ವೈದೇಹಿಯ ಕನವರಿಕೆ

ಬಾರದುಳಿಯಲು ಅವನೇನು ರಾಮನಲ್ಲ. ಬಂದೇ ಬರುತ್ತಾನೆ. ಕಾಯುವಿಕೆಗೊಂದು ಕೊನೆಯನ್ನು ತೋರೇ ತೋರುತ್ತಾನೆ. ಅಷ್ಟಕ್ಕೂ ಅವನಿಗೇನು ಯಾವ ಸಂಶಯವೂ ಇಲ್ಲವಲ್ಲ. ಅಗಸನ ಮಾತನ್ನು ನಂಬಿ ಹೆಂಡತಿಯನ್ನು ಕಾಡಿಗಟ್ಟುವಷ್ಟು ಕಟುಕನೂ ಅಲ್ಲ. ಇತ್ತ ತಿರುಗಿ ನೋಡಲಾರದಷ್ಟು ರಾಜ್ಯ'ಭಾರ' ಅವನಿಗೇದ್ದೀತು? ಅವನ ಬದುಕಿನ ಸಾಮ್ರಾಜ್ಯದಲ್ಲಿ ನನ್ನ ಬಿಟ್ಟು ಇನ್ನಾರಿದ್ದಾರೆ ಹೇಳಿ ಆಳಲು? ಓಡಿ ಬಂದು ಬಿಗಿದಪ್ಪಿ ನನ್ನ ದಿಟ್ಟಿಸುವಾಗ ಅದೆಂಥಾ ಮಿಂಚಿರುತ್ತದೆ ಅವನ ಕಣ್ಣುಗಳಲ್ಲಿ... ಕಣ್ಣುಗಳೇ ಮಾತನಾಡುತ್ತಿರುತ್ತವೆ. ಅದಾದರೂ ಎಂಥಾ ಮಾತುಗಳು. ಪಿಸು ದನಿಯ ಒರತೆಯೇ ತುಂಬಿ ಉಕ್ಕುತ್ತಿರುತ್ತದೆ. ಎದೆ ಗೂಡೊಳಗೆ ಕೈ ಚಾಚಿ ಬಗೆದರೆ ಹಿಡಿ ತುಂಬಿ ಬರುವಷ್ಟು ಖುಷಿಯ ಸಂಗತಿಗಳೇ. ಚೈತನ್ಯದ ಬುಗ್ಗೆಯದು. ಇಬ್ಬರ ನಡುವೆ ಬೆಸೆದು ನಿಂತಿರುವ ಹೆದ್ದಾರಿಯೇ ಅದಲ್ಲವೇ? ಎಲ್ಲ ಸಂಬಂಧಗಳನ್ನು ಮೀರಿದ ಪ್ರೀತಿಯದು. ಅವಿನಾಭಾವದ ನದಿಯೊಂದು ಇಬ್ಬರ ಹೃದಯದಲ್ಲಿ ಓತಪ್ರೋತ. ಅದರ ಜುಳುಜುಳುವ ಕೇಳಿ ಕರುಬಿದವರೆಷ್ಟೋ ಮಂದಿ. ಉಟ್ಟ ಪತ್ತಲದ ನಿರಿಗೆಯನ್ನೊಮ್ಮೆ ಒದ್ದು ಮುಂದಡಿಯಿಟ್ಟಾಗೊಮ್ಮೆ ಮೂಡುವ ಸರಪರದಲ್ಲಿಯೂ ಅವನದೇ ಹೆಸರು. ಒಬ್ಬಳೇ ಕುಳಿತು ಚಿಗುರು ಬೆರಳುಗಳ ತುದಿಗೆ ನೀವಿಕೊಳ್ಳುವ ನೈಲ್ಪಾಲಿಷ್ನ ಎಳೆಗಳಲ್ಲಿ ಅವನದೇ ಕಂಪು. ಮೊನ್ನೆ ಮೊನ್ನೆ ಗಾಂಧಿ ಬಜಾರ್ನಲ್ಲಿ ಕೊಂಡು ಕಾಲಿಗೆ ಹಾಕಿಸಿಕೊಂಡ ಕಿರುಗೆಜ್ಜೆಯಲ್ಲೂ ನನ್ನಿಯನದೇ ದನಿ. ಒಳಗಿನೊಲೆಯಲ್ಲಿ ಕುದಿಮರಳುವ ಹಬೆಯಾಡುವ ಅಡುಗೆಗೆ ಕೂಡಿದ ಘಮದಲ್ಲಿ ಇದೆಯಲ್ಲಾ ಅವನ ನೆನಪು. ಅಂಗಳದ ರಂಗೋಲಿಗೆ ಅವನದೇ ಹೆಸರು. ಶರತ್ಕಾಲಕ್ಕೆ ಎಲೆಗಳ ತುದಿಗೆ ಕುಳಿತ ಇಬ್ಬನಿಯಲ್ಲಿ ಅವನ ಬಿಂಬ. ಮುಂಜಾವ ತಂಗಾಳಿಯಲಿ ತೇಲಿಬರುವ ಒಲವು. ಸುಡು ಬಾಣಲೆಯಾಗಿದ್ದ ಬದುಕನ್ನು ತಣಿಸಿದ ನಲ್ಲನಾವರಿಸಿರದ ತಾಣವೆಲ್ಲಿ?
ಅಮ್ಮನ ಮಾತಿಗೆ ಎದುರಾಡುವವನಲ್ಲದಿದ್ದರೂ ಅದೇ ನೆಪದಲ್ಲಿ ಕಾಡಿಗೆ ಕರೆದೊಯ್ದು ಎಂದಿಗೂ ಹುಲ್ಲ ಹಾಸಿಗೆಯ ಮೇಲೆ ಮಲಗಿಸಲಿಲ್ಲ. ನಾರುಡಿಸಿ ನೋಯಿಸಲಿಲ್ಲ. ಚಿನ್ನದ ಜಿಂಕೆಯ ಆಸೆಯೇ ಮೂಡದಂತೆ ನನ್ನನ್ನೇ ಚಿನ್ನಿ ಎಂದುಬಿಟ್ಟ. ಇನ್ನು ಅದನ್ನು ಬೆನ್ನಟ್ಟಿ ಹೋಗುವ ಪ್ರಶ್ನೆಯಿಲ್ಲ. ಕುಟೀರದಲ್ಲಿ ನಾನು ಒಂಟಿಯಲ್ಲ. ಅನುದಿನವೂ ತಾಳತಂತಿಯೊಂದಿಗೆ ನಮ್ಮದು ಯುಗಳವೇ. ಯಾವುದೋ ಹೊಸರಾಗ, ಸದಾ ಏರಿಳಿಯುವ ಉದ್ವೇಗ. ಒಂದು ರೀತಿಯಲ್ಲಿ ಮೇಣವನ್ನು ಬಿಟ್ಟಿರಲಾರದ ದಾರದಂತೆ. ದಾರ ಸುಡುತ್ತಿದ್ದರೆ, ಮೇಣ ಕರಗುತ್ತದೆ. ಕರಕರಗಿ ಕೊನೆಯಾದರೂ, ದಾರ ಕಮರಿ ನೆಲಕ್ಕಂಟಿದರೂ ಒಬ್ಬರನ್ನೊಬ್ಬರ ಬಿಟ್ಟಿರಲಾರದ ಬಾಂಧವ್ಯ. ನಮ್ಮ ಬೆಸುಗೆಗೆ ಮೇಣದ ಬತ್ತಿಯೇ ಸರಿಯಾದ ಉಪಮೆ. ಅವನೆಲ್ಲಿ ನನ್ನ ಬಿಟ್ಟಿರುತ್ತಾನೆ. ಬಂದೇ ಬರುತ್ತಾನೆ, ಹೇಳಿದ ಸಮಯಕ್ಕೆ. ಮೊದಲೇ ಹೇಳಿಬಿಟ್ಟೆನಲ್ಲಾ ನನ್ನವನೇನು ರಾಮನಲ್ಲ, ನನ್ನನ್ನು ಒಂಟಿಯಾಗಿ ಹೀಗೆ ಬಜಾರಿನಲ್ಲಿ ನಿಲ್ಲಿಸಿ ಹೊರಟು ಹೋಗುವುದಕ್ಕೆ. ಅವನೆಂದೂ ನನ್ನ ಬಿಟ್ಟು ಅಶ್ವಮೇಧವನ್ನು ಕೈಗೊಳ್ಳುವುದಿಲ್ಲ. ರಾವಣರು ಹತ್ತೂ ದಿಕ್ಕಿನಲ್ಲಿ ಮುತ್ತಿಕ್ಕುತ್ತಲೇ ಇರುತ್ತಾರೆಂಬುದರ ಸ್ಪಷ್ಟ ಅರಿವು ಅವನಿಗಿದ್ದೇ ಇದೆ. ಅದೂ ಈ ಆಧುನಿಕ ಯುಗದಲ್ಲಿ ಸತಿ ಸೀತೆಯರ ಎತ್ತೊಯ್ದು ಅವಳ ಸಮ್ಮತಿಯ ಕಾಯುತ್ತಾ ಪಾರ್ಕ್ನಲ್ಲಿಟ್ಟು ಕೂರುವ ವ್ಯವಧಾನ ಯಾರಿಗೂ ಇಲ್ಲವೆಂಬ ಕಾಮನ್ಸೆನ್ಸ್ ಅವನಿಗಿದ್ದೇ ಇದೆ. ಹೀಗಾಗಿ ಅವನೆಂದೂ ನನ್ನ ಒಂಟಿಯಾಗಿ ಬಿಟ್ಟು ಹೋಗುವುದೇ ಇಲ್ಲ. ಯಾವ ಲಕ್ಷ್ಮಣರೇಖೆಯೂ ನನ್ನಂಥವಳನ್ನು ಕಾಯುವುದಿಲ್ಲ, ಕಾದರೂ ಅದನ್ನು ನಾವು ದಾಟದೇ ಉಳಿಯುವುದಿಲ್ಲ ಎಂಬುದನ್ನು ಗ್ರಹಿಸಬಲ್ಲಷ್ಟು ಚತುರನಿದ್ದಾನೆ ನನ್ನವನು. ಬಯಸಿದ್ದನ್ನು ಬಾಯಿಬಿಟ್ಟು ಕೇಳುವ ಮೊದಲೇ ತಂದು ಕೊಟ್ಟಿರುತ್ತಾನೆ. ಹೀಗಾಗಿ ಮತ್ತೆ ಮಾಯಾ ಮೃಗಗಳಿಗೆ ನಾನು ಮರುಳಾಗುವ ಪ್ರಶ್ನೆ ಎಲ್ಲಿಯದು?
ಒಂದೊಮ್ಮೆ ಬಹುಕಾಲ ಅವನನ್ನಗಲಿ ನಾನಿದ್ದು ಬಂದರೂ ಅಗ್ನಿಪರೀಕ್ಷೆಗೆ ನನ್ನ ಒಳಪಡಿಸುವಷ್ಟು ಸಣ್ಣತನವಿಲ್ಲ ನನ್ನೊಡೆಯನಲ್ಲಿ. ಮನದಲ್ಲಿ ಮೂಡುವ ಕಾಮನ ಬಿಲ್ಲಿನ ಬಣ್ಣಗಳನ್ನು ಕನಸುಗಳಿಗೂ ತಂದು ಮೆತ್ತಿ ಬದುಕಿಗೂ ರಂಗು ತುಂಬುವ ರಸಿಕ. ಅವ ಆದರ್ಶದ ಹೆಸರಲ್ಲಿ ಕಾಡು ಮೇಡುಗಳನ್ನು ಅಲೆಯುತ್ತಾ ಕೂರುವ ರಾಮ ಹೇಗಾದಾನು? ತಲೆ ನೇವರಿಸಿ, ಹೂಮುತ್ತನ್ನಿಟ್ಟು ಅನುದಿನವೂ ಸಾಂತ್ವನದ ಸೇಸೆಯನ್ನು ಎರಚುವ ಅವನಿಗೆ ನಾನು ವೈದೇಹಿಯಾಗುಳಿಯಲು ಸಾಧ್ಯವೇ ಇಲ್ಲ. ಏಕೆಂದರೆ ಅವ ರಾಮನೇ ಅಲ್ಲವಲ್ಲ? ಕಪಿ ಸೈನ್ಯವನ್ನು ಕಟ್ಟಿಕೊಂಡು ಮತ್ತೊಬ್ಬರ ಹೆಂಡತಿಯ ಕೊಡಿಸಲು ಮರೆಯಲ್ಲಿ ನಿಂತು ಬಾಣ ಹೂಡುವವ ನನ್ನವನು ಅಲ್ಲವೇ ಅಲ್ಲ. ಹೆಂಡತಿಯ ಹುಡುಕಾಟಕ್ಕೆ ಇನ್ಯಾರನ್ನೋ ಸಮುದ್ರಲಂಘನ ಮಾಡಿಸುವವನಲ್ಲ. ಏಕೆಂದರೆ ತಾನೇ ನಿಂತು ನನ್ನ ಕಾಯುತ್ತಿರುತ್ತಾನಲ್ಲಾ? ನನ್ನವನೆಂದಿಗೂ ರಾಮನಂತಾಗುವುದು ನನಗಿಷ್ಟವೂ ಇಲ್ಲ. ಹೀಗಾಗಿ ಅವನು ರಾಮನಲ್ಲ.
ಆದರೆ ಶೂರ್ಪನಖಿಯರು! ಇತ್ತಿತ್ತಲಾಗಿ ಅವರ ಕಾಟ ಮಾತ್ರ ವಿಪರೀತವೆನಿಸಿಬಿಟ್ಟಿದೆ. ಅದೇ ಭಯ. ಪಕ್ಕದಲ್ಲಿ ಸೀತೆಯಿದ್ದರೂ ಅವರ ಆಸೆಯ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಗೊತ್ತೇ ಇದೆಯಲ್ಲ, ಮರುಳಾಗಿ ಬರುವ ಶೂರ್ಪನಖಿಯರಿಗೆ ಲಕ್ಷ್ಮಣನಾದರೂ ಆದೀತು, ರಾಮನಾದರೂ ನಡೆದೀತು. ಅಬ್ಬಾ, ಅದನ್ನು ನೆನೆಸಿಕೊಂಡಾಗ ಮಾತ್ರ ನನ್ನವನು ರಾಮನಲ್ಲ ಎಂದುಕೊಳ್ಳಲು ಯಾಕೋ ಹಿಂಜರಿಕೆ. ಒಂದೊಮ್ಮೆ ಈಗಲೂ ಅವ ರಾಮನಲ್ಲ ಎಂದಾದರೆ ಬಯಸಿ ಬರುವ ಹೆಣ್ಣುಗಳ ತಿರಸ್ಕರಿಸಿ, ಮೂಗು ಮೊಲೆಗಳ ಕೊಯ್ಯಲು ಹೇಳುವ ನಿಷ್ಠೆ ಇರಲೇಬೇಕೆಂದೇನೂ ಇಲ್ಲವಲ್ಲ? ಖಂಡಿತಾ ನನ್ನವನು ಶ್ರೀರಾಮನೇ ಆಗಿಬಿಡಲಿ ಇದೊಂದು ವಿಚಾರದಲ್ಲಿ. ಬೇಕಿದ್ದರೆ ಸೀತೆಯಾಗಿ ಎಲ್ಲ ಪರೀಕ್ಷೆಗೆ, ಕಷ್ಟ ಕಾರ್ಪಣ್ಯಗಳಿಗೆ ನನ್ನ ನಾ ಒಡ್ಡಿಕೊಳ್ಳಲು ಸಿದ್ಧ. ಬೇಕಿದ್ದರೆ, ಇನ್ನಷ್ಟು ಕಾಲ ಕಾಯುತ್ತಾ ಕೂರುವೆ ನಾ ಅವನಿಗಾಗಿ. ಹೇಗಾದರಾಗಲಿ ನನ್ನವನು ಶ್ರೀರಾಮನೇ ಆಗಿರಲಿ, ಶೂರ್ಪನಖಿಯರ ಪಾಲಿಗೆ ಹಿಂದಿಗೂ, ಇಂದಿಗೂ, ಎಂದೆಂದಿಗೂ.
- ರಾಧಾ ಸೋಚನಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


