ಸಾಪ್ತಾಹಿಕಪ್ರಭ

ಮಲಾಲಾ ಎಂಬ ಮಿನುಗುತಾರೆ

ಪಾಕಿಸ್ತಾನದ ಮಕ್ಕಳ ಶಿಕ್ಷಣದ ಹಕ್ಕಿಗೆ ಧ್ವನಿಯಾಗಿ, ಉಗ್ರರ ಬಂದೂಕಿಗೆ ಗುರಿಯಾಗಿ, ಸಾವು-ಬದುಕಿನ ನಡುವೆ ಹೋರಾಡಿದ ಜೀವವೇ ಮಲಾಲಾ...

ಮಲಾಲಾ ಎಂಬ ಮಿನುಗುತಾರೆ
Published On :

ಪಾಕಿಸ್ತಾನದ ಮಕ್ಕಳ ಶಿಕ್ಷಣದ ಹಕ್ಕಿಗೆ ಧ್ವನಿಯಾಗಿ, ಉಗ್ರರ ಬಂದೂಕಿಗೆ ಗುರಿಯಾಗಿ, ಸಾವು-ಬದುಕಿನ ನಡುವೆ ಹೋರಾಡಿ ಮತ್ತೆ ಅಂಕುರಿಸಿದ ಜೀವವೇ ಮಲಾಲಾ ಯೂಸುಫ್‌ಝಾಯ್. ಒಂದೇ ವರ್ಷದಲ್ಲಿ ಇಡೀ ಜಗತ್ತಲ್ಲಿ ಮನೆಮಾತಾದ ಈ ಹೆಣ್ಣುಮಗಳನ್ನು ಈಗ ಪ್ರಶಸ್ತಿಯ ಮೂಲಕ ವಿಶ್ವದ ಮೂಲೆ ಮೂಲೆಯಲ್ಲೂ ಗೌರವಿಸಲಾಗುತ್ತಿದೆ. ಕರ್ನಾಟಕದ ಶ್ರೀ ಮುರುಘಾಮಠದ 2014ನೇ ವರ್ಷದ ಬಸವಶ್ರೀ ಪ್ರಶಸ್ತಿಯನ್ನೂ ಮಲಾಲಾ ಮುಡಿಗೇರಿಸಿಕೊಂಡಿದ್ದಾಳೆ. ಇದು ಭಾರತದಿಂದ ಆಕೆಗೆ ಕೊಡಲಾಗುತ್ತಿರುವ ಪ್ರಥಮ ಪ್ರಶಸ್ತಿ.

ಅಂದು ಪಾಕಿಸ್ತಾನದ ಸ್ವಾತ್ ಜಿಲ್ಲೆಯಲ್ಲಿ ಶಾಲಾ ಬಸ್ ಅನ್ನು ತಡೆದು ಅದರೊಳಕ್ಕೆ ನುಗ್ಗಿದ್ದ ಬಂದೂಕುಧಾರಿ 'ಹೂ ಈಸ್ ಮಲಾಲಾ?' (ಮಲಾಲಾ ಯಾರು?) ಎಂದು ಪ್ರಶ್ನಿಸಿ, ಒಂದೆರಡು ಕ್ಷಣ ಕಳೆದಿರಬಹುದು. ಆಕೆಯ ತಲೆಯೊಳಕ್ಕೆ ಉಗ್ರರ ಗುಂಡು ಹೊಕ್ಕಾಗಿತ್ತು. ಅದಾಗಿ ಸರಿಯಾಗಿ ಒಂದು ವರ್ಷ ಕಳೆದಿದೆ. ಈಗ ಅದೇ ಬಾಲಕಿ ಎದ್ದು ನಿಂತು 'ಐ ಆ್ಯಮ್ ಮಲಾಲಾ' (ನಾನೇ ಮಲಾಲಾ) ಎಂದಿದ್ದಾಳೆ. 'ಐ ಆ್ಯಮ್ ಮಲಾಲಾ' ಎಂಬ ಪುಸ್ತಕದ ಮೂಲಕ ತಾಲಿಬಾನಿಗರ ಅಂದಿನ ಪ್ರಶ್ನೆಗೆ ದಿಟ್ಟ ಉತ್ತರ ನೀಡಿದ್ದಾಳೆ.
'ಅದು ಅಕ್ಟೋಬರ್ ತಿಂಗಳು. ಶಾಲೆ ಮುಗಿಸಿ ಬಸ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದೆ. ಸ್ವಾತ್‌ನಲ್ಲಿ ನಮ್ಮ ಬಸ್ ದಿಢೀರನೆ ನಿಂತುಬಿಟ್ಟಿತು. ತಲೆ ಎತ್ತಿ ನೋಡುತ್ತಿದ್ದಂತೆ ಬಂದೂಕುಧಾರಿಯೊಬ್ಬ ಬಸ್ ಹತ್ತಿಯಾಗಿತ್ತು. ಮಲಾಲಾ ಯಾರು ಎಂದು ಕೇಳಿದ. ಅಷ್ಟು ಮಾತ್ರ ಗೊತ್ತು. ಉಗ್ರ ನನ್ನ ತಲೆಗೆ ಗುರಿಯಿಟ್ಟಿದ್ದ. ನಂತರ ನನಗೆ ಎಚ್ಚರವಾಗಿದ್ದು ಆಸ್ಪತ್ರೆಯಲ್ಲಿ. 'ಥ್ಯಾಂಕ್ ಗಾಡ್, ನಾನು ಸತ್ತಿಲ್ಲ' ಎಂದು ಉದ್ಗರಿಸಿದೆ. ನನ್ನ ಆಸ್ಪತ್ರೆಯ ಖರ್ಚನ್ನು ಹೆತ್ತವರು ಹೇಗೆ ನಿಭಾಯಿಸುತ್ತಾರೋ ಏನೋ ಎಂಬ ಸಣ್ಣ ಆತಂಕ ಮನದಲ್ಲಿ ಮೂಡಿತು.'
ಹೀಗೆ ಇನ್ನೂ ಚಿಕ್ಕ ಪ್ರಾಯದಲ್ಲಿ ಅಂದರೆ 16ರ ವಯಸ್ಸಿನಲ್ಲಿ ಅನುಭವಿಸಿದ ಆ ಭಯಾನಕ ದಿನವನ್ನು ನೆನಪಿಸಿಕೊಳ್ಳುತ್ತಾಳೆ ಮಲಾಲಾ. ಈಗ ಆಕೆಗೆ ಸಿಗುತ್ತಿರುವ ಗೌರವ, ಮನ್ನಣೆ ಖ್ಯಾತಿಯಿಂದ ನೋವು ಸ್ವಲ್ಪಮಟ್ಟಿಗೆ ದೂರವಾಗುತ್ತಿದ್ದರೂ, ಆ ಕರಾಳ ದಿನದ ನೆನಪು ಮಾಯಲು ಇನ್ನೂ ಎಷ್ಟೋ ವರ್ಷಗಳು ಬೇಕು. ಆತನ ಕೈ ನಡುಗುತ್ತಿತ್ತು: 'ಆತ ನನಗೆ ಬಂದೂಕನ್ನು ಗುರಿಯಿಟ್ಟಿದ್ದ. ಅವನ ವಯಸ್ಸು 20ರ ಆಸುಪಾಸು ಇರಬಹುದು. ಬಂದೂಕು ಹಿಡಿದಿದ್ದ ಆತನ ಕೈ ನಡುಗುತ್ತಿತ್ತು. ಬಹುಶಃ ಕೈಯಲ್ಲಿ ಬಂದೂಕು ಹಿಡಿದು ಮನುಷ್ಯರನ್ನು ಕೊಲ್ಲುವುದು ಕಷ್ಟದ ಕೆಲಸವಿರಬಹುದು. ಅವನಿಂದ ಆ ಕೆಲಸ ಸಾಧ್ಯವೋ ಎಂಬುದು ಆತನಿಗೇ ಗೊತ್ತಿದ್ದಿರಲಿಕ್ಕಿಲ್ಲ. ಆದರೆ ಅಲ್ಲಿ ಎಲ್ಲರನ್ನೂ ಬ್ರೈನ್ ವಾಷ್ ಮಾಡಲಾಗುತ್ತದೆ. ಹಾಗಾಗಿಯೇ ಅಷ್ಟು ಚಿಕ್ಕ ವಯಸ್ಸಿನಲ್ಲಿ ಆತ್ಮಾಹುತಿ ದಾಳಿ, ಬಾಂಬ್ ಸ್ಫೋಟದಂತಹ ಕುಕೃತ್ಯ ಎಸಗುತ್ತಾರೆ. ನನಗೆ ಯೋಚಿಸಲೂ ಸಾಧ್ಯವಿಲ್ಲ.
ನನಗೆ ಶೂಟ್ ಮಾಡಿದ ಆ ಹುಡುಗನಿಗೆ ಸಣ್ಣ ಸೂಜಿಯಿಂದ ಚುಚ್ಚಲೂ ನಾನು ಇಷ್ಟಪಡುವುದಿಲ್ಲ. ನನಗಿರುವುದು ಪ್ರೀತಿ, ಶಾಂತಿ ಮತ್ತು ಕರುಣೆ ಮೇಲಷ್ಟೇ ನಂಬಿಕೆ' ಎನ್ನುವ ಮಲಾಲಾ ತಕ್ಷಣವೇ 'ನನಗೆ ಯಾರ ಮೇಲೂ ಕೋಪವಿಲ್ಲ. ನಾನು ಜಗಳವಾಡೋದು ನನ್ನ ತಮ್ಮ ಕುಶಾಲ್ ಹಾಗೂ ತಂದೆ ಜತೆ ಮಾತ್ರ. ಅದರಲ್ಲೂ ನನ್ನ ತಮ್ಮ... ಊಹೂಂ ನಾವೆಂದಿಗೂ ಫ್ರೆಂಡ್ಸ್ ಆಗಲು ಸಾಧ್ಯವಿಲ್ಲ.'
ತನಗಿಂತ 2 ವರ್ಷ ಕಿರಿಯ ತಮ್ಮನ ಬಗ್ಗೆ ಮಲಾಲಾ ಆಡುವ ಮಾತು ಆಕೆ ಇನ್ನೂ ತನ್ನ ಬಾಲ್ಯದ ಖುಷಿಯನ್ನು ಅನುಭವಿಸುತ್ತಿದ್ದಾಳೆ ಎನ್ನುವುದನ್ನು ಮನದಟ್ಟು ಮಾಡುತ್ತದೆ. ಅಷ್ಟೇ ಅಲ್ಲ, ಎಲ್ಲ ಪಾಕಿಸ್ತಾನೀಯರಂತೆ ಕ್ರಿಕೆಟ್ ಹೆಸರು ಎತ್ತಿದೊಡನೆ ಮಲಾಲಾ ಮುಖ ಅರಳುತ್ತದೆ. ಕ್ರಿಕೆಟ್ ಬಗೆಗಿನ ಪ್ರಶ್ನೆಗಳಿಗೆ ಪಟಪಟನೆ ಅತಿ ಉತ್ಸಾಹದಿಂದ ಉತ್ತರಿಸುತ್ತಾಳೆ. ಶಹೀದ್ ಅಫ್ರಿದಿ ಮತ್ತು ಶೇನ್ ವಾಟ್ಸನ್ ನನ್ನ ಫೇವರಿಟ್ ಪ್ಲೇಯರ್ಸ್ ಎನ್ನುತ್ತಾಳೆ. ಪಾಕ್‌ನ ಖ್ಯಾತ ಗಾಯಕಿ ಮುನ್ನಿ ಬೇಗಂ ಅವರ 'ಏಕ್ ಬಾರ್ ಮುಸ್ಕುರಾದೋ'(ಒಂದು ಬಾರಿ ನಕ್ಕುಬಿಡು) ಹಾಡೆಂದರೆ ನನಗೆ ತುಂಬಾ ಇಷ್ಟ ಎಂದೂ ತನ್ನ ಎರಡೂ ಕೈಗಳನ್ನು ಕೆನ್ನೆಯತ್ತ ಕೊಂಡೊಯ್ಯುತ್ತಾಳೆ. ಪಾಕ್‌ನಲ್ಲಿರುವ ತನ್ನ ಆತ್ಮೀಯ ಗೆಳತಿ ಮುನೀಬಾ ಜತೆ ಸ್ಕೈಪ್‌ನಲ್ಲಿ ಮಾತನಾಡಿದ, ತನ್ನ ಹಳೇ ಶಾಲೆಯಲ್ಲಿ ನಡೆದ ಕಥೆ, ಗಾಸಿಪ್‌ಗಳನ್ನು ಕೇಳಿದ ಬಗ್ಗೆ ಮಾತನಾಡುವಾಗ ಆಕೆಯ ಕಣ್ಣಲ್ಲಿ ಏನೋ ಒಂದು ಹೊಳಪು ಗೋಚರಿಸುತ್ತದೆ. ಅದೇ ತಾಲಿಬಾನ್ ಕಮಾಂಡರ್ ಮಾತೆತ್ತಿದಾಗ ವಿಚಿತ್ರವಾದ ದಿಗಿಲು ಆ ಬಾಲೆಯ ಮುಖದಲ್ಲಿ ಮೂಡುತ್ತದೆ. ನೈಜ ಮಲಾಲಾ ಎಲ್ಲೋ ಕಳೆದುಹೋದಳು: 'ನಾನು ಸ್ವಾತ್‌ನಲ್ಲಿ 10 ವರ್ಷಗಳಿಂದ ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದೆ. ಅಲ್ಲಿ ನಾನು ಎಲ್ಲರಂತೆ ಒಬ್ಬಳಾಗಿದ್ದೆ. ಕೇವಲ 'ಮಲಾಲಾ' ಆಗಿದ್ದೆ. ಆದರೆ ಇಲ್ಲಿ ನಾನು ಫೇಮಸ್ ಆಗಿದ್ದೇನೆ. ಜನ ನನ್ನನ್ನು ತಾಲಿಬಾನಿಗರ ಗುಂಡಿಗೆ ತಲೆಯೊಡ್ಡಿದ ಬಾಲಕಿ ಎಂದು ಗುರುತಿಸುತ್ತಾರೆ. ನೈಜ ಮಲಾಲಾ ಎಲ್ಲೋ ಕಳೆದುಹೋದಳು. ನನಗೂ ಆಕೆ ಕಾಣುತ್ತಿಲ್ಲ.'
ತನ್ನ ಹುಟ್ಟೂರಾದ ಸ್ವಾತ್‌ನ ಬೆಟ್ಟ ಗುಡ್ಡ, ನದಿ, ಸರೋವರ, ಓರಗೆಯ ಗೆಳತಿಯರು ಇವೆಲ್ಲವನ್ನೂ ನೆನಪಿಸಿಕೊಂಡು ಮಲಾಲಾ ಹಂಬಲಿಸುತ್ತಾಳೆ. ಈಗ ಕಾಂಕ್ರೀಟ್ ಕಾಡಿನಲ್ಲಿ ಕಟ್ಟುಬಿದ್ದಿರುವ ಆಕೆಗೆ ತನ್ನೂರಿನ ನೆನಪು ಕಾಡುತ್ತಿದೆ. ಆದರೆ...?
ಸಂಕುಚಿತ ಮನೋಭಾವವುಳ್ಳ ಕೆಲ ಪಾಕಿಸ್ತಾನೀಯರು ಮಲಾಲಾ ಬಗ್ಗೆ ಉತ್ತಮ ಭಾವನೆ ಹೊಂದಿಲ್ಲ. ವಿಶ್ವಸಂಸ್ಥೆಯಲ್ಲಿ ಆಕೆ ಮಾಡಿದ ಭಾಷಣಕ್ಕೆ ಇಡೀ ಜಗತ್ತೇ ಚಪ್ಪಾಳೆ ತಟ್ಟಿದರೆ, ಪಾಕಿಸ್ತಾನೀಯರು ಮಾತ್ರ ಆಕೆ ಖ್ಯಾತಿಗಾಗಿ, ಐಶಾರಾಮಿ ಜೀವನಕ್ಕಾಗಿ ಇದನ್ನೆಲ್ಲ ಮಾಡುತ್ತಿದ್ದಾಳೆ ಎಂದು ಆರೋಪಿಸುತ್ತಾರೆ. ಇದೂ ಆ ಬಾಲೆಯ ಮನಸ್ಸಿಗೆ ನಾಟಿದೆ. ಈ ಬಗ್ಗೆ ಕೇಳಿದರೆ ಆಕೆಯ ಬಾಯಿಯಿಂದ ಉರ್ದು ಭಾಷೆಯಷ್ಟೇ ಹೊರಡುತ್ತದೆ, 'ದುಃಖ್ ತೋ ಇನ್ಸಾನ್ ಕೋ ಹೋತಾ ಹೈ ಜಬ್ ದಿಖ್ತಾ ಹೇ ಕೆ ಉಸ್ಕಾ ಭಾಯ್ ಉಸ್ಕೇ ಖಿಲಾಫ್ ಹೇ'(ನಿಮ್ಮ ಸಹೋದರರೇ ನಿಮ್ಮ ವಿರುದ್ಧ ತಿರುಗಿ ಬಿದ್ದರೆ ಸಹಜವಾಗಿಯೇ ನೋವಾಗುತ್ತದೆ). ಏನೇ ಆದರೂ ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯಬೇಕು ಎಂಬ ನನ್ನ ಧ್ಯೇಯ ಮಾತ್ರ ಬದಲಾಗದು. ತಾಲಿಬಾನಿಗರು, ಭಯೋತ್ಪಾದಕರಲ್ಲೂ ನಾನು ಅದನ್ನೇ ಕೇಳಿಕೊಳ್ಳುತ್ತೇನೆ. ನಿಮ್ಮ ಮಕ್ಕಳಿಗೂ ಶಿಕ್ಷಣ ಕೊಡಿ. ಅದು ಅವರ ಹಕ್ಕು ಎಂದು.

ಪ್ರಧಾನಿಯಾಗುತ್ತಾಳಂತೆ!
ಸಣ್ಣ ವಯಸ್ಸಿನಲ್ಲೇ ಅಗಾಧ ನೋವನ್ನೂ, ಅಷ್ಟೇ ಖ್ಯಾತಿಯನ್ನೂ ಗಳಿಸಿರುವ ಮಲಾಲಾಗೆ ಇನ್ನೂ ತವರಿಗೆ ಮರಳುವ ಆಸೆ ಕುಂದಿಲ್ಲ. ಅವಕಾಶ ಸಿಕ್ಕರೆ ಮಲಾಲಾಳನ್ನು ಹತ್ಯೆ ಮಾಡಿಯೇ ತೀರುತ್ತೇವೆ ಎಂಬ ಉಗ್ರರ ದರ್ಪನುಡಿ ಆಕೆಯ ಆಕಾಂಕ್ಷೆಗೆ ತಣ್ಣೀರೆರಚಿಲ್ಲ. 'ನಾನು ಹೆದರುವುದು ಭೂತಕ್ಕೆ ಮಾತ್ರ, ತಾಲಿಬಾನಿಗರಿಗಲ್ಲ. ನಾನು ಮತ್ತೆ ಪಾಕಿಸ್ತಾನಕ್ಕೆ ತೆರಳುತ್ತೇನೆ. ಬೆನಜೀರ್ ಭುಟ್ಟೋ ಅವರಂತೆಯೇ ನಾನೂ ರಾಜಕೀಯಕ್ಕೆ ಧುಮುಕುತ್ತೇನೆ. ಅಲ್ಲಿನ ಪ್ರಧಾನಿಯಾಗುತ್ತೇನೆ' ಎನ್ನುತ್ತಾಳೆ. ನೈಜ ರಾಜಕೀಯ ನಾಯಕಿಯಂತೆ ಮಾತನಾಡುವ ಆಕೆ, 'ನಾನು ಈವರೆಗೂ ಯಾವುದೇ ಪಕ್ಷವನ್ನೂ ಆಯ್ಕೆ ಮಾಡಿಲ್ಲ. ಎಲ್ಲರೂ ಬೆಳೆದು ದೊಡ್ಡವರಾದ ಬಳಿಕವಷ್ಟೇ ಯಾವ ಪಕ್ಷಕ್ಕೆ ಸೇರಬೇಕೆಂದು ನಿರ್ಧರಿಸುತ್ತಾರೆ. ನಾನೂ ಹಾಗೆಯೇ. ಆಗ ನನಗೆ ಸೇರಲು ಯಾವುದೇ ಪಕ್ಷವೂ ಇಷ್ಟವಾಗದೇ ಹೋದರೆ, ನಾನೇ ಹೊಸ ಪಕ್ಷ ಕಟ್ಟುತ್ತೇನೆ' ಎಂದು ನುಡಿಯುತ್ತಾಳೆ.
ಇಂತಹ ಹೊಸ ಕನಸುಗಳೊಂದಿಗೆ ಆಕೆ ತನ್ನ ಮೇಲೆ ನಡೆದ ಕುಕೃತ್ಯವನ್ನು ಮರೆಯುತ್ತಿದ್ದಾಳೆ. 'ಯಾರಾದರೂ ನನ್ನ ಮುಂದೆ 'ಮಲಾಲಾ'ಎಂದಾಗ 'ತಾಲಿಬಾನಿಗರ ಗುಂಡನ್ನು ಎದುರಿಸಿದ ಬಾಲಕಿ' ಎಂಬ ವ್ಯಾಖ್ಯಾನವಷ್ಟೇ ಹೊರಬರುತ್ತದೆ. ಅದು ನಾನೇ ಎಂದು ಯೋಚಿಸುವುದೇ ಇಲ್ಲ.  ಸ್ವಾತ್‌ನಲ್ಲಿದ್ದ ನನ್ನ ಬದುಕು ಇತಿಹಾಸದ ಪುಟ ಸೇರಿದೆ, ಅದೊಂದು ಸಿನಿಮಾ ಎಂದು ನಾನು ಭಾವಿಸುತ್ತಿದ್ದೇನೆ. ಬದಲಾವಣೆ ಜಗದ ನಿಯಮ. ದೇವರು ನಮಗೆ ಮೆದುಳು ಮತ್ತು ಹೃದಯ ಕೊಟ್ಟಿದ್ದಾನೆ. ಹೇಗೆ ಜೀವಿಸಬೇಕು ಎಂದು ಅವೇ ನಮಗೆ ಹೇಳಿಕೊಡುತ್ತವೆ.'

ಪ್ರಶಸ್ತಿಗಳ ಸುರಿಮಳೆ
ತಾಲಿಬಾನಿಗರ ಗುಂಡಿಗೆ ಯಾವಾಗ ಮಲಾಲಾ ಬಿದ್ದಳೋ, ಪಾಕಿಸ್ತಾನ ಎದ್ದು ನಿಂತಿತು. ಎಲ್ಲೆಲ್ಲೂ ಪ್ರತಿಭಟನೆಗಳು ನಡೆದವು. 'ಐ ಆ್ಯಮ್ ಮಲಾಲಾ, ಐ ಆ್ಯಮ್ ಮಲಾಲಾ' ಎನ್ನುತ್ತಾ ಸಾವಿರಾರು ಮಂದಿ ಬೀದಿಗಿಳಿದರು. ಯಾರೂ ಕೂಡ 'ಐ ಆ್ಯಮ್ ತಾಲಿಬಾನ್‌' ಎನ್ನಲಿಲ್ಲ. ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಡುತ್ತಲೇ ಬಂದ ಮಲಾಲಾ ಯೂಸುಫ್‌ಝಾಯ್ ವಿಶ್ವಾದ್ಯಂತ ಎಲ್ಲರ ಮನೆಮಾತಾದಳು. ತಾಲಿಬಾನ್ ಆಕೆಯ ವಿರುದ್ಧ ಸೇಡು ತೀರಿಸಲು ಸಂಚು ರೂಪಿಸುತ್ತಿದ್ದರೆ, ಮಲಾಲಾ ಒಂದರ ಮೇಲೆ ಒಂದರಂತೆ ಗೌರವಕ್ಕೆ ಭಾಜನಳಾದಳು. ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾಷಣ, ಐರೋಪ್ಯ ಒಕ್ಕೂಟದ ಸಖರೋವ್ ಮಾನವ ಹಕ್ಕು ಪ್ರಶಸ್ತಿ, ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ, ವೈಟ್‌ಹೌಸ್, ಬಕಿಂಗ್‌ಹ್ಯಾಂ ಅರಮನೆಗೆ ಆಮಂತ್ರಣ, ಸಂದರ್ಶನಗಳಿಗಾಗಿ ಮಾಧ್ಯಮಗಳ ಪೈಪೋಟಿ, ಈಗ ಬಸವಶ್ರೀ ಪ್ರಶಸ್ತಿ... ಈ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಜತೆಗೆ ಮಲಾಲಾಳ ಸಿದ್ಧಾಂತ ಕೂಡ.

- ಹಲಿಮತ್ ಸ ಅದಿಯಾ
halee_dia@yahoo.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.