾಲಾದ ಹಾಗಾಗಿದೆ ನಮ್ಮ ಗತಿ. ನಮ್ಮ ಸಮಸ್ಯೆ ಹೇಳ್ಳೊಳ್ಳಾಕೆ ಹೋದ್ರೆ ಡಿಪಾರ್ಟ್‌ಮೆಂಟಿನ ಲಾಂಗ್ವೇಜಿನಲ್ಲಿ ಮಾತಾಡ್ತಾನೆ ಆ ನನ್ಮಗ. ನನ್ನ ಹೆಂಡತಿಗೆ ಗೂರ್ಲು ಸಾರ್. ಈ ಕೆಲ್ಸಕ್ಕೆ ಬಂದು ಮಗಾ ಪೋಲಿಬಿದ್ದು ಎಸ್ಸೆಸ್ಸೆಲ್ಸಿ ಫೇಲಾದ. ಮಗಳು ಚಿಕ್ಕವಳು, ಮನೇಲಿ ಸಮಸ್ಯೆ ಸಾರ್. ಊರಿಗೆ ಹೋಗ್ಬೇಕು ಅಂತ ಹೇಳಿದರೆ, ಪೋಲೀಸ್ ಡ್ಯೂಟಿ ಅಂದ್ರೆ 24 ಗಂಟೇದು ಅಂತ ಗೊತ್ತಿಲ್ವಾ.. ಡಿಸ್ಮಿಸ್ ಮಾಡ್ತೀನಿ, ಆಮೇಲೆ ಪರ್ಮನೆಂಟಾಗಿ ಮನೇಲಿರ್ಬೇಕು ಅಂತಾನೆ. ಅದಿರ್ಲಿ ಈ ವಯಸ್ಸಲ್ಲಿ ನೀವು ವಾರ ವಾರಕ್ಕೆ ಊರಿಗೆ ಹೋಗಿ ಏನ್ಮಾಡ್ತೀರಾ? ಅಂತ ಕುಹಕ ಮಾತಾಡ್ತಾನೆ ಸಾರ್. ಪಿತ್ತ ನೆತ್ತಿಗೇರಿ ಕೈಯಲ್ಲಿದ್ದ ಸರ್ವಿಸ್ ರೈಫಲ್‌ನ ಎತ್ತಿ ಸುಟ್ಟು ಬಿಡಬೇಕು ಸೂಳೆಮಗನ್ನ ಅನ್ನಿಸ್ತದೆ. ಹೆಂಡತಿ ಮಕ್ಕಳ ಮುಖ ನೋಡಿ ಸುಮ್ಮನಿದ್ದೀನಿ ಅಷ್ಟೇ...'.
ಅವನ ಮಾತಿನ ನಡುವೆಯೇ 'ಧಡಾರ್...' ಎಂದು ಹೊಡೆದ ಸಿಡಿಲಿನ ಆರ್ಭಟಕ್ಕೆ ಬೆಚ್ಚಿ ಬಿದ್ದು ಕಣ್ಣುಜ್ಜಿಕೊಂಡು ತಲೆ ಎತ್ತಿ ನೋಡಿದೆ... ದೊಡ್ಡ ಕಾರ್ಮೋಡವೊಂದು ಕಾಡಿನ ಕಡೆಯಿಂದ ನಿಧಾನವಾಗಿ ನಕ್ಸಲ್ ನಿಗ್ರಹ ತಂಡದ ತಲೆಯ ಮೇಲಿನ ಆಕಾಶವನ್ನು ಆವರಿಸುತ್ತಿತ್ತು.
- ಮಂಜುನಾಥ ನಾಯ್ಕ್