

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ನೆಪದಲ್ಲಿ ನಗರದ ಕೇಂದ್ರ ಭಾಗಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿರುವ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.
ಇದನ್ನು ಪ್ರಾಯೋಗಿಕ ಕ್ರಮ ಎಂದು ಸಾರಿಗೆ ಇಲಾಖೆ ಬಣ್ಣಿಸುತ್ತದೆಯಾದರೂ, ಸೂಕ್ತ ಪೂರ್ವ ಸಿದ್ಧತೆ ಇಲ್ಲದೆ ಆತುರದಲ್ಲಿ ಇಂಥ ಕ್ರಮಕ್ಕೆ ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈಚೆಗಷ್ಟೇ ದಿಲ್ಲಿಯಲ್ಲಿ ಸರಿ-ಬೆಸ ವಾಹನ ಸಂಚಾರ ಪ್ರಯೋಗಕ್ಕೆ ಮುಂದಾಗಿದ್ದ ಕೇಜ್ರಿವಾಲ್ ಸರ್ಕಾರ, ಅಲ್ಲಿ ಅದಕ್ಕಾಗಿ ಒಂದು ತಿಂಗಳ ಕಾಲ ಪೂರ್ವ ಸಿದ್ಧತೆ ಹಾಗೂ ಜನಜಾಗೃತಿ ಕೈಗೊಂಡಿತ್ತು. ಆದರೆ, ರಾಜ್ಯ ಸರ್ಕಾರ ಜನರ ಮನವೊಲಿಸಲು ವಿಫಲವಾಗಿರುವುದು ಇಲ್ಲಿ ಎದ್ದು ಕಾಣುತ್ತಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.3 ರಿಂದ ಮೂರು ದಿನಗಳ ಕಾಲ ಇನ್ ವೆಸ್ಟ್ ಕರ್ನಾಟಕ-2016 ಸಮಾವೇಶ ನಡೆಯಲಿದೆ. ಈ ವೇಳೆ ಸಂಚಾರ ದಟ್ಟಣೆ ಮತ್ತು ವಾಯುಮಾಲಿನ್ಯ ತಡೆಗೆ ಫೆ.1ರಿಂದ ಖಾಸಗಿ ಮತ್ತು ಸರ್ಕಾರಿ ಬಸ್ ಗಳ ನಗರ ಪ್ರವೇಶಕ್ಕೆ ಸರ್ಕಾರ ನಿರ್ಬಂಧ ಹೇರಿದೆ.
ಈ ನಿರ್ಧಾರದಿಂದ ಜನ ಸಾಮಾನ್ಯರು ಪ್ರಯಾಣಕ್ಕೆ ಹೆಚ್ಚುವರಿ ಹಣ ವ್ಯಯಿಸಬೇಕಿದೆ. ಅದರಲ್ಲೂ ನಗರಕ್ಕೆ ಬರುವ ಹೊಸಬರ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಇದರಿಂದ ಸಮಯ ವ್ಯರ್ಥ. ಆಟೊ ಟ್ಯಾಕ್ಸಿ ಮತ್ತು ಬಿಎಂಟಿಸಿಗೆ ಅನಗತ್ಯವಾಗಿ ಹೆಚ್ಚು ಹಣ ನೀಡಿ ಪ್ರಯಾಣಿಸುವ ಅನಿವಾರ್ಯ.
ಆಟೊ, ಟ್ಯಾಕ್ಸಿಗಳಿಂದ ಸುಲಿಗೆ
ತುಮಕೂರು, ಕನಕಪುರ, ಹೊಸೂರು, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಕೋಲಾರ ರಸ್ತೆ ಮಾರ್ಗವಾಗಿ ನಗರಕ್ಕೆ ಬರುವ ಎಲ್ಲ ಬಸ್ ಗಳು ನಗರದ ಹೊರವಲಯದಲ್ಲೇ ನಿಲ್ಲಲಿವೆ. ಇದರಿಂದಾಗಿ ನಗರಕ್ಕೆ ಆಗಮಿಸುವ ಪ್ರಯಾಣಿಕ ತಂತಮ್ಮ ಸ್ಥಳಗಳಿಗೆ ತೆರಳಲು ಆಟೋ, ಟ್ಯಾಕ್ಸಿ ಹಾಗೂ ಬಿಎಂಟಿಸಿ ಬಸ್ ಅವಲಂಬಿಸಬೇಕು. ಇನ್ನು ನಗರಕ್ಕೆ ಆಗಮಿಸುವ ಹೊಸ ಪ್ರಯಾಣಿಕರ ಸ್ಥಿತಿ ಹೇಳತೀರದು, ಹೌದು, ಹೊಸ ಪ್ರಯಾಣಿಕ ನಗರಕ್ಕೆ ಆಗಮಿಸಿದರೆ ಆಟೋ, ಟ್ಯಾಕ್ಸಿ ಚಾಲಕರು ಹಗಲು ದರೋಡೆಗೆ ಇಳಿಯುತ್ತಾರೆ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೇ ಆಟೋ, ಟ್ಯಾಕ್ಸಿ ಚಾಲಕರು ಹೊಸ ಪ್ರಯಾಣಿಕರಿಗೆ ಇಡೀ ಬೆಂಗಳೂರನ್ನೇ ತೋರಿಸುತ್ತಾರೆ. ಪರ್ಯಾಯ ವ್ಯವಸ್ಥೆ ಮಾಡದೇ ಸರ್ಕಾರ ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದಾಹರಣೆಗೆ ತುಮಕೂರು ಮಾರ್ಗದಲ್ಲಿ ಬರುವ ಪ್ರಯಾಣಿಕ ಪೀಣ್ಯ ನಿಲ್ದಾಣದಿಂದ ನಗರಕ್ಕೆ ಪ್ರವೇಶಿಸಬೇಕು. ಬಿಎಂಟಿಸಿಯಲ್ಲಿ ಸುಮಾರು 20ರಿಂದ 25 ರುಪಾಯಿ ಪಡೆದರೆ, ಆಟೋ ಅಥವಾ ಟ್ಯಾಕ್ಸಿಯಲ್ಲಿ ಪ್ರಯಾಣಿಸಲು ಕನಿಷ್ಠ ರು.80 ರಿಂದ ರು.100 ಕೊಡಬೇಕು. ಕೆ.ಆರ್.ಪುರಂ ನಿಂದ ಮೆಜೆಸ್ಟಿಕ್ ಗೆ ಬರಲು ಕನಿಷ್ಠ ರು.150 ನೀಡದೆ ಯಾವ ಆಟೋ, ಟ್ಯಾಕ್ಸಿ ಕೂಡ ಬರುವುದಿಲ್ಲ. ಇದರಿಂದ ಪ್ರಯಾಣಿಕರ ಸಮಯ ವ್ಯರ್ಥ, ಜತೆಗೆ ಜೇಬಿಗೆ ಕತ್ತರಿ ಬೀಳಲಿದೆ.
ನಗರದ ಹೊರಭಾಗದಲ್ಲೇ ಬಸ್ ನಿಲ್ದಾಣಗಳಿರುವುದರಿಂದ ಎಲ್ಲ ಪ್ರಯಾಣಿಕರು ಅಲ್ಲಿಂದಲೇ ಪ್ರಯಾಣಿಸಬೇಕು. ಮೆಜೆಸ್ಟಿಕ್ ನಿಂದ 2,250 ಕೆಎಸ್ಆರ್ ಟಿಸಿ ಬಸ್ ಗಳು ಆಂಧ್ರದ 360, ಮಹಾರಾಷ್ಟ್ರದ 2, ಗೋವಾ ಕೇರಳಕ್ಕೆ ಒಂದೊಂದು ಬಸ್ ಗಳು ಸಂಚರಿಸುತ್ತವೆ. ಶಾಂತಿನಗರದಿಂದ ಕೆಎಸ್ಆರ್ ಟಿಸಿ 148, ತಮಿಳುನಾಡಿಗೆ 103 ಮತ್ತು ಕೇರಳಕ್ಕೆ 17 ಬಸ್ ಗಳು, ಪೀಣ್ಯದಿಂದ ಕೆಎಸ್ಆರ್ ಟಿಸಿ 31, ಕೇರಳಕ್ಕೆ 5 ಬಸ್ ಗಳು ಸಂಚಿರಿಸುತ್ತವೆ.
ಹೊಸೂರು ರಸ್ತೆ, ಶಾಂತಿನಗರ, ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದರೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸಂಚರಿಸುವ ಬಸ್ ಗಳನ್ನು ಮಾತ್ರ ಪೀಣ್ಯದ ಬಸವೇಶ್ವರ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.