ಸಾಪ್ತಾಹಿಕಪ್ರಭ

ಸೈ ಲೆನ್ಸ್

ಸೈ ಲೆನ್ಸ್
Published On :

ಮಳೆ ಬಂತೆಂದು ಸಂಭ್ರಮದಿಂದ ಮಕ್ಕಳು ಕೊಡೆ ಹಿಡಿದು ಓಡಿದೊಡನೆ ನಾನೂ ಕ್ಯಾಮೆರಾ ಹಿಡಿದು ಹೊರ ಬಂದೆ. ಮಳೆಗಾಲದ ಪ್ರಾರಂಭದ ರಭಸ ಜೋರಾಗಿಯೇ ಇರುತ್ತದೆ. ದೊಡ್ಡ ಹನಿಗಳು ಅಡ್ಡವಾಗಿ ಧರೆಯತ್ತ ನುಗ್ಗುವ ಪರಿ ಅನನ್ಯ. ಸಣ್ಣನೆ ಬಿಸಿಲು ಇದ್ದುಬಿಟ್ಟರೆ ಹನಿಗಳಿಗೆ ಹೊಳಪಿನ ಬೆರಗು ನೀಡಿ ಚಿತ್ರ ತೆಗೆಯಲು ಉತ್ಸಾಹ, ಉಲ್ಲಾಸ.
ಕೊಡೆ ಹಿಡಿದು ಗೇಟಿನತ್ತ ಧಾವಿಸುತ್ತಿದ್ದ ಮಗನ ಫೋಟೋ ತೆಗೆಯಲು ಲೆನ್ಸ್ ತಿರುಗಿಸಿದರೆ ದಟ್ಟ ಮಳೆಹನಿಯ ಪದರು ಆತನ ಇರುವನ್ನು ಮಬ್ಬಾಗಿಸಿತ್ತು. ನೆಲಕ್ಕೆ ಧಾವಿಸುವ ಹನಿಗಳು ಮಣ್ಣಿಗೆ ಢಿಕ್ಕಿ ಹೊಡೆದು ತುಂತುರಾಗಿ ಪುಟಿದೆದ್ದು ಆತನ ಪಾದಗಳನ್ನೇ ಮಾಯ ಮಾಡಿದ್ದವು! ತುಂತುರು ಹನಿಗಳ ಸಂಗಡ ಮಣ್ಣಿನ ಕಣಗಳೂ ಸಿಡಿದು ಬಣ್ಣದ ಸ್ಪರ್ಶ ಬೇರೆ! ಮಳೆ ನೀರ ಹನಿ ನೆಲದ ಬಾಯಾರಿಕೆ ನೀಗಿದೊಡನೆ ಕೆಂಬಣ್ಣದಲ್ಲಿ ಹರಿಯಲು ಪ್ರಾರಂಭಿಸುತ್ತದೆ. ಮಕ್ಕಳು ಚಹಾ, ಚಹಾ ಎಂದು ಕುಣಿಯತೊಡಗಿದರು. ಅವರ ಪಾದಗಳಿಂದ ಕೆಂಪು ನೀರು ಪುಟಿಯುವುದನ್ನೇ ಕಾಯ್ದು ಕ್ಲಿಕ್ಕಿಸತೊಡಗಿದೆ. ಮರಗಳಡಿಯಲ್ಲಿ ನಿಂತ ನೀರಲ್ಲಿ ಎಲೆಗಳಿಂದ ಜಾರಿ ಬೀಳುವ ದೊಡ್ಡ ಹನಿಗಳು ನಿರ್ಮಿಸುವ ನೀರಿನ ಪುಟ್ಟ ಪುಟ್ಟ ಹೊಂಡಗಳು, ತಮ್ಮ ಸುತ್ತಲೂ ನೀರ ಹನಿ ಮುತ್ತುಗಳ ಬೇಲಿ ನಿರ್ಮಿಸಿಬಿಡುತ್ತವೆ. ಮಳೆ ನಿಂತರೂ ಈ ಪುಟ್ಟ ಹೊಂಡಗಳು ಮೂಡಿ ಮರೆಯಾಗುತ್ತಲೇ ಇರುತ್ತವೆ.
ಮಳೆ ಭುವಿಯಲ್ಲಿ ನೀರ ಚಿತ್ತಾರ ಮೂಡಿಸಿದಂತೆ ಬಾನಲ್ಲೂ ಮೋಡಗಳ ಮೇಳ ನಡೆಸಿಬಿಡುತ್ತದೆ. ಬಿಳಿ ಕಪ್ಪು ವರ್ಣದ ಮೋಡಗಳು ಎಲ್ಲ ದಿಕ್ಕುಗಳಿಂದ ಚಲಿಸುತ್ತ, ನಡುವೆ ಮಿಂಚು ಬಳ್ಳಿಗಳನ್ನು ನೆಲದತ್ತ ಬಿಡುತ್ತವೆ. ಸಾಯಂಕಾಲದ ವೇಳೆಯಲ್ಲಿ ಸೂರ್ಯ ಇಣುಕಿದರೆ ಮೋಡದ ನಾಡಿನ ಬಾಗಿಲಿಗೆ ಕಾಮನ ಬಿಲ್ಲಿನ ಕಮಾನು ಮೂಡಿಬಿಡುತ್ತದೆ.
ಮಳೆಯಲ್ಲಿ ದಿನಕಳೆದಂತೆ ಭುವಿಯ ಹಸಿರು ಹೊದಿಕೆ ವಿಸ್ತಾರವಾಗುತ್ತ ಹೋಗುತ್ತದೆ. ವೈವಿಧ್ಯಮಯ ಹಸಿರು ವರ್ಣಗಳು ಭ್ರಮಾಲೋಕವನ್ನೇ ಸೃಷ್ಟಿಸಿಬಿಡುತ್ತವೆ.

- ಚಿತ್ರ- ಲೇಖನ: ಗ. ಮ. ತುಂಬೇಮನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.