ಬುಕ್ಶಾಪ್
ನುಡಿ ನಾರಾಯಣ
ಕರುನಾಡ ರಕ್ಷಣೆಗೆ ಕರವೇ
ಎಂದೆಂದು ಮುಂದು ಎಂದೆಂದು ಮುಂದು
ಹೀಗೆಂದು ಘೋಷಿಸುವುದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣ ಗೌಡರಿಂದ ಮಾತ್ರ ಸಾಧ್ಯ. ಸದಾ ಕನ್ನಡ ನುಡಿ ಗಡಿಗಳ ಬಗ್ಗೆ ಚಿಂತಿಸುವ ಗೌಡರೊಳಗೊಬ್ಬ ಕವಿ ಅವಿತಿದ್ದಾನೆ ಎಂಬುದು ಅವರ 'ಪ್ರೇಮ ಚಾಮರ' ಕವನ ಸಂಕಲನವನ್ನು ನೋಡಿದಾಗ ಅರಿವಾಗುತ್ತದೆ. ಒಟ್ಟೂ ಸೃಜನ ಕ್ರಿಯೆಯೇ ಒಂದು ಹೋರಾಟದ ಫಲಶ್ರುತಿ. ಕವಿಯಾದವ ಸದಾ ಭಾವನೆಗಳೊಂದಿಗೆ ತಾಕಲಾಡುತ್ತಲೇ ಇರುತ್ತಾನೆ. ಈ ತಾಕಲಾಟಕ್ಕೆ ಒಂದು ಗುರಿ ದಕ್ಕಿದಾಗ ಕವಿಗೆ ಒಂದು ಸಾರ್ಥಕ್ಯ. ನಾರಾಯಣ ಗೌಡರಿಗೆ ತಮ್ಮ ಗುರಿ ಸ್ಪಷ್ಟವಾಗಿದೆ. ಕನ್ನಡ ಬಿಟ್ಟು ಬೇರೇನೂ ಅವರಲ್ಲಿ ಇಲ್ಲ. 'ಕನ್ನಡ ತಾಯ್ ಕೆಣಕಿದರೆ ಶಿರ ಹರಿದು ನಿಲ್ಲುವೆವು' ಎಂಬ ಕೆಚ್ಚು ಅವರದು. 'ಕನ್ನಡದ ರನ್ನಗಳಿರ ಕೆರಳಿ ನಿಂತು ಹೇಳಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ' ಎಂದು ಕರೆ ಕೊಡುವರು.
'ಸ್ವರ್ಗಕ್ಕೆ ಹತ್ತಿರ ಈ ನನ್ನ ಭೂಮಿ, ಅಂಬರ ನನ್ನಮ್ಮನಿಗೆ ಚಾಮರ' ಎಂದು ವರ್ಣಿಸುತ್ತಾರೆ ಕವಿ. 'ಕನ್ನಡ ಕ್ರಾಂತಿಯ ಕಿಡಿಗಳೇ ಕರುನಾಡಿನ ನನ್ನ ಸಿಂಹಗಳೇ ಬಲವಿರಲಿ ನಿಮ್ಮ ತೋಳಿನಲಿ, ಛಲವಿರಲಿ ನಿಮ್ಮ ನುಡಿಯಲ್ಲಿ' ಹೀಗೆಂದು ಕರೆ ಕೊಡುತ್ತಾರೆ. ನಾಡು ನುಡಿಯ ಬಗೆಗಿನ ಗೀತೆಯನ್ನು ರಚಿಸುವಾಗ ಆವೇಶ ಅವರ ಮೈತುಂಬಿರುತ್ತದೆ. ಇಲ್ಲಿಯ ಕೆಲವು ಕವಿತೆಗಳನ್ನು ಧ್ವನಿಯೆತ್ತಿ ಹಾಡಿದಾಗ ಮೈ ನವಿರೇಳದೆ ಇರದು.
ಈ ಸಂಕಲನದಲ್ಲಿ ಸಮಾಜಮುಖಿಯಾದ ಕೆಲವು ಗೀತೆಗಳೂ ಇವೆ. 'ರೈತನ ಭೂಮಿ ಅವರಲಿ ಉಳಿಯಲಿ, ಬಂಗಾರದ ಬೆಳೆ ಬೆಳೆದು ಬದುಕು ಸಾಗಲಿ, ಕಣ್ಣೀರಿನ ಹೊಳೆ ನಿಲ್ಲಲಿ, ರೈತನೇ ದೇಶ ಎಂದು ತಿಳಿಯಲಿ' ಎನ್ನುವ ಸಾಲುಗಳು ಅವರ ರೈತ ಪ್ರೀತಿಯನ್ನು ತೋರಿಸುತ್ತದೆ.
ಕೆಲವು ಪ್ರೇಮಗೀತೆಗಳೂ ಈ ಸಂಕಲನದಲ್ಲಿದ್ದು ನವಿರಾದ ಭಾವನೆಗಳನ್ನು ಓದುಗರಲ್ಲಿ ಹುಟ್ಟಿಸುತ್ತವೆ. ತಮಗೆ ಜನ್ಮ ನೀಡಿದ ತಂದೆ ಮತ್ತು ತಾಯಿಯನ್ನು ಕುರಿತ ಕವಿತೆಗಳೂ ಇವೆ. ಕುರಿತೋದದೆಯೂ ತಮ್ಮ ಜಾನಪದ ಹಿನ್ನೆಲೆಯಿಂದ ಕವಿತ್ವವನ್ನು ಮೈಗೂಡಿಸಿಕೊಂಡಿರುವ ನಾರಾಯಣ ಗೌಡರು ಕನ್ನಡ ಕಾವ್ಯ ಸರಸ್ವತಿಗೆ ಚೆನ್ನಾಗಿಯೇ ಚಾಮರವ ಬೀಸಿದ್ದಾರೆ.
ಕೃತಿ 2
ನಾರಾಯಣ ಗೌಡರ ಇನ್ನೊಂದು ಕೃತಿ ಅಂಕಣ ಬರೆಹಳ ಸಂಕಲನ 'ನೇರನುಡಿ-2'. 'ಕರವೇ ನಲ್ನುಡಿ' ಮಾಸಪತ್ರಿಕೆಯ್ಲಲಿ ಬಂದ ಅವರ ಅಂಕಣಗಳ ಎರಡನೇ ಸಂಕಲನ ಇದು. ಕನ್ನಡಕ್ಕೆ ಸಂಬಂಧಿಸಿದ ಸಮಕಾಲೀನ ಸಮಸ್ಯೆಗಳಿಗೆ ಅದರಲ್ಲಿ ಅವರ ಪ್ರತಿಕ್ರಿಯೆ ಇದೆ. ಮುನ್ನುಡಿಯಲ್ಲಿ ಪ್ರೊ. ಹಂಪನಾ ಹೇಳಿರುವಂತೆ, 'ನಾರಾಯಣ ಗೌಡರ ಹೆಚ್ಚಳವೆಂದರೆ ಅವರು ಸಮಸ್ಯೆಯ ಎಲ್ಲ ಮುಖಗಳನ್ನೂ ಅಂಕಿಅಂಶ ಸಹಿತ, ದಾಖಲೆ ಪುರಾವೆಗಳನ್ನು ಹರಡಿ ವಿಶ್ಲೇಷಣೆ ಮಾಡುತ್ತಾರೆ.'
ಕರ್ನಾಟಕದಲ್ಲಿ ರಾಜಕೀಯ ಅಧಿಕಾರದಲ್ಲಿರುವ ಪಕ್ಷಗಳು ಕನ್ನಡದ ರಕ್ಷಣೆಗೆ ಏನೂ ಮಾಡುತ್ತಿಲ್ಲ ಎಂಬ ಆಕ್ರೋಶ ಅವರದು. ಕನ್ನಡ ಶಾಲೆ ಮುಚ್ಚುವ ಸರ್ಕಾರದ ದುಷ್ಟ ಹುನ್ನಾರದ ವಿರುದ್ಧ ಅವರು ಇಲ್ಲಿ ಕಿಡಿಕಾರಿದ್ದಾರೆ. ಪ್ರಾದೇಶಿಕ ಚಿಂತನೆ ಇವತ್ತಿನ ಅಗತ್ಯ ಎಂಬುದನ್ನು ಅವರು ಪ್ರತಿಪಾದಿಸಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಕರವೇಯನ್ನು ರಾಜಕೀಯ ಪಕ್ಷವಾಗಿ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಚಿಸಿದ್ದರು. ಪ್ರಾದೇಶಿಕ ಪಕ್ಷಗಳ ವೇಷದಲ್ಲಿ ಅವಕಾಶವಾದಿಗಳಾದವರನ್ನು ಅವರು ಝಾಡಿಸಿದ್ದಾರೆ. ಸಿದ್ಧರಾಮಯ್ಯನವರಿಗೆ ಕನ್ನಡ ಜನತೆಯ ಅಹವಾಲುಗಳನ್ನು ಸಾದರಪಡಿಸುವಲ್ಲಿನ ಗೌಡರ ಜನಪರ ಕಾಳಜಿಯನ್ನು ಗುರುತಿಸಬೇಕು.
ಹಂಪನಾ ಹೇಳಿರುವ ಇನ್ನೊಂದು ಮಹತ್ವದ ಮಾತನ್ನು ಇಲ್ಲಿ ಪ್ರಸ್ತಾಪಿಸದಿದ್ದರೆ ಅನ್ಯಾಯವಾಗುತ್ತದೆ. ಬೆಳಗಾವಿ ವಿಶ್ವಕನ್ನಡ ಸಮ್ಮೇಳನದ ಯಶಸ್ಸಿನಲ್ಲಿ ಕರವೇ ಪಾತ್ರವನ್ನು ಪ್ರಸ್ತಾಪಿಸುತ್ತ, 'ನಾರಾಯಣ ಗೌಡರು ಯಾವಾಗಲೂ ಪ್ರತಿನಾಯಕರಾಗಿ ನಿಲ್ಲುವವರಲ್ಲ ಎಂಬುದನ್ನು ಸಾಬೀತುಪಡಿಸಿದ್ದು, ಸರಕಾರ ಜನಪರ ನಿಲುವು ತಳೆದಾಗ ಅವರು ಬೇಷರತ್ತು ಬೆಂಬಲಿಸುತ್ತಾರೆ. ದಾರಿ ತಪ್ಪಿದಾಗ, ಕನ್ನಡಿಗರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆಂಬ ಗುಮಾನಿ ಬಂದಾಗ ಗೌಡರು ಗರಮಾ ಗರಮ್ ಆಗುತ್ತಾರೆ' ಎಂದು ಹೇಳಿದ್ದಾರೆ.
ಕನ್ನಡ ನಾಡುನುಡಿಯ ಬಗ್ಗೆ, ಇಲ್ಲಿಯ ಜನರ ಉತ್ತಮ ಬದುಕಿನ ಬಗ್ಗೆ ಕಾಳಜಿ ಇರುವವರು ನಾರಾಯಣಗೌಡರ ಬರೆಹವನ್ನು ಓದಲೇಬೇಕು. ರಾಜಕೀಯ ಅಧಿಕಾರದಲ್ಲಿರುವವರಿಗಂತೂ ಇವು ಕಿವಿಮಾತುಗಳಾಗಿವೆ.
ಕೃತಿ: ಪ್ರೇಮ ಚಾಮರ, ನೇರನುಡಿ-2,
ಪ್ರಕಾರ: ಕವಿತೆ, ಅಂಕಣ,
ಏಕೆ ಓದಬೇಕು?: ಕನ್ನಡ ಪ್ರೀತಿಗೆ,
ಪ್ರ: ಗಂಗ ಪ್ರಕಾಶನ, ಬೆಂಗಳೂರು,
ಪುಟಗಳು 92/148, ಬೆಲೆ ರು. 100/ 120
ಸರಸ್ವತಿ ಪ್ರಪಂಚ
ಹಿಂದೆ ವಿಷ್ಣಶರ್ಮ ಎಂಬಾತ ರಾಜನೊಬ್ಬನ ದಡ್ಡ ಮಕ್ಕಳನ್ನು ರಾಜನೀತಿ ವಿಶಾರದನ್ನಾಗಿ ಮಾಡಲು ಪಂಚತಂತ್ರ ಎಂಬ ಕೃತಿಯನ್ನು ರಚಿಸಿದ. ಅದು ಕನ್ನಡದಲ್ಲಿ ದುರ್ಗಸಿಂಹನ ಮೂಲಕ ಬಂತು. ಇಂಥ ನೀತಿಬೋಧವಾದ ಕತೆಗಳು ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಅಪಾರ ಪ್ರಮಾಣದಲ್ಲಿಯೇ ಇವೆ. ಎಸ್.ಬಿ. ಸರಸ್ವತಿಯವರು ಇಲ್ಲಿ ಅರವತ್ತು ದೃಷ್ಟಾಂತ ಕತೆಗಳನ್ನು ಹೇಳಿದ್ದಾರೆ. ಇವುಗಳಲ್ಲಿ ಪುರಾಣಗಳಿವೆ, ಇತಿಹಾಸವಿದೆ. ಕೊನೆಯಲ್ಲಿ ಒಂದು ನೀತಿಬೋಧೆ ಇದೆ. ಯಾವವೂ ದೊಡ್ಡದಾಗಿಲ್ಲ. ಪಾರಿವಾಳ ಶಾಂತಿಯ ಸಂಕೇತವಾದ ಕತೆ ಮನನೀಯವಾಗಿದೆ. 'ರಾಜನಾಗಲು ಬೇಕಾದ ಮುಖ್ಯ ಲಕ್ಷಣವೇನು?' ಎಂಬ ಕತೆಯನ್ನು ಇಂದಿನ ರಾಜಕಾರಣಿಗಳೂ ಓದಬೇಕು. ಸಮಾಜದ ಎಲ್ಲ ವರ್ಗದವರಿಗೂ ಬದುಕಿನ ದಾರಿದೀಪವಾಗಬಲ್ಲ ಹೊಳಹುಗಳು ಇಲ್ಲಿ ಸಿಗುತ್ತವೆ.
ಕೃತಿ: ದೃಷ್ಟಾಂತ ಕಥೆಗಳು
ಪ್ರಕಾರ: ಕತೆಗಳು
ಏಕೆ ಓದಬೇಕು?: ಬದುಕು ಅರಿಯಲು
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ,
ಪುಟಗಳು 144, ಬೆಲೆ ರು. 120
ತಾಯಿ ಮಮತೆಯ ಬೀಜ
ಕಾಂತರಾಜಪುರ ಸುರೇಶ್ ಅವರ ಕವನ ಸಂಕಲನ 'ನನ್ನವ್ವನ ಹಾದಿ' 36 ಕವನಗಳನ್ನು ಒಳಗೊಂಡಿದೆ. ಇದಕ್ಕೆ ಮುನ್ನುಡಿಯನ್ನು ಬರೆದಿರುವ ಕವಿ ಎಸ್.ಜಿ. ಸಿದ್ಧರಾಮಯ್ಯ ಅವರು, "ಅವ್ವ ಬದುಕಿನ ಜೀವಶಕ್ತಿಯಾದಷ್ಟೇ ಕಾವ್ಯದ ಅನುಭಾವಿಕ ಪ್ರಜ್ಞೆ ಕೂಡ. ಜಗತ್ತಿನ ಎಲ್ಲ ಕವಿಗಳ ಲೋಕದೃಷ್ಟಿಯ ಆಂತರ್ಯದಲ್ಲಿರುವ ಆರ್ದ್ರ ಭಾವಸಿರಿ ತಾಯಿಯ ಅಂತಃಕರಣವನ್ನು ಒಳಗೊಂಡದ್ದು. ನಿಮ್ಮ ಮುಂದಿನ ರಚನೆಗಳಲ್ಲಿ ಈ ತಾಯಿ ಪ್ರಜ್ಞೆ ಜೀವಸೆಲೆಯಾಗಲಿ. ಕಲೆ ಮತ್ತು ಬದುಕನ್ನು ಸಂಗತಗೊಳಿಸುವ ಸಂವೇದನಾ ಧಾತುವಾಗಲಿ. ಅಧ್ಯಯನಶೀಲತೆ ಮತ್ತು ಲೋಕದ ಅನುಭವಕ್ಕೆ ತೆರೆದ ತಾಯ ಪ್ರಜ್ಞೆ ನಿಮ್ಮ ಕಾವ್ಯಕ್ಕೆ ತಾಳುವ ಬಾಳುವ ಶಕ್ತಿಯನ್ನು ತರಲಿ..." ಎಂದು ಹೇಳಿದ್ದಾರೆ. ಈ ಸಂಕಲನದಲ್ಲಿ ಕೆಲವು ಪ್ರಕೃತಿಯಾರಾಧನೆಯ, ಪ್ರೇಮಾರಾಧನೆಯ ಕವಿತೆಗಳು ಇವೆ. ಜೊತೆಗೆ ಸಮಾಜದ ಓರೆಕೋರೆಗಳ ಬಗೆಗೆ ಟೀಕೆ ಟಿಪ್ಪಣಿಗಳಿವೆ. ಸುರೇಶ ಅವರಲ್ಲಿ ಕಾವ್ಯ ಕಟ್ಟುವ ಶಕ್ತಿ ಇದೆ. ಅವರು ಪೂರ್ವ ಕವಿಗಳನ್ನು ಅಭ್ಯಸಿಸಿದರೆ ಇನ್ನೂ ಸಫಲ ಕಾವ್ಯ ನೀಡಬಲ್ಲರು.
ಕೃತಿ: ನನ್ನವ್ವನ ಹಾದಿ
ಪ್ರಕಾರ: ಕವಿತೆ
ಏಕೆ ಓದಬೇಕು?: ಓದಿನ ಖುಷಿಗೆ
ಪ್ರ: ವಸು ಪ್ರಕಾಶನ, ಬೆಂಗಳೂರು,
ಪುಟಗಳು 84, ಬೆಲೆ ರು. 65
ವಿಷ್ಣು ವಾಣಿ
ಸಂಸ್ಕೃತ ವಿದ್ವಾಂಸರಾದ ಪ್ರೊ. ವಿಷ್ಣು ಜೋಶಿಯವರು 'ಬಾಳಿಗೆ ಬೆಳಕು ಸುಭಾಷಿತ' ಕೃತಿಯಲ್ಲಿ ಎಂಬತ್ತೈದು ಸುಭಾಷಿತಗಳಿಗೆ ಮೂಲಕ್ಕೆ ಕುಂದು ಬಾರದಂತೆ ವ್ಯಾಖ್ಯಾನವನ್ನು ನೀಡಿದ್ದಾರೆ. ಸುಭಾಷಿತಗಳು ಸಂಸ್ಕೃತ ಸಾಹಿತ್ಯದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಇವೆ. ವೇದೋಪನಿಷತ್ತು, ಸ್ಮೃತಿಗಳು, ಪುರಾಣಗಳು, ರಾಮಾಯಣ, ಮಹಾಭಾರತ, ಶ್ರೇಷ್ಠ ಕವಿಗಳಾದ ಭಾಸ, ಕಾಳಿದಾಸ, ಭಾರವಿ, ಮಾಘ, ಶ್ರೀಹರ್ಷ ಮೊದಲಾದವರ ಕೃತಿಗಳಲ್ಲಿ ಅಮೃತೋಪಮ ವಿಚಾರಗಳನ್ನು ಹೊಂದಿರುವ ಸುಭಾಷಿತಗಳಿವೆ. ಇವು ಜನಸಾಮಾನ್ಯರಿಗೆ ಬದುಕಿನ ಪಾಠವನ್ನು ಹೇಳುತ್ತವೆ. ಮಿತ್ರ ಸಮ್ಮಿತವಾಗಿ ಕಾಂತಾಸಮ್ಮಿತವಾಗಿ ಈ ಉಪದೇಶಗಳಿರುವುದರಿಂದ ಅವು ಮನಸ್ಸಿಗೆ ನಾಟುತ್ತವೆ. ಮೂಲ ಸುಭಾಷಿತದ ಅರ್ಥ ವಿಸ್ತರಣೆಯ ಕಾಲಕ್ಕೆ ಇನ್ನೂ ಹಲವು ಸುಭಾಷಿತಗಳನ್ನು ಜೋಶಿಯವರು ವಿವರಿಸಿದ್ದಾರೆ. ಯಾವುದೂ ದೀರ್ಘವಿಲ್ಲ. ದಿಕ್ಕು ತೋಚದವರಿಗೆ ಮಾರ್ಗದರ್ಶಕಗಳಾಗಿವೆ ಈ ಸುಭಾಷಿತಗಳು. ಹಾಗೆಯೇ ಜೋಶಿಯವರ ಪಾಂಡಿತ್ಯಕ್ಕೆ ಇದೊಂದು ದರ್ಪಣ.
ಕೃತಿ: ಬಾಳಿಗೆ ಬೆಳಕು ಸುಭಾಷಿತ
ಪ್ರಕಾರ: ಸುಭಾಷಿತಗಳು
ಏಕೆ ಓದಬೇಕು?: ಜ್ಞಾನಾರ್ಜನೆಗೆ
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ,
ಪುಟಗಳು 192, ಬೆಲೆ ರು. 150
ವೈದ್ಯ ಕತೆ
ಸಜ್ಜನ ವೈದ್ಯ ಡಾ.ಎಂ.ಬಿ. ಮರಕಿಣಿಯವರ ಆತ್ಮಕಥನ ಇದು. ಒಂದು ರೀತಿಯಲ್ಲಿ ಇದು ಸಾಹಸ ಕಥನವೂ ಹೌದು. ಬಡತನದಲ್ಲೇ ಹುಟ್ಟಿ ಬೆಳೆದು ವೈದ್ಯರಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿ, ಇಂಗ್ಲೆಂಡಿಗೆ ತೆರಳಿ, ವೈದ್ಯ ಪದವಿ ಪಡೆದು ಮರಳಿ ಬಂದು ಗ್ರಾಮೀಣ ಭಾಗದ ದಟ್ಟ ದರಿದ್ರರ ಸೇವೆಗೆ ನಿಂತವರು ಅವರು. ಅವರ ಕೈಹಿಡಿದವರು ಡಾ. ಸಬಿತಾ ಮರಕಿಣಿ. ಇವರೂ ವೈದ್ಯರು. ತಮ್ಮ ಚರಿತ್ರೆಯನ್ನು ಹೇಳುತ್ತ ಜೊತೆಗೆ ಸಂಪರ್ಕಕ್ಕೆ ಬಂದವರ ವ್ಯಕ್ತಿಚಿತ್ರಗಳನ್ನೂ ಮರಕಿಣಿಯವರು ಇಲ್ಲಿ ನೀಡಿದ್ದಾರೆ. ವೈದ್ಯವೃತ್ತಿ ಇಂದು ಹಣ ಮಾಡುವುದಕ್ಕೆ ಎನ್ನುವಂತಾಗಿದೆ. ಜೊತೆಗೆ ವೈದ್ಯಕೀಯ ಶಿಕ್ಷಣವೂ ದುಬಾರಿಯಾಗಿದೆ. ಅವರ ಕಾಲದಲ್ಲಿ ವೈದ್ಯ ಶಿಕ್ಷಣಕ್ಕೆ ಪ್ರವೇಶ ಪಡೆಯುವವರು ಕಡಿಮೆ ಇದ್ದರು. ಜನರಿಗೆ ಸೇವೆ ಮಾಡಬೇಕು ಎನ್ನುವ ಮನೋಧರ್ಮ ಆಗಿನವರಲ್ಲಿತ್ತು. ಹೈದ್ರಾಬಾದ್ ಕರ್ನಾಟಕದ ಚಿತ್ತಾಪುರದಲ್ಲಿ ಆಸ್ಪತ್ರೆ ತೆರೆದದ್ದು, ಅವೇರ್ ಸಂಸ್ಥೆ ಮೂಲಕ ಗ್ರಾಮೀಣ ಸೇವೆ ನಡೆಸಿದ್ದು, ಮೈರಾಡ್ನಲ್ಲಿ ಸೇವೆ, ಬಾಂಗ್ಲಾ ಗಡಿಯಲ್ಲೂ ಸೇವೆ ಸಲ್ಲಿಸಿದ್ದು ಹೀಗೆ ಸಂತೃಪ್ತ ಜೀವಿ ಮರಕಿಣಿಯವರ ಈ ಕೃತಿಯನ್ನು ವೈದ್ಯ ವಿದ್ಯಾರ್ಥಿಗಳು ಓದಲೇಬೇಕು.
ಕೃತಿ: ಅಲೆಮಾರಿ ವೈದ್ಯನ ಆತ್ಮಕತೆ
ಪ್ರಕಾರ: ಆತ್ಮಕಥನ
ಏಕೆ ಓದಬೇಕು?: ಸಮಾಜಸೇವೆ ಪ್ರೇರಣೆಗೆ
ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು,
ಪುಟಗಳು 192, ಬೆಲೆ ರು. 95
- ಡಾ. ವಾಸುದೇವ ಶೆಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

