ಮಿಥುನ ಲಹರಿ
ಪ್ರಸ್ತುತ ಜಗತ್ತಿಗೆ ಈ 'ಮಿಥುನ' ಹೊಂದಿಕೊಳ್ಳುತ್ತದೆ. ಅಪ್ಪಾದಾಸು, ಬುಜ್ಜಿಲಕ್ಷ್ಮಿ ಎಂಬಿಬ್ಬರು ಬ್ರಾಹ್ಮಣ ವಯೋವೃದ್ಧರ ಜೀವನದ ದಟ್ಟ ಅನುಭವ ಇಲ್ಲಿದೆ. ಜೀವದ ಗೆಳೆಯ...

ಪ್ರಸ್ತುತ ಜಗತ್ತಿಗೆ ಈ 'ಮಿಥುನ' ಹೊಂದಿಕೊಳ್ಳುತ್ತದೆ. ಅಪ್ಪಾದಾಸು, ಬುಜ್ಜಿಲಕ್ಷ್ಮಿ ಎಂಬಿಬ್ಬರು ಬ್ರಾಹ್ಮಣ ವಯೋವೃದ್ಧರ ಜೀವನದ ದಟ್ಟ ಅನುಭವ ಇಲ್ಲಿದೆ. ಜೀವದ ಗೆಳೆಯ- ಗೆಳತಿಯಾಗಿರುವ ಇವರಲ್ಲಿ ಸರಸ- ಸಲ್ಲಾಪಗಳು ಯಥೇಚ್ಛವಾಗಿವೆ. ಅನ್ಯೋನ್ಯ ದಾಂಪತ್ಯದ ಪ್ರತಿರೂಪವಾಗಿ ಇವರು ಪ್ರಕಟಗೊಳ್ಳುತ್ತಾರೆ. ಈ ವೃದ್ಧ ದಂಪತಿ ಗಿಡ- ಮರಗಳಲ್ಲಿ ತಮ್ಮ ಮಕ್ಕಳ ಪ್ರೀತಿಯನ್ನು ಅರಸುವ ಬಗೆ ಕಣ್ಣೀರು ಹನಿಸುತ್ತದೆ. ಪಾಕಶಾಸ್ತ್ರದ ಕುರಿತು ಅಪ್ಪಾದಾಸುವಿನ ವರ್ಣನೆ ಬಾಯಲ್ಲಿ ನೀರೂರಿಸುತ್ತದೆ. ಇದೆಲ್ಲದರೊಂದಿಗೆ ನಾಟಕದ ನಿರೂಪಕರಾಗಿ ತಿಳಿಹಾಸ್ಯದ ಹೊನಲನ್ನು ಹರಿಸಲು ಕೋದಂಡ- ರಮಣರೂ ಇದ್ದಾರೆ.
ಮೇಲ್ನೋಟಕ್ಕೆ ನಾಟಕವು ಹೆಚ್ಚಿನ ಕಥೆಯನ್ನೇನೂ ಒಳಗೊಂಡಿಲ್ಲ ಅಂತನ್ನಿಸಿದರೂ ಅಪ್ಪಾದಾಸು- ಬುಜ್ಜಿಲಕ್ಷ್ಮಿ ಪಾತ್ರಗಳ ಕಥೆ ಪ್ರೇಕ್ಷಕರದೇ ಕಥೆ ಎಂಬಂತೆ ಪ್ರತಿಬಿಂಬಿತವಾಗಿದೆ. ಇಂದಿನ ದಾಂಪತ್ಯ ಲೋಕಕ್ಕೆ ಈ ಇಳಿವಯಸ್ಸಿನ ಪಾತ್ರಗಳ ಪರಿಶುದ್ಧ ಪ್ರೇಮದ ಪರಿ ಮಾದರಿ. ನಾಟಕದ ಕೊನೆಯಲ್ಲಿ ಸಾವಿನೆಡೆಗೆ ಪಯಣಿಸುವ ಅಪ್ಪದಾಸು ಜೀವನ ಮೌಲ್ಯದ ಪ್ರತೀಕವಾಗಿ ನಿಲ್ಲುತ್ತಾನೆ. ಸಾವು- ಬದುಕಿನ ಸಂಕೀರ್ಣತೆಯನ್ನು ಸರಳವಾಗಿ ಕಟ್ಟಿಕೊಡುವಲ್ಲಿ ಪ್ರೇಕ್ಷಕರ ಕಣ್ಣಾಲಿಗಳು ತೇವಗೊಳ್ಳುತ್ತವೆ. ಸಂಭಾಷಣೆಗಳು ಅರ್ಥಪೂರ್ಣ. ಬುಜ್ಜಿಯಾಗಿ ಮಂಜುನಾಥ ಸ್ವಾಮಿ, ಅಪ್ಪಾದಾಸುವಾಗಿ ಪ್ರವೀಣ್ ಎಸ್. ಹಾಲ್ಮತ್ತೂರ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಬುಜ್ಜಿಯ ಪಾತ್ರಧಾರಿ ತಮ್ಮ ಲಾಲಿತ್ಯದ ಧ್ವನಿ ಹಾಗೂ ಆಂಗಿಕ ಅಭಿನಯವನ್ನು ಬ್ರಶ್ಅಪ್ ಮಾಡಿಕೊಂಡಲ್ಲಿ ಇನ್ನೂ ಉತ್ತಮವಾಗುತ್ತದೆ. ಕೋದಂಡ ಹಾಗೂ ರಮಣ ಪಾತ್ರಧಾರಿಗಳಾದ ದೇವರಾಜ ನಾಯ್ಕ್ ಮತ್ತು ಚೇತನ್ ಸಿ. ರಾಯನಹಳ್ಳಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.
ನಾಟಕದ ಪ್ರಮುಖ ಆಕರ್ಷಣೆ ಜಾನ್ ಪ್ರಿನ್ಸ್ರ ಸಂಗೀತ. ತಬಲಾ ಮಂಜಣ್ಣ ಸಾಥ್ ಕೊಟ್ಟಿದ್ದಾರೆ. ಬೆಳದಿಂಗಳ ಸನ್ನಿವೇಶ ಹಾಗೂ ಇತರೆ ಭಾವಪೂರ್ಣ ಸನ್ನಿವೇಶಗಳಲ್ಲಿ ಬೆಳಕನ್ನು ಕೌಶಲ್ಯಪೂರ್ಣವಾಗಿ ಪ್ರತೀಕ್ ಸಿ.ಎಂ. ನಿಭಾಯಿಸಿದ್ದಾರೆ. ನಾಗಶಯನ ಅವರ ರಂಗಸಜ್ಜಿಕೆ ಸರಳವಾಗಿದ್ದರೂ ನಾಟಕಕ್ಕೆ ಪೂರಕ. ವಸ್ತ್ರವಿನ್ಯಾಸ ಮತ್ತು ಪ್ರಸಾಧನವು ಸರಳತೆಯನ್ನು ಪ್ರತಿನಿಧಿಸುವಲ್ಲಿ ಯಶಸ್ವಿಯಾಗಿದೆ. ಈ ನಾಟಕದ ಮೂಲಕ ಕಿರಣ್ ಕೆ. ಮಾರಶೆಟ್ಟಿಹಳ್ಳಿ ಉದಯೋನ್ಮುಖ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.
- ಮಧುರ ಬಿ.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


