'ಸಿಂಧ್ಯ' ವಂದನೆ

ನಲವತ್ತೆರಡನೇ ವರ್ಷದಲ್ಲೇ, ಮಧ್ಯಪ್ರದೇಶದಂಥ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗುವ ಕನಸನ್ನು ಕಾಣುತ್ತಿರುವ ಜ್ಯೋತಿರಾದಿತ್ಯ ಸಿಂಧ್ಯ ಈಗ ಕೇಂದ್ರದಲ್ಲಿ ವಿದ್ಯುತ್ ...
'ಸಿಂಧ್ಯ' ವಂದನೆ
Updated on: 

ನಲವತ್ತೆರಡನೇ ವರ್ಷದಲ್ಲೇ, ಮಧ್ಯಪ್ರದೇಶದಂಥ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗುವ ಕನಸನ್ನು ಕಾಣುತ್ತಿರುವ ಜ್ಯೋತಿರಾದಿತ್ಯ ಸಿಂಧ್ಯ ಈಗ ಕೇಂದ್ರದಲ್ಲಿ ವಿದ್ಯುತ್ ಮಂತ್ರಾಲಯದಲ್ಲಿ ಸಹಾಯಕ ಮಂತ್ರಿ. ಒಂದು ಕಾಲದಲ್ಲಿ ಅದಕ್ಷತೆ, ಹೊಣೆಗಾರಿಕೆಯ ಅಭಾವದಿಂದ ತತ್ತರಿಸಿದ್ದ ವಿದ್ಯುತ್ ಜಾಲವನ್ನು ಕಷ್ಟಪಟ್ಟು ಸುಧಾರಿಸಿರುವ ಮಂತ್ರಿ.
ಸರ್ಕಾರದಲ್ಲಿ ಆಡಳಿತದ ಅನುಭವದ ಅವಧಿ ಕಡಿಮೆಯಾದರೂ, ಶ್ರದ್ಧೆಯಿಂದ ಕೆಲಸ ಮಾಡಿ, ರಾಜಕೀಯ ತರಲೆಗಳಿಂದ ದೂರವಾಗಿದ್ದು ಒಳ್ಳೆಯ ಕೆಲಸ ಮಾಡಿದ್ದಾರೆನ್ನುವ ಹೆಸರು ಗಳಿಸಿರುವ ಕಾಂಗ್ರೆಸ್ ಮಂತ್ರಿಗಳಲ್ಲಿ ಒಬ್ಬರು. ಭ್ರಷ್ಟಾಚಾರದ ಆರೋಪ ಅವರ ಹತ್ತಿರವೂ ಸುಳಿಯದಂತೆ ನೋಡಿಕೊಂಡಿದ್ದಾರೆ. ರಜಪೂತರ ನಾಡಿನಲ್ಲಿ ಮರಾಠ ಸಂಸ್ಥಾನದ ಸಿಂಹಾಸನಕ್ಕೆ 'ಸಾಂಕೇತಿಕವಾಗಿ ಉತ್ತರಾಧಿಕಾರಿ' ಎನಿಸಿಕೊಂಡಿರುವ ಜ್ಯೋತಿರಾದಿತ್ಯ ಕಾಂಗ್ರೆಸ್ಸಿನ ಹೊಸ ತರುಣ ನಾಯಕರ ಪೀಳಿಗೆಯಲ್ಲಿ ಮೊದಲಿಗರು. ರಾಹುಲ್ ಗಾಂಧಿ ಬ್ರಿಗೇಡ್ ಎಂದೇ ಖ್ಯಾತಿ ಪಡೆದಿರುವ ಸಕ್ರಿಯ ತಂಡದ ಉಪನಾಯಕರ ರೀತಿಯಲ್ಲೇ ರಾಜಕೀಯವಾಗಿ ನಡೆದುಕೊಳ್ಳುತ್ತಿದ್ದಾರೆ.
ಹಿಂದೆ ರಾಜೀವಗಾಂಧಿಯವರ ಕಾಲದಲ್ಲಿ ಅವರ ಬಲಗೈ ಎನಿಸಿಕೊಂಡಿದ್ದ ಮಾಧವರಾವ್ ಸಿಂಧ್ಯ ಒಂದು ವಿಮಾನಾಪಘಾತದಲ್ಲಿ ನಿಧನರಾದಾಗ, ಜ್ಯೋತಿರಾದಿತ್ಯ ಆಗತಾನೇ ಅಮೆರಿಕದ ಹಾರ್ವರ್ಡ್‌ನಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಮುಗಿಸಿದ್ದ. ಸ್ಟ್ಯಾನ್‌ಫರ್ಡ್‌ನಲ್ಲಿ ಅರ್ಥಶಾಸ್ತ್ರ, ಹಾರ್ವರ್ಡ್‌ನಲ್ಲಿ ಎಂಬಿಎ ಪದವಿಗಳನ್ನು ಗಳಿಸಿರುವ ಸಿಂಧ್ಯ ಲೋಕಸಭೆಯಲ್ಲಿ ಅತ್ಯುನ್ನತ ಮಟ್ಟದ ಶಿಕ್ಷಣ ಪಡೆದವರ ಸಾಲಿನಲ್ಲಿ ನಿಲ್ಲಬಲ್ಲವರು. ಸಾಮಾನ್ಯರ ಜತೆ ಅವರು ದೆಹಲಿಯಲ್ಲಿ ಹೆಚ್ಚು ಬೆರೆಯುವುದಿಲ್ಲ. ಆದರೆ ಗ್ವಾಲಿಯರ್‌ನಲ್ಲಿ ಹಾಗಲ್ಲ, ಅಲ್ಲಿ ಜನರ ನಡುವೆ ಕೆಲಸ ಮಾಡುತ್ತಾರೆ.
ಗ್ವಾಲಿಯರ್ ರಾಜಮನೆತನದ ಅಭ್ಯರ್ಥಿಗಳು ಹಾಗೂ ಆ ಕುಟುಂಬದ ಬೆಂಬಲ ಪಡೆದವರು ಗ್ವಾಲಿಯರ್, ಗುಣ, ವಿದಿಶಾ ಲೋಕಸಭೆ ಕ್ಷೇತ್ರಗಳಲ್ಲಿ ಸೋತಿಲ್ಲ. ಒಮ್ಮೆ ಗ್ವಾಲಿಯರ್ ಕ್ಷೇತ್ರದಲ್ಲಿ ವಾಜಪೇಯಿ, ಮಾಧವರಾವ್ ಸಿಂಧ್ಯಾ ವಿರುದ್ಧ ಸೋತಿದ್ದರು. ಜ್ಯೋತಿರಾದಿತ್ಯ ಸಿಂಧ್ಯ ಅವರ ಅಜ್ಜಿ ವಿಜಯರಾಜೇ ಸಿಂಧ್ಯ ಮೊದಲಿಗೆ ಕಾಂಗ್ರೆಸ್ಸಿಗರೇ ಆಗಿದ್ದರೂ, ಅನಂತರ ಜನಸಂಘ, ಬಿಜೆಪಿಗಳತ್ತ ನಡೆದರು. ಆದರೆ ಅವರ ಮಗ ಮಾಧವರಾವ್ ಸಿಂಧ್ಯ ಕಾಂಗ್ರೆಸ್ ಸೇರಿ, ಅನಂತರ ನರಸಿಂಹರಾಯರ ಕಾಲದಲ್ಲಿ ತಮ್ಮದೇ ಆದ ಮಧ್ಯಪ್ರದೇಶ ವಿಕಾಸ ಪಕ್ಷವನ್ನು ಸ್ಥಾಪಿಸಿ, ಅನಂತರ ಕಾಂಗ್ರೆಸ್ಸಿಗೇ ಹಿಂತಿರುಗಿದರು.
ಕಳೆದೆರಡು ವಿಧಾನಸಭೆ ಚುನಾವಣೆಗಳಲ್ಲೂ ಮಧ್ಯಪ್ರದೇಶದಲ್ಲಿ ಬಿಜೆಪಿಯ ಧ್ವಜವೇ ಹಾರಾಡಿರುವುದು. ಆಗೆಲ್ಲ ಕಾಂಗ್ರೆಸ್ ನಾಯಕತ್ವ ಅರ್ಜುನ ಸಿಂಗ್, ದಿಗ್ವಿಜಯ್ ಸಿಂಗ್ ಅವರದ್ದೇ. ಈಗಲೂ ಅಲ್ಲಿನ ಕಾಂಗ್ರೆಸ್ ರಾಜಕೀಯ ಗುಂಪುಗಾರಿಕೆಯಿಂದ ಮುಕ್ತವಾಗಿಲ್ಲ. ದಿಗ್ವಿಜಯ ಸಿಂಗ್ ಅವರ ಸ್ವಯಂ ಪ್ರೇರಿತ ಚುನಾವಣೆ ಸನ್ಯಾಸದ ದಶಕ ಮುಗಿದಿದೆ. ಅವರೂ ಈಗ ಪ್ರತ್ಯಕ್ಷ ರಾಜಕೀಯದ ಕಣಕ್ಕೆ ಧುಮುಕಲಿದ್ದಾರೆ.
ಮಧ್ಯಪ್ರದೇಶ, ದೇಶದಲ್ಲಿ ಹಿಂದೆ ವಿಸ್ತೀರ್ಣದಲ್ಲಿ ಅತಿದೊಡ್ಡ ರಾಜ್ಯವಾಗಿತ್ತು. ಚತ್ತೀಸ್‌ಗಡದ ಬೇರ್ಪಡೆಯ ಅನಂತರ ಆ ಖ್ಯಾತಿಯನ್ನು ಕಳೆದುಕೊಂಡಿದೆ. ಅಲ್ಲಿನ ಈಗಿನ ಬಿಜೆಪಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಎರಡು ಬಾರಿ ಚುನಾವಣೆಯಲ್ಲಿ ತಾವೂ ಗೆದ್ದು ತಮ್ಮ ಪಕ್ಷವನ್ನೂ ಗೆಲ್ಲಿಸಿ, ಹ್ಯಾಟ್ರಿಕ್ ಸಾಧನೆಯನ್ನು ಎದುರು ನೋಡುತ್ತಿದ್ದಾರೆ.
ಈಗ ರಾಹುಲ್‌ಗಾಂಧಿ ನೇತೃತ್ವದ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದರೆ ಜ್ಯೋತಿರಾದಿತ್ಯ ಸಿಂಧ್ಯ ಅವರೇ ಮುಖ್ಯಮಂತ್ರಿ ಎಂದು ಅಧಿಕೃತವಾಗಿ ಪ್ರಕಟಿಸದೇ ಹೋದರೂ, ಜನರಲ್ಲಿ ಅಂಥ ಭಾವನೆ ರೂಪುಗೊಳ್ಳುವ ರೀತಿಯಲ್ಲಿ ವರ್ತಿಸಿದೆ.
ಮಧ್ಯಪ್ರದೇಶದಲ್ಲಿ ಇನ್ನೂ ಚುನಾವಣೆಯ ಪ್ರಕಟಣೆ ಹೊರಬಿದ್ದಿಲ್ಲ, ಆಗಲೇ ಜ್ಯೋತಿರಾದಿತ್ಯ ಮೂರು ವಾರಾಂತ್ಯಗಳಲ್ಲಿ ಸಾಕಷ್ಟು, ಬಹಿರಂಗ ಸಭೆಗಳಲ್ಲಿ ಪಾಲುಗೊಂಡಿದ್ದಾರೆ. ಆಂತರಿಕವಾಗಿ ಎಲ್ಲ ಜಿಲ್ಲೆಗಳಲ್ಲೂ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಸದ್ಯದಲ್ಲಿ ಅದಕ್ಕೆ ಯಾರೂ ವಿರೋಧ ಪ್ರಕಟಿಸಿಲ್ಲ.
ಜ್ಯೋತಿರಾದಿತ್ಯ ಸಿಂಧ್ಯ ಹುಟ್ಟಿದ್ದು ಮುಂಬೈನಲ್ಲಿ, 1971ರ ವರ್ಷಾರಂಭದ ದಿನ. ಮುಂಬೈನಲ್ಲೇ ಆರಂಭದ ವಿದ್ಯಾಭ್ಯಾಸ. ಅನಂತರ ಡೂನ್‌ಸ್ಕೂಲ್ ಪ್ರವೇಶ. ಅಲ್ಲಿಂದ ಸ್ಟ್ಯಾನ್‌ಫರ್ಡ್- ಹಾರ್ವರ್ಡ್‌ನಲ್ಲಿ ಕಲಿಕೆ. ಸ್ವಲ್ಪ ಕಾಲ ಉದ್ಯೋಗಕ್ಕೂ ಸೇರಿದ್ದರಂತೆ. ಆದರೆ ತಂದೆಯ ನಿಧನದ ನಂತರ, ಮನೆತನದ ಜವಾಬ್ದಾರಿಯನ್ನು ಹೊರಲೇಬೇಕಾಗಿ ಬಂದಾಗ, ಗ್ವಾಲಿಯರ್‌ಗೆ ಹಿಂತಿರುಗಿದರು.
ಮೊದಲೇ ಹೇಳಿದಂತೆ ಗ್ವಾಲಿಯರ್ ರಾಜಮನೆತನದ ಒಂದು ರಾಜಕೀಯ ಕುಟುಂಬ. ವಿಜಯರಾಜೇ ಸಿಂಧ್ಯ ಬಿಜೆಪಿ ನಾಯಕತ್ವದ ಅತ್ಯುನ್ನತ ಸ್ಥಾನದಲ್ಲಿದ್ದವರು. ಅವರ ಪುತ್ರಿ ವಸುಂಧರಾ ರಾಜೆ, ಈಗ ರಾಜಸ್ಥಾನದಲ್ಲಿ ಬಿಜೆಪಿಯ ನಾಯಕಿ. ಅಲ್ಲಿ ಪಕ್ಷ ಗೆದ್ದರೆ ಅವರೇ ಮುಖ್ಯಮಂತ್ರಿಯಾಗುವ ಸಂಭವ. ವಸುಂಧರಾ ಪುತ್ರ ದುಷ್ಯಂತ ಲೋಕಸಭೆಯ ಬಿಜೆಪಿ ಸದಸ್ಯ. ವಿಜಯ ರಾಜೆ ಸಿಂಧ್ಯರ ಇನ್ನೊಬ್ಬ ಮಗಳು ಯಶೋಧರಾ ಬಿಜೆಪಿಯ ಲೋಕಸಭೆ ಸದಸ್ಯೆ. ಜ್ಯೋತಿರಾದಿತ್ಯ ಸಿಂಧ್ಯ ಲೋಕಸಭೆಯಲ್ಲಿ ಗುಣ ಕ್ಷೇತ್ರದ ಪ್ರತಿನಿಧಿ.
ಪ್ರಾಯಶಃ ಗ್ವಾಲಿಯರ್ ರಾಜಮನೆತನಕ್ಕೆ ಸೇರಿದ ವ್ಯಕ್ತಿಗಳು ಲೋಕಸಭೆಯ ಅತಿ ಶ್ರೀಮಂತರ ಸಾಲುಗಳಲ್ಲಿ ಮೊದಲ ಸಾಲಿನಲ್ಲೇ ನಿಲ್ಲಬಹುದು. ಆದರೆ, ಕುಟುಂಬದ ಆಸ್ತಿಯಲ್ಲಿ ಬಹುಭಾಗ ನ್ಯಾಯಾಂಗದಲ್ಲಿ ವ್ಯಾಜ್ಯಗಳನ್ನು ಎದುರಿಸುತ್ತಿದೆ.
ಜ್ಯೋತಿರಾದಿತ್ಯ ಸಿಂಧ್ಯ ಅವರ ಈಗಿನ ಘೋಷಿತ ಆಸ್ತಿಯ ಮೌಲ್ಯ 25 ಕೋಟಿ ರುಪಾಯಿಗಳು. ಅದು ಅವರಿಗೆ ಮಾಧವರಾವ್ ಸಿಂಧ್ಯರಿಂದ ಬಂದಿದ್ದು. ಗ್ವಾಲಿಯರ್ ರಾಜಮನೆತನಕ್ಕೆ ಸೇರಿದ್ದೆಂದು ಹೇಳಲಾಗಿರುವ ಆಸ್ತಿಯ ಅಂದಾಜು ಮೌಲ್ಯ ಸುಮಾರು 20,000 ಕೋಟಿ ರುಪಾಯಿಗಳಿಗೂ ಹೆಚ್ಚು. ಮಾಧವರಾವ್ ಸಿಂಧ್ಯ ಮದುವೆಯಾಗಿದ್ದು ನೇಪಾಳದ ರಾಣಾ ಮನೆತನದ ಹೆಣ್ಣು ಮಗಳನ್ನು. ಆಕೆಗೆ ನೇಪಾಳದಲ್ಲೂ ಆಸ್ತಿ ಇದೆ ಎನ್ನುವ ವರದಿಗಳು ತುರ್ತು ಪರಿಸ್ಥಿತಿಯ ಕಾಲದಲ್ಲಿ ಪ್ರಕಟವಾಗಿದ್ದವು.
ತುರ್ತು ಪರಿಸ್ಥಿತಿಯ ದಿನಗಳಲ್ಲಿ, ಆಗಿನ್ನೂ ಜನಸಂಘದಲ್ಲೇ ಇದ್ದ ಮಾಧವರಾವ್ ನೇಪಾಳದಲ್ಲೇ ಹೆಚ್ಚು ಸಮಯವನ್ನು ಕಳೆದಿದ್ದು. ವಿಜಯರಾಜೇ ಸಿಂಧ್ಯ ಜೈಲಿಗೆ ಹೋಗಿದ್ದರು. ಮಧ್ಯಪ್ರದೇಶದ ಕೆಲವು ಸಂಘಟನೆಗಳು ಈಚೆಗೆ ಜ್ಯೋತಿರಾದಿತ್ಯ ಸಿಂಧ್ಯ ಅವರಿಗೆ ಒಂದು ಸವಾಲನ್ನು ಎಸೆದಿದ್ದಾರೆ; ಮಧ್ಯಪ್ರದೇಶದ ಮುಖ್ಯಮಂತ್ರಿಯಾಗುವ ಬಯಕೆ ಇದ್ದರೆ, ನೇರವಾಗಿ, ಕೇಂದ್ರ ಸಚಿವ ಸ್ಥಾನವನ್ನು ಬಿಟ್ಟು ವಿಧಾನಸಭೆಗೆ ಸ್ಪರ್ಧಿಸಿ.
ಈಗಿನ ವಾಸ್ತವದಲ್ಲಿ ಇದೇನೂ ದೊಡ್ಡ ಸವಾಲಲ್ಲ. ಲೋಕಸಭೆಯ ಅವಧಿ ಮೇ ಕೊನೆಯ ವೇಳೆಗೆ ಮುಗಿಯಲಿದೆ. ಈಗ ರಾಜಿನಾಮೆ ಕೊಟ್ಟರೂ ಜ್ಯೋತಿರಾದಿತ್ಯ ಅವರಿಗೇನೂ ರಾಜಕೀಯವಾಗಿ ದೊಡ್ಡ ನಷ್ಟವಲ್ಲ. ಆದರೆ, ಅದನ್ನು ವರಿಷ್ಠರು ಒಪ್ಪುವುದಿಲ್ಲ.

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com