ಒಗಟು ಬಿಚ್ಚುತ್ತಾ ತಾವೇ ಒಗಟಾದವರು

ಇಂದು ಸತ್ಯಕಾಮರ ನೆನಪಿನ ದಿನ. ಕಲ್ಲಹಳ್ಳಿಯ 'ಸುಮ್ಮನೆ'ಯಲ್ಲಿ ಅವರ ಆರಾಧನೆ. ಉಪವಾಸ ನೆನಪಿನ ಭವನ, ಮನನ ಗ್ರಂಥಾಲಯ, ನಿಮ್ಮನೆ ಅತಿಥಿಗೃಹಗಳ ಲೋಕಾರ್ಪಣೆ. ಪೇಜಾವರ ಶ್ರೀ, ಉಮಾಶ್ರೀ, ಬಿ.ಜಯಶ್ರೀ, ಕುಂವೀ ಉಪಸ್ಥಿತಿ. ಅವರ ಸ್ಮರಣೆಯಲ್ಲೊಂದು ಲಹರಿ.
ಕಲ್ಲಲ್ಲಿ ಹೂವರಳಿಸಿದ ಮೋಡಿಗಾರ ಕೃಷಿಕ ಯಾರು?
ಕನ್ನಡ ಭಾಷೆಗೆ ಹೊಸ ಬನಿ ಹೊಸ ಆಯಾಮ ಕೊಟ್ಟ ಸಾಹಿತ್ಯ ರಸಿಕ, ತಂತ್ರಮಾರ್ಗದಲ್ಲಿ ಯಾರೂ ಏರದ ಎತ್ತರಕ್ಕೇರಿದ ಮಾಂತ್ರಿಕ ಯಾರು?
ಎಲ್ಲ ಇದ್ದೂ ಏನೂ ಇರದವರಂತೆ ಕೈಚೆಲ್ಲಿ ಬದುಕಿದ ಧೀರ ಯಾರು?
ಈ ಎಲ್ಲ ಪ್ರಶ್ನೆಗಳಿಗೆ ಒಂದೇ ಉತ್ತರ: ಕಲ್ಲಳ್ಳಿಯ ಸತ್ಯಕಾಮ.
ಪೂರ್ವಾಶ್ರಮದಲ್ಲಿ ಗಲಗಲಿಯ ಅನಂತಕೃಷ್ಣಾಚಾರ್ಯ. ಪೂರ್ವಾಶ್ರಮದ ತಲೆಯ ಮೇಲೆ ಉತ್ತರಾಶ್ರಮದ ಸತ್ಯಕಾಮ ಕುಳಿತುಬಿಟ್ಟ ಬಗೆಯೆ ಒಂದು ವಿಸ್ಮಯ.
ಸತ್ಯವನ್ನು ಅರಸುತ್ತ ಊರೂರು ಅಂಡಲೆದ ಸತ್ಯಕಾಮ. ಇವರೇ ಇರಬೇಕು ಜಬಾಲೆಯ ಹೊಟ್ಟೆಯೊಳಗೆ ಹೊಕ್ಕುಬಂದ ಸತ್ಯಕಾಮ.
ನಾಸ್ತಿಕರ ಕಣ್ಣಿಗೆ ಆಸ್ತಿಕರಾದವರು. ಆಸ್ತಿಕರ ಕಣ್ಣಿಗೆ ನಾಸ್ತಿಕರಾದವರು.
=
ನಿಜ ಹೇಳಬೇಕಾ? ನಮ್ಮಿಬ್ಬರದೂ ಒಂದೇ ಅವತಾರ. ನಾನು ವಾಮನ. ಅವರು ತ್ರಿವಿಕ್ರಮ.
ತಿಳಿಯದವರಿಗೆ ಹೇಗೂ ತಿಳಿಯಲಿಲ್ಲ. ತಿಳಿದವರಿಗೂ ತಿಳಿಯಲಿಲ್ಲ.
ಅವರು ಬ್ರಹ್ಮತತ್ತ್ವದಂತೆ, ಹೆಣ್ಣಿನ ಹೃದಯದಂತೆ ದುರೂಹ್ಯವಾಗಿ ನಿಂತು ವಿಸ್ಮಯ ಬರಿಸಿದವರು.
ಅವಿಜ್ಞಾತಂ ವಿಜಾನತಾಮ್.
ಅರ್ಧಾಂಶ ನಿಜವಾಯಿತು.
=
ಸತ್ಯಕಾಮ ಮತ್ತು ನಾನು.
ಈ ನಾನು ಕಳಚಿಕೊಂಡರೆ ಉಳಿವುದೇನು?
ಸತ್ಯಕಾಮ ಮತ್ತು ಸತ್ಯಕಾಮ. ಅವರೂ ಸತ್ಯಕಾಮ. ನಾನೂ ಸತ್ಯಕಾಮ.
ಏಕೆಂದರೆ ನಾನು ಅಸತ್ಯಕಾಮನಲ್ಲ. ಸತ್ಯವನ್ನು ಬಯಸುವವನೂ ಸತ್ಯಕಾಮ. ಬಯಸಿದ್ದೆಲ್ಲ ಸತ್ಯವಾದವನೂ ಸತ್ಯಕಾಮ. ಆ ಸತ್ಯಕಾಮನ ಕಡೆಗೆ ಈ ಸತ್ಯಕಾಮನ ಪಯಣ.
=
ಒಂದೆ ಸಹಕಾರ ಧ್ರುಮದ ಎರಡು ಟೊಂಗೆಗಳು ನಾವು. ಸತ್ಯಕಾಮ ಮತ್ತು ನಾನು.
ಮರ ಒಂದೇ. ಆದರೆ ಟೊಂಗೆ ಬೇರೆ. ಬೇರು ಒಂದೇ. ಆದರೆ ಚಿಗುರು ಬೇರೆ.
ಆ ಟೊಂಗೆಯ ಮೋರೆ ಆಚೆ, ಈ ಟೊಂಗೆಯ ಮೋರೆ ಈಚೆ.
ಆಚೆಯೆಂದರೆ ಆಚೆಯಲ್ಲ, ಈಚೆ ಕೂಡ. ಈಚೆಯೆಂದರೆ ಈಚೆಯಲ್ಲ, ಆಚೆ ಕೂಡ.
ಆ ಟೊಂಗೆಯ ಹಣ್ಣಿನ ರುಚಿ ಬೇರೆ. ಈ ಟೊಂಗೆಯ ಹಣ್ಣಿನ ರುಚಿ ಬೇರೆ.
ಕೆಲವರಿಗೆ ಸಿಹಿ. ಕೆಲವರಿಗೆ ಕಹಿ. ಕೆಲವರಿಗೆ ಉಪ್ಪು. ಕೆಲವರಿಗೆ ಖಾರ.
ಅವರವರ ನೋಟಕ್ಕೆ ಅವರವರ ಕಾಣ್ಕೆ. ಅವರವರ ಭಾಗ್ಯಕ್ಕೆ ಅವರವರ ಭೋಗ್ಯ.
ಯಾರು ಯೋಗ್ಯ ಯಾರು ಅಯೋಗ್ಯ? ತಿಳಿದವರ ನಾಲಿಗೆಗೆ ಎಲ್ಲವೂ ರಸಪಾಕ.
ದ್ವಾ ಸುಪರ್ಣಾ ಸಯುಜಾ ಸಖಾಯಾ
ಸಮಾನಂ ವೃಕ್ಷಂ ಪರಿಷಸ್ವಜಾತೇ
=
ಸತ್ಯಕಾಮ ಎತ್ತರಕ್ಕೇರಿದರು.
ತನ್ನ ಕಾಲದ ಜನರನ್ನು ಕೂಗಿ ಕರೆದು ನುಡಿದರು. ನಾನೇರಿದೆತ್ತರಕೆ ನೀನೇರಬಲ್ಲೆಯಾ?
ಜನ ಕಣ್ತೆರೆದು ಟೊಂಗೆಯಲ್ಲಿ ನೋಡಿದರು.
ಟೊಂಗೆಯ ಮೇಲೊಂದು ಕಪ್ಪೆ, ಕಪ್ಪೆಯ ಮೇಲೊಂದು ಹಾವು. ಹಾವಿನ ತಲೆಯ ಮೇಲೊಂದು ಗಿಡುಗ. ಗಿಡುಗನ ಬಾಯಲ್ಲಿ ಅಮೃತ ಕಲಶ.
ಗುಟ್ಟು ರಟ್ಟಾಗಲೇ ಇಲ್ಲ.
ಇವನೊಬ್ಬ ಮರುಳ ಎಂದರು ಕೆಲವರು. ಇದು ಆಗದ ಹೋಗದ ಸಂಗತಿ ಎಂದರು ಕೆಲವರು.
ಸತ್ಯಕಾಮರು ದೂರದಲ್ಲಿ ನಿಂತು ನಸುನಕ್ಕರು. ಅವರು ಬಾಗಿಲು ತೆರೆದು ನಿಂತರೂ ಯಾರೂ ಒಳಹೋಗಲಿಲ್ಲ.
ನಾಗರಿಕತೆಯ ಪಾಡೇ ಹಾಗೆ. ಅಲ್ಲಿ ಜ್ಞಾನಿಗಳು ಹುಚ್ಚರಂತೆ ಕಾಣುತ್ತಾರೆ. ಹುಚ್ಚರು ಜ್ಞಾನಿಗಳಂತೆ ಕಾಣುತ್ತಾರೆ. ನಾಗರಿಕರು ಹುಚ್ಚರ ಬೆನ್ನು ಹತ್ತುತ್ತಾರೆ. ಜ್ಞಾನಿಗಳು ಹಾಯಾಗಿ ಬದುಕುತ್ತಾರೆ.
=
ಹುಚ್ಚರ ನಾಡಿನಲ್ಲಿ ಹುಚ್ಚರಂತಿರಬೇಕು. ಬತ್ತಲೆಯ ನಾಡಿನಲ್ಲಿ ಬಟ್ಟೆ ತೊಡಬಾರದು.
ಮತ್ತೇಕೆ ಮುಚ್ಚಿಕೊಂಡರು ಸತ್ಯಕಾಮರು?
ಬಂಗಾರವನ್ನು ಬಿಚ್ಚಿಡುವುದಿಲ್ಲ. ತಿಜೋರಿಯಲ್ಲಿ ಜೋಪಾನವಾಗಿ ಮುಚ್ಚಿಡುತ್ತಾರೆ.
ಮುಚ್ಚಿಟ್ಟ ಬದುಕು ಬಂಗಾರವಾಗುತ್ತದೆ. ಬಿಚ್ಚಿಟ್ಟ ಬದುಕು ಕೆಂಪುದೀಪದ ಕೇರಿಯಾಗುತ್ತದೆ.
ಆದರೂ ಒಂದು ಮಾತು ನಿಜ, ಮುಚ್ಚುವುದರ ಸಾರ್ಥಕ್ಯ ಬಿಚ್ಚುವುದರಲ್ಲಿದೆ.
ಬಿಚ್ಚುವುದು ಇಲ್ಲವಾದರೆ ಮುಚ್ಚುವುದಕ್ಕೆ ಅರ್ಥವೇ ಇಲ್ಲ. ಮುಚ್ಚುವುದೇ ಬಿಚ್ಚುವುದಕ್ಕಾಗಿ.
ಯಾರೂ ಬಿಚ್ಚಲಾಗದ ಮುಚ್ಚಳವನ್ನು ಸತ್ಯಕಾಮರು ಬಿಚ್ಚಿದರು. ಬಟಾಬಯಲಲ್ಲಿ ಬತ್ತಲಾದರು.
ಕಿಟಕಿ-ಬಾಗಿಲು ಜಡಿದು ಕೊಟ್ಟೆದ್ದು ಮಲಗಿದವರಿಗೆ ಅವರು ಕಾಣಲೇ ಇಲ್ಲ.
ಅವರು ಮುಚ್ಚಳ ತೆಗೆದು ನಿಂತರು. ನಾವು ಮುಚ್ಚಳದೊಳಗೆ ಕೂತೆವು.
ಅವರು ತಮ್ಮ ಬಾಳಿನ ಒಗಟು ಬಿಚ್ಚಿದರು. ಬಿಚ್ಚುತ್ತ ಬಿಚ್ಚುತ್ತ ತಾವೇ ಒಗಟಾದರು.
ಈ ಒಗಟನ್ನು ಒಡೆಯುವ ಕೆಲಸ ನಡೆಯಬೇಕು. ಬತ್ತಲಾಗುವ ತಾಕತ್ತಿದ್ದವರು ಮುಂದೆ ಬರಬೇಕು.
- ಬನ್ನಂಜೆ ಗೋವಿಂದಾಚಾರ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


