

ನವದೆಹಲಿ: ಬ್ಯಾಂಕ್ ಖಾತೆಗೆ 5 ಸಾವಿರಕ್ಕಿಂತ ಅಧಿಕ ಹಳೆಯ ನೋಟುಗಳನ್ನು ಒಮ್ಮೆ ಮಾತ್ರ ಜಮೆ ಮಾಡಲು ಅವಕಾಶ ಎಂದು ಹೇಳೆ ಜನತೆಯ ಕಂಗಾಲಿಗೆ ಕಾರಣವಾಗಿದ್ದ ಕೇಂದ್ರ ಸರ್ಕಾರ ಇದೀಗ ತನ್ನ ನಿಯಮಾವಳಿಯಲ್ಲಿ ಸಣ್ಣ ಪ್ರಮಾಣದ ಸಡಿಲಿಕೆ ತೋರಿದ್ದು, ಕೆವೈಸಿಯುಕ್ತ ಖಾತೆಗೆ 5 ಸಾವಿರಕ್ಕೂ ಮೇಲ್ಪಟ್ಟ ಹಳೆಯ ನೋಟುಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಜಮೆ ಮಾಡುವ ಅವಕಾಶ ನೀಡಿದೆ.
ಈ ಬಗ್ಗೆ ಬುಧವಾರ ಬೆಳಗ್ಗದೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ಬಿಡುಗಡೆ ಮಾಡಿದ್ದು, ಅದರಂತೆ ಕೆವೈಸಿ (ನಿಮ್ಮ ಗ್ರಾಹಕರ ತಿಳಿಯಿರಿ)ಯಾಗಿರುವ ಖಾತೆದಾರರು ಒಂದಕ್ಕಿಂತ ಹೆಚ್ಚು ಬಾರಿ ಹಳೆಯ ನೋಟುಗಳನ್ನು ತಮ್ಮಖಾತೆಗೆ ಜಮಾ ಮಾಡಬಹುದು ಎಂದು ಹೇಳಿದೆ. ಆದರೆ ಕೆವೈಸಿಯಾಗದ ಖಾತೆದಾರರಿಗೆ ಈ ನಿಯಮವನ್ನು ಮುಂದುವರೆಸಲಾಗಿದ್ದು, ಈ ಖಾತೆದಾರರು ಡಿಸೆಂಬರ್ 30ರವರೆಗೆ ಕೇವಲ ಒಂದು ಬಾರಿ ಮಾತ್ರ 5 ಸಾವಿರಕ್ಕೂ ಮೇಲ್ಪಟ್ಟ ಹಳೆಯ ನೋಟುಗಳನ್ನು ಜಮೆ ಮಾಡಬಹುದು ಎಂದು ಹೇಳಿದೆ.
ಒಂದು ವೇಳೆ ಕೆವೈಸಿಯಾಗದ ಖಾತೆದಾರರು 5 ಸಾವಿರಕ್ಕೂ ಮೇಲ್ಪಟ್ಟು ಹಳೆಯ ನೋಟುಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಜಮೆ ಮಾಡಿದರೆ ಆಗ ಖಂಡಿತಾ ಬ್ಯಾಂಕ್ ಅಧಿಕಾರಿಗಳು ಅಥವಾ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣದ ಮೂಲದ ಕುರಿತು ಪ್ರಶ್ನಿಸಬಹುದಾಗಿದೆ ಎಂದೂ ಆರ್ ಬಿಐ ಸ್ಪಷ್ಟಪಡಿಸಿದೆ. ಅಂತೆಯೆ ಒಮ್ಮೆ ಮಾತ್ರ ಠೇವಣಿ ಮಾಡುವವರಿಗೆ ಈ ಬಗ್ಗೆ ಆತಂಕ ಬೇಡ ಎಂದೂ ಆರ್ ಬಿಐ ಹೇಳಿದೆ.
ಜನಧನ್ ಖಾತೆಗಳಲ್ಲಿ ಅಪಾರ ಪ್ರಮಾಣದ ಹಳೆಯ ನೋಟುಗಳ ಠೇವಣಿಯಾಗುತ್ತಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ ಸೋಮವಾರ ಡಿಸೆಂಬರ್ 30ರವರೆಗೆ ಒಮ್ಮೆ ಮಾತ್ರ 5 ಸಾವಿರಕ್ಕೂ ಮೇಲ್ಪಟ್ಟ ಹಳೆಯ ನೋಟುಗಳನ್ನು ಒಮ್ಮೆ ಜಮೆ ಮಾಡಬಹುದು ಎಂದು ಹೇಳಿತ್ತು. ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅಂತೆಯೇ ಡಿಸೆಂಬರ್ 30ಕ್ಕೆ ಸರ್ಕಾರ ಹಳೆಯ ನೋಟು ಠೇವಣಿಗೆ ಅಂತಿಮ ಗಡುವು ನೀಡಿದ್ದು, ಅಂತೆಯೇ 2 ಲಕ್ಷಕ್ಕೂ ಅಧಿಕ ಠೇವಣಿಗೂ ಕೆಲ ನಿರ್ಬಂಧಗಳನ್ನು ಹೇರಿತ್ತು.