ಸಾಪ್ತಾಹಿಕಪ್ರಭ

ಪರೇಲ್‌ನ ಆ ಗ್ಯಾಂಗ್‌ರೀನ್ ಮನುಷ್ಯ

Published On :

ಅಂತೂ ಆ ಓಣಿಯ ಹಾದಿ ಹಿಡಿದೆ. ಪಿಚ್ಚೆಂದು ಉಗಿದ ಪಾನಿನ ರಂಗೋಲಿ ಅಲ್ಲಿ ಭವ್ಯ ಸ್ವಾಗತ ಕೋರಿದವು. ಆರಂಭದಲ್ಲಿ ಅತ್ತಿತ್ತ ನಾಲ್ಕಾರು ಗೂಡಂಗಡಿಗಳು. ಎಂದೋ ಬಾಗಿಲು ಮುಚ್ಚಿದ ಹಳೇ ಜ್ಯುವೆಲ್ಲರಿ ಶಾಪಿನ ಫಲಕ ಹಾದಿಗೆ ತುಸು ಅಡ್ಡವಾಗಿ ನೇತುಬಿದ್ದಿತ್ತು. ಅದನ್ನು ದಾಟಿದ ಬಳಿಕ ಆ ಓಣಿಗೆ ಸ್ಮಶಾನದ ಕಳೆ. ಬಣ್ಣ ಬಣ್ಣದ ಮುಂಬೈಯೇ ಬೇರೆ, ಈ ಬ್ಲ್ಯಾಕ್ ಆ್ಯಂಡ್ ವೈಟ್ ಮುಂಬೈಯೇ ಬೇರೆ ಅಂತನ್ನಿಸುತ್ತಿತ್ತು. ಶುದ್ಧಗಾಳಿಯ ವಿಳಾಸ ಸಿಗುವುದಿಲ್ಲ. ಆ ಹಗಲುಗತ್ತಲಲ್ಲಿ ಕಣ್ಣು ಕಿರಿದು ಮಾಡಿ ಕೊನೆಯ ಬಿಂದುವನ್ನು ದೃಷ್ಟಿ ಜಾಲಾಡಿದರೆ ಕಾಣಿಸುವುದು ಒಂದು ಪಾಳುಬಿದ್ದ ಅಂಗಡಿ. ಯಾವ ಓಬೀರಾಯನ ಕಾಲದಲ್ಲಿ ಅಲ್ಲಿ ವ್ಯಾಪಾರ ನಡೆಯುತ್ತಿತ್ತೋ ನಾ ಕಾಣೆ.
ಅದೆಲ್ಲ ನನಗೇಕೆ? ಆ ಪಾಳು ಅಂಗಡಿಯೆದುರಿನ ಕಲ್ಲುಬೆಂಚಿನ ಮೇಲೆ ಒಬ್ಬ ಗ್ಯಾಂಗ್‌ರೀನ್ ಮನುಷ್ಯ ಮಲಗಿದ್ದಾನಲ್ಲ... ಅಷ್ಟು ಸಾಕು. ನನ್ನ ತೃಷೆ ತಣಿದು ಕುಣಿಯಿತೆಂದೇ ಲೆಕ್ಕ. ಅವನು ಜಡ್ಡು ಹಿಡಿದವನಂತೆ ಸದಾ ಮಲಗಿರುತ್ತಿದ್ದ. ಹಗಲಷ್ಟೇ ಅಲ್ಲ, ರಾತ್ರಿ ಹೋದರೂ ಆತ ಅಲ್ಲೇ ಮಲಗಿರುತ್ತಿದ್ದ.
ಅವನಿಗೋಸ್ಕರವೇ ನಾನು ಹುಡುಕಿಕೊಂಡು ಹೋಗಿದ್ದು...
ಕೊಳೆಯಾಗಿದ್ದು ಗೊತ್ತಾಗಬಾರದೆಂದು ಬೂದು ಬಣ್ಣದ ಹಳೆಯ, ಅಲ್ಲಲ್ಲಿ ಹರಿದ ಅಂಗಿಪ್ಯಾಂಟುಗಳನ್ನು ಧರಿಸಿ ಇಡೀ ಲೋಕವನ್ನೇ ಮರೆತು ಬಿದ್ದುಕೊಂಡಿರುತ್ತಿದ್ದ. ಮಂಡಿಯಿಂದ ಕೆಳಗೆ ನಾಲ್ಕೈದೆಳೆ ಪ್ಯಾಂಟನ್ನು ಮಡಚಿಕೊಂಡಿರುತ್ತಿದ್ದ. ಅಲ್ಲಲ್ಲಿ ಹಣ್ಣಾದ ಇಳಿಬಿದ್ದ ಗಡ್ಡ ಅವನ ಮುಖಕ್ಕೆ ಸಾಕ್ರಟೀಸ್‌ನ ಮುದ್ರೆ ತಂದುಕೊಟ್ಟಿತ್ತು. ಬಾಯಿಯಲ್ಲೇನೋ ಸಣ್ಣ ಕಡ್ಡಿಯನ್ನು ತನ್ನಷ್ಟಕ್ಕೇ ತುಂಡರಿಸುತ್ತಾ ಮಲಗಿರುತ್ತಿದ್ದ. ಕಾಲಿನ ಕೆಳಭಾಗದ ಮೇಲೊಂದು ತೆಳು ಟವೆಲ್ಲು. ಆ ಟವೆಲ್ಲಿನ ಮೇಲೆ ಹೈದರಾಲಿಯ ಸೇನೆಯಂತೆ ಮುತ್ತಿಗೆ ಹಾಕಿರುತ್ತಿದ್ದ ನೊಣಗಳು. ಅವು ಆ ಗ್ಯಾಂಗ್‌ರೀನ್ ಗಾಯವನ್ನು ಕಡಿದು ಕಡಿದು ಮುಕ್ಕುತ್ತಿದ್ದವು. ಆ ಅಸಾಧ್ಯ ನೋವಿಗೆ ಅವನು ಯಾವುದೇ ರೀತಿಯ ದೈಹಿಕ ಪ್ರತಿಕ್ರಿಯೆಗಳನ್ನು ಕೊಡುತ್ತಿರಲಿಲ್ಲ. ನಿಶ್ಚಿಂತೆಯಿಂದಲೇ ಮಲಗಿರುತ್ತಿದ್ದ. ಅಂಥ ಸಮಾಧಿ ಸ್ಥಿತಿ ಅವನಿಗೆ ಹೇಗೆ ಸಾಧ್ಯವಾಯಿತೆಂದು ಸ್ವತಃ ಅವನನ್ನೇ ಕೇಳಿದರೂ ಹೇಳಲಾರ.
ಮೆತ್ತಗೆ ಅವನ ಬಳಿ ಹೋಗುತ್ತಿದ್ದೆ. ನನ್ನ ನೆರಳು ಅವನ ಮೈಮೇಲೆ ಬಿದ್ದಿದ್ದು ಗೊತ್ತಾಗಿಯೇ ಕಣ್ಣುಬಿಡುತ್ತಿದ್ದ. ದಿವ್ಯಶಕ್ತಿಯೇನಲ್ಲ, ಅದು ಅವನಿಗೆ ಅಭ್ಯಾಸಬಲ.
'ಬೀಸ್‌ವಾಲಾ, ಚಾಲೀಸ್‌ವಾಲಾ' ಎಂದು ಅರವತ್ತು ರುಪಾಯಿಯನ್ನು ಕೊಡುತ್ತಿದ್ದೆ. ಇಪ್ಪತ್ತು, ನಲ್ವತ್ತು ರುಪಾಯಿಯ ಚರಸ್ ಡಬ್ಬಿಗೆ ಅದೇ ಕೋಡ್‌ವರ್ಡ್. ಅಪ್ಪಿತಪ್ಪಿ ಯಾರಾದರೂ ಈ ಪದಗಳನ್ನು ಬಿಟ್ಟು ಬೇರೆ ಪದ ಪ್ರಯೋಗಿಸಿದರೆ, ಗಿರಾಕಿ ಮಾತನಾಡುತ್ತಿರುವುದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ಹಾಗೆಯೇ ಮಲಗಿಬಿಡುತ್ತಿದ್ದ ಆತ.
ನಿತ್ಯ ಅವನ ಬಳಿ ನೂರಾರು ಗಿರಾಕಿಗಳು ಬರುತ್ತಾರೆ. ಅವನೆಂದೂ ಅವರೊಂದಿಗೆ ಮಾತನಾಡಿದ್ದನ್ನು ನಾನು ಕಂಡಿಲ್ಲ. ನನ್ನ ಬಳಿಯಂತೂ ಅಂವ ಯಾವತ್ತೂ ಮಾತನಾಡಿಲ್ಲ. ಆದರೆ, ಅವನು ಮೂಗನಲ್ಲ. ಮೂಡ್ ಇದ್ದಾಗ ಹಳೇ ಮರಾಠಿ ಪಿಕ್ಚರಿನ ಯಾವುದಾದರೂ ಹಾಡನ್ನು ಗುನುಗುತ್ತಿರುತ್ತಿದ್ದ. ಮರಾಠಿ ಗಾನಚತುರ ಸುಧೀರ್‌ಫಡ್ಕೆಯ ಹಾಡನ್ನು ಅನುಕರಿಸುತ್ತಿದ್ದುದ್ದನ್ನು ನಾನು ಒಂದೆರಡು ಸಲ ಕೇಳಿದ್ದೆ.
ಕೊಟ್ಟ ದುಡ್ಡನ್ನು ಕೂಡಲೇ ಜೇಬೊಳಗೆ ತುರುಕಿಕೊಂಡು, ಕಾಲಿನ ಕೆಳಭಾಗದಲ್ಲಿ ಹೊದ್ದುಕೊಂಡಿದ್ದ ಟವೆಲ್ಲನ್ನು ಮೇಲಕ್ಕೆತ್ತುತ್ತಿದ್ದ. ಅವನ ಕಾಲುಗಳು ಕೆಟ್ಟವಾಸನೆಯ ಕಾರ್ಖಾನೆಯೇ ಆಗಿಹೋಗಿದ್ದವು. ಹಾಗಂತ ನಾನೇನು ಮೂಗು ಮುಚ್ಚಿಕೊಳ್ಳುತ್ತಿರಲಿಲ್ಲ. ಅವನಿಂದ ನನಗೆ ಕೆಲಸ ಆಗಬೇಕಲ್ಲ! ಅವನ ಎರಡು ಕಾಲುಗಳೂ ಹಾಗೆ ಕೊಳೆತುಹೋಗಿದ್ದನ್ನು ಕಂಡು ನನಗೆ ಮರುಕ ಹುಟ್ಟುತ್ತಿತ್ತು. ಆದರೆ, ಅದರ ಬಗ್ಗೆ ಯಾವ ಚಿಂತೆಯೂ ಇಲ್ಲವೆಂಬಂತೆ ಅವನ ಮುಖ ಅರಳಿರುತ್ತಿದ್ದುದ್ದನ್ನು ಕಂಡು ನನ್ನನ್ನು ನಾನು ಸಂತೈಸಿಕೊಳ್ಳುತ್ತಿದ್ದೆ.
ಎರಡು ಊರುಗೋಲುಗಳನ್ನು ಅತ್ತಿತ್ತ ಕಂಕುಳೊಳಗೆ ಕೂರಿಸಿಕೊಂಡು, ಕಟಕಟನೆ ನಡೆಯತೊಡಗುತ್ತಿದ್ದ... ಅಲ್ಲೇ ಹಿಂದೆ ಪಾಳುಬಿದ್ದಿದ್ದ ಪಬ್ಲಿಕ್ಕು ಟಾಯ್ಲೆಟ್ಟಿನೊಳಕ್ಕೆ.
ಆದರೆ, ಗಿರಾಕಿಗಳ್ಯಾರೂ ಅವನ ಹಿಂದೆ ಹೋಗುವಂತಿರಲಿಲ್ಲ. ಅವನನ್ನು ಸ್ವಲ್ಪ ಸನಿಹದವರೆಗೂ ಹಿಂಬಾಲಿಸುವಂತೆಯೂ ಇರಲಿಲ್ಲ. ನಾನಂತೂ ಅವನು ಮಲಗುತ್ತಿದ್ದ ಕಲ್ಲುಬೆಂಚಿನ ಮೇಲೊಂದು ಕಾಲಿಟ್ಟು, ಸಿಗರೇಟಿನ ಮೂತಿಗೆ ಬೆಂಕಿ ತಗುಲಿಸಿ, ಹೊಗೆಯನ್ನು ರುಜುವಾಕಾರದಲ್ಲಿ ತೇಲಿ ಬಿಡುತ್ತಾ ಗಿರಾಕಿಯ ಗತ್ತನ್ನು ಪ್ರದರ್ಶಿಸುತ್ತಿದ್ದೆ. ಹಾಳಾದ ಮನಸ್ಸು ಸಿಗರೇಟಿನ ಸ್ವಾದವನ್ನೂ ಗ್ರಹಿಸುತ್ತಿರಲಿಲ್ಲ. ಏಕೆಂದರೆ, ಅದು ಬೇರೆ ರುಚಿಯ ಕನವರಿಕೆಯಲ್ಲಿತ್ತು.
ಒಂದು ನಿಮಿಷದ ನಂತರ ಅವನು ನನ್ನ ಕೈಗೆ ಚರಸ್‌ನ ಡಬ್ಬಿ ತಂದಿಡುತ್ತಿದ್ದ. ಅದರಲ್ಲಿ ಎರಡು ಮೂರು ಗೋಲಿಗಳನ್ನು ಅವನೇ ಇಟ್ಟುಕೊಳ್ಳುತ್ತಿದ್ದ. ಅವನ ಆ ನಿರ್ಧಾರಕ್ಕೆ ನನ್ನ ಅಬ್ಜೆಕ್ಷನ್ನಿರಲಿಲ್ಲ. ನಾನದನ್ನು ಕಮಿಷನ್ ಅಂತಲೇ ಭಾವಿಸಿಕೊಂಡಿದ್ದೆ. ಎಷ್ಟಂದರೂ ಗ್ಯಾಂಗ್‌ರೀನ್ ಆದವ. ನೋವು ಆತನನ್ನು ಯಾವ ಪರಿ ಹಿಂಡುತ್ತಿತ್ತೋ ಏನೋ? ಇನ್ನೆಷ್ಟು ದಿನ ಬದುಕುತ್ತಾನೋ? ಚರಸ್‌ನ ನಶೆಯಿಂದ ಬಹುಶಃ ಅವನಿಗೆ ಸಮಾಧಾನ ಸಿಗುತ್ತಿತ್ತು ಅಂತ ಕಾಣುತ್ತದೆ. ಎರಡು ಗೋಲಿ ಖರ್ಚಾದರೆ ಅದರಲ್ಲಿ ನನ್ನ ಗಂಟೇನೂ ಖರ್ಚಾಗದು ಅಂತ ಒಮ್ಮೆ ಅನ್ನಿಸಿದರೆ, ಮತ್ತೊಮ್ಮೆ ಅದನ್ನೂ ಅವನ ಕೈಯಿಂದ ಕಸಿದುಕೊಂಡು ಓಡಿಬರೋಣ ಎಂಬ ಕುತಂತ್ರವನ್ನು ನನ್ನೊಳಗೇ ಯಾರೋ ಹೆಣೆಯುತ್ತಿದ್ದರು. ತಕ್ಷಣವೇ ಮರುದಿನದ ಚಡಪಡಿಕೆ ನೆನಪಾಗಿ, ಆ ಥರ ಮಾಡುವುದು ಸರಿಯಲ್ಲ ಅಂತನ್ನಿಸುತ್ತಿತ್ತು.
ವ್ಯವಹಾರ ಮುಗಿದ ಮೇಲೆ ನಾನು ಅಲ್ಲಿಂದ ಒಂದೇ ನಿಮಿಷದಲ್ಲಿ ವಾಪಸಾಗಬೇಕಿತ್ತು. ಅಲ್ಲಿ ಅವನನ್ನು ಬಿಟ್ಟು ಇತರರಿಗೆ ಇರಲು ಅವಕಾಶ ಇದ್ದಿರಲಿಲ್ಲ. ಕೆಲಸ ಮುಗಿದ ಕೂಡಲೇ ಕಾಲ್ ಕೀಳಬೇಕು. ಅಕ್ರಮಲೋಕದಲ್ಲಿ ಯಾರೂ ರೂಲ್ಸು ಹೇಳಿಕೊಡುವುದಿಲ್ಲ. ಸೂಕ್ಷ್ಮತೆಗಳನ್ನು ಅರಿತವರೇ ಅಲ್ಲಿಗೆ ಬರುತ್ತಾರೆ. ಗೊತ್ತಿಲ್ಲದವರು ಬರುವ ಮೊದಲೇ ಅನುಭವಸ್ಥರಿಂದ ಕೆಲವು ಗುಟ್ಟುಗಳನ್ನು ತಿಳಿದುಕೊಂಡೇ ಬಂದಿರುತ್ತಾರೆ.
ನನಗೆ ಆ ಗ್ಯಾಂಗ್‌ರೀನ್ ಮನುಷ್ಯ ಈಗಲೂ ಅಚ್ಚರಿ. ಇಡೀ ಆ ಒಂದು ವರ್ಷದಲ್ಲಿ ಅವನ ಗಾಯ ಹೇಗಿತ್ತೋ, ಹಾಗೆಯೇ ಇತ್ತು. ಅವನೆಂದೂ ಆ ಕಲ್ಲುಬೆಂಚಿನ ಮೇಲೆ ಇರದೇ ಇದ್ದಿದ್ದನ್ನು ನಾನು ನೋಡಿಲ್ಲ. ಇಪ್ಪತ್ನಾಲ್ಕು ಗಂಟೆ ಸದಾ ಮಲಗಿಯೇ ಇರುತ್ತಿದ್ದನೆಂದರೆ, ಅವನೆಂಥ ನಿದ್ದೆಗುಮ್ಮ! ಮಳೆ- ಚಳಿ- ಬಿಸಿಲಿನ ಭಯವಾದರೂ ಬೇಡಿತ್ತೇ? ನಮಗೆ ನಲ್ವತ್ತು ರುಪಾಯಿಯ ಐಟಂ ಬೇಕಿತ್ತು ಅಂದ್ರೆ, ಅಷ್ಟೇ ದುಡ್ಡು ಕೊಡಬೇಕಿತ್ತು. ಕಡಿಮೆ ಕೊಟ್ಟರೆ ಅದನ್ನು ಮುಟ್ಟುತ್ತಿರಲಿಲ್ಲ. ಚೇಂಜಿಲ್ಲ ಅಂತ ನೂರು ರು. ಕೊಟ್ಟರೆ ಆ ಆಸಾಮಿ ಮಿಕ್ಕ ಅರವತ್ತು ರುಪಾಯಿಗಳನ್ನು ವಾಪಸ್ಸೇ ಕೊಡುತ್ತಿರಲಿಲ್ಲ. ಅವನದ್ದು ಎಡಗೈ- ಬಲಗೈ ವ್ಯವಹಾರ. ಆ ವ್ಯವಹಾರ ನೀತಿ ಕಂಡು ಕೆಲವೊಮ್ಮೆ ನನಗೆ ಪಿತ್ತ ನೆತ್ತಿಗೇರಿದ್ದೂ ಇದೆ. ಹಾಗಾಗಿ, ಸರಿಯಾಗಿ ಚಿಲ್ಲರೆ ಕೊಟ್ಟು ಚರಸ್ ತೆಗೆದುಕೊಳ್ಳುತ್ತಿದ್ದೆ.
ಚರಸ್ ಎನ್ನುವುದು ಗಾಂಜಾದಿಂದ ತಯಾರಿಸುವ ಗೋಲಿ ಮಾದಕ. ಮುಂಬೈನಲ್ಲಿ ಅಲ್ಲಲ್ಲಿ ಎಗ್ಗಿಲ್ಲದೆ ಮಾರಾಟವಾಗುತ್ತಿತ್ತು. ಮುಂಬೈಗೆ ಅಗಾಧ ಪ್ರಮಾಣದಲ್ಲಿ ಚರಸ್ ಪೂರೈಸುತ್ತಿದ್ದುದ್ದು ಹಿಮಾಚಲ ಪ್ರದೇಶವೇ ಆಗಿತ್ತು. ಕಾಶ್ಮೀರದಿಂದಲೂ ಮಾಲು ಬರುತ್ತಿತ್ತಂತೆ. ಆ ಗ್ಯಾಂಗ್‌ರೀನ್ ಮನುಷ್ಯನ ಬಳಿ ಆಫ್ಘನ್, ಪಾಕ್, ಕಾಶ್ಮೀರಿ, ನೇಪಾಳಿ ಚರಸ್ ಸಿಗುತ್ತಿತ್ತು. ಪಾಕಿಸ್ತಾನದ ಗರ್ದಾ ಐಟಮ್ಮಿಗೆ ತುಂಬಾ ಡಿಮ್ಯಾಂಡಿತ್ತು. ಹಲವು ಬಾರಿ ಸೇದಿದ್ದೆ. ಮಿಕ್ಕೆಲ್ಲ ಗಾಂಜಾ ಉತ್ಪನ್ನಕ್ಕಿಂತ ಅದ್ಭುತ ಲೋಕವನ್ನು ಕಣ್ಣೆದುರು ಕಟ್ಟಿಕೊಡುತ್ತಿತ್ತು. ಇವ್ಯಾವೂ ಸೇಂದಿ, ಸಾರಾಯಿಗಳಂತೆ ತೂರಾಡಿಸುವುದಿಲ್ಲ. ನಡೆಯುವ ಸಾಹಸಕ್ಕೂ ಪ್ರೇರೇಪಿಸುವುದಿಲ್ಲ. ಆದರೆ, ಮನಸ್ಸು ಮಾತ್ರ ವಿಪರೀತ ಸುತ್ತಾಡುತ್ತದೆ. ಅದಕ್ಕೆ ಕೆಲವೊಮ್ಮೆ ವಾಪಸು ಬರಲು ದಾರಿಯೇ ಗೊತ್ತಾಗುವುದಿಲ್ಲ.

- ಕೀರ್ತಿ ಕೋಲ್ಗಾರ್
kolgarkeerthi@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.