ಕೃತಜ್ಞತೆ ಮತ್ತು ಪ್ರೀತಿ ಗೆಳೆಯ ಲಕ್ಷ್ಮಣ
ಈ ಪುಸ್ತಕ ಒಂದು ಹೊಸ ಪ್ರಯೋಗ. ಒಬ್ಬ ಲೇಖಕ ತಾನು ಇಟ್ಟ ಹೆಜ್ಜೆಗಳನ್ನು ಮರಳಿ ನೋಡುವ, ಅವು ಮೂಡಿಬಂದ ಸಂದರ್ಭಗಳನ್ನು ವಿವರಿಸುವ, ಸ್ವತಃ ತಾನೇ ಅವುಗಳ ..

ಕನ್ನಡಪ್ರಭದಲ್ಲಿ ಪ್ರಕಟವಾದ 'ಕ(ವಿ)ತೆಯ ಕತೆ' ಅಂಕಣ ಪುಸ್ತಕವಾಗುತ್ತಿದೆ. ನವೆಂಬರ್ 1ರಂದು ಬೆಂಗಳೂರಿನ ಶಿಕ್ಷಕರ ಭವನದಲ್ಲಿ ಬಿಡುಗಡೆಯಾಗುತ್ತಿರುವ ಈ ಕೃತಿಗೆ ವಿಮರ್ಶಕ ಎಚ್.ಎಸ್.ರಾಘವೇಂದ್ರ ರಾವ್ ಬರೆದ ಮುನ್ನುಡಿ ಇಲ್ಲಿದೆ.
ಈ ಪುಸ್ತಕ ಒಂದು ಹೊಸ ಪ್ರಯೋಗ. ಒಬ್ಬ ಲೇಖಕ ತಾನು ಇಟ್ಟ ಹೆಜ್ಜೆಗಳನ್ನು ಮರಳಿ ನೋಡುವ, ಅವು ಮೂಡಿಬಂದ ಸಂದರ್ಭಗಳನ್ನು ವಿವರಿಸುವ, ಸ್ವತಃ ತಾನೇ ಅವುಗಳ ಬೆಲೆಕಟ್ಟುವ ಈ ಕೆಲಸ ಕುತೂಹಲಕರ. ಇದು ಕವಿಯ ಜೀವನಕ್ಕೂ ಕವಿತೆಗೂ ಇರುವ-ಇಲ್ಲದ ಸಂಬಂಧಗಳಿಗೆ ಕನ್ನಡಿ ಹಿಡಿಯುತ್ತದೆ. ದಿನನಿತ್ಯದ ಅನುಭವಗಳಿಗೆ ಭಾಷೆಯ ಗೆಳೆತನ ಮತ್ತು ಸೃಜನಶೀಲತೆಯ ಸಂಗಾತ ಸಿಕ್ಕಾಗ ನಡೆಯುವ ಪವಾಡಗಳು ಇಲ್ಲಿ ಇಡಿಕಿರಿದಿವೆ. ಕ್ರಿಕೆಟ್ ಆಟದಲ್ಲಿ ಇರುವ ಆಸಕ್ತಿ ನೆಲವಾದರೆ, ಗುಂಡಪ್ಪ ವಿಶ್ವನಾಥ್ ಎಂಬ ಕವಿತೆ ಹೂವು. ಬೇರಿಲ್ಲದೆ ಹೂವಿಲ್ಲ. ಆದರೆ ಬೇರು ಹೂವಲ್ಲ. ತನ್ನದೇ ಕವಿತೆಗಳಿಗೆ ಗೆಳೆಯ ಲಕ್ಷ್ಮಣ ರಾವ್ ಕೊಡುವ ವಿವರಣೆ ಕೂಡ ಮತ್ತೊಬ್ಬ ಓದುಗನ ವಿವರಣೆ. ಮುಖ್ಯ ಮತ್ತು ಉಪಯುಕ್ತ.
ಇನ್ನೊಂದು ದಿಕ್ಕಿನಲ್ಲಿ ಇದು ಕವಿಯ ಒಳಬಾಳಿನ ಮತ್ತು ಹೊರಲೋಕದೊಂದಿಗೆ ಅವನು ಇಟ್ಟುಕೊಂಡ ಸಂಬಂಧಗಳ ಕಥೆಯೂ ಹೌದು. ಈಚೆಗೆ ಬರುತ್ತಿರುವ ಆತ್ಮಕಥೆಗಳ ಸರಣಿಯಲ್ಲಿ ಇವನದು ಸೇರುವುದಿಲ್ಲ. ಅಂಥ ಬರವಣಿಗೆಯನ್ನೂ ಲಕ್ಷ್ಮಣ ಬರೆದಿದ್ದಾನೆ. ಇಲ್ಲಿರುವುದು ಅವನಿಗೆ ಮುಖ್ಯವೆನಿಸಿದ್ದು ಮಾತ್ರ. ಹಾಗೆಂದು, ಈ ಬರವಣಿಗೆಯು ಕವಿಯು ತನ್ನ ಕಾವ್ಯಮೀಮಾಂಸೆಯನ್ನು ಕಟ್ಟಿಕೊಡುವ ಪಂಡಿತ ಪ್ರಯತ್ನವೂ ಅಲ್ಲ. ಬದಲಾಗಿ ಇದು ಕವಿ ಕೊಟ್ಟಿರುವ ಹಿನ್ನೋಟ. ಅಂಕಣ ಬರವಣಿಗೆಯ ಮಾಧ್ಯಮನಿರ್ಮಿತ ಲಕ್ಷಣಗಳು ಇಲ್ಲಿಯೂ ಕಾಣುತ್ತವೆ.
ಹೊರಗೊಂದು ಒಳಗೊಂದು ಇಲ್ಲದ ಲಕ್ಷ್ಮಣನ ಮನಸ್ಸು ಈ ಬರವಣಿಗೆಯನ್ನು ಅವನ ಜೊತೆಯವರಾದ ನನ್ನಂತಹ ಹಲವರ ಭಾವನೆ, ಬದುಕಿಗೆ ಹಿಡಿದ ಕನ್ನಡಿಯಾಗಿಯೂ ಮಾಡಿದೆ. ಇದು ಮಧ್ಯಮವರ್ಗದ ಯುವಕನ ಬಂಧನ-ಉಲ್ಲಂಘನಗಳ ಕಥೆ. ಪ್ರೀತಿ, ಪ್ರೇಮ, ಪ್ರಣಯ, ರೋಮಾಂಚನ, ತಲ್ಲಣ, ದಾಂಪತ್ಯ, ದಾಂಪಥ್ಯ- ಇವೆಲ್ಲವೂ ಈ ಪುಸ್ತಕದ ಹರಹಿನಲ್ಲಿ ಸೇರಿಕೊಂಡಿವೆ. ಅನುಕ್ರಮದಲ್ಲಿ ನೋಡಿದಾಗ ಅವನ ಕವಿತೆ ಹಿಡಿದ ಹೆದ್ದಾರಿ, ಕಿರುದಾರಿಗಳ ಚಹರೆಯೂ ಇಲ್ಲಿ ಗೊತ್ತಾಗುತ್ತದೆ.
ಹಾಡು ಮತ್ತು ಕವಿತೆಗಳ ನಡುವೆ ಇರುವ ಸಂಬಂಧದ ಬಗೆಯೂ ಇಲ್ಲಿ ಒಳನೋಟಗಳಿವೆ. ಒಂದು ಕವಿತೆ ಹಾಡಾಗುವಾಗ ಪಡೆಯುವ ರೂಪಾಂತರಗಳನ್ನು ಇಲ್ಲಿ ಕಂಡುಕೊಳ್ಳಬಹುದು. ಈ ಕವಿಗೆ ಎರಡೂ ಪ್ರಿಯವೇ. ವ್ಯಕ್ತಿ ಲಕ್ಷ್ಮಣನ ಹಾಗೆಯೇ ಈ ಪುಸ್ತಕವೂ ಕೂಡ ಹುಬ್ಬುಗಳನ್ನು ಸಡಿಲಿಸುತ್ತದೆ, ತುಟಿಯಂಚಿನಲ್ಲಿ ನಗೆ ತರಿಸುತ್ತದೆ. ನಮ್ಮ ಕಾಲದ ದುರಂತಗಳ ನೆನಪು ಕೊಡುವುದರ ಮೂಲಕ ಕಣ್ಣುಗಳನ್ನು ಒದ್ದೆಯಾಗಿಸುತ್ತದೆ.
ಲಕ್ಷ್ಮಣನ ಮಾತುಗಳನ್ನೇ ಕೊಂಚ ಬದಲಿಸಿಕೊಂಡು ಹೀಗೆ ಹೇಳಬಹುದು:
ಕೃತಜ್ಞತೆ ಮತ್ತು ಪ್ರೀತಿ, ಗೆಳೆಯ ಲಕ್ಷ್ಮಣ
- ಎಚ್.ಎಸ್. ರಾಘವೇಂದ್ರರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


