ಜಂಬೆ ಮರ

ಒಟ್ಟು 15 ವಿದ್ಯಾರ್ಥಿಗಳು, 5 ವಿದ್ಯಾರ್ಥಿನಿಯರು, 6 ತಿಂಗಳ ತರಬೇತಿ, 45 ದಿನಗಳ ನಾಲ್ಕು ಹಂತಗಳಲ್ಲಿ ಶಿಕ್ಷಣ ಪಡೆದು ಈಗ ಅಂತಿಮ ಹಂತದಲ್ಲಿದ್ದಾರೆ ಅವರೆಲ್ಲರೂ. ರಷ್ಯಾ ಮೂಲದ ಮ್ಯಾಕ್ಸಿಂ ಗಾರ್ಕಿ ಅವರ 'ಲೋವರ್ಸ್ ಡೆಪ್ತ್ಸ್' ನಾಟಕವನ್ನು ಬಿ.ಟಿ. ದೇಸಾಯಿ ಕನ್ನಡಕ್ಕೆ ಭಾವಾನುವಾದಿಸಿ 'ಈ ಕೆಳಗಿನವರು' ಶೀರ್ಷಿಕೆ ಕೊಟ್ಟಿದ್ದಾರೆ. ತರಬೇತಿ ಪಡೆದ ವಿದ್ಯಾರ್ಥಿಗಳು 3 ದಿನ ಬೆಂಗಳೂರಿನಲ್ಲಿ ಈ ನಾಟಕವನ್ನು ಪ್ರದರ್ಶಿಸುತ್ತಿದ್ದಾರೆ. ಅಲ್ಲದೆ ಇದೇ ನಾಟಕವನ್ನು ಮಂಡ್ಯ, ಮೈಸೂರು, ಪುತ್ತೂರು, ಉಡುಪಿ, ಸಾಗರ, ಮಂಚಿಕೇರಿ, ಧಾರವಾಡ, ಬಾಗಲಕೋಟೆ, ಸಾಣೇಹಳ್ಳಿ, ತುಮಕೂರು, ತಿಪಟೂರು ಹಾಗೂ ಕೋಲಾರದಲ್ಲಿ ಸೆ.25ರಿಂದ ಅಕ್ಟೋಬರ್ 15 ರವರೆಗೆ ಈ ನಾಟಕವನ್ನು ಅಭಿನಯಿಸುತ್ತಿದ್ದಾರೆ.
ಈ ಎಲ್ಲ ತರಬೇತಿಯ ರೂವಾರಿ ಮತ್ತು ನಿರ್ದೇಶಕ ಚಿದಂಬರ ರಾವ್ ಜಂಬೆ. ಅಸಿಸ್ಟೆಂಟ್ ಕ್ಯಾಂಪ್ ಡೈರೆಕ್ಟರ್ ಆಗಿ ಪ್ರಸನ್ನ ಡಿ. ಕೆಲಸ ಮಾಡಿದ್ದಾರೆ. ಲೇಖಕರಾದ ಕೆ. ಮರುಳಸಿದ್ದಪ್ಪ, ಓ.ಎಲ್. ನಾಗಭೂಷಣ್, ಎಸ್.ಜಿ. ಸಿದ್ದರಾಮಯ್ಯ, ಎಚ್.ಎಸ್. ವೆಂಕಟೇಶಮೂರ್ತಿ, ಪ್ರತಿಭಾ ನಂದಕುಮಾರ್, ಎಚ್.ಎಲ್. ಪುಷ್ಪಾ, ಜಿ.ಕೆ. ಗೋವಿಂದ ರಾವ್, ರಂಗತಜ್ಞರಾದ ಅನಾಮಿಕ ಹಕ್ಸರ್, ರಘುನಂದನ್, ಆನಿರುದ್ಧ ಕುತುವಾಡ್, ಮಲ್ಲಿಕಾಪ್ರಸಾದ್, ಎಂ.ಎಸ್. ಸತ್ಯು, ಸುರೇಶ್ ಆನಗಳ್ಳಿ, ಅಶೋಕ್ ಸಾಗರ್ ಭಗತ್, ಆಮಿತೇಶ್ ಗ್ರೋವರ್, ಸಂತೋಷ ಪೈ, ಪ್ರಸನ್ನ ಡಿ., ಅಂಬಾ ಸನ್ಯಾಲ್ ಅವರೂ ತರಬೇತಿಯಲ್ಲಿ ಜತೆಗಿದ್ದು ಶಿಬಿರಾರ್ಥಿಗಳಿಗೆ ರಂಗಜ್ಞಾನ ದಯಪಾಲಿಸಿದ್ದಾರೆ.
ಜಂಬೆ ರಂಗ ಲೋಕದ ನಿರಂತರ ಶಕ್ತಿ. ಎನ್ಎಸ್ಡಿ, ಬೆಂಗಳೂರು ಅಧ್ಯಯನ ಕೇಂದ್ರದ ಕ್ಯಾಂಪ್ ಡೈರೆಕ್ಟರ್ ಆಗಿದ್ದಾರೆ. 'ನೀನಾಸಂ'ನಲ್ಲಿ 22 ವರ್ಷ, ರಂಗಾಯಣದಲ್ಲಿ ಡೈರೆಕ್ಟರ್ ಆಗಿ 4 ವರ್ಷ ಮತ್ತು ಈ ಕೇಂದ್ರಕ್ಕೆ ಬರುವ ಮುನ್ನ ಸಾಣೇಹಳ್ಳಿಯಲ್ಲಿ 2 ವರ್ಷ ಸೇವೆ ಸಲ್ಲಿಸಿದ್ದಾರೆ. ಹೀಗೆ ತಮ್ಮಲ್ಲಿರುವ ರಂಗ ಕೌಶಲವನ್ನು ತಮ್ಮಲ್ಲೇ ಉಳಿಸಿಕೊಳ್ಳದೇ ಮುಂದಿನ ಪೀಳಿಗೆಗೂ ಧಾರೆ ಎರೆಯುತ್ತಿದ್ದಾರೆ. ಗಂಗೊಳ್ಳಿಯ ಮೀನುಗಾರರಿಗೂ, ಮಂಚಿಕೇರಿಯ ಸಿದ್ಧರಿಗೂ ನಾಟಕ ಕಲಿಸಿದ ಕೀರ್ತಿ ಇವರದು. 'ತುಘಲಕ್', 'ಕಾಕನಕೋಟೆ', 'ಅಂತಿಗೊನೆ', 'ಮಹಾತ್ಮ', 'ಭಾಸಭಾರತ'ದಂಥ ಅದ್ಭುತ ನಾಟಕಗಳನ್ನು ಕೊಟ್ಟದ್ದನ್ನು ರಂಗಾಸಕ್ತರು ಎಂದಿಗೂ ಮರೆಯುವುದಿಲ್ಲ.
ಎನ್ಎಸ್ಡಿ ತರಬೇತಿಗೆ ಆಯ್ಕೆ
ದೆಹಲಿಯ ಎನ್ಎಸ್ಡಿ ತರಬೇತಿ ಸಂಬಂಧ ಪ್ರಕಟಣೆ ಹೊರಡಿಸುತ್ತದೆ. ದೇಶದ ನಾನಾ ಭಾಗಗಳಿಂದ ಅರ್ಜಿಗಳು ಬರುತ್ತವೆ. ಅವುಗಳಲ್ಲಿ ಸೂಕ್ತರನ್ನು ಆರಿಸಿ, ಆರು ತಿಂಗಳು ಊಟ, ತಿಂಡಿ, ವಸತಿ ಕೊಟ್ಟು ತರಬೇತಿ ನೀಡಲಾಗುತ್ತದೆ. ಕರ್ನಾಟಕದಲ್ಲೂ ಕೇಂದ್ರವಿರುವುದರಿಂದ, ಈ ಬಾರಿ 20 ಶಿಕ್ಷಣಾರ್ಥಿಗಳನ್ನು ಆರಿಸಲಾಗಿದೆ. ಹೊರನಾಡಿನವರು ಬಂದರೂ ಅವರಿಗೆ ಹಿಂದಿ ಮತ್ತು ಇಂಗ್ಲಿಷಿನಲ್ಲೂ ತರಬೇತಿ ನೀಡಲಾಗುತ್ತದೆ. ತರಬೇತಿಗೆ ಆಯ್ಕೆಯಾಗುವವರು ಪಿಯುಸಿ ಪಾಸಾಗಿರಬೇಕು ಮತ್ತು ರಂಗಚಟುವಟಿಕೆಗಳಲ್ಲಿ ಆಸಕ್ತಿ, ಸಂಗೀತದಲ್ಲಿ ಆಸಕ್ತಿ ಹೊಂದಿದ್ದರೆ ಅನುಕೂಲ. ಭಾಷಾ ಶುದ್ಧತೆ ಇದ್ದರೆ ಒಳಿತು. ಇಲ್ಲಿಗೆ ಆಯ್ಕೆಯಾದ ಮೇಲೆ ನಟನೆ, ಆಂಗಿಕ ಕಸರತ್ತು, ಸಾಹಿತ್ಯ ಶುದ್ಧಿಗಳನ್ನು ಹಂತ ಹಂತವಾಗಿ ಹೇಳಿಕೊಡಲಾಗುತ್ತದೆ. 20-30 ವರ್ಷದೊಳಗಿನ ರಂಗಾಸಕ್ತರು ತರಬೇತಿಗೆ ಅರ್ಹರು.
ಭದ್ರ ಬುನಾದಿ
ಪದವಿ ಪೂರೈಸದ ರಂಗಾಸಕ್ತರಿಗೂ ಈ ಹಿಂದೆ ನೀನಾಸಂನಲ್ಲಿ ತರಬೇತಿಗೆ ಅವಕಾಶ ಮಾಡಿಕೊಟ್ಟ ಉದಾಹರಣೆ ಇದೆ. ಆದರೆ, ಇಲ್ಲಿನ ತರಬೇತಿಯಲ್ಲಿ ಅಂಥ ಅವಕಾಶ ಕಡಿಮೆ. ಇವರ ಪ್ರಕಾರ ಯಾವುದಾದರೂ ವಿಷಯದಲ್ಲಿ ಪದವೀಧರರಾಗಿದ್ದರೆ ಶೇಕ್ಸ್ಪಿಯರ್ರಂಥವರ ನಾಟಕಗಳನ್ನು ಅಭಿನಯಿಸುವಾಗ ಪಾತ್ರದ ಭಾವ ಅರಿಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಜಂಬೆ. ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ನಟ/ ಕಲಾ ನಿರ್ದೇಶಕನಾಗುವ ಎಲ್ಲಾ ತಳಹದಿಯನ್ನೂ ನೀಡಿ ರಂಗದಲ್ಲಿ ನೇರ ತೊಡಗಿಸಿಕೊಳ್ಳಲು ಇದೊಂದು ಭದ್ರ ಬುನಾದಿ.
ಟಿಕೆಟ್ ಕೊಂಡು ನಾಟಕ ನೋಡುವವರನ್ನು ಮೆಚ್ಚಿಕೊಳ್ಳುತ್ತಾರೆ ಜಂಬೆ. '10 ರು. ಕೊಟ್ಟರೂ ಅದಕ್ಕೊಂದು ಮೌಲ್ಯವಿರುವುದರಿಂದ ನಾಟಕಕ್ಕೆ ಬೆಲೆ ಬರುತ್ತದೆ. ಇದನ್ನು ಎಲ್ಲಾ ಊರುಗಳಿಗೂ ವಿಸ್ತರಿಸಿದರೆ ಒಳಿತು. ತಂಡದ ಶ್ರಮಕ್ಕೆ ಸಾರ್ಥಕತೆ ಬರುತ್ತದೆ' ಎನ್ನುತ್ತಾರೆ. ಪ್ರಸ್ತುತ ರಂಗಪ್ರಯೋಗಗಳಲ್ಲಿ ಕಡಿಮೆ ರಂಗಸಜ್ಜಿಕೆ, ರಂಗ ಪರಿಕರ ಬಳಕೆಯ ಬಗ್ಗೆ ಮಾತಾಡುತ್ತಾ, 'ಇಂದಿನ ಎಕಾನಮಿ ಈ ಸನ್ನಿವೇಶವನ್ನು ಸೃಷ್ಟಿ ಮಾಡಿದೆ. ಬಜೆಟ್ಗೆ ತಕ್ಕಂತೆ ನಾಟಕದ ಖರ್ಚನ್ನು ಸರಿ ತೂಗಿಸುತ್ತಾರೆ' ಎಂದರು ಜಂಬೆ.
ತುಂಬಾ ಕಲಿತಿರುವೆ...
ಧಾರವಾಡದಲ್ಲಿ ಪಿಯುಸಿ ಮುಗಿಸಿ ಹಾಡು, ಡ್ಯಾನ್ಸುಗಳಲ್ಲಿ ಆಸಕ್ತಿ ಇದ್ದ ರೇಖಾ ಹೊಂಗಲ್, 'ತರಬೇತಿ ಕೇಂದ್ರಕ್ಕೆ ಸ್ನೇಹಿತೆಯ ಪ್ರೇರಣೆಯಿಂದ ಸೇರಿ ತುಂಬಾ ಕಲಿತಿರುವೆ. ಕೊನೆಯ ಕ್ಷಣದಲ್ಲಿ ಅಪ್ಪ ನಿರಾಕರಿಸಿದರೂ ಮತ್ತೆ ಅವರ ಅನುಮತಿ ಪಡೆದು ಬಂದದ್ದು ಒಳ್ಳೆಯದೇ ಆಯ್ತು' ಎಂದರು. ಹೊಸಪೇಟೆಯ ಶಾಹಿರ್ ಮತ್ತು ಧಾರವಾಡದ ಸುಮತಿ ದೇಸಾಯಿ ಅವರದು ತರಬೇತಿಯ ಬಗ್ಗೆ ಒಳ್ಳೆಯ ಅಭಿಪ್ರಾಯವೇ ಇದೆ.
ಮತ್ತೊಬ್ಬ ಶಿಬಿರಾರ್ಥಿ ಉಮೇಶ ಪಾಟೀಲ್ ಜರ್ನಲಿಸಂ ಪದವಿ ಪಡೆದು ಗ್ರಾಫಿಕ್ ಡಿಸೈನರ್ ಆಗಿದ್ದು, ನೀನಾಸಂನಲ್ಲಿ ತರಬೇತಿ ಪಡೆದಿದ್ದರೂ ಮತ್ತೆ ಇಲ್ಲಿ ಬಂದು ಹೊಸ ವಿಚಾರಗಳನ್ನು ಕಲಿತರಂತೆ. ಇವರಿಗೆ ರಂಗದಲ್ಲೇ ಉಳಿಯುವ ಆಶಯ ಕೂಡ ಇದೆ. <
ರಷ್ಯನ್ ಬದುಕಿನ ದೃಶ್ಯಗಳು
ಮ್ಯಾಕ್ಸಿಂ ಗಾರ್ಕಿ ಅನ್ನುವುದು ಅಲೆಕ್ಸಿ ಮಾಕ್ಸಿಮೋವಿಚ್ ಪೆಶ್ಕೋವ್ನ ಕಾವ್ಯನಾಮ. 1868- 1936ರ ವರೆಗೆ ಜೀವಿಸಿದ್ದ ಈತ 12ನೇ ವಯಸಿನಲ್ಲೇ ಮನೆಯಿಂದ ಓಡಿ ಹೋಗಿ, ಸಿಕ್ಕ ಸಿಕ್ಕ ಕೆಲಸ ಮಾಡುತ್ತ ಹಸಿವು, ಸಂಕಟಗಳನ್ನು ಅನುಭವಿಸಿ ಬದುಕಿನ ಕಹಿ ತಾಳಲಾರದೆ ಆತ್ಮಹತ್ಯೆಗೆ ಪ್ರಯತ್ನಿಸಿಯೂ ಬದುಕುಳಿದ. ಆ ಕಾರಣದಿಂದಲೇ ಕಹಿ ಎಂಬ ಅರ್ಥದ 'ಗಾರ್ಕಿ' ಎಂಬ ಕಾವ್ಯನಾಮ ಇರಿಸಿಕೊಂಡರೇನೋ! 'ನನ್ನ ಅನುಭವಗಳೆಲ್ಲ ನನ್ನ ವಿಶ್ವವಿದ್ಯಾಲಯಗಳು' ಎಂಬ ಅವರ ಆತ್ಮಚರಿತ್ರೆ ಜಗಜ್ಜಾಹಿರ.
'ಲೋವರ್ಸ್ ಡೆಪ್ತ್ಸ್' ನಾಟಕ 1902ರಲ್ಲಿ ಮಾಸ್ಕೋ ಆರ್ಟ್ ಥಿಯೇಟರ್ನ ಮೂಲಕ, ಸ್ಟಾನಿಸ್ಲಾವ್ಸ್ಕಿಯ ನಿರ್ದೇಶನದಲ್ಲಿ ಮೊದಲು ಪ್ರದರ್ಶನಗೊಂಡಿತು. ಇದಕ್ಕೆ 'ರಷ್ಯನ್ ಬದುಕಿನ ದೃಶ್ಯಗಳು' ಎಂಬ ಉಪ ಶೀರ್ಷಿಕೆ ಇದೆ. ಈ ಕೃತಿಯು ರಷ್ಯನ್ ಸಾಮಾಜಿಕ ವಾಸ್ತವತೆಯ ಮೊಟ್ಟಮೊದಲ ಮುಖ್ಯ ಕೃತಿ. ಇದು ವಾಸ್ತವದ ಭೀಕರತೆಯನ್ನು ಅದು ಇರುವಂತೆಯೇ ಚಿತ್ರಿಸುವ ನಾಟಕ. ಸಮಾಜದ ತಿರಸ್ಕಾರಕ್ಕೆ ಗುರಿಯಾದವರು ಕಟು ವಾಸ್ತವವನ್ನು ಮರೆಯಲು ಕಟ್ಟಿಕೊಳ್ಳುವ ಸುಳ್ಳುಗಳ ಅನಾವರಣ, ಮನುಷ್ಯತ್ವವನ್ನು ಮರೆತು, ಸಹೋದರ ಭಾವವನ್ನು ದಮನಿಸಿಕೊಂಡು, ಸಂಕಷ್ಟಗಳಿಗೆ ಕಾರಣವಾಗುವ ಸಮಾಜದ ಪ್ರಬಲ ವಿಮರ್ಶೆ, ಇಂಥ ಬದುಕಿನಲ್ಲೂ ದೂರದಲ್ಲೆಲ್ಲೋ ಹೊಳೆಯುವ ಬೆಳಕಿನ ಕಿರಣದ ಸೂಚನೆ ಎಂದೆಲ್ಲ ಮನ್ನಣೆಯನ್ನು ಪಡೆದಿದೆ. ರೆನಾಯರ್, ಕುರೋಸಾವರಂಥ ನಿರ್ದೇಶಕರೂ ಸೇರಿದಂತೆ ಜಗತ್ತಿನಾದ್ಯಂತ ಹಲವು ಭಾಷೆಗಳಲ್ಲಿ, ಹಲವು ವ್ಯಾಖ್ಯಾನಗಳ ಮೂಲಕ 'ಲೋವರ್ಸ್ ಡೆಪ್ತ್ಸ್' ಪ್ರೇಕ್ಷಕರ ಮನಸ್ಸನ್ನು ಸೆಳೆದು ಚಿಂತನೆಗೆ ಹಚ್ಚಿದೆ.
ಬಿ.ಟಿ. ದೇಸಾಯಿ ಅವರು ಗಾರ್ಕಿ ಅವರ ಈ ನಾಟಕವನ್ನು ಉತ್ತರ ಕರ್ನಾಟಕದ ಆಡುಭಾಷೆಗೆ, ಇದು ಕನ್ನಡದ್ದೇ ಕೃತಿ ಎನ್ನಿಸುವಷ್ಟು ಸಹಜವಾಗಿ ಅಳವಡಿಸಿದ್ದಾರೆ. ಅನ್ಯ ದೇಶೀಯ ನಾಟಕಗಳ ಅಳವಡಿಕೆಗೆ ಒಂದು ಮಾದರಿ ಎಂಬಂತೆ ಈ ಕೃತಿ ರೂಪುಗೊಂಡಿದೆ.
- ಸಂಕೇತ್ ಗುರುದತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


