ಪಾಲು ಕೊಡಬೇಕಾಗಿಲ್ಲ
ರಾಘವೇಂದ್ರ, ಶಿವಮೊಗ್ಗ
ತಂದೆಗೆ ನಾವು ಮೂವರು ಗಂಡುಮಕ್ಕಳಿದ್ದು, ಸ್ವಲ್ಪ ಪಿತ್ರಾರ್ಜಿತ ಆಸ್ತಿ ಇದೆ. ನಾವು ಸ್ವಂತ ಗಳಿಕೆಯಿಂದ ಆಸ್ತಿ ಮಾಡಿರುತ್ತೇವೆ. ಈಗ ಪಾಲು ಪಾರಿಖತ್ತು ಮಾಡಿಕೊಳ್ಳುವಾಗ ನನ್ನ ಸ್ವಂತ ಗಳಿಕೆಯ ಆಸ್ತಿಯಲ್ಲೂ ಪಾಲು ಕೊಡಬೇಕೇ?
- ಇಲ್ಲ. ನೀವು ನಿಮ್ಮ ಅಣ್ಣ-ತಮ್ಮಂದಿರಿಗೆ ಪಾಲು ಕೊಡಬೇಕಾಗಿಲ್ಲ. ಏಕೆಂದರೆ ಅದು ನೀವು ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿಯಾಗಿರುತ್ತದೆ. ಹಿಂದೂ ಉತ್ತರಾಧಿಕಾರ ಕಾಯ್ದೆ 1956ರ ಕಲಂ 8ರಂತೆ ನಿಮ್ಮ ಹೆಂಡತಿ ಮಕ್ಕಳಿಗೆ ಮಾತ್ರ ನೀವು ಸ್ವತಃ ಗಳಿಸಿದ ಆಸ್ತಿ ಬರುತ್ತದೆ. ಅಲ್ಲದೆ ನೀವು ಅದನ್ನು ಯಾರಿಗೆ ಬೇಕಾದರೂ ಕೊಡಬಹುದು.
ರದ್ದು ಮಾಡುವಂತಿಲ್ಲ
ಸಿದ್ದಯ್ಯ ಮುತ್ತಲಗೇರಿ, ಬಾದಾಮಿ
ತಂದೆಗೆ ಐವರು ಗಂಡು ಮಕ್ಕಳು. ಅದರಲ್ಲಿ ಇಬ್ಬರು ತೀರಿಕೊಂಡಿದ್ದಾರೆ. ಎರಡನೇಯವನು ಸಾಯುವ ಮೊದಲು ನಾನು ಅವನಿಗೆ ನನ್ನ ಹಿಸ್ಸೆಯನ್ನು ಬಿಟ್ಟುಕೊಟ್ಟಿದ್ದೆ. ಆತ ಸಾಯುವ ಮೊದಲು ಒಂದು ಮನೆ, ಎರಡು ಫ್ಲಾಟ್ ಖರೀದಿ ಮಾಡಿ ತನ್ನ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ. ಈಗ ನಾನು ದುಃಸ್ಥಿತಿಯಲ್ಲಿದ್ದು ಆ ಆಸ್ತಿಯಲ್ಲಿ ನನಗೆ ಭಾಗ ಬರುವುದೆ?
- ಹಕ್ಕು ಬಿಟ್ಟುಕೊಟ್ಟ ಮೇಲೆ ಅದನ್ನು ರದ್ದು ಮಾಡುವಂತಿಲ್ಲ. ಸತ್ತ ಅಣ್ಣನಿಗೆ ಹೆಂಡತಿ ಮಕ್ಕಳಿದ್ದರೆ ಆಗ ಅಣ್ಣನ ಆಸ್ತಿ ಅವನ ಹೆಂಡತಿ-ಮಕ್ಕಳಿಗೇ ಹೋಗುತ್ತದೆ. ಒಂದು ವೇಳೆ ಅಣ್ಣನಿಗೆ ಮದುವೆಯಾಗದಿದ್ದರೆ ಅಥವಾ ಮದುವೆ ಆಗಿಯೂ ಹೆಂಡತಿ, ಮಕ್ಕಳು ಇಲ್ಲದಿದ್ದರೆ ಆಗ ಮಾತ್ರ ಅಣ್ಣನ ಆಸ್ತಿಯಲ್ಲಿ ಈಗಿರುವ ಎಲ್ಲ ಸಹೋದರರಿಗೂ ಸಮಪಾಲು ಬರುತ್ತದೆ. (ಕಲಂ 8(ಎ)(ಬಿ) ಹಿಂದೂ ಉತ್ತರಾಧಿಕಾರ ಕಾಯ್ದೆ).
ಹಿಸ್ಸೆಗಾಗಿ ದಾವಾ ಹೂಡಿ
ಜಾನಕಮ್ಮ, ತುಮಕೂರು
ತಾತನಿಗೆ ನನ್ನ ತಂದೆ ಹಾಗೂ ಚಿಕ್ಕಪ್ಪ ಇಬ್ಬರು ಮಕ್ಕಳು. ತಂದೆ ಮತ್ತು ಚಿಕ್ಕಪ್ಪನ ಕಾಲಾನಂತರ ಆಸ್ತಿಯು ಅವರಿಬ್ಬರ ಎಲ್ಲಾ ಮಕ್ಕಳ ಹೆಸರಿನಲ್ಲಿ ಖಾತೆಯಾಗಿರುತ್ತದೆ. ಗೇಣಿದಾರರ ಹೆಸರೂ ಇರುತ್ತದೆ. ಆದರೆ ಹಿಸ್ಸೆ ಮಾಡಿಕೊಳ್ಳಲು ಯಾರೂ ಸಹಕರಿಸುತ್ತಿಲ್ಲ. ಪರಿಹಾರವೇನು?
- ನ್ಯಾಯಾಲಯದಲ್ಲಿ ಸಂಬಂಧಿಸಿದ ಎಲ್ಲರನ್ನೂ ಪ್ರತಿವಾದಿಗಳಾಗಿ ಮಾಡಿ, ವಿಭಾಗಕ್ಕಾಗಿ ದಾವಾ ಹೂಡಿ.
ಹೊಸದಾಗಿ ದಾವಾ ಹಾಕಬೇಕು
ಧನರಾಜ, ಮೈಸೂರು
ನಗರಸಭೆ ಚೆಕ್ಕು ಬೌನ್ಸ್ ಆಗಿ 5 ವರ್ಷದಿಂದ ಕೇಸ್ ನಡೆಯುತ್ತಿತ್ತು. ಈಗ ಕೇಸ್ ತೀರ್ಮಾನವಾಗಿ ಅವರಿಗೆ ದಂಡ ಹಾಕಿದ್ದಾರೆ. ತೀರ್ಮಾನಕ್ಕೆ ಮೊದಲು ಅವರು ಹಣ ಪಾವತಿ ಮಾಡಿದರು. ಆದರೆ ಈಗ ನಾಲ್ಕೂವರೆ ವರ್ಷಗಳ ಬಡ್ಡಿ ಕೊಡಲಿಲ್ಲ. ಆ ಬಡ್ಡಿಗೆ ಹೊಸ ಮೊಕದ್ದಮೆ ಹೂಡಬೇಕೇ?
- ಅದೇ ಕೋರ್ಟಿನಲ್ಲಿ ತೀರ್ಮಾನಕ್ಕೆ ಮೊದಲು ನಾಲ್ಕೂವರೆ ವರ್ಷದ ಬಡ್ಡಿ ವಿಷಯ ತಿಳಿಸಿ ಪರಿಹರಿಸಿಕೊಳ್ಳಬಹುದಾಗಿತ್ತು. ಹಾಗೆ ಮಾಡಿರದಿದ್ದರೆ ಈಗ ನೀವು ಹೊಸದಾಗಿ ಸಿವಿಲ್ ನ್ಯಾಯಾಲಯದಲ್ಲಿ ಬಡ್ಡಿಗಾಗಿ ದಾವಾ ಹಾಕಬೇಕು.
- ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

