

ವಿಧಾನಸಭೆ ಚುನಾವಣೆ ರಣರಂಗದಲ್ಲಿ ಈಗ ಅಗ್ನಿಪರೀಕ್ಷೆಯನ್ನು ಆಹ್ವಾನಿಸಿರುವ ರಾಜಸ್ಥಾನದ ಕಾಂಗ್ರೆಸ್ ಸೇನಾನಿ ಅಶೋಕ ಗೆಹ್ಲೊಟ್ ಸುಮಾರು ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಅನುಭವದ ಅಸ್ತ್ರಗಳನ್ನೇ ನಂಬಿರುವಂತಿದೆ. ಜೀವನದ 62 ವರ್ಷಗಳಲ್ಲಿ 40 ವರ್ಷಗಳನ್ನು ಕಾಂಗ್ರೆಸ್ ರಾಜಕೀಯದಲ್ಲೇ ಕಳೆದಿರುವ ಗೆಹ್ಲೊಟ್ಗೆ ಆ ರಾಜ್ಯದ ಮೂಲೆ- ಮೂಲೆಗಳ ಜಾತಿಗಳ ಒಳಗುಂಪುಗಳ ರಾಜಕೀಯ ಚೆನ್ನಾಗಿ ಗೊತ್ತು.
ಕೇಂದ್ರ ಮಂತ್ರಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ದೀರ್ಘ ಕಾಲ ಸಾರ್ವಜನಿಕರ ನಡುವೆಯೇ ಕೆಲಸ ಮಾಡಿರುವ ಗೆಹ್ಲೊಟ್ ರಜಪೂತ ಸಮಾಜದ ಒಂದೂ ಶಾಖೆಗೆ ಸೇರಿದವರು. ವಿಜ್ಞಾನದ ಪದವಿ ಗಳಿಸಿದರೂ ಅನಂತರ ಕಾನೂನು, ಅರ್ಥಶಾಸ್ತ್ರದ ಪದವಿಗಳನ್ನೂ ಗಳಿಸಿದ್ದಾರೆ. ಹೆಚ್ಚು ಸದ್ದು-ಗದ್ದಲ ಮಾಡುವ ವ್ಯಕ್ತಿಯಲ್ಲ. ಬಹಿರಂಗ ವರ್ತನೆಯಲ್ಲಿ ಯಾವ ಕಾರಣಕ್ಕೂ ಸಂಯಮವನ್ನು ಕೈಬಿಟ್ಟಿಲ್ಲ. ಆದರೆ, ಅವರ ಅಂತರಂಗದ ಕತೆಯೇ ಬೇರೆ ಎನ್ನುತ್ತಾರೆ ಅವರ ರಾಜಕೀಯ ವಿರೋಧಿಗಳು.
1980ರಲ್ಲಿ ಅವರು ಲೋಕಸಭೆಯನ್ನು ಜೋಧ್ಪುರದ ಕ್ಷೇತ್ರದಿಂದ ಪ್ರವೇಶಿಸಿದಾಗ, ಅವರಿಗೆ 30 ವರ್ಷವೂ ತುಂಬಿರಲಿಲ್ಲ. ಐದು ಬಾರಿ ಲೋಕಸಭೆ ಚುನಾವಣೆಗಳಲ್ಲಿ ಗೆದ್ದು, ಗೆದ್ದಾಗಲೆಲ್ಲ ಮಂತ್ರಿಮಂಡಲದಲ್ಲಿ ಸ್ಥಾನ ಪಡೆದಿದ್ದರ ಹಿಂದಿರುವುದು, ಅವರ ಟೀಕೆಗಳನ್ನು ಸಹಿಸಿಕೊಳ್ಳುವ ಗುಣ. ಇಂದಿರಾಗಾಂಧಿ, ರಾಜೀವಗಾಂಧಿ, ಪಿ.ವಿ.ನರಸಿಂಹರಾಯರ ಮಂತ್ರಿಮಂಡಲಗಳಲ್ಲಿ ಕೆಲಸ ಮಾಡಿ, ವಿಶಾಲವಾದ ಅನುಭವದ ಜತೆಗೇ ಅವರು ಆಡಳಿತ ವ್ಯವಸ್ಥೆಯ ನಿಯಂತ್ರಣದ ಜ್ಞಾನವನ್ನೂ ಹೊತ್ತು ರಾಜಸ್ಥಾನಕ್ಕೆ ಹಿಂತಿರುಗಿದಾಗ, ವಿಧಾನಸಭೆಗೆ ಆಯ್ಕೆ. ಮಂತ್ರಿಯೂ ಆಗಿದ್ದರು.
ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ರಾಜ್ಯದ ಎಲ್ಲ ಕಾಂಗ್ರೆಸ್ ನಾಯಕರ ಜಾತಕವನ್ನೂ ಬಲ್ಲವರು. 1998ರ ಚುನಾವಣೆಯ ಅನಂತರ ಮುಖ್ಯಮಂತ್ರಿಯೂ ಆದರು. ಆಗ ರಾಜಸ್ಥಾನದಲ್ಲಿ ಭೀಕರ ಬರಗಾಲ. (ಅದೇನೂ ಆ ರಾಜ್ಯಕ್ಕೆ ಹೊಸದಲ್ಲ). ವಿದ್ಯುತ್ ಅಭಾವವೂ ಸೇರಿಕೊಂಡಿತ್ತು. ಆಗ ಅವರು ಕೈಗೊಂಡ ಬರ ಪರಿಹಾರ ಕಾಮಗಾರಿಗಳು, ಆರಂಭಿಸಿದ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಜನ ಮರೆಯುವಂತೆಯೇ ಇಲ್ಲ.
ಆದರೂ 2003ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಲಿ ಸೋತಿತ್ತು. ಬಿಜೆಪಿಯ ನಾಯಕಿ ವಸುಂಧರಾ ರಾಜೆ ನೇತೃತ್ವದಲ್ಲಿ ಅಲ್ಲಿ ವಿಜಯ ಗಳಿಸಿತ್ತು.
ಇದಕ್ಕೇನು ಕಾರಣ? ಕಷ್ಟ ಕಾಲದಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದ ವ್ಯಕ್ತಿ, ಮುಖ್ಯಮಂತ್ರಿಯಾಗಿರುವ ಕಾಲದಲ್ಲೇ ಅವರ ಪಕ್ಷ ಸೋತಿದ್ದೇಕೆ? ಅದಕ್ಕೆ ಅಲ್ಲಿನ ಜಾತಿ ರಾಜಕೀಯವೇ ಕಾರಣ ಎನ್ನುತ್ತಾರೆ ಬಲ್ಲವರು. ರಜಪೂತರು ಸಾರಾಸಗಟು ಬಿಜೆಪಿಯ ಹಿಂದೆ ನಿಂತರು. ಸಾಲದ್ದಕ್ಕೆ, ಗೆಹ್ಲೊಟ್ ಮುಖ್ಯಮಂತ್ರಿಯಾಗಿದ್ದಾಗ, ಬೆಲೆಬಾಳುವ ಕಲ್ಲಿನ ಗಣಿಗಾರಿಕೆಯ ಗುತ್ತಿಗೆಯನ್ನು 'ತಮ್ಮವರಿಗೇ' ಹೆಚ್ಚಾಗಿ, ಅತಿ ಅಗ್ಗದ ಬೆಲೆಗೆ ಹಂಚಿದರೆನ್ನುವ ಆರೋಪ ದುಳ್ಳುರಿಯಂತೆ ಹಬ್ಬಿತ್ತು. ಆ ಆರೋಪಗಳು ಇನ್ನೂ ಜೀವಂತವಾಗಿವೆ.
2008ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಹ್ಲೊಟ್ರ ಕೈ ಬಿಡಲಿಲ್ಲ. ಮತ್ತೆ ಅವರನ್ನೇ ಸೇನಾನಿಯಾಗಿ ನೇಮಿಸಿತ್ತು. ಆ ವೇಳೆಗೆ ಕಾಂಗ್ರೆಸ್ಸಿನಲ್ಲೇ ಅವರ ವಿರೋಧಿ ಗುಂಪುಗಳೂ ಗರಿಗಟ್ಟಿದ್ದವು. ಆದರೂ, ರಾಜಸ್ಥಾನದ ಜಾಟ್ ಸಮಾಜ 2008ರಲ್ಲಿ ಬಿಜೆಪಿಯನ್ನು ವಿರೋಧಿಸಿದ್ದರಿಂದ ಅಶೋಕ ಗೆಹ್ಲೊಟ್, ವಸುಂಧರಾ ರಾಜೆ ವಿರುದ್ಧ ಸೋಲಿನ ಸೇಡನ್ನು ತೀರಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು.
ಆ ಚುನಾವಣೆಯ ಕಾಲದಲ್ಲಿ, ಜಾಟ್ ಜನಾಂಗೀಯ ಮುಖಂಡರು ಇಟ್ಟಿದ್ದ ಬೇಡಿಕೆ; ತಮ್ಮ ಸಮಾಜವನ್ನು ಇತರೆ ಹಿಂದುಳಿದ ಜಾತಿಗಳ ಗುಂಪಿನ ಪಟ್ಟಿಯಲ್ಲಿ ಸೇರಿಸಬೇಕೆಂಬುದು. ಅದು ಈಡೇರಿಲ್ಲ. ಅದೇ ಬೇಡಿಕೆಯನ್ನು ಹಿಂದಿನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರೂ ಈಡೇರಿಸಿರಲಿಲ್ಲ. ಈಗಿನ ಚುನಾವಣೆಯಲ್ಲಿ, ಮತ್ತೆ ಇದೇ ರಾಜ್ಯದಲ್ಲಿ ಕಾಂಗ್ರೆಸ್ಸಿನ ಗೆಹ್ಲೊಟ್, ಬಿಜೆಪಿಯ ವಸುಂಧರಾ ರಾಜೆ ಅವರ ನೇತೃತ್ವದಲ್ಲಿ ಪದಾತಿಪಡೆಗಳ ನಡುವೆ ರಾಜಕೀಯ ಖಡಾಖಡಿ ಸಮರ ನಡೆದಿದೆ.
ಗೆಹ್ಲೊಟ್, ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ವಿರೋಧಿಗಳನ್ನು ಕಾಂಗ್ರೆಸ್ಸಿನಲ್ಲೇ ಸೃಷ್ಟಿಸಿಕೊಂಡಿದ್ದಾರೆ. ಅದೇ ಸಮಯದಲ್ಲೇ ಅವರು ವಯಸ್ಕರ ಶಿಕ್ಷಣ, ಗ್ರಾಮೀಣ ಆರೋಗ್ಯ ಸೌಲಭ್ಯಗಳತ್ತ ಹೆಚ್ಚು ಗಮನ ಹರಿಸಿ, ಹೊಸ ಮತದಾರರ ಬ್ಯಾಂಕ್ಗಳನ್ನೂ ಸೃಷ್ಟಿಸಿದ್ದಾರೆ. ಆದರೂ ಗೆಹ್ಲೊಟ್ ಹಿಂದೂ ಸೇನೆಯ ಪ್ರವೀಣ ತೊಗಾಡಿಯಾರನ್ನು ಬಂಧಿಸಿದ ರೀತಿ- ನೀತಿಯಿಂದ ಮತ್ತೊಂದು ವರ್ಗದ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಈ ಬಾರಿ ಜಾಟ್ ಜನಾಂಗೀಯ ಬೆಂಬಲ ಯಾವ ಕಡೆ ವಾಲುತ್ತದೆ ಎನ್ನುವುದನ್ನು ಹೇಳುವುದು ಕಷ್ಟ. ಬಿಜೆಪಿಯ ಕಂಕುಳಲ್ಲಿ ರಜಪೂತರ ಮತ ಬ್ಯಾಂಕ್ ಭದ್ರವಾಗಿ ಕೂತಿದೆ. ಬಿಜೆಪಿಯ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ (ಹಿಂದಿನ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕಿ) ಗ್ವಾಲಿಯರ್ ಅರಸು ಮನೆತನದ ಹೆಣ್ಣು ಮಗಳು, ಧೋಲ್ಪುರದ ಮಾಜಿ ಮಹಾರಾಣಿ ವಸುಂಧರಾ ರಾಜೆ.
ಅವರಿಗೆ ಮಹಿಳಾ ವಲಯಗಳಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ಮಧ್ಯಮ ವರ್ಗಗಳ ಜನ ಈ ಬಾರಿ ಅವರ ಕಡೆಗೆ ಆಕರ್ಷಿತರಾಗಿದ್ದಾರೆನ್ನುವ ವರದಿಗಳು ಪ್ರಕಟವಾಗುತ್ತಿವೆ. 2003ರ ಚುನಾವಣೆಯ ಸೋಲಿನಿಂದ ಸಾರ್ವಜನಿಕರ ಜತೆ ವ್ಯವಹರಿಸುವುದರಲ್ಲಿ ಎಡವಬಾರದು ಎನ್ನುವ ಜ್ಞಾನವೂ ಮೂಡಿದಂತಿದೆ. ಕಾಂಗ್ರೆಸ್ ಈಗಲೂ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದರೆ, ಅಶೋಕ ಗೆಹ್ಲೊಟ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿಲ್ಲ. ಪಕ್ಷದ ಶಾಸಕಾಂಗ ವಿಭಾಗದ ನಾಯಕರನ್ನು ಚುನಾವಣೆ ಅನಂತರವೇ ಆರಿಸಲಾಗುವುದು ಎಂದಷ್ಟೇ ಹೇಳಿದೆ.
ಆದರೆ ಅಲ್ಲಿ ಕಾಂಗ್ರೆಸ್ ಗೆದ್ದರೆ, ಗೆಹ್ಲೊಟ್ ಅವರೇ ಮುಖ್ಯಮಂತ್ರಿಯಾಗುವುದು ಎನ್ನುವ ಭಾವನೆ ಬಲವಾಗಿ ಮೂಡಿರುವುದರಿಂದ ಅವರ ಪರವಾಗಿರುವವರು, ವಿರುದ್ಧವಾಗಿರುವವರು ಇಬ್ಬರೂ ಹೆಚ್ಚು ಕಷ್ಟಪಟ್ಟು ದುಡಿಯಲು ಆರಂಭಿಸಿದ್ದಾರೆ.
ಈ ಚುನಾವಣೆಯಲ್ಲಿ ಅಶೋಕ ಗೆಹ್ಲೊಟ್, ರಾಜಸ್ಥಾನ ಕಾಂಗ್ರೆಸ್ಸಿನಲ್ಲಿ ತಾವೊಬ್ಬ ಶಕ್ತಿಶಾಲಿ, ಪ್ರಭಾವಿ ಮುಖಂಡ ಎನ್ನುವುದನ್ನಂತೂ ಈಗಾಗಲೇ ಸಾಬೀತು ಮಾಡಿದ್ದಾಗಿದೆ. ಮುಂದಿನ ವಿಚಾರ ಚುನಾವಣೆ ಕಳೆದ ಅನಂತರವೇ ಪ್ರಸ್ತಾಪವಕ್ಕೆ ಅರ್ಹ.
- ಸತ್ಯ