ಸಾಪ್ತಾಹಿಕಪ್ರಭ

ಮಾಥೆರನ್ ಮ್ಯಾರಥಾನ್

ಮಾಥೆರನ್ ಮ್ಯಾರಥಾನ್
Published On :

ಇಲ್ಲಿ ಬೈಕ್‌ಗಳ ಸದ್ದಿಲ್ಲ. ಕಾರು- ಜೀಪುಗಳ ಭರಾಟೆ ಇಲ್ಲ. ಅವುಗಳ ಮಾತು ಹಾಗಿರಲಿ, ಸೈಕಲ್‌ಗಳನ್ನೂ ಇಲ್ಲಿ ನೋಡಲು ಸಾಧ್ಯವಿಲ್ಲ. ವಾಹನಗಳ ಪ್ರವೇಶ ಸಂಪೂರ್ಣ ನಿಷೇಧಗೊಂಡ ಏಷ್ಯಾದ ಏಕೈಕ ಗಿರಿಧಾಮವಿದು. ಅದುವೇ ಮಹಾರಾಷ್ಟ್ರದ ಮಾಥೆರನ್ ಗಿರಿಧಾಮ.
ಮಾಯಾನಗರಿ ಮುಂಬೈನಿಂದ ಕೇವಲ 90 ಕಿ.ಮೀ. ಹಾಗೂ ಪುಣೆಯಿಂದ 120 ಕಿ.ಮೀ. ದೂರದಲ್ಲಿ ಸಹ್ಯಾದ್ರಿ ಗಿರಿಶ್ರೇಣಿಯ ಮಡಿಲಲ್ಲಿದೆ ಈ ಮಾಥೆರನ್. ಮರಾಠಿಯಲ್ಲಿ ಅಂದರೆ ಅಂದರೆ ಬೆಟ್ಟದ ಹಣೆಯಲ್ಲಿರುವ ಕಾಡು. ಇಲ್ಲಿನ ಇನ್ನೊಂದು ವಿಶೇಷವೆಂದರೆ, ಬೆಟ್ಟದ ಮೇಲೆ ಚಲಿಸುವ ಪುಟಾಣಿ ರೈಲು. ಭಾರತದಲ್ಲಿರುವ 6 ಗಿರಿ ರೈಲು ಮಾರ್ಗಗಳಲ್ಲಿ ಮಾಥೆರನ್ ರೈಲು ಮಾರ್ಗವೂ ಒಂದು. ಮಾಥೆರನ್‌ನಲ್ಲಿ ಓಡಾಡುವ ಏಕೈಕ ವಾಹನವೆಂದರೆ ಈ ಚುಕುಬುಕು ರೈಲು. 21 ಕಿ.ಮೀ. ಉದ್ದದ ಈ ಮಾರ್ಗ ಬೆಟ್ಟದ ಕೆಳಗಿರುವ ನೆರಲ್ ಮತ್ತು ಮಾಥೆರನ್ ನಡುವೆ ಸಂಪರ್ಕ ಕಲ್ಪಿಸುತ್ತದೆ. ಬೆಟ್ಟದ ಮಧ್ಯ ಹಾವಿನಂತೆ ಸಂಚರಿಸುವ ಈ ರೈಲು ಮಾರ್ಗ 1907ರಲ್ಲಿ ಅದಂಜೀ ಪೀರ್ ಭಾಯ್ ಎಂಬವರಿಂದ ನಿರ್ಮಾಣವಾಯಿತು.
ಸಮುದ್ರ ಮಟ್ಟದಿಂದ 2600 ಅಡಿ ಎತ್ತರದಲ್ಲಿರುವ ಈ ಗಿರಿಧಾಮವನ್ನು ತಲುಪಲು ವಾಹನ ನಿಲುಗಡೆಯ ಸ್ಥಳದಿಂದ ಕುದುರೆ, ಡೋಲಿ, ರೈಲು ಅಥವಾ ಕಾಲ್ನಡಿಗೆಯಲ್ಲಿ 4 ಕಿ.ಮೀ. ಚಲಿಸಬೇಕು. ಬೆಟ್ಟದ ನೆತ್ತಿಯಲ್ಲಿ ಎಲ್ಲಾ ಸೌಲಭ್ಯಗಳಿರುವ ವಸತಿಗೃಹಗಳು, ರೆಸಾರ್ಟ್‌ಗಳಿವೆ. ಮಾಥೆರನ್ ಗಿರಿಧಾಮದಲ್ಲಿ ಅದಮ್ಯ ಪ್ರಕೃತಿ ಸೌಂದರ್ಯವನ್ನು ಮನದ ಪರದೆಯ ಮೇಲೆ ಅಚ್ಚಳಿಯದಂತೆ ಮೂಡಿಸುವ 38 ವೀಕ್ಷಣಾ ಸ್ಥಳಗಳಿವೆ. ಸೂರ್ಯಾಸ್ತ, ಸೂರ್ಯೋದಯಗಳು ಕಾಣುವ ಪನೋರಮಾ ಪಾಯಿಂಟ್, ಪ್ರತಿಧ್ವನಿ ಮೊಳಗಿಸುವ ಇಕೋ ಪಾಯಿಂಟ್, ಖಂಡಾಲಾ ಘಾಟಿಯನ್ನು ತೋರಿಸುವ ಖಂಡಾಲಾ ಪಾಯಿಂಟ್, ಸುಂದರ ಕೊಳವಿರುವ ಶೆರ್ಲೆಟ್ ಪಾಯಿಂಟ್, ಧುಮ್ಮಿಕ್ಕುವ ಜಲಪಾತ ಕಾಣಿಸುವ ಸಿಲಿಯಾ ಪಾಯಿಂಟ್, ಕಣಿವೆಯ ಸುಂದರ ದೃಶ್ಯ ಕಾಣಿಸುವ ಲಾರ್ಡ್ಸ್ ಹಾಗೂ ಎಡ್ವರ್ಡ್ ಪಾಯಿಂಟ್‌ಗಳಲ್ಲದೆ ಅರಣ್ಯದ ಮಧ್ಯ ಉಪಸ್ಥಿತನಾಗಿರುವ ಪಿಸರ್ನಾಥ್ ಮಹಾದೇವನ ಮಂದಿರವನ್ನೂ ನೋಡಬಹುದು. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಮೋಹಕ ವೀಕ್ಷಣಾ ಸ್ಥಳಗಳೆಲ್ಲವನ್ನೂ ನೋಡಲು ಕನಿಷ್ಠ 2 ದಿನವಾದರೂ ಬೇಕು. ಇಲ್ಲಿನ ಪಾಯಿಂಟ್‌ಗಳ ವೀಕ್ಷಣೆಗೆ ಕಾಲ್ನಡಿಗೆ ಕುದುರೆ ಸವಾರಿ ಅಥವಾ ಡೋಲಿಗಳಲ್ಲೇ ತೆರಳಬೇಕು.
ಸಹ್ಯಾದ್ರಿ ಗಿರಿಶ್ರೇಣಿಯ ಮುಕುಟಪ್ರಾಯದಂತಿರುವ ಈ ಗಿರಿಧಾಮವನ್ನು 1850ರಲ್ಲಿ ಥಾಣೆಯ ಡಿಸಿ ಎಚ್.ಪಿ. ಮಾಲೆಟ್ ಪತ್ತೆಹಚ್ಚಿದ. ಆಗಿನ ಕಾಲದಿಂದಲೇ ಇಲ್ಲಿನ ಪರಿಸರ ಸಮತೋಲನ ಕಾಪಾಡಲು ವಾಹನ ಪ್ರವೇಶವನ್ನು ನಿಷೇಧಿಸಲಾಯಿತು. ವರ್ಷದುದ್ದಕ್ಕೂ ಸುಮಾರು 16 ರಿಂದ 32 ಡಿಗ್ರಿ ಉಷ್ಣತೆ ಇರುತ್ತದೆ.

ಚೌಕಾಸಿ ಮಾಡದಿದ್ದರೆ ಕೆಟ್ಟೀರಿ!
ಈ ಗಿರಿಧಾಮ ನೋಡಲು ಅಕ್ಟೋಬರ್‌ನಿಂದ ಮೇ ಸೂಕ್ತ ಕಾಲ. ಇಲ್ಲಿ ಎಲ್ಲಾ ದರಗಳ ಹೋಟೆಲ್‌ಗಳು ಲಭ್ಯ. ಆ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಿಸಿಕೊಂಡು ಹೋಗುವುದು ಸೂಕ್ತ. ಹಾಗೆಯೇ ಪಾಯಿಂಟ್‌ಗಳ ವೀಕ್ಷಣೆಗೆ ಕುದುರೆಗಳನ್ನೇರಿ ಹೋಗಲು ದರದ ಬಗ್ಗೆ ಚೌಕಾಸಿ ಮಾಡುವುದು ಲೇಸು. ಇಲ್ಲದಿದ್ದರೆ ಬೇಸ್ತು ಬೀಳಬೇಕಾದೀತು. ಪ್ರವಾಸದ ನೆನಪಿಗೆ ಸ್ಮರಣಿಕೆ ತರಲು ದೊಡ್ಡ ಮಾರ್ಕೆಟ್ ಕೂಡ ಇಲ್ಲಿದೆ. ಆಯುರ್ವೇದ ಸಸ್ಯಗಳ ಆಗರವಾಗಿರುವ ಇಲ್ಲಿ ವಾರ್ಷಿಕ 524 ಸೆಂ.ಮೀ. ಮಳೆಯಾಗುತ್ತದೆ. ಹೀಗಾಗಿ ತಂಪಿರುವ ಜಾಗದಲ್ಲಿ ರಕ್ತಹೀರುವ ಜಿಗಣೆಗಳು ಕಾಲೇರಬಹುದು. ಜೊತೆಗೆ ವಿವಿಧ ಜಾತಿಯ ಮಂಗಗಳ ಬೃಹತ್ ಸಮೂಹವೇ ಇಲ್ಲಿದೆ. ಇವು ಕೈಯಲ್ಲಿ ತಿಂಡಿ ಕವರ್ ಹಿಡಿದು ಬರುವ ಪ್ರವಾಸಿಗರನ್ನು ಕಾತುರದ ಕಣ್ಣಲ್ಲಿ ನೋಡುತ್ತಿರುತ್ತವೆ ಹಾಗೂ ಅವಕಾಶ ಸಿಕ್ಕಾಗ ದಾಳಿ ಮಾಡುತ್ತವೆಯಾದ್ದರಿಂದ ಹುಷಾರಿ ಅಗತ್ಯ.

ದಾರಿ ಯಾವುದಯ್ಯಾ?
ಮುಂಬೈನಿಂದ 90 ಕಿ.ಮೀ., ಪುಣೆಯಿಂದ 120 ಕಿ.ಮೀ. ಪಯಣಿಸಿ ದಸ್ತೂರಿ ಕಾರ್ ಪಾರ್ಕಿಂಗ್‌ನಿಂದ ಕುದುರೆ, ಕಾಲ್ನಡಿಗೆ ಅಥವಾ ಪುಟಾಣಿ ರೈಲಿನಲ್ಲಿ 4 ಕಿ.ಮೀ. ಹೋಗಬೇಕು. ಮಳೆಗಾಲವಿಲ್ಲದಿದ್ದಾಗ ರೈಲನ್ನು ನೆರಲ್‌ನಲ್ಲಿ ಹತ್ತಬಹುದು.

- ಎಚ್.ಎಸ್. ನವೀನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.