

ವಚನಗಳ ಕುರಿತು ಸಂಶೋಧನೆ ನಡೆಸಿದ, ಕನ್ನಡ ಮಾಧ್ಯಮದಲ್ಲಿ ಕೇಂದ್ರ ಲೋಕಸೇವಾ ಪರೀಕ್ಷೆ ಬರೆದ ಸಿ.ಸೋಮಶೇಖರ್, ಅಪರೂಪದ ಅಧಿಕಾರಿಗಳಲ್ಲೊಬ್ಬರು.
ಸಿ.ಸೋಮಶೇಖರ ಅವರಿಗೆ 60 ನವವಸಂತ ಆಲಿಂಗಿಸಿಕೊಳ್ಳುತ್ತಿದೆಯೆಂದರೆ ಯಾರೂ ನಂಬುವುದಿಲ್ಲ. ಅವರ ಉತ್ಸಾಹದ ಚಿಲುಮೆ, ಉಲ್ಲಾಸದ ಮಯೂರ ಲಾಸ್ಯ, ಸರಸ್ವತಿಯ ಮುಖವಾಣಿಯಂತಿರುವ ವಾಗ್ಮಿತೆ, ಪಾದರಸದಂಥ ಕ್ರಿಯಾಶೀಲತೆ, ಚಿಂತಾಮಣಿಯಂಥ ಚಿಂತನಾ ಸೌರಭವನ್ನು ಗಮನಿಸಿದಾಗ ಅವರು 30-35ರ ತರುಣರೆಂದೇ ಭಾವಿಸುವಂತಾಗುತ್ತದೆ. ಅವರು ಕಲ್ಪನಾ ಪ್ರತಿಭಾ ಶ್ರೀಮಂತರೆಂಬುದಕ್ಕೆ ಅವರ ಪ್ರಬಂಧ ಸಾಹಿತ್ಯವೇ ಸಾಕ್ಷಿ. ಜ್ಞಾನಸಂಪನ್ನರು ಹಾಗೂ ಸದಾ ಜ್ಞಾನ ಕುತೂಹಲಿ ಎಂಬುದಕ್ಕೆ ಅವರ ಸಂಶೋಧನಾ ನಿಬಂಧ 'ವಚನಗಳಲ್ಲಿ ಸಾಮಾಜಿಕ ಚಿಂತನೆ'ಯೇ ಸಾಕ್ಷಿ. ನಮ್ಮಲ್ಲಿ ಜ್ಞಾನಿಗಳಿಗೆ ಬೆಲೆ ಕೊಡುವ, ಜ್ಞಾನ ಕುತೂಹಲಿಗಳಾಗಿರುವ ಅಧಿಕಾರಿಗಳು ವಿರಳ. ನವರತ್ನ ರಾಮರಾವ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಿದ್ಧಯ್ಯ ಪುರಾಣಿಕ, ಎಚ್.ಎಲ್.ನಾಗೇಗೌಡ ಮೊದಲಾದ ಕೆಲವರು ಜ್ಞಾನಾಸಕ್ತರು, ಚಿಂತಕರು, ಮೇಧಾವಿಗಳು. ಸೋಮಶೇಖರ್ ಆ ವಿಶಿಷ್ಟ ವರ್ಗಕ್ಕೆ ಸೇರಿದವರು.
ಸೋಮಶೇಖರ್ ಜ್ಞಾನಾಸಕ್ತರಾದುದರಿಂದಲೇ ವಚನಗಳನ್ನು ಕುರಿತು ಸಂಶೋಧನೆ ಕೈಗೊಂಡರು. ಇಡೀ ಜಗತ್ತಿನಲ್ಲಿ ವಚನ ಸಾಹಿತ್ಯದಂಥ ಶ್ರೇಷ್ಠ ಮಟ್ಟದ ಸಾಹಿತ್ಯ ಇಲ್ಲ. ಅಂಥ ಸಾಹಿತ್ಯವನ್ನು ಅಧ್ಯಯನ ಮಾಡಿ, ಮಹಾನಿಬಂಧ ಬರೆದರು. ವಚನ ಸಾಹಿತ್ಯದ ಮೇಲಣ ಗೌರವ ಮತ್ತು ಜ್ಞಾನ ಕುತೂಹಲದಿಂದ ಅವರು ಆ ಪವಿತ್ರ ಕಾರ್ಯವನ್ನು ನೆರವೇರಿಸಿದರು.
ಸೋಮಶೇಖರ್ ಅವರ ಮತ್ತೊಂದು ವೈಶಿಷ್ಟ್ಯವೆಂದರೆ, ಕನ್ನಡ ಮಾಧ್ಯಮದಲ್ಲಿ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆದು ಯಶಸ್ವಿಯಾದ ಮೊದಲಿಗರು. ಕನ್ನಡ ಸುಸಮೃದ್ಧವಾದ, ಸುಸಮರ್ಥ ಭಾಷೆಯೆಂಬ ಸತ್ಯ ಅವರಿಗೆ ಗೊತ್ತು. ಕರ್ನಾಟಕದಲ್ಲಿ ಕನ್ನಡಕ್ಕೆ ಸರ್ವಾದ್ಯತೆ ನೀಡಬೇಕಾಗಿದೆ. ಕನ್ನಡದಲ್ಲಿ ಸೋಮಶೇಖರ್ ಅವರಿಗೆ ಅಪಾರ ಅಭಿಮಾನವಿದೆಯೆಂಬುದಕ್ಕೆ ಅವರ ಬರಹಗಳೇ ನಿದರ್ಶನ.
ಅವರದು ಅಧಿಕಾರ ಯಂತ್ರದಲ್ಲಿ ಕೈ ಸಿಕ್ಕಿಸಿಕೊಂಡು ಕೂಲಿ ಮಾಡುವ ಯಾಂತ್ರಿಕ ಜೀವನವಲ್ಲ. ಪ್ರತಿಯೊಬ್ಬ ಅಧಿಕಾರಿಯ ಧ್ಯೇಯ ದೇಶನಿರ್ಮಾಣ ಕಾರ್ಯವಾಗಬೇಕು. ಸೋಮಶೇಖರರು ಬರಿಯ ಚಿಪ್ಪಣಿ ಬರೆಯುವ ಕಾರ್ಯದಲ್ಲಿ, ಚೋಟಾ ರುಜು ಹಾಕುವುದರಲ್ಲಿ ಸಂತೃಪ್ತರಾಗುವುದಿಲ್ಲ. ಸಾಹಿತ್ಯ ಸಂಸ್ಕೃತಿ ವಿಚಾರಗಳಲ್ಲಿ ಅವರಿಗೆ ಅಪಾರವಾದ ಮಮತೆಯಿರುವುದರಿಂದಲೇ ಅವರು ಅನೇಕ ಸಾಂಸ್ಕೃತಿಕ ಸಂಸ್ಥೆಗಳೊಡನೆ ಅಂಟಿಕೊಂಡಿದ್ದಾರೆ. ಅವರಲ್ಲಿ ಮಹಾಪ್ರಾಧ್ಯಾಪಕನ ವಿದ್ವತ್ತಿದೆ. ಶ್ರೇಷ್ಠ ರಾಷ್ಟ್ರನಿರ್ಮಾಪಕ ರಾಜಕಾರಣಿಯ ವಾಗ್ಮಿತೆಯಿದೆ. ಅವರು ವೇದಿಕೆಯ ಮೇಲೆ ಹತ್ತಿ ಮಾತು ಪ್ರಾರಂಭಿಸಿದರೆಂದರೆ, ಚರಾಚರ ವಸ್ತುಗಳೆಲ್ಲ ರೋಮಾಂಚನಗೊಳ್ಳುತ್ತವೆ. ಸಭಿಕರು ಜಗತ್ತನ್ನೇ ಮರೆಯುತ್ತಾರೆ. ಮಾತಾಡುವ ಭಾಷೆ ಕನ್ನಡವಾದ್ದರಿಂದ, ಅವರು ಬಳಸುವ ಪದಗಳಲ್ಲಿ ಸರಸ್ವತೀಶಕ್ತಿ ಜೀವಂತವಾಗಿರುವುದರಿಂದ, ಸಾಂಸ್ಕೃತಿಕ ಮೌಲ್ಯಗಳ ಅಭಿವ್ಯಕ್ತಿಯೇ ಅವರ ಗುರಿಯಾದ್ದರಿಂದ, ಅವರ ವಾಗ್ಮಿತೆ ತಾರಕಕ್ಕೇರುತ್ತದೆ. ಜನರನ್ನೆಚ್ಚರಿಸಲು, ಸಮಾಜವನ್ನು ಉದ್ದೀಪಿಸಲು, ನಾಡನ್ನು ಕಟ್ಟಲು ಅಂಥ ಭಾಷಣಗಳು ಬೇಕು. ಇಂಥ ಅಧಿಕಾರಿಗಳು ಈ ನಾಡಲ್ಲಿ ಎಷ್ಟು ಮಂದಿ ಇದ್ದಾರೆ? ಎಲ್ಲ ಅಧಿಕಾರಿಗಳಿಗೆ ಸೋಮಶೇಖರ್ ಮಾದರಿ. ನಾಡು ನುಡಿ ಸಂಸ್ಕೃತಿಗಳ ಆರಾಧಕರಾದ್ದರಿಂದಲೇ ಅವರ ವ್ಯಕ್ತಿತ್ವಕ್ಕೆ ಗೌರವ ಬಂದಿದೆ.
ಅವರು ಕನ್ನಡದ ಆರಾಧಕರಾದ್ದರಿಂದಲೇ ಸಾಮಾನ್ಯ ಕನ್ನಡಿಗನೊಡನೆ ಸಮಾನತಾ ಭಾವದಿಂದ ದಯಾರ್ದ್ರ ಹೃದಯದಿಂದ ಬೆರೆಯಬಲ್ಲರು. ಇಷ್ಟೆಲ್ಲ ವಿದ್ವತ್ತಿದ್ದರೂ ಅವರಲ್ಲಿ ದರ್ಪವಾಗಲಿ, ಅಹಂಕಾರವಾಗಲಿ ಇಲ್ಲ. ವೀತಮಾತ್ಸರ್ಯ, ದ್ವೇಷರಾಹಿತ್ಯ, ಸೌಜನ್ಯ, ಪ್ರೀತಿ, ಸಹನೆ, ಸಂಯಮ, ಮಾನವೀಯತೆಗಳೆಲ್ಲಾ ಸೋಮಶೇಖರರಲ್ಲಿವೆ. ಅವರು ಮತ್ತು ಅವರ ಪತ್ನಿ ಇಬ್ಬರೂ ಉದಾರ ಮನಸ್ಸಿನ ಆತಿಥೇಯರು. ನಾನು ಅವರ ಆತಿಥ್ಯದ ಔದಾರ್ಯ, ಸೊಗಸನ್ನು ಅನುಭವಿಸಿದ್ದೇನೆ. ನಾನದನ್ನು ಮರೆತಿಲ್ಲ.
ಸೋಮಶೇಖರ್ ಬರುವ ವರ್ಷ ನಿವೃತ್ತರಾಗುವರಾದರೂ ಅವರ ಸೇವೆ ಕನ್ನಡ ನಾಡಿಗೆ ಬೇಕಾಗಿದೆ. ನಿವೃತ್ತಿ ನಂತರ ತೆಪ್ಪಗೆ ಮನೆಯಲ್ಲಿ ಕೂರುವ ವ್ಯಕ್ತಿಯಲ್ಲ ಅವರು. ಲೇಖನ ಕಾರ್ಯವೂ ನಾಡಿನ ಸೇವೆಯಾದುದರಿಂದ ಸೋಮಶೇಖರರು ಖಂಡಿತವಾಗಿಯೂ ನಾಡುನುಡಿಗಳ ಸೇವೆಯಲ್ಲಿ ನಿರತರಾಗಿರುತ್ತಾರೆ. ಸಮಾಜವೂ ಅವರನ್ನು ಬಳಸಿಕೊಳ್ಳುತ್ತದೆ ಎಂದು ನಂಬಿದ್ದೇನೆ. ಸಾಹಿತಿಗಳಿಗಂತೂ ನಿವೃತ್ತಿಯೇ ಇಲ್ಲ. ಸೋಮಶೇಖರ್ ಅವರು ಕನ್ನಡದ ಸಾಹಿತಿಗಳಲ್ಲೊಬ್ಬರೆಂಬುದು ಎಲ್ಲರಿಗೂ ಗೊತ್ತಿದ್ದದ್ದೇ.
- ದೇಜಗೌ