ಬದುಕೇ ಕಾವ್ಯ

ಬೇಂದ್ರೆ ತಾವೇ ಹೇಳಿಕೊಂಡಂತೆ 'ಬೆಂದು ಬೆಂದು ಬೇಂದ್ರೆಯಾದರು'. ಆದರೆ, ತಾವು ಪಟ್ಟ ಪಾಡೆಲ್ಲವನ್ನೂ ಹುಟ್ಟು ಹಾಡಾಗಿಸಿದ ಅವರ ಕಾವ್ಯಲಹರಿ ಶ್ರೇಷ್ಠವಾದುದು...
ಬದುಕೇ ಕಾವ್ಯ
Updated on: 

ಬೇಂದ್ರೆ ತಾವೇ ಹೇಳಿಕೊಂಡಂತೆ 'ಬೆಂದು ಬೆಂದು ಬೇಂದ್ರೆಯಾದರು'. ಆದರೆ, ತಾವು ಪಟ್ಟ ಪಾಡೆಲ್ಲವನ್ನೂ ಹುಟ್ಟು ಹಾಡಾಗಿಸಿದ ಅವರ ಕಾವ್ಯಲಹರಿ ಶ್ರೇಷ್ಠವಾದುದು. 'ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ' ಎಂದ ಬೇಂದ್ರೆ ಹಾಗೆಯೇ ಬದುಕಿದರು.
ಇದ್ದ 9 ಮಕ್ಕಳಲ್ಲಿ 6 ಮಂದಿಯನ್ನು ಕಣ್ಮುಂದೆಯೇ ಕಳೆದುಕೊಂಡರು. ಆದರೆ, ಆ ಮಕ್ಕಳ ಸಾವಿನ ನೋವನ್ನು ಇವರು ವರ್ಣಿಸುವ ರೀತಿ ಮಾತ್ರ ಮನ ಕಲಕುವಂಥದ್ದು. ಮೊದಲ ಮಗ ಕ್ಷೇಮೇಂದ್ರ ಸತ್ತಾಗ 'ಮೊದಲಿನ ಫಲವೊಂದು ಮೀಸಲು ಮಣ್ಣಿಗೆ...', ಭಾಸ್ಕರ ತೀರಿದಾಗ 'ಭೆಟ್ಟಿಗೆ ಬಂದನು ಹೊಸದೊಬ್ಬ ಕಂದನು ಅತಿಥಿಯೋ ಎಂಬಂತೆ...', ಲಲಿತಾ ಸತ್ತಾಗ 'ನೀ ಹಿಂಗ ನೋಡಬ್ಯಾಡ ನನ್ನ...' ಎಂದರಲ್ಲದೆ 'ಆ ಕೂಸ ಕಳ್ಕೊಂಡು ನೀನೆಂತೊ ಉಳ್ಕೊಂಡು ಲಾಲಿತ್ಯವಿಲ್ಲದ ಶೈಲಿಯೊಳು...' ಎಂದು ಪದ್ಯ ಕಟ್ಟಿದರು. ಮಡುಗಟ್ಟಿದ ದುಃಖದ ಸನ್ನಿವೇಶಗಳಲ್ಲೂ ಪ್ರಾಸ, ಲಯ, ಶ್ಲೇಷೆಗಳ ಸಾಮರ್ಥ್ಯ ಬಹುಶಃ ಬೇಂದ್ರೆಯಂಥ ಸಹಜ ಕವಿಗಳಿಗಷ್ಟೇ ಸಾಧ್ಯ. 22 ವರ್ಷದ ಮಗ ರಾಮ ತೀರಿಕೊಂಡಾಗ ಅವರ ಸಂಕಟ ಹೇಗಿತ್ತು ನೋಡಿ...

'ರಾಮ ರಾಮ ಏನು ಆಯಿತೊ ಆಯಿತಾಯಿತು
ನೀನು ಬಂದೆ ಬಂದೆಯಾ
ಏನು ಹೊರಟೆಯಾ ಈಗಲೇ
ಸತ್ತ ದಶರಥ ಇದ್ದ ರಾಮನಿಗಾಗಿ ಅತ್ತನು ಅಂದಿಗೆ
ಸತ್ತ ರಾಮಗೆ ಅತ್ತೇ ಅಳುವನು ಇರುವ ದತ್ತನು ಇಂದಿಗೆ'.


ಇದು ಬೇಂದ್ರೆಯವರ ಸಹಜಸ್ಫುರಣೆಯ ಶಕ್ತಿ. ಇಷ್ಟಾದರೂ ಕವಿಗೆ ಬದುಕಿನ ಬಗ್ಗೆ ಬೇಸರವಿಲ್ಲ. ಬದಲಾಗಿ ಅದಮ್ಯ ಜೀವನಪ್ರೀತಿ. 'ಒಂದೇ ಒಂದು ಜನ್ಮದಲಿ/ ಒಂದೇ ಬಾಲ್ಯ ಒಂದೇ ಹರೆಯ/ ನಮಗದಷ್ಟೇ ಏತಕೋ!' ಎಂದು ನಿಸರ್ಗಕ್ಕೆ ಸವಾಲು ಹಾಕುವ ಚಿರಂತನ ಉತ್ಸಾಹ ಅವರದ್ದು.

ಬೇಂದ್ರೆ ಮತ್ತು ಕಾವ್ಯದೃಷ್ಟಿ
ಭಾರತೀಯ ಕಾವ್ಯಮೀಮಾಂಸಕರು ಹೇಳುವ 'ಬ್ರಹ್ಮಾನಂದ ಸೋದರ' ಪರಿಕಲ್ಪನೆಯನ್ನೇ ಕವಿ, ಕಾವ್ಯ ಸಂಬಂಧಕ್ಕೂ ನಿರ್ದೇಶಿಸುತ್ತಾರೆ. 'ನಾದಲೀಲೆ'ಯ ಅವರ ಕವನವೇ ಹೇಳುವ ಹಾಗೆ 'ಗಾಳಿ ಹುಟ್ಟಿ ಕಲ್ಪನೆ ಕಣ್ಣುಬಿಟ್ಟು ಎದೆ ಕಟ್ಟಿದಾಗ ಹುಟ್ಟಿದ ಅಂತರಂಗ ಸ್ಪಂದದ ಫಲಶ್ರುತಿಯೇ ಕವಿತೆ'.
'ನಿನ್ನ ನೀ ಹೆತ್ತೆ/ ನಿನ್ನ ನಾಲಗೆಯಿದು/ ಬರಿಯ ಸೂಲಗಿತ್ತಿ' ಎನ್ನುತ್ತಾ ಬಸಿರು- ಹೆರಿಗೆಯ ಪ್ರಕ್ರಿಯೆಯಲ್ಲಿ ಕವಿ- ಕಾವ್ಯದ ವ್ಯಾಖ್ಯೆ ಮಾಡುವ ಬೇಂದ್ರೆ, ತಾಯಿ ಪ್ರತೀಕವನ್ನೇ ಅತ್ಯಂತ ವಿಶಿಷ್ಟವಾಗಿಸಿದರು. ತಾಯಿ ಮಾಯಿ ಶಿವಜಾಯಿಕಾಯಿ ಎಂಬ ಪಾರಮಾರ್ಥಿಕ ನಿಲುವಿನ ಬೇಂದ್ರೆಯವರ 'ತಾಯಿ ಪ್ರತೀಕ' ಐದು ರೂಪಗಳಲ್ಲಿ ಕಂಡಿದೆ. 'ದೇಹ ಕೊಟ್ಟ ತಾಯಿ, ಮಾತು ಕಲಿಸಿದ ತಾಯಿ, ಸಂಸ್ಕಾರ ಸಂಪನ್ನ ಮಾಡಿದ ತಾಯಿ, ಭೂಮಂಡಲದ ತಾಯಿ, ವಿಶ್ವೋದರದಲ್ಲಿ ಧರಿಸಿದ ತಾಯಿ. ಈ ಐವರು ನನ್ನ ತಾಯಂದಿರು. ಈ ಪಂಚ ಗರ್ಭಕೋಶದ ಶಿಶು ನಾನು' ಎಂದು ಹೇಳುವ ಕವಿ 'ತಾಯಿ ಮಾಯೆ ಅಂಬಿಕೆಯೇ, ನಿನ್ನ ತನಯ ದತ್ತನು, ನೀನು ಇತ್ತುದಿತ್ತನು, ನಿನ್ನ ಜನುಮದೊಂದು ಪಾಡು ಹಾಡು ಆಗಿ ಮೂಡಿತು, ನನ್ನ ಕೊರಳು ಹಾಡಿತು' ಎಂದು ಬಣ್ಣಿಸುತ್ತಾರೆ.

ಬೇಂದ್ರೆ ಮಾತಿನ ಶಕ್ತಿ
ಬೇಂದ್ರೆಯವರ ಮೊನಚು ಮಾತುಗಳೂ ಅಷ್ಟೇ ವಿಶೇಷ. ಒಮ್ಮೆ ಹುಡುಗಿಯೊಬ್ಬಳು ಬೇಂದ್ರೆಯವರಿಗೆ 'ಅಜ್ಜಾ ನಾ ಕವಿತೆ ಬರೀಬೇಕಂತ ಅನ್ಕೋತ್ತೀನಿ, ನಾ ಎಷ್ಟು ಕವಿತಾ ಬರದ್ರ ನಾ ಕವಯಿತ್ರಿ ಆಗ್ತೀನಿ!' ಎಂದಾಗ ಬೇಂದ್ರೆ ಥಟ್ಟನೆ 'ಅಲ್ಲವಾ, ತಾಯಿಯಾಗಬೇಕಂದ್ರ ಎಷ್ಟು ಮಕ್ಕಳನ್ನು ಹಡೀತಾರವ್ವಾ?' ಎಂದರು. ಆಕೆಗೆ ಉತ್ತರ ಸಿಕ್ಕಿಬಿಟ್ಟಿತು!

ಗೆಳೆಯರ ಗುಂಪು
ಬೇಂದ್ರೆ ಧಾರವಾಡದಲ್ಲಿ ಕಟ್ಟಿಕೊಂಡ ಗೆಳೆಯರ ಗುಂಪು ಬಹಳ ಅನನ್ಯ. ರಂ.ಶ್ರೀ. ಮುಗಳಿ, ಕೃ. ಕಲ್ಲೂರ, ಗೋಕಾಕ, ಜೋಶಿ ಮಧುರಚೆನ್ನರ ಈ ಸಾಹಿತ್ಯದ ಗುಂಪು ಚದುರಿದಾಗ ಆದ ನೋವನ್ನೂ ಬೇಂದ್ರೆ ತಮ್ಮ ಪ್ರಖ್ಯಾತ ಕವನ 'ಭೃಂಗದ ಬೆನ್ನೇರಿ ಬಂತು'ನಲ್ಲಿ ಸೊಗಸಾಗಿ ವಿವೇಚಿಸಿದ್ದಾರೆ.

ಬೇಂದ್ರೆ ಅವಸಾನ
ಸಾರ್ಥಕವಾದ 85 ವರುಷ ಕಂಡ ಈ ಕವಿಜೀವ ಬದುಕನ್ನು ಹಾಡಾಗಿ ಮುಗಿಯದ ಸಂಪತ್ತಾಗಿ ಕಂಡವರು.
'ಅನ್ನಬಹುದೇನಯ್ಯಾ ಹಾಡು ಮುಗಿಯಿತೆಂದು
ಜನ್ಮದಾಕಾಶದಲ್ಲದರ ಬೇರು...'
- ಎಂದು ಬದುಕು- ಕಾವ್ಯ ಎರಡರ ವಿಭಿನ್ನ ಅನುಸಂಧಾನದೊಂದಿಗೆ ಈ ಕವಿ ಆಕಾರದಲ್ಲಿ ವಾಮನ, ಅರ್ಥದಲ್ಲಿ ತ್ರಿವಿಕ್ರಮ. ಅಕ್ಟೋಬರ್ 26, 1981ರಂದು ಮುಂಬೈನ ಹರ್‌ಕಿಶನ್ ದಾಸ್ ಆಸ್ಪತ್ರೆಯಲ್ಲಿ, ನರಕ ಚತುರ್ದಶಿಯಂದು ಬೇಂದ್ರೆ ಅಸ್ತಂಗತರಾದರು. ಅವರ ನೆನಪು ಕಾವ್ಯಗಳೊಂದಿಗೆ ಇಂದಿಗೂ ಮರುಕಳಿಸುತ್ತಲೇ ಇದೆ. ಹೀಗಾಗಿ, ಆ ವರಕವಿಗೆ ನಮ್ಮ ಗೌರವದ ನಮಸ್ಕಾರ.

- ಡಿ.ಎಸ್. ಶ್ರೀನಿವಾಸ ಪ್ರಸಾದ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com