ಸಾಪ್ತಾಹಿಕಪ್ರಭ

ಮುಂಗಾರಿನ ಮರುದಿನದಲ್ಲೊಂದು ಬಿಸಿಲಕೋಲು

Published On :

'ಗಂಡಕೀ ಜೋನ್‌' ಇದು ಮಿತ್ರ ಕಣಾದ ರಾಘವರ ಎರಡನೇ ಕಥಾ ಸಂಕಲನ. ತಮ್ಮ ಮೊದಲ ಕಥಾ ಸಂಕಲನ 'ಮೊದಲ ಮಳೆಯ ಮಣ್ಣು' ಕಥಾಸಂಕಲನಕ್ಕೆ ಛಂದ ಪುಸ್ತಕ ಪ್ರಶಸ್ತಿ ಗಳಿಸಿದ ಕಣಾದರು ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಅತ್ಯಂತ ಭರವಸೆ ಹುಟ್ಟಿಸಿದ ಕಥೆಗಾರ. ಮೊದಲ ಕಥಾ ಸಂಕಲನ ಬಿಡುಗಡೆಯಾದ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಕಣಾದರು ತಮ್ಮ ಹನ್ನೆರಡು ಕಥೆಯುಳ್ಳ ಎರಡನೇ ಕಥಾ ಸಂಕಲನವನ್ನು ಪ್ರಕಟಿಸುತ್ತಿರುವುದು ಅವರೆಂಥ ಸಮೃದ್ಧ ಬರಹಗಾರ ಎಂಬುದನ್ನು ಸೂಚಿಸುತ್ತದೆ. ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆಗಳು.
ಮೊದಲ ಕಥಾಸಂಕಲನದಲ್ಲಿ ಭಾರಿ ಭರವಸೆ ಹುಟ್ಟಿಸುವ ಕಥೆಗಾರರಿಂದ ಓದುಗ ಮುಂದೆ ಬೇರೇನನ್ನೋ ನಿರೀಕ್ಷಿಸುತ್ತಾನೆ. ಅದೂ 'ಮೊದಲ ಮಣ್ಣು' ಇನ್ನೂ ಹಸಿಯಾಗಿರಬೇಕಾದರೆ ಎರಡನೇ ಮಳೆ ಹೊಯ್ದಿರುವಾಗ ತಣಿದಿರುವ ನೆಲವನ್ನು ಇನ್ನೂ ತಣಿಸಲು ಈ ಮಳೆಗೆ ಸಾಧ್ಯವೇ ಎಂಬುದು ಪ್ರಶ್ನೆ. ನನಗಂತೂ ವೈಯಕ್ತಿಕವಾಗಿ ಕಣಾದರ ಮೊದಲ ಕಥಾ ಸಂಕಲನದಲ್ಲಿ ಕೆಲವಷ್ಟು ಕಥೆಗಳು ಬಹಳವೇ ಇಷ್ಟವಾಗಿದ್ದರಿಂದ ಅವುಗಳ ಬೆಳಕಿಲ್ಲದೇ ಈ ಕಥೆಗಳನ್ನು ಓದಲು ಸಾಧ್ಯವಾಗಿಲ್ಲ. ಈ ಕಥೆಗಳಲ್ಲಿ ಕಣಾದರು ಮೊದಲ ಕಥಾಸಂಕಲನದಲ್ಲಿ ಹೇಳದೇ ಇದ್ದುದನ್ನು ಏನಾದರೂ ಹೇಳುತ್ತಾ ಇದ್ದಾರೆಯೇ? ಅವರ ಕಥಾ ಪ್ರಪಂಚದ ಹರಹು ಇನ್ನೂ ವಿಸ್ತಾರವಾಗಿದೆಯೇ? ಲೋಕದೃಷ್ಟಿ ಇನ್ನೂ ಹದವಾಗಿದೆಯಾ? ಇತ್ಯಾದಿ, ಇತ್ಯಾದಿ ವಿಮರ್ಶಾ ರೆಟರಿಕ್ಕುಗಳು. ಇವನ್ನೇ ಏನೋ ವಿಮರ್ಶಕರು 'ಕಥೆಯಿಂದ ಕಥೆಗೆ' ಬೆಳೆಯುವುದು ಎನ್ನುವುದು. ಈ ಕಥೆಯಿಂದ ಕಥೆಗೆ ಬೆಳೆಯುವ ತಥ್ಯ ಹೇಗಾದರೂ ಇರಲಿ, ಇವರ ಎರಡನೇ ಕಥಾ ಸಂಕಲನ ಮೊದಲ ಕಥಾ ಸಂಕಲನಕ್ಕಿಂತ ಹೇಗೆ ಭಿನ್ನ ಎಂದು ಮಾತ್ರ ನಾನು ಹೇಳಲು ಪ್ರಯತ್ನಿಸುತ್ತೇನೆ. ಇದು ಸಹ ಕಥೆಗಾರನ ಕಥೆ ಓದುವ ಪರಿ ಅಷ್ಟೇ ಎಂದು ಓದುಗರೂ ಕಣಾದರೂ ಭಾವಿಸಬೇಕಾಗಿ ಕೋರುತ್ತಾ...
ಕಣಾದರ ಕಥೆಗಳನ್ನು ಓದಿದಾಗ ನಾನು ಅವರ ಮುಖ್ಯ ಶಕ್ತಿಯೆಂದು ಗುರುತಿಸಿದ್ದು ಅವರ ವಿಶೇಷ ಲಿರಿಕಲ್ ನುಡಿಗಟ್ಟು, ವಯಸ್ಸಿಗೆ ಮೀರಿದ ಜೀವನಾನುಭವ, ಈ ಅನುಭವವನ್ನು ಕಥೆ ಮಾಡುವ ಜಾದೂ- ಇವು ಮೂರೂ ಹದವಾಗಿ ಮಿಳಿತವಾಗಿ 'ಮೊದಲ ಮಳೆ'ಯ ಫಸಲು ಕೂಡಾ ಗಟ್ಟಿಯಾಗಿತ್ತು. ಭಾವಗೀತೆಯಂಥ ಉದ್ದೀಪಕ ಭಾಷೆಯ ಶಕ್ತಿಯಿಂದ ಕಥೆ ಕಟ್ಟುವ ಅನೇಕ ಶಕ್ತ ಕಥೆಗಾರರು ಕಥೆಯೆಂಬ ಪ್ರಕಾರದ ಬಗ್ಗೆ ಬೇರೆಯೇ ಒಂದು ಧೋರಣೆ ಹೊಂದಿರುತ್ತಾರೆ. ಕವಿತೆಯಂತೆ ಇಲ್ಲಿ ಒಂದು ಮಧುರ ಕ್ಷಣದ ಅನುಭೂತಿಯನ್ನು ಕೂಡ ಇವರುಗಳು ಕಥೆ ಮಾಡಬಲ್ಲರು. ಇಲ್ಲಿ ಕಥೆಗೆ ಶಿಲ್ಪ, ರೆಟರಿಕ್ಕು, ಭಾಷೆ, ಶೈಲಿಗಳೇ ಮುಖ್ಯ. ವಸ್ತು ಏನೆಂದು ನಾವು ಗಮನಿಸುವುದರಲ್ಲಿ ಎಷ್ಟೋ ಬಾರಿ ಕಥೆ ಮುಗಿದಿರುತ್ತದೆ. ಅಲ್ಲೊಂದು ಇಲ್ಲೊಂದು ಹೊಳಹುಗಳು, ಪ್ರತಿಮೆಗಳು, ರೂಪಕಗಳು ಮಾತ್ರ ನೆನಪಲ್ಲಿ ಉಳಿದಿರುತ್ತವೆ, ಇಡೀ ಕಥೆಯಲ್ಲ. ಇವು 'ಓದಿ' ಖುಷಿಪಡುವ ಕಥೆಗಳು. 'ಹೇಳಿ' ಅಥವಾ 'ಕೇಳಿ' ಖುಷಿಪಡುವ ಕಥೆಗಳಲ್ಲ.
ಮೊದಲ ಕಥಾ ಸಂಕಲನದಲ್ಲಿ ಕಥೆಯ ಶಿಲ್ಪಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕಣಾದರು ಇಲ್ಲಿ ಕಥಾ ಶಿಲ್ಪದ ಜತೆಗೆ ಕಥಾವಸ್ತುವಿಗೂ ಗಮನ ಕೊಡುತ್ತಾರೆ. ಶಿಲ್ಪ ಮತ್ತು ವಸ್ತುವಿನ ಸಮತೋಲನಕ್ಕೆ ಪ್ರಯತ್ನಪಡುತ್ತಾರೆ. ನನಗೆ ಈ ಸಂಕಲದಲ್ಲಿ ಅತೀ ಇಷ್ಟವಾದ 'ಚಪ್ಪರದ ಮೆರವಣಿಗೆ'ಯನ್ನು ಉದಾಹರಿಸಿದರೆ ಅವರ ಸಹಜ ನುಡಿಗಟ್ಟನ್ನು ಉಳಿಸಿಕೊಂಡೇ ನೀಳ್ಗತೆಗೆ ಬೇಕಾದ ವಸ್ತು ಮತ್ತು ಪಾತ್ರಗಳನ್ನು ಬೆಳೆಸುವಲ್ಲಿ ಕಣಾದರು ಯಶಸ್ವಿಯಾಗಿದ್ದಾರೆ. ಬಡತನ, ಸಾಮಾನ್ಯ ಮನುಷ್ಯರ ತೀರಾ ಸಾಮಾನ್ಯ ಆಶೆಗಳು, ಪ್ರೀತಿ, ರಾಗ, ದ್ವೇಷಗಳು, ಒಟ್ಟಿಗೇ ಬಾಳಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವ ಕೌಟುಂಬಿಕತೆಯ ಚಿತ್ರಣ ಕಥೆಯಲ್ಲಿ ಸೊಗಸಾಗಿ ಮೂಡಿಬಂದಿದೆ. ತಮ್ಮ ಸುತ್ತಲಿನ ಅನುಭವಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುವಲ್ಲಿ ಮತ್ತು ಅದನ್ನು ಅಷ್ಟೇ ಸೂಕ್ಷ್ಮವಾಗಿ ಕಣಾದರು ನಮಗೆ ತಲುಪಿಸುತ್ತಾರೆ.
ಕಥೆಯ ವಸ್ತುವನ್ನು ಮುಟ್ಟಲು ಕಣಾದರು ಅಲ್ಲಲ್ಲಿ ಪ್ರಯತ್ನಪಟ್ಟರೂ ಕಥೆಯ ಶಿಲ್ಪದ ಬಗ್ಗೆ ಅವರಿಗೆ ವಿಶೇಷವಾದ ಒಲವಿದೆ. ಕವಿತೆಯ ಲಯವಿರುವ 'ಒಂದು ತಿಹಾಯಿ', 'ಗಂಡಕೀ ಜೋನ್‌' ಇಂಥ ಕಥೆಗಳಿಗೆ ಇವರ ರೂಪಕ, ಅಲಂಕಾರಿಕ ಭಾಷೆ ಹೊಂದುವಷ್ಟು 'ಒಂದು ಟಾಯ್ಲೆಟ್ಟಿನ ಹಳೇ ಕಥೆ', 'ಮಂಪರಿನ ಪರದೆಯಾಚೆ'ಯಂಥ ಅಪ್ಪಟ ಪ್ರೋಸಾಯಿಕ್ ಕಥೆಗಳಿಗೆ ಹೊಂದುವುದಿಲ್ಲ. ಕಣಾದರು ಒಂದು ಟಾಯ್ಲೆಟ್ಟಿನ ಹಳೇ ಕಥೆಯಂತ ಕಥೆಯಲ್ಲಿಯೂ 'ಎಂದಿನಂತೆಯೇ ನಸುಬೆಳಗು ಇರುಳ ದಟ್ಟ ಕಪ್ಪಿನ ಅವಕಾಶದಲ್ಲಿ ಮೆಲ್ಲಮೆಲ್ಲನೆ ತೂರಿಕೊಳ್ಳುತ್ತಾ ಹದದಲ್ಲಿ ಹರಡಿಕೊಳ್ಳುತ್ತಿರುವಾಗ, ಪಕ್ಕದ ಪಟಾಳಮ್ಮನ ದೇವಸ್ಥಾನದ ಎದುರಿನ ವಿಶಾಲ ಆವರಣದ ನಡುವೆ ಬುಡದಲ್ಲಿ ಸೈಜುಗಲ್ಲುಗಳ ಚೌಕಾಕಾರದ ಕಟ್ಟೆಯ ಮಧ್ಯದಿಂದ ಎದ್ದುನಿಂತ ಮದ್ದಾನೆಯಂಥ ಅಶ್ವತ್ಥದ ಒಡಲಿನಲ್ಲಿ ಆಗಷ್ಟೇ ಹುಟ್ಟಿದ ಬೆಳಗನ್ನು ಕಂಡು ಹಕ್ಕಿಗಳು ಗಲಾಟೆಮಾಡುತ್ತಿರುವಾಗ...' ಎಂಬ ಔಟ್ ಆಫ್ ಕಂಟೆಕ್ಸ್ಟ್ ಪದಗಳ, ಉದ್ದುದ್ದ ವಾಕ್ಯಗಳ ಪ್ರಯೋಗವನ್ನು ಮಾಡಿಬಿಡುತ್ತಾರೆ. ಇಂಥ ಅಲಂಕಾರಗಳಿಂದಲೇ ಕಥೆ ಪೂರಾ ಬೆಳೆದರೆ ಪರವಾಯಿಲ್ಲ. ಆದರೆ, ಈ ಅಲಂಕಾರಗಳು ಪಾತ್ರಗಳ ಬೆಳವಣಿಗೆಗೆ, ಕಥೆಯ ಓದಿಗೆ ಕೆಲವೊಮ್ಮೆ ತೊಡರೆನಿಸುತ್ತದೆ. ಕಥೆಯ ವಸ್ತು ಭಾಷೆಯನ್ನು ಹುಡುಕಿಕೊಳ್ಳಬೇಕು. ಇಲ್ಲವಾದಲ್ಲಿ ಇದ್ದಕ್ಕಿದ್ದ ಹಾಗೆ ಸಪಾಟಾಗಿರಬೇಕಾದ ಪಡಸಾಲೆಯ ಗೋಡೆಯಲ್ಲಿ ಸುಮ್ಮಸುಮ್ಮನೆ ಬೇಲೂರ ಶಿಲಾಬಾಲಿಕೆಯರನ್ನು ತಂದಿಟ್ಟಂತೆ, ಸಂದರ್ಭಕ್ಕೆ, ಸನ್ನಿವೇಶಕ್ಕೆ ಹೊಂದಿಕೊಳ್ಳದೇ ಈ ವಾಕ್ಯಗಳು ಕಥೆಯಿಂದ ದೂರವೇ ನಿಲ್ಲುತ್ತವೆ.
ನನಗೆ ಇಷ್ಟವಾದ ಇನ್ನೊಂದು ಕಥೆ 'ಮಾತನಾಡುವ ಕಡಲು' ಆಲ್‌ಜೈಮರ್ಸ್‌ನ ವಿಸ್ಮೃತಿಯಲ್ಲಿರುವ ಮಾರ್ಗರೆಟ್ಟಳಿಗೆ ಟೀವಿಯಲ್ಲಿ 'ಪರಮೋಚ್ಚ ಸಂತಸದ ಭಾವತೀವ್ರತೆಯ ಕ್ಲೋಸಪ್ಪಿನ ಚಿತ್ರದಲ್ಲಿ' ನೆನಪಾಗುವ ಮೊದಲ ಪ್ರೇಮ, ಯಾವುದು ಸರಿ, ಯಾವುದು ತಪ್ಪು, ನಿಜಸುಳ್ಳುಗಳನ್ನು ಅರಿಯದ ಆ ಲೋಕ. ಬದುಕಿನ ಸಂಜೆಯಲ್ಲಿ ಸುಮ್ಮನೇ ಸಾಯಲಾಗದೇ ಆಗಬಹುದಾಗಿದ್ದ ಪ್ರೇಮಿಯ ಮಗನಲ್ಲಿಯೇ ತನ್ನ ಪ್ರೇಮಿಯನ್ನು ಕಾಣುವ ಉಜ್ವಲ ಕ್ಷಣ ಹಿತವೆನಿಸುತ್ತದೆ. ಇಂಥ ಕಥೆಗೆ ಕಣಾದರ ಭಾಷೆ ಹೇಳಿಮಾಡಿಸಿದ ಹಾಗಿದೆ.
ಒಂದು ಸುಂದರ ಘಳಿಗೆಯ 'ಕ್ರಾಸ್ ಸೆಕ್ಷನಲ್‌' ಕಥಾನಕ ಕಥೆಯ ವಸ್ತುವಾಗಬಹುದೇ? ಕತೆಯೇ ಆಗಬಹುದೇ? ಅದು ಕಥೆಯೆಂದರೆ ಏನು ಎಂದು ನೀವು ತಿಳಿದಿದ್ದೀರಿ ಎನ್ನುವ ನಂಬಿಕೆಯ ಮೇಲೆ ಅವಲಂಬಿತವಾಗಿದೆ. ಒಂದು ಕ್ಷಣದ ಸಾರ್ಥಕತೆಯನ್ನು ಪದಗಳಲ್ಲಿ ಸಮರ್ಥವಾಗಿ ಹಿಡಿಯಬಲ್ಲವ ಕವಿ. ಇದು ಕವಿತೆಯ ಸಾಧ್ಯತೆ. ಕಥೆಗೊಂದು ಸೃಷ್ಟಿ, ಸ್ಥಿತಿ, ಲಯವಿರಬೇಕೆಂದು ನಂಬುವ ಅಪ್ಪಟ ಲಾಂಜಿಟ್ಯೂಡಿನಲ್ ಕಥೆಗಾರರು ಇವನ್ನು ಕಥೆಯೆಂದು ಒಪ್ಪಲು ಸಾಧ್ಯವಿಲ್ಲವೇನೋ? ಯಾವ ಕಾರಣಕ್ಕಾಗಿ ಜಯಂತರ 'ಒಳಾಂಗಣ' ನಿಮಗೆ ಇಷ್ಟವಾಗುತ್ತದೆಯೋ ಅದೇ ಕಾರಣಕ್ಕಾಗಿ ಮಾಸ್ತಿಯವರ 'ವೆಂಕಟಶಾಮಿಯ ಪ್ರಣಯ' ಇಷ್ಟವಾಗದೇ ಹೋಗಬಹುದು. ಒಂದು ಕಥನ ಕುತೂಹಲವನ್ನು ತಣಿಸುತ್ತಾದರೆ ಇನ್ನೊಂದು ರೆಟರಿಕ್ಕಿನಲ್ಲಿ ಅರಳುತ್ತದೆ. ಈ ರೀತಿಯ ಘಳಿಗೆಯ ಸಂತಸವನ್ನು ಕಥೆಮಾಡಿ ಒಪ್ಪಿ ಸಂತಸಪಟ್ಟರೆ ಅವರಿಗಾಗಿಯೇ ಇರುವ ಕಥೆಗಳು 'ಗಂಡಕೀಜೋನ್‌' ಮತ್ತು 'ಒಂದು ತಿಹಾಯಿ'.
ಮೊದಲೇ ಹೇಳಿದ ಹಾಗೆ ಕಣಾದರಿಗೆ ಕಥೆಗಾರರಿಗೆ ಬೇಕಾದ ಕಲೆಗಾರಿಕೆ, ಕಸಬುದಾರಿಕೆ, ಅನುಭವ, ಅದರ ಸೂಕ್ಷ್ಮಗ್ರಹಿಕೆ, ಭಾಷೆ ಎಲ್ಲವೂ ಸಿದ್ಧಿಸಿದೆ. ಈ ಶಕ್ತಿ ಕೆಲವೊಮ್ಮೆ ಏನನ್ನಾದರೂ ಕಥೆ ಮಾಡಬಲ್ಲೆ ಎಂಬ ಹುಮ್ಮಸ್ಸನ್ನು ಇವರಿಗೆ ಕೊಡುತ್ತದಾ ಎಂದು ಕೆಲವೊಮ್ಮೆ ಅನುಮಾನವಾಗುತ್ತದೆ. ಹಾಗಾಗಿ ಲಲಿತಪ್ರಬಂಧ ಆಗಬಹುದಾಗಿದ್ದ 'ಒಂದು ಟಾಯ್ಲೆಟ್ಟಿನ ಹಳೇ ಕಥೆ', 'ಸೊಬಗಯ್ಯನ ಸದ್ದು'ಗಳನ್ನೂ ಕಥೆಮಾಡಲು ಪ್ರಯತ್ನಪಟ್ಟಿದ್ದಾರೆ. ಇವು ಉತ್ತಮ ಪ್ರಯತ್ನಗಳ ಮಟ್ಟಿಗೆ ಮಾತ್ರ ನಿಂತಿದೆ ಎಂದು ನನಗನಿಸಿತು.
ಕಣಾದರ 'ಮೊದಲ ಮಳೆಯ ಮಣ್ಣು' ಓದಿ ಭಾರಿ ಎಕ್ಸೈಟ್ ಆಗಿದ್ದೆ. 'ಚೇತನ ಗಂಧ', 'ನಟ್ಟಿರುಳ ಬೆಳಗು', 'ನನ್ನ ಬೆಳಗು ನನ್ನದು' ಮುಂತಾದ ಕಥೆಗಳು ನಾನು ಇತ್ತೀಚಿನ ದಿನಗಳಲ್ಲಿ ಓದಿದ ಉತ್ತಮ ಕಥೆಗಳು. ಹೊಸ ಕಥಾ ಪ್ರಪಂಚ, ಭಾಷೆ, ಲಯಗಳಿಂದ ಖುಷಿ ಕೊಟ್ಟಿದ್ದ ಕಣಾದರ ಈ ಕಥಾ ಪ್ರಪಂಚ ನನ್ನಂಥ ಓದುಗರನ್ನು ಡಿಸೆನ್ಸಿಟೈಸ್ ಮಾಡದೇ ಬೆಳೆಯಲಿ, ಕಣಾದರು ತಮ್ಮ ಅತಿ ಉತ್ಕೃಷ್ಟ ಶಕ್ತಿಯಾದ ವಸ್ತುವೈವಿಧ್ಯ ಮತ್ತು ಕವಿತೆಯಂಥ ಭಾಷೆಯಿಂದ ಗದ್ಯಕ್ಕೆ ಹೊಸ ಆಯಾಮ ತರಲಿ ಎಂದು ಆಶಿಸುತ್ತಾ ಅವರಿಗೆ ಶುಭ ಕೋರುತ್ತೇನೆ.

('ಗಂಡಕೀ ಜೋನ್‌' ಕಥಾಸಂಕಲನವನ್ನು ಓದಿ ಅಮೆರಿಕದಿಂದ ಗುರುಪ್ರಸಾದ್ ಕಾಗಿನೆಲೆ ಹೀಗೊಂದು ವಿಮರ್ಶೆ ಕಳುಹಿಸಿಕೊಟ್ಟರು.)

- ಗುರುಪ್ರಸಾದ್ ಕಾಗಿನೆಲೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.