ಸಾಪ್ತಾಹಿಕಪ್ರಭ

ಕನಸನು ಮಾರುವ ಸ್ಕಾಚ್‌ಗಳು!

ಕನಸನು ಮಾರುವ ಸ್ಕಾಚ್‌ಗಳು!
Published On :

ಹೊರಗೆ ನಡುರಾತ್ರಿಯ ಕತ್ತಲು. ಬಾರೊಳಗೆ ನಿಗಿನಿಗಿ ಎನ್ನುವ ಹಗಲು. ಆ 'ಕನಸು ಬಾರ್ ಆ್ಯಂಡ್ ರೆಸ್ಟೋರೆಂಟ್‌'ನಲ್ಲಿ ಹಿಂಬಾಲಿಸುವ ನೆರಳಿಗೂ ಹೊಂಬಣ್ಣ. ಕವಿ ಕಣ್ಣಾಡಿಸಿದ. ಹೊನ್ನಿನ ರಂಗಿನ ಸೂರ್ಯನಿಲ್ಲ, ಚಾವಣಿಯ ಹೊಕ್ಕಳಿಗೆ ಒಂದು ಬಲ್ಬು ಸಿಕ್ಕಿಸಿಲ್ಲ, ಮೇಣದಬತ್ತಿ ಬೆಳಗಿ ಸ್ಖಲಿಸುತ್ತಿಲ್ಲ. 'ಹೇಗೆ ಸಾಧ್ಯವಾಯಿತೀ ಬೆಳಕು?'. ಕೇಳಿಸಿಕೊಂಡ ವ್ಹಿಸ್ಕಿ ಹೇಳಿತು, 'ಇದು ನಮ್ಮ ಸ್ವರ್ಣದ ಮೈಯ್ಯ ಹೊಳಪು'. ಮನಸೇನೇ ತೊದಲಿದರೂ ಕನಸು ಉತ್ತರಿಸುವ ಜಾಗ. ತಾನಿಲ್ಲಿ ಎಚ್ಚರವಿರಬೇಕೆಂದುಕೊಂಡ ಕವಿ. ತುಂಬಿದ ಗ್ಲಾಸಿನಲ್ಲಿದ್ದ ವ್ಹಿಸ್ಕಿ ಹೌದೆಂದು ನಕ್ಕು ಟೇಬಲ್ಲಿನ ಮೇಲೆ ಹನಿಯಾಯಿತು.
ಮಾಮೂಲಿ ಬಾರೆನ್ನುವುದಕ್ಕೆ ಪುರಾವೆಗಳು ಸಿಗವು. ನೂರಾರು ಸುಖ- ದುಃಖಗಳು ನೀರನ್ನು ಮಿಕ್ಸು ಮಾಡದೆಯೇ ಗ್ಲಾಸುಗಳಿಗೆ ಬಾಯಗಲಿಸಿದ್ದವು. ಕೆಲವುಗಳ ಬೆರಳ ಕೋಟೆಯಲ್ಲಿ ಸಿಗರೇಟು ಸೆರೆಯಾಗಿತ್ತು. ಅದರ ಮೂತಿ ಕೆಂಪು. ಸಿಗರೇಟಿನ ಪರಿಮಳಕ್ಕೂ ಕರ್ಪೂರದ ಒನಪು. 'ಇದು ತಾ' ಎನ್ನುವುದಕ್ಕೆ ಅಲ್ಲಿ ವೇಟರ್‌ಗಳಿರಲಿಲ್ಲ. ಬಯಸಿದ್ದೆಲ್ಲ ತೇಲಿ ಬಂದು ಟೇಬಲ್ಲಿನ ಮೇಲೆ ಕೂರುತ್ತಿತ್ತು. ಕ್ಲೀನಾಗುತ್ತಿತ್ತು. ಅಲ್ಲೊಬ್ಬ ಜಾಝ್ ಇದ್ದ. ಕೆ.ಎಸ್. ನರಸಿಂಹಸ್ವಾಮಿ ಅವರ ಗೀತೆಯನ್ನು ರಮ್ಯವಾಗಿ ಗುನುಗುತ್ತಿದ್ದ. ಪರಿಚಯದ ಸ್ವರ. ರಾಜು ಅನಂತಸ್ವಾಮಿಯೇ ಹಾಡುತ್ತಿರಬಹುದೆಂದುಕೊಂಡ ಕವಿ. 'ಅಲ್ಲ ಅದು, ರಾಜಾ ವ್ಹಿಸ್ಕಿ' ಎಂದಿತು ಬಿಯರು.
ಯಾವುದನ್ನು ಮುಟ್ಟಲಿ? ಕವಿಯೊಳಗೆ ಬಿಚ್ಚಿಕೊಂಡ ಗೊಂದಲ. ಸಪೂರ ಸೊಂಟದ, ಸ್ಫೋಟದೆದೆಯ ಲಲನೆಯರು ಕಾಮನಬಿಲ್ಲಾಗಿ ಕಣ್ಣೊಳಗೆ ಬಾಗಿದ್ದಾರೆ. ಇನ್ನೊಂದೆಡೆ ಅವರಷ್ಟೇ ಅಮಲಿನ ತಾಜಾ ವ್ಹಿಸ್ಕಿಗಳು ಅಟೆನ್ಷನ್ ಸ್ಥಿತಿಯಲ್ಲಿ ನಿಂತು ಟೆನ್ಷನ್ ಕೊಡುತ್ತಿವೆ. ಎರಡನ್ನು ಅತಿಯಾಗಿ ಭೋಗಿಸಿದರೂ ಈ ದೇಹ ಹಾರುವ ಹಕ್ಕಿ. ವ್ಹಿಸ್ಕಿಯ ಮತ್ತು ಒಂದು ಪೆಗ್ಗಿನಲ್ಲಿ, ಹುಡುಗಿಯ ಗಮ್ಮತ್ತು ತುಟಿಯ ಹನಿಜೇನಿನಲ್ಲಿ. ಅವಳಿಗೆ ಮುತ್ತಿಕ್ಕಿಯೇ ಮುಂದುವರಿಯೋದು ಎಂದು ಕವಿ ಲುಂಗಿಯೆತ್ತಿ ಹೆಜ್ಜೆಯಿಡಲು ಅಣಿಯಾದ, ಮನದ ಭಾಷೆ ಗ್ರಹಿಸಿದ ಆ ಚತುರೆ, ಗೋಡೆಯ ಫಲಕದತ್ತ ಕಣ್ಣು ಹೊರಳಿಸಿ ಬೆರಳು ಕಡಿದು ನಕ್ಕಳು. 'ವಿ.ಸೂ:- ಹೆಣ್ಣನ್ನು ಮುಟ್ಟಲೆತ್ನಿಸಿದರೆ ಅಥವಾ ಹೆಣ್ಣು ನಿಮ್ಮನ್ನು ಮುಟ್ಟಿದರೆ ನೀವು ವಾಸ್ತವ ಲೋಕಕ್ಕೆ ಜಾರುವಿರಿ' ಎಂಬ ವಾರ್ನಿಂಗ್ ಇತ್ತು. ಕವಿ ದಂಗಾದ. ಪಂಚೆ ಹಿಸುಕಿಕೊಂಡು ಹಗುರನಾದ.
ಕಣ್ಣು ಅದೇ ಗೋಡೆ ಮೇಲೆಯೇ ಇತ್ತು. ಮತ್ತೊಂದು ಫಲಕದ ಮೇಲೆ ದೃಷ್ಟಿಯ ಗುನ್ನ. 'ಮದ್ಯದ ಅಡ್ಡಪರಿಣಾಮಗಳು ಮತ್ತು ಪರಿಹಾರಗಳು' ಎಂಬ ದಪ್ಪ ಅಕ್ಷರಗಳು ಕಾಣಿಸಿದವು. ಅದರ ಸಾರಾಂಶ ಕಂಡು ನಗಬೇಕೋ, ನರ್ತಿಸಬೇಕೋ ತಿಳಿಯದಾದ ಕವಿ.

1.     ಲಕ್ಷಣ: ಪಾದ ತಣ್ಣಗಾಗುವುದು.
ಕಾರಣ:  ನೀವು ಗ್ಲಾಸನ್ನು ಸರಿಯಾದ ಕೋನದಲ್ಲಿ ಹಿಡಿದಿಲ್ಲ.
    ಪರಿಹಾರ: ಗ್ಲಾಸನ್ನು ಯಾವತ್ತೂ ಲಂಬಕೋನದಲ್ಲೇ ಹಿಡಿದಿಡಿ.

2.    ಲಕ್ಷಣ: ಕಣ್ಣಿಗೆ ಟಾರ್ಚ್ ಹಿಡಿದಂತಾಗುವುದು.
    ಕಾರಣ:  ನೀವು ಬೀದಿದೀಪದ ಕೆಳಗೆ ಮಲಗಿದ್ದೀರಿ.
    ಪರಿಹಾರ: ಮಗುಚಿ ಮಲಗಿ ನಿದ್ದೆ ಮುಂದುವರಿಸುವುದು.

3.    ಲಕ್ಷಣ: ಜಗತ್ತು ಮಬ್ಬಾಗಿ ಕಾಣುವುದು.
    ಕಾರಣ:  ನೀವು ಖಾಲಿ ಗ್ಲಾಸಿನಲ್ಲಿ ಇನ್ನೇನಾದರೂ ಇದೆಯೇ ಅಂತ ಇಣುಕುತ್ತಿದ್ದೀರಿ.
    ಪರಿಹಾರ:  ಗ್ಲಾಸನ್ನು ಕೂಡಲೇ ಭರ್ತಿ ಮಾಡುವುದು.

4.     ಲಕ್ಷಣ: ಭೂಮಿ ಚಲಿಸಿದಂತೆ ಅನ್ನಿಸುವುದು.
    ಕಾರಣ:  ಯಾರೋ ನಿಮ್ಮನ್ನು ಹೊತ್ತೊಯ್ಯುತ್ತಿದ್ದಾರೆ.
    ಪರಿಹಾರ:  ಕಡೇಪಕ್ಷ ಕೇಳಿ, ಎಲ್ಲಿಗೆ ಕರ್ಕೊಂಡ್ ಹೋಗ್ತಿದ್ದೀರಪ್ಪ ಅಂತ.

5.    ಲಕ್ಷಣ: ನಿಮ್ಮ ತಂದೆ, ಸಹೋದರರು ನಿಮ್ಮನ್ನು ನೋಡಿ ನಗುತ್ತಿರುವುದು.
ಕಾರಣ: ನೀವು ಹಾದಿತಪ್ಪಿ ಯಾರದ್ದೋ ಮನೆಗೆ ಹೋಗಿದ್ದೀರಿ.
ಪರಿಹಾರ:  ಅವರ ಬಳಿ, ನಿಮ್ಮ ಮನೆಗೆ ದಾರಿ ತೋರಿಸಲು ಹೇಳಿ.

6. ಲಕ್ಷಣ: ರೂಮು ವಿಪರೀತ ಶೇಕ್ ಆಗುವುದು, ಸುತ್ತಲಿದ್ದವರು ಬಿಳಿವಸ್ತ್ರ ಧರಿಸಿರುವುದು, ಒಂದೇ ಸಂಗೀತ ರಿಪೀಟ್ ಆಗುತ್ತಲೇ ಇದ್ದರೆ...
ಕಾರಣ:  ನೀವು ಆ್ಯಂಬುಲೆನ್ಸಿನಲ್ಲಿದ್ದೀರಿ.
ಪರಿಹಾರ:  ಎದ್ದೋಗ್ಬೇಡಿ. ಅವರವರ ಕರ್ತವ್ಯಗಳನ್ನು ನಿಭಾಯಿಸಲು ಬಿಡುವುದು ಕುಡುಕಧರ್ಮ.

ಒಳಗೊಳಗೆ ನಕ್ಕ ಕವಿ. ವ್ಹಿಸ್ಕಿ ಹೀರಲು ಹಾತೊರೆಯಿತು ಮನ. ಯಾವುದಾದರೂ ಬಾಟಲಿಗೆ ಕೈಹಾಕೋಣ ಅಂತನ್ನಿಸಿತು. ಆದರೆ, ಖಾಲಿ ಜೇಬಿನಲ್ಲಿ ತಾನಿಲ್ಲಿಗೆ ಬಂದಿದ್ದೇನೆಂಬ ಅರಿವಾಯಿತು ಕವಿಗೆ. 'ದುಡ್ಡು ತಾರದಿದ್ದರೂ ಪರ್ವಾಗಿಲ್ಲ' ಎಂದಳು ಒಬ್ಬಳು ನಾಲಗೆಯನ್ನು ತುಟಿಯ ಸುತ್ತ ನರ್ತಿಸುತ್ತಾ. 'ಹಾಗಾದರಿದು ಉಚಿತ ಬಾರಿರಬೇಕು' ಎಂದುಕೊಂಡ ಕವಿ. 'ಹಾಗೇನಿಲ್ಲ. ನೀವು ಮೇಷ್ಟ್ರಲ್ಲವೇ?' ಎಂದು ಕೇಳಿದಳು ಅವಳು. ಇವನು ಅಂತರಂಗದೊಳಗೆ, 'ಹೌದು ನಾನು ಯುವಕವಿಗಳಿಗೆಲ್ಲ ಸಾಹಿತ್ಯದ ಮೇಷ್ಟ್ರೇ' ಎಂದು ಗುನುಗಿದ. 'ಹಾಗಾದರೆ ನಿಮಗೆ ಟೀಚರ್ಸ್ ಸ್ಕಾಚ್ ಮಾತ್ರ ಉಚಿತ' ಎಂದಳವಳು.
ಅವತ್ತು ಟೀಚರ್ಸ್ ವ್ಹಿಸ್ಕಿ ಹೀರಿದವರಿಗೆ ಒಂದು ಆಫರ್ ಇತ್ತು. ಅದರ ಮತ್ತು ಇಳಿಯುವ ತನಕ ಅವರು ಚಿನ್ನದ ಮೊಟ್ಟೆಗಳನ್ನಿಡುವ ಕೋಳಿಯಾಗಬಹುದಿತ್ತು. ಆದರೆ, ಆ ಕೋಳಿ ಒಂದು ನಿಮಿಷದಲ್ಲಿ ಮೂರು ಮೊಟ್ಟೆಗಳನ್ನಿಡಬೇಕಿತ್ತು. ಇಲ್ಲದಿದ್ದರೆ ಮೊಟ್ಟೆಗಳು ಕಬ್ಬಿಣವಾಗುತ್ತವೆ. ಕವಿಗೆ ಖುಷಿ ತಡೆಯಲಾಗಲಿಲ್ಲ. ಕೋಳಿ ಆದರೂ ಪರ್ವಾಗಿಲ್ಲ. ಚಿನ್ನದ ಮೊಟ್ಟೆಗಳು ಕೈಸೇರಿದರೆ ಜ್ಞಾನಪೀಠ, ಅಕಾಡೆಮಿ ಅವಾರ್ಡುಗಳಿಗೆ ಅರ್ಜಿ ಸಲ್ಲಿಸುವುದು ತಪ್ಪುತ್ತದೆ ಎಂದು ಟೀಚರ್ಸ್ ವ್ಹಿಸ್ಕಿಯನ್ನು ಒಡೆದು ಕುಡಿದೇಬಿಟ್ಟ. ನಾಲ್ಕು ಸಿಪ್ ಹೀರುವಾಗಲೇ ಅವನು ಕೋಳಿ! ಮೊದಲನೇ ಮೊಟ್ಟೆಯಿಟ್ಟ. ಕೈ ತಕ್ಕಡಿಯಲ್ಲಿ ತೂಗಿದಾಗ ಇನ್ನೂರೈವತ್ತೋ ಮುನ್ನೂರೋ ಗ್ರಾಮಿತ್ತು. ಅಪರಂಜಿ ಚಿನ್ನ! ಅದೇ ಖುಷಿಯಲ್ಲಿ ಮಿಕ್ಕ ಐವತ್ತು ಸೆಕೆಂಡಿನಲ್ಲಿ ಮತ್ತೆರಡು ಮೊಟ್ಟೆ ಇಟ್ಟೇಬಿಟ್ಟ.
ಅಷ್ಟರಲ್ಲೇ ಹೆಂಡತಿ ಬೆನ್ನಿಗೆ ಬಡಿದು, 'ಏನ್ರೀ ಹಾಸಿಗೆಯೆಲ್ಲ ಹೇಸಿಗೆ ಮಾಡಿದ್ದೀರಲ್ಲ. ನಿಮ್ಮಜ್ಜ ಬರ್ತಾನಾ ಒಗೆಯೋದಿಕ್ಕೆ' ದಬಾಯಿಸಿದಳು. ಎಚ್ಚರಗೊಂಡ ಕವಿಗೆ ಕನಸಲ್ಲಿ ಕಂಡ ಫಲಕದ ಸೂಚನೆ ನೆನಪಿಗೆ ಬಂತು.  'ಹೆಣ್ಣು ನಿಮ್ಮನ್ನು ಮುಟ್ಟಿದರೆ ನೀವು ವಾಸ್ತವ ಲೋಕಕ್ಕೆ ಜಾರುವಿರಿ'!
ಆ ಕನಸು ನಿಜಾನಾ? ಇರಬೇಕು... ಈ ದುನಿಯಾ ಲೂಸಿಯಾ!

- ಕೀರ್ತಿ
kolgarkeerthi@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.