

ಬೆಳಗಾವಿಯಲ್ಲಿ ನಡೆದ ಮೂರು ದಿನಗಳ ಡಿ.ಎಸ್.ಚೌಗಲೆ ಅವರ ನಾಟಕಗಳ ಹಬ್ಬ 'ಚೌರಂಗೋತ್ಸವ' ಮತ್ತು 'ನೀನಾಸಂ' ತಿರುಗಾಟದ ನಾಟಕ ಪ್ರಯೋಗಗಳು ಕನ್ನಡ ರಂಗಭೂಮಿಯ ಹೊಸ ಅಲೆಯ ದ್ಯೋತಕವಾಗಿದ್ದವು. ಕಿಕ್ಕಿರಿದ ಪ್ರೇಕ್ಷಕರಿಂದ ತುಂಬಿದ ಈ ಉತ್ಸವ ಹೊಸ ಚಿಂತನೆ ಹುಟ್ಟು ಹಾಕುವಂತಿತ್ತು.
ಜಂಗಮ ರಂಗತಂಡ ಅಭಿನಯಸಿದ 'ದಿಶಾಂತರ', ಸಾಗರದ ಸ್ಪಂದನ ತಂಡದ 'ಉಧ್ವಸ್ತ' ನಾಟಕಗಳು ನಮ್ಮ ನಡುವಿನ ಜ್ವಲಂತ ಸಮಸ್ಯೆಗಳ ಮೇಲಿದ್ದವು. ನಾಟಕಕಾರ ಚೌಗಲೆ ನಮ್ಮ ಸಮಕಾಲೀನ ನಾಟಕಕಾರರಲ್ಲಿ ಮುಖ್ಯರಾಗುವುದು ಇಂಥ ವಸ್ತುವಿನ ನಿರ್ವಹಣೆಯಿಂದಾಗಿಯೇ. ಪುರಾಣ, ಚರಿತ್ರೆಯಲ್ಲಿ ಸಿಲುಕಿರುವ ಕನ್ನಡ ರಂಗಭೂಮಿಗೆ ಇದು ವಿಶಿಷ್ಟ ಕೊಡುಗೆ. ಎರಡೂ ನಾಟಕಗಳನ್ನು ಪ್ರದೀಪ ತಿಪಟೂರು ನಿರ್ದೇಶನ ಮಾಡಿದ್ದರು. ನೀನಾಸಂನ 'ಗಾಂಧಿ ವಿರುದ್ಧ ಗಾಂಧಿ' ನಾಟಕವನ್ನು ಎಂ.ಗಣೇಶ ಈ ಕಾಲಕ್ಕೆ ಮತ್ತೊಂದು ನಿಟ್ಟಿನಲ್ಲಿ ವ್ಯಾಖ್ಯಾನಿಸಿದ್ದಾರೆ. ಇದೊಂದು ಪರಿಣಾಮಕಾರಿ ಪ್ರಯೋಗ. ನೀನಾಸಂನ 'ಸೀತಾ ಸ್ವಯಂವರಂ'ನಲ್ಲಿ ಹಳೆಯ ವಸ್ತುವನ್ನು ಸಮಕಾಲೀನಗೊಳಿಸುವ ಯತ್ನವನ್ನು ನಿರ್ದೇಶಕ ಮಂಜುನಾಥ ಬಡಿಗೇರ ಮಾಡಿದ್ದಾರೆ. ಯುವ ನಿರ್ದೇಶಕರು ಇಲ್ಲಿನ ಪಠ್ಯಗಳಿಗೆ ಹೊಸ ಅರ್ಥ ನೀಡಿ ವ್ಯಾಖ್ಯಾನಿಸಿರುವುದು ವಿಶೇಷವಾಗಿ ಕಂಡುಬಂತು.
ಈ ನಾಟಕೋತ್ಸವದಲ್ಲಿ ಅನೇಕ ವಿದ್ವಾಂಸರು ಚಿಂತನೆ ನಡೆಸಿದರು. ಎಲ್.ಕೃಷ್ಣಪ್ಪ ಅವರು ಚೌಗಲೆಯವರ ನಾಟಕಗಳ ಹಿನ್ನೆಲೆಯನ್ನು, ರವೀಂದ್ರನಾಥ ಸಿರಿವರ ಅವರು ಚೌಗಲೆ ನಾಟಕಗಳ ಸಾಧ್ಯತೆಗಳನ್ನು ಹಾಗೂ ಗುಡಿಹಳ್ಳಿ ನಾಗರಾಜ ಚೌಗಲೆಯವರ ನಾಟಕಗಳ ಮಹತ್ವವನ್ನು ತಿಳಿಸಿದರು. ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಚೌಗಲೆ ನಾಟಕಗಳ ಮೂಲಕ ಜ್ವಲಂತ ಸಮಸ್ಯೆಗಳ ಅಭಿವ್ಯಕ್ತಿಯ ವಿಧಾನ ಹಾಗೂ ಚಂದ್ರಕಾಂತ ಕುಸನೂರರು ಚೌಗಲೆಯವರು ಸಾಗಿ ಬಂದ ದಾರಿಯ ಹೆಜ್ಜೆ ಗುರುತುಗಳನ್ನು ವಿಶ್ಲೇಷಿಸಿದರು.
- ಡಾ.ರಾಜಪ್ಪ ದಳವಾಯಿ