ನರ್ಸ್ ಅಮ್ಮ
ಸೂಲಗಿತ್ತಿ ನರಸಮ್ಮ ಯಾವ ಬಿರುದು, ಸನ್ಮಾನಗಳನ್ನೂ ಆಶಿಸಿದವರಲ್ಲ. ಬಹುಶಃ ಇಂತಹ ಪ್ರಶಸ್ತಿ, ಪುರಸ್ಕಾರಗಳು ಇವೆ ಎಂಬುದರ...

ಸೂಲಗಿತ್ತಿ ನರಸಮ್ಮ ಯಾವ ಬಿರುದು, ಸನ್ಮಾನಗಳನ್ನೂ ಆಶಿಸಿದವರಲ್ಲ. ಬಹುಶಃ ಇಂತಹ ಪ್ರಶಸ್ತಿ, ಪುರಸ್ಕಾರಗಳು ಇವೆ ಎಂಬುದರ ಅರಿವೂ ಅವರಿಗೆ ಇರಲಿಕ್ಕಿಲ್ಲ. ಪ್ರಶಸ್ತಿಗಳೇ ಇವರನ್ನು ಅರಸಿ ಬಂದಿವೆ. 'ಮಹಿಳಾ ಸಾಧಕಿ, ಮಹಿಳಾ ಚೇತನ, ಶ್ರಮಜ್ಯೋತಿ, ಗಡಿನಾಡು ರತ್ನ, ಡಿ. ದೇವರಾಜ ಅರಸು ಪ್ರಶಸ್ತಿ, ಪಾರಂಪರಿಕ ಸೇವಾ' ಪ್ರಶಸ್ತಿಗಳಿಗೆ ಭಾಜನರಾದ ನರಸಮ್ಮನವರಿಗೆ ಈಗ ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರ ನೀಡುವ 'ವಯೋಶ್ರೇಷ್ಠ ಸಮ್ಮಾನ್ 2013' ಪ್ರಶಸ್ತಿ ಲಭಿಸಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ.
ಪಾವಗಡ ತಾಲೂಕು ತಲಪರಿಗೆಗಳಿಗೆ ಹೆಸರುವಾಸಿ. ಅಗಾಧ ಅಂತರ್ಜಲ, ಶುದ್ಧ ಸಿಹಿನೀರು, ಬಿರುಬೇಸಿಗೆಯಲ್ಲೂ ಬತ್ತದ ಚಿಲುಮೆ, ಮೊಗೆದಷ್ಟೂ ಉಕ್ಕುವ ನೀರಿನ ಸೆಲೆ. ಈ ಸೀಮೆಯ ಪ್ರತಿನಿಧಿಯಂತಿರುವ ನರಸಮ್ಮನ ವ್ಯಕ್ತಿತ್ವವೂ ತಲಪರಿಗೆಯಂತಹದ್ದೆ.
ಹನ್ನೆರಡನೇ ವಯಸ್ಸಿನಲ್ಲಿ ಮದುವೆಯಾಗಿ ಹನ್ನೆರಡು ಮಕ್ಕಳ ತಾಯಿಯಾಗಿ, 17ನೇ ವಯಸ್ಸಿನಿಂದಲೇ ಹೆರಿಗೆ ಮಾಡಿಸುವ ಕಾರ್ಯವನ್ನು ಪ್ರಾರಂಭಿಸಿದ ನರಸಮ್ಮ ಆಂಜಿನಪ್ಪ ಇದುವರೆಗೆ ಸುಮಾರು 1500ಕ್ಕೂ ಹೆಚ್ಚು ಜೀವಗಳನ್ನು ಭೂಮಿಗೆ ತಂದ ದೇವತೆ.
ನರಸಮ್ಮನವರಿಗೆ ಹೆರಿಗೆ ಮಾಡಿಸುವುದು ವಂಶಪಾರಂಪರ್ಯವಾಗಿ ಬಂದ ಬಳುವಳಿ. ಇವರ ಅಜ್ಜಿ(ತಾಯಿಯ ತಾಯಿ) ಮರಿಗಮ್ಮನವರು ಪ್ರಸೂತಿ ಪ್ರವೀಣೆ. ನರಸಮ್ಮ ಬಾಲ್ಯದಲ್ಲಿಯೇ ತನ್ನ ಅಜ್ಜಿ ಮರಿಗಮ್ಮನೊಂದಿಗೆ ಕೆಲಸಕಾರ್ಯಗಳಲ್ಲಿ ಸಹಕರಿಸುತ್ತಿದ್ದರು. ಸದಾ ಅಜ್ಜಿಯೊಂದಿಗೆ ಇರುತ್ತಿದ್ದ ನರಸಮ್ಮ ಅಜ್ಜಿಯನ್ನು ಹಿಂಬಾಲಿಸಿ ಹೆರಿಗೆ ಮನೆಯವರೆಗೂ ಹೋದಳು. ಅಜ್ಜಿಯ ಕೆಲಸಗಳನ್ನೆಲ್ಲಾ ಲಕ್ಷ್ಯಗೊಟ್ಟು ಗಮನಿಸುತ್ತಾ ಬಂದ ಹುಡುಗಿಗೆ ಹೆರಿಗೆ ಸೂಕ್ಷ್ಮಗಳೆಲ್ಲ ಕರಗತವಾದದ್ದೇ ಹಾಗೆ.
ಅಕ್ಷರಜ್ಞಾನವಿಲ್ಲದ, ಸಾಮಾಜಿಕ ವಿವಂಚನೆಗೆ ಈಡಾದ ಕೃಷ್ಣಾಪುರ ಕುಗ್ರಾಮದ ಕುಟುಂಬವೊಂದರ ಸದಸ್ಯೆಯಾದ ನರಸಮ್ಮನವರು ಆಧುನಿಕ ಆಸ್ಪತ್ರೆಗಳ 'ನರ್ಸ್'ಗಳಿಗೆ ಗುರುವಾಗಬಲ್ಲವರು. ತಮ್ಮ 17ನೇ ವಯಸ್ಸಿನಲ್ಲಿಯೇ ಹೆರಿಗೆ ಮಾಡಿಸುವ ಸೇವೆಗೆ ತೊಡಗಿರುವ ಇವರು ಸಾವಿರಾರು ಮಕ್ಕಳ ಸಲೀಸು ಜನನಕ್ಕೆ ಕಾರಣರಾಗಿದ್ದಾರೆ.
ಪ್ರತಿ ಹೆಣ್ಣಿಗೂ ತಾಯ್ತನ ಎಷ್ಟು ಸಂಭ್ರಮದ ವಿಷಯವೋ ಅಷ್ಟೇ ಆತಂಕದ ವಿಷಯ ಕೂಡ! ಕೃಷ್ಣಾಪುರದ ಗರ್ಭಿಣಿಯರಿಗೆ ಅವರ ತಾಯಂದಿರು, ನೆರೆಹೊರೆಯವರು ನೀಡುವ ಅಭಯ 'ಏನೂ ಹೆದರಬೇಡಿ, ನರಸಮ್ಮ ಇದ್ದಾರೆ'. ನರಸಮ್ಮ ಇದ್ದರೆ ಇಲ್ಲಿನವರಿಗೆ ಭೀಮಬಲ.
ಇಂದು ಸ್ಕ್ಯಾನಿಂಗ್ ಯಂತ್ರದ ಸಹಾಯದಿಂದ ಮಗು ಗರ್ಭದಲ್ಲಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಪರಿಶೀಲಿಸಿ, ಪರಿಕರಗಳನ್ನು ಬಳಸಿ ಪ್ರಸವ ಮಾಡಿಸುತ್ತಾರೆ. ಮಗು ಮುಖ ಮೇಲಾಗಿ ಹುಟ್ಟುವುದು, ಕಾಲು ಮುಂದಾಗಿ ಬರುವುದು, ಕರುಳು ಬಳ್ಳಿ ಸುತ್ತಿಕೊಳ್ಳುವುದು, ಹೆರಿಗೆ ನೋವು ದೀರ್ಘಕಾಲ ಬಂದು ಮಗು ಗರ್ಭಾಶಯದ ನೀರು ಕುಡಿಯುವುದು, ಹೃದಯಬಡಿತ ಕ್ಷೀಣಿಸುವುದು... ಹೀಗೆ ಇನ್ನೂ ಅನೇಕ ಅಡೆತಡೆಗಳು ಮಗುವಿನ ಜನನ ಕಾಲದಲ್ಲಿ ಕಾಣಿಸಿಕೊಳ್ಳುವ ತೊಂದರೆಗಳು. ಎಷ್ಟೆಲ್ಲಾ ಸೌಲಭ್ಯಗಳಿರುವ ಇಂದಿನ ಪರಿಸ್ಥಿತಿಯಲ್ಲೂ ಒಬ್ಬಳು ಗರ್ಭಿಣಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿ ಸುಖಪ್ರಸವವಾಗಿ ಮಗುವಿನೊಂದಿಗೆ ಮನೆಗೆ ಬಂದಾಗಲೇ ಪ್ರಸೂತಿ ತಜ್ಞೆಗೆ ನೆಮ್ಮದಿ. ಆದರೆ ನರಸಮ್ಮನಿಗೆ ಎದುರಾದ ಈ ಎಲ್ಲ ಸಮಸ್ಯೆಗಳಿಗೆ ಅವರ ಅನುಭವ, ಅರಿವೇ ದಾರಿತೋರಿದೆ.
ಅಡ್ಡ ಇರುವ ಮಗುವನ್ನು ಹೇಗೆ ಹೆರಿಗೆ ಮಾಡಿಸುತ್ತೀರಿ ಎಂದರೆ, 'ಮೃದುವಾಗಿ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ಒಂದು ಕೈಯಿಂದ ಮಗುವಿನ ತಲೆಯ ಭಾಗವನ್ನು ಕಿಬ್ಬೊಟ್ಟೆಯ ಕಡೆಗೂ, ಇನ್ನೊಂದು ಕೈಯಿಂದ ಪೃಷ್ಠದ ಭಾಗವನ್ನು ಎದೆಯ ಕಡೆಗೂ ತಿರುಗಿಸುತ್ತೇನೆ. ಹೆರಿಗೆ ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎನಿಸಿದಾಗ ಗರ್ಭಚೀಲವನ್ನು ಪ್ರಚೋದಿಸುವ ಕಷಾಯ ಕುಡಿಸಿದರೆ ಹೆರಿಗೆ ಸುಸೂತ್ರವಾಗುವುದು. ಹೆರಿಗೆ ನಂತರ ಪ್ಲಸೆಂಟಾ(ಸತ್ತೆ, ಕಸ) ಬೀಳುವುದು ತಡವಾದರೆ ತಯಾರಿಸಿಟ್ಟುಕೊಂಡ ಆಯುರ್ವೇದ ಲೇಹ್ಯವನ್ನು ತಿನ್ನಿಸಿ ಬಾಣಂತಿಗೆ ವಾಂತಿ ಮಾಡಿಸಿ ತೆಗೆಯುತ್ತೇನೆ' ಎಂದು ಸಲೀಸಾಗಿ ಹೇಳುತ್ತಾರೆ. ಈ ರೀತಿಯಲ್ಲಿ ಹೆರಿಗೆ ಮಾಡಿಸಿ ಎಷ್ಟೋ ಮಕ್ಕಳ ಜೀವ ಉಳಿಸಿರುವ ನರಸಮ್ಮನ ಬಗ್ಗೆ ಹೆಮ್ಮೆ ಎನಿಸದಿರದು.
ಅನಕ್ಷರಸ್ಥೆಯಾದ ನೀವು ಈ ಎಲ್ಲ ಆಯುರ್ವೇದ ಔಷಧವನ್ನು ಹೇಗೆ ಕಲಿತುಕೊಂಡಿರಿ? ಎಂದ ರೆ 'ಹಿರಿಯರಿಂದ ಕೆಲವನ್ನು ಕಲಿತೆ, ಇನ್ನು ಕೆಲವನ್ನು ಬಲ್ಲವರಿಂದ ಅರಿತೆ. ಬುಡುಬುಡುಕೆ ಜನಾಂಗದವರಿಂದಲೂ ಕೆಲವು ಮದ್ದುಗಳನ್ನು ಕಲಿತಿದ್ದೇನೆ. ಬುಡುಬುಡುಕೆಯವರು ಗಿಡಮೂಲಿಕೆ ಹೆಚ್ಚು ಬಳಸುತ್ತಾರೆ.' ಎಂದು ಯಾವುದೇ ಬಿಗುಮಾನವಿಲ್ಲದೇ ಹೇಳುತ್ತಾರೆ.
ಅನುಭವದಿಂದಲೇ ಗರ್ಭಿಣಿಯರ ಪ್ರಸವದ ದಿನವನ್ನು ಎಣಿಕೆ ಮಾಡುತ್ತಿದ್ದ ನರಸಮ್ಮನ ಲೆಕ್ಕ ಇದುವರೆಗೂ ತಪ್ಪಿದ್ದೇ ಇಲ್ಲ. ಗರ್ಭಿಣಿಯ ದೇಹಲಕ್ಷಣ ನೋಡಿಯೇ ಗಂಡೋ, ಹೆಣ್ಣೋ ಎಂಬುದನ್ನು ನಿಖರವಾಗಿ ಹೇಳುವಷ್ಟು ಪರಿಣತಿ, ಜ್ಞಾನ ಇವರಲ್ಲಿದೆಯೆಂದರೆ ಆಶ್ಚರ್ಯವಾಗದಿರದು. ಇದುವರೆಗೆ ಇವರು ಮಾಡಿಸಿದ ಒಂದೂವರೆ ಸಾವಿರಕ್ಕೂ ಹೆಚ್ಚು ಹೆರಿಗೆಗಳಲ್ಲಿ ಒಂದೇ ಒಂದು ಹೆರಿಗೆ ಕೂಡ ವಿಫಲವಾಗಿಲ್ಲ ಎಂದರೆ ಎಂಥ ಹೈಟೆಕ್ ಆಸ್ಪತ್ರೆಗಳ ವೈದ್ಯರೂ ಬೆರಗಾಗಲೇಬೇಕು!
ತನ್ನ ಸಹಾಯ ಬಯಸಿ ಬಂದ ಎಲ್ಲ ಹೆಣ್ಣುಮಕ್ಕಳಲ್ಲೂ ನರಸಮ್ಮನದು ಸಮಾನ ಪ್ರೀತಿ, ಅಂತಃಕರಣ. ಇವರ ಕೆಲಸಕ್ಕೆ ಪ್ರತಿಯಾಗಿ ಮೊರ ರಾಗಿ ಕೊಟ್ಟವರೂ ಇದ್ದಾರೆ, ಸೀರೆ ಉಡಿಸಿ ಮಡಿಲು ತುಂಬಿದವರೂ ಇದ್ದಾರೆ. ಆದರೆ ಈ ತಾಯಿಯ ಸೇವೆಯಲ್ಲಿ ಕಿಂಚಿತ್ ತಾರತಮ್ಯವೂ ಇಲ್ಲ. ಹೆರಿಗೆಯ ನಂತರ ಒಂಬತ್ತು ದಿನ ತಾಯಿ-ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಿ, ಮಗುವಿನ ದೃಷ್ಟಿ ನಿವಾಳಿಸಿ, ಬಾಣಂತಿ ಮತ್ತವಳ ತಾಯಿಗೆ ಒಂದಿಷ್ಟು ಸಲಹೆ ನೀಡಿ 'ಬಂಗಾರದಂಥ ಮಗು ಹುಟ್ಟೈತೆ, ಜೋಪಾನ!' ಎಂದು ಹೇಳಿ ಹೊರಡುತ್ತಾರೆ.
ಇಂದು ವಿಜ್ಞಾನ, ತಂತ್ರಜ್ಞಾನ, ವೈದ್ಯವಿಜ್ಞಾನ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ ಮತ್ತು ಸಾಧಿಸುತ್ತಿದೆ. ಹಳ್ಳಿಹಳ್ಳಿಗೂ ಕೆಲವು ಸೌಲಭ್ಯಗಳು ದಕ್ಕುತ್ತಿವೆ. ಆದರೆ ಹೆರಿಗೆಯಂಥ ಸೂಕ್ಷ್ಮ ವಿಷಯದಲ್ಲಿ ಗ್ರಾಮೀಣ ಜನರು ಇಂದಿಗೂ ಸಂಕಷ್ಟದಲ್ಲಿಯೇ ಇದ್ದಾರೆ. ಕರ್ನಾಟಕದಲ್ಲಿ ಬಾಣಂತಿ ಮತ್ತು ಶಿಶು ಮರಣ ಸಂಖ್ಯೆ ಗಣನೀಯ ಪ್ರಮಾಣದಲ್ಲಿಯೇ ಇದೆ. ಹಾಗಾಗಿ ಇಂದಿಗೂ ಗ್ರಾಮೀಣ ಸೂಲಗಿತ್ತಿಯರ ಪಾತ್ರ ಪ್ರಮುಖವಾದುದೇ ಆಗಿದೆ.
ಈ ಪವಿತ್ರ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ನರಸಮ್ಮನವರನ್ನು ಸರ್ಕಾರ ಪಾವಗಡ ಸರ್ಕಾರಿ ಆಸ್ಪತ್ರೆಯ 'ನರ್ಸ್' ವೃತ್ತಿಗೆ ಆಹ್ವಾನಿಸಿತ್ತಾದರೂ ಅದನ್ನು ನಯವಾಗಿಯೇ ನಿರಾಕರಿಸಿದವರು ನರ್ಸಮ್ಮ.
ತಮ್ಮ ಹದಿನೇಳನೇ ವಯಸ್ಸಿನಿಂದಲೇ ಹೆರಿಗೆ ಮಾಡಿಸುವ ವೃತ್ತಿಯನ್ನು ಆರಂಭಿಸಿದ ನರಸಮ್ಮ 89ನೇ ವಯಸ್ಸಿನವರೆಗೂ ಕಾರ್ಯನಿರ್ವಹಿಸಿದವರು. ಈಗ ಅವರಿಗೆ 93 ವರ್ಷ! ಇದೀಗ 'ಸೂಲಗಿತ್ತಿ ನರಸಮ್ಮ' ಅವರಿಗೆ ಕೇಂದ್ರ ಸರ್ಕಾರ ಶತಮಾನದ ಪ್ರಶಸ್ತಿ ನೀಡಿ ಗೌರವಿಸಿದೆ. ಶತಾಯುಷಿ ನರಸಮ್ಮ ಅಕ್ಟೋಬರ್ 1ರಂದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಾರ್ಥಕ ತುಂಬು ಜೀವನ, ಕಾಯಕನಿಷ್ಠೆ, ಅಂತಃಕರಣಪೂರ್ವಕ ನಿರ್ಮಲ ಮನಸ್ಸಿನ ನರಸಮ್ಮನವರಿಗೆ ಅಭಿನಂದನೆಗಳು.
ಮರೆಯಲಾಗದ ಘಟನೆ
ನರಸಮ್ಮ ಇದುವರೆಗಿನ ತಮ್ಮ ವೃತ್ತಿಯಲ್ಲಿ ಆಂಧ್ರದಿಂದ ವಲಸೆ ಬಂದಿದ್ದ ಬುಡಬುಡುಕೆ ಜನಾಂಗದ ಕುಟುಂಬದ ಗರ್ಭಿಣಿಯೊಬ್ಬಳಿಗೆ ಹೆರಿಗೆ ಮಾಡಿಸಿದ ಅನುಭವವನ್ನು ಮರೆಯದೇ ಹೇಳುತ್ತಾರೆ. ಅದು ತಮಗೆ ತೃಪ್ತಿ ತಂದುಕೊಟ್ಟ ಕೆಲಸ ಕೂಡ ಎಂದು ನೆನೆಯುತ್ತಾರೆ. ಬುಡುಬುಡುಕೆಯವರದು ಅಲೆಮಾರಿ ಜೀವನ. ಅವರು ಸರಿಯಾಗಿ ಮನೆ ಕಟ್ಟಿಕೊಳ್ಳುವುದಿಲ್ಲ. ಡೇರಾ ತರಹ ಗುಡಾರ. ಸ್ಥಳಾಭಾವದ ನಡುವೆ ಪ್ರಾಣಿ, ಪಕ್ಷಿಗಳು ಜತೆಗೆ. ಅಂದು ರಾತ್ರಿ ಜೋರಾದ ಮಳೆ, ಕಾರ್ಗತ್ತಲು, ಅಂತಹ ಸಂದರ್ಭದಲ್ಲಿ ಬುಡುಬುಡುಕೆ ಚಂದ್ರಪ್ಪನ ಹೆಂಡತಿ ಮಾರಕ್ಕನಿಗೆ ಅವರ ಡೇರಾದಲ್ಲೇ ಸುಸೂತ್ರ ಹೆರಿಗೆ ಮಾಡಿಸಿದ್ದಾರೆ ನರಸಮ್ಮ!
ಹಾಡುಗಾರ್ತಿ ನರಸಮ್ಮ
ನರಸಮ್ಮ ಅನಕ್ಷರಸ್ಥೆಯಾದರೂ ತೆಲುಗು, ಕನ್ನಡ ಭಾಷೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಜನರನ್ನು ಜಾಗೃತಗೊಳಿಸುವ ಜೋಗುಳದ ಹಾಡು, ಸೋಬಾನೆ ಹಾಡು, ಜನಪದ ಹಾಡುಗಳನ್ನು ರಚಿಸಿ, ಹಾಡುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ಗರ್ಭಿಣಿಯರಿಗೆ ಹೆರಿಗೆ ನೋವು ಗೊತ್ತಾಗದಿರಲೆಂದು ಈ ಹಾಡುಗಳನ್ನು ಹಾಡುತ್ತಾರಂತೆ. ನರಸಮ್ಮ ಸಣ್ಣಪುಟ್ಟ ಕಾಯಿಲೆ, ತೊಂದರೆಗಳಿಗೆ ಮನೆಮದ್ದು ಕೂಡ ಕೊಡುತ್ತಾರೆ. ತಾನು ಅನಕ್ಷರಸ್ಥೆಯಾದರೂ ತನ್ನ ಎಲ್ಲ ಮಕ್ಕಳಿಗೆ ವಿದ್ಯೆ ಕಲಿಸಿದ್ದಾರೆ. ಸುತ್ತಮುತ್ತಲಿನ ಜನರಿಗೆ ವಿದ್ಯೆಯ ಮಹತ್ವ ತಿಳಿಹೇಳುತ್ತಾರೆ. ಆಹಾರ-ಆರೋಗ್ಯದ ಬಗ್ಗೆ ಸಲಹೆ ನೀಡುತ್ತಾರೆ!
ದೇವತೆಗಳು ಸಂಚರಿಸುವುದು ಇಲ್ಲೇ!
ನರಸಮ್ಮ ಮೊದಲ ಬಾರಿಗೆ ಬಸ್ ಹತ್ತಿದ್ದೇ 50ನೇ ವಯಸ್ಸಿನಲ್ಲಿ. ಆಕಾಶದಲ್ಲಿ ವಿಮಾನ ಹೋಗುವಾಗ ಮರೆಯಾಗುವವರೆಗೂ ನೋಡುತ್ತಿದ್ದ ನರಸಮ್ಮನಿಗೆ 93ನೇ ವಯಸ್ಸಿಗೆ ವಿಮಾನ ಹತ್ತುವ ಯೋಗ ಲಭಿಸಿದೆ. ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿನಿಂದ ದಿಲ್ಲಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಅವರು ತಮ್ಮ ಮಗನಿಗೆ, 'ವಿಮಾನ ತೋರಿಸ್ತೀನಿ ಅಂತ ಹೇಳಿದ್ಯಲ್ಲ? ಇನ್ನೂ ಯಾವುದೋ ಆಫೀಸ್ನಲ್ಲೇ ಕೂರ್ಸಿದ್ದೀಯಾ? ವಿಮಾನ ತೋರಿಸೋದು ಯಾವಾಗ?' ಎಂದು ಪ್ರಶ್ನಿಸಿದ್ದಾರೆ. ವಿಮಾನದಲ್ಲಿ ಗಗನಸಖಿಯರಿಗೆ 'ದೇವಕನ್ನಿಕೆಯರು' ಎಂದೇ ಸಂಬೋಧಿಸುತ್ತಿದ್ದರು! ವಿಮಾನದ ಕಿಟಕಿಯಿಂದ ಹೊರಗೆ ಮೋಡಗಳನ್ನು ನೋಡಿ 'ದೇವ-ದೇವತೆಗಳು ಸಂಚಾರ ಮಾಡುವುದು ಇಲ್ಲೇ' ಎಂದು ಹೇಳುವ ಅವರಲ್ಲಿ ಅದೆಂತಹ ಮುಗ್ಧತೆ!
- ಶಶಿರೇಖಾ ಹೆಗಡೆ
rekhatumbe@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


