ಸಾಪ್ತಾಹಿಕಪ್ರಭ

ಸಣ್ಣಕತೆಗೆ ದೊಡ್ಡಗರಿ

Published On :

ಕಳೆದ ವಾರ ಪ್ರಕಟವಾಗಿರುವ ಸಾಹಿತ್ಯ ಲೋಕದ ಮಹತ್ವದ ಪ್ರಶಸ್ತಿಗಳೆರಡೂ ಮಹಿಳೆಯರ ಪಾಲಾಗಿರುವುದು ವಿಶೇಷ. ಇಬ್ಬರೂ ಕೆನಡಾ ಮೂಲದವರು. ಇವರಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಪಡೆದವಳು 'ಕೆನಡಾದ ಚೆಕಾವ್‌' ಎಂದೇ ಹೆಸರಾದ ಅಲೈಸ್ ಮನ್ರೋ. ಸಣ್ಣಕತೆಗಳಿಂದಲೇ ಖ್ಯಾತಳಾದ ಮನ್ರೋಗೆ ಈಗ 82 ವರ್ಷ. ಬರೆಯುವ, ಓದುವ ಅನುಭವದ ಬಗ್ಗೆ ಈಕೆಯ ಚಿಂತನೆ ಹೀಗಿದೆ:
'ಕತೆ ಹಾದಿಯಂತಲ್ಲ. ಅದೊಂದು ಮನೆಯಂತೆ. ಒಳಗೆ ಹೋದವನು ತುಸುಕಾಲ ಅಲ್ಲಿದ್ದು ಅಲ್ಲಿರುವ ಕೋಣೆಗಳ ವಿನ್ಯಾಸ, ಹೊರಗಿನ ಜತೆ ಅದರ ಸಂಬಂಧ, ಹಿತಾನುಭವ ಇತ್ಯಾದಿಗಳನ್ನು ಅನುಭವಿಸುತ್ತಾನೆ. ನೀವು ಆ ಮನೆಗೆ ಮತ್ತೆ ಮತ್ತೆ ಭೇಟಿ ನೀಡಿದರೂ ಹೊಸತೇನೋ ಅನ್ವೇಷಿಸಬಹುದು.'
'ನನ್ನ ಕತೆಗಳು ಆತ್ಮಚರಿತ್ರಾತ್ಮಕ ಅಲ್ಲ. ಆದರೆ ಅವು ವೈಯಕ್ತಿಕ. ನಾನು ನೋಡಿ ತಿಳಿದಂತೆ ನನ್ನ ಲೋಕವಿದೆ. ಆದ್ದರಿಂದ ಅದು ವೈಯಕ್ತಿಕವೇ ಆಗಬೇಕು.'
'ಕತೆಯ ಆರಂಭ ನನ್ನಲ್ಲಿ ಕೆಲವೊಮ್ಮೆ ಒಂದು ಘಟನೆಯಿಂದ, ಒಂದು ಸ್ಮರಣೆಯಿಂದ ಆಗುತ್ತದೆ. ಆದರೆ ಕತೆ ಮುಕ್ತಾಯವಾದಾಗ ಅದರ ಯಾವ ಗುರುತೂ ಇಲ್ಲದಂತೆ ಬದಲಾಗಿರುತ್ತದೆ.'
'ಓದುಗ ಚಕಿತನಾಗಬೇಕು ಎಂಬುದು ನನ್ನಿಚ್ಛೆ. ಹೀಗಿದು ನಡೆಯಿತು ಎಂದಲ್ಲ, ಹೇಗಿದೆಲ್ಲಾ ನಡೆಯುತ್ತದೆ ಎಂದು ಓದುಗ ಭಾವಿಸುವಂತಾಗಬೇಕು. ಸಣ್ಣಕತೆಗಳು ಅದನ್ನು ಮಾಡಬಲ್ಲವು.'

ಯುವ ಪತ್ತೇದಾರಿಣಿ
ಮ್ಯಾನ್ ಬೂಕರ್ ಪ್ರಶಸ್ತಿಯನ್ನು ನ್ಯೂಜಿಲೆಂಡಿನಲ್ಲಿ ನೆಲೆಸಿರುವ ಎಲಿನೋರ್ ಕೇಟನ್ ಎಂಬ 28 ವರ್ಷದ, ನಾವೆಲ್ಲ ಹೆಸರೇ ಕಂಡು ಕೇಳರಿಯದ ಲೇಖಕಿ ಗೆದ್ದಿದ್ದಾಳೆ. ಪಾರ್ಟಿಗೆ ಹೋಗಿ ಬಂದು ಇನ್ನೂ ಮೇಕಪ್ ಅಳಿಸದೆ ಟಿವಿ ನೋಡುತ್ತಿರುವ ಹುಡುಗಿಯಂತೆ ಕಾಣುವ ಈಕೆಗೊಬ್ಬ ಈಕೆಗೊಬ್ಬ ಬಾಯ್‌ಫ್ರೆಂಡ್ ಇದ್ದಾನೆ, ಈತನೂ ಕವಿ. ಇವಳ ಎರಡನೇ ಕಾದಂಬರಿ 'ದಿ ಲ್ಯುಮಿನರೀಸ್‌' ಪುರಸ್ಕಾರ ಪಡೆದಿದೆ. ವಿಚಿತ್ರವೆಂದರೆ ಇದೊಂದು ಪತ್ತೇದಾರಿ ಕಾದಂಬರಿ. ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಾಳೆ. ಉನ್ನತ ಪ್ರಕಾಶನ ವಲಯಗಳ ಪರಿಚಯ ಈಕೆಗಿದೆ. ಈ ಅಂಶಗಳು ಈಕೆಯ ಅದೃಷ್ಟ ಮತ್ತು ಬೃಹತ್ ಸಾಹಿತ್ಯ ಪುರಸ್ಕಾರಗಳ ಆದ್ಯತೆಗಳ ಬಗೆಗೂ ಏನೋ ಹೇಳುತ್ತವೆ ಎಂಬುದು ಕೆಲ ವಿಮರ್ಶಕರ ಗುಮಾನಿ. ಇರಲಿ, ಆಕೆಯ ಸಂದರ್ಶನದ ಕೆಲ ಮಾತುಗಳು ನಿಮಗಾಗಿ.
'ಕಾದಂಬರಿ ಎಂದರೆ ಕ್ರಮಬದ್ಧ ಯೋಜನೆ ಅಥವಾ ತರ್ಕಕ್ಕಿಂತ ಮಿಗಿಲಾಗಿ ತಾತ್ವಿಕತೆಗೆ ಒತ್ತು ನೀಡುವಂಥದ್ದು. ಮುಗಿಯಲು ನಿರಾಕರಿಸುವಂಥದ್ದು, ಮುಂದುವರಿಯುವಂಥದ್ದು. ಅದು ಇನ್ನೊಬ್ಬ ಮನುಷ್ಯನನ್ನೇ ಭೇಟಿ ಮಾಡಿದಂತೆನಿಸುವುದು.'
'ಬರಹಗಾರರ ಜತೆ ಮಾತಾಡುವಾಗ ಅವರ ಚಿಂತನೆಗಳೇನು ಅಂತಲೂ, ಲೇಖಕಿಯರ ಜತೆ ಮಾತಾಡುವಾಗ ಅವರ ಭಾವನೆಗಳೇನು ಅಂತಲೂ ಕೇಳಲಾಗುತ್ತದೆ. ಲೇಖಕರ ವಿಚಾರದಲ್ಲಿ ತಲೆದೋರದ ಅದೃಷ್ಟದ ಪ್ರಶ್ನೆ ಬರಹಗಾರ್ತಿಯರ ವಿಚಾರದಲ್ಲಿ ಎದ್ದುಬರುತ್ತದೆ.'

ಹಾಯಿಕು
ಹಕ್ಕಿ ಗರಿಗೆ
ತಂಗಾಳಿಯ ಮೇಲೆ
ಏನೋ ಭರವಸೆ

- ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.