ಕಾವೇರಿ ವಿವಾದ: ಮಧ್ಯಪ್ರವೇಶಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಸಿದ್ದು ಪತ್ರ

ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ದುರುದ್ದೇಶಪೂರಕವಾಗಿ ಬೇಡಿಕೆ ಇಡುತ್ತಿದ್ದು, ಸತ್ಯ ಮುಚ್ಚಿಟ್ಟು ನ್ಯಾಯಾಲಯದಲ್ಲಿ ವಾದ ಮಂಡಿಸಿದೆ. ಆ ರಾಜ್ಯದಲ್ಲಿ ಸಾಕಷ್ಟು ನೀರಿದೆ....
ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ (ಸಂಗ್ರಹ ಚಿತ್ರ)
ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ತಮಿಳುನಾಡಿಗೆ ನೀರು ಹರಿಯುತ್ತಿರುವ ವಿರುದ್ಧ ಕರ್ನಾಟಕದಲ್ಲಿ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ವಿವಾದ ಕುರಿತು ಪ್ರಧಾನಿ  ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದು, ಪರಿಸ್ಥಿತಿ ವಿವರಿಸಿದ್ದಾರೆ.

ಪತ್ರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರು, ತಮಿಳುನಾಡು ರಾಜ್ಯದಲ್ಲಿ ಈ ಹಿಂದೆ ನೈಋತ್ಯ ಮಾನ್ಸೂನ್ ಮಳೆಯಾಗಿದೆ. ಹೀಗಾಗಿ  ಮೆಟ್ಟೂರು ಡ್ಯಾಂ ನಲ್ಲಿ ಸಾಕಷ್ಟು ನೀರಿದೆ. ಹೀಗಿದ್ದೂ ತಮಿಳುನಾಡು ಸರ್ಕಾರ ಕರ್ನಾಟಕದಿಂದ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದ ಪ್ರಮುಖಾಂಶಗಳು ಇಲ್ಲಿವೆ..

"ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ದುರುದ್ದೇಶಪೂರಕವಾಗಿ ಬೇಡಿಕೆ ಇಡುತ್ತಿದ್ದು, ಸತ್ಯ ಮುಚ್ಚಿಟ್ಟು ನ್ಯಾಯಾಲಯದಲ್ಲಿ ವಾದ ಮಂಡಿಸಿದೆ. ಆ ರಾಜ್ಯದಲ್ಲಿ ಸಾಕಷ್ಟು ನೀರಿದೆ. ಈ ಹಿಂದೆ  ಅಲ್ಲಿ ನೈಋತ್ಯ ಮಳೆಯಾಗಿದ್ದು, ಮೆಟ್ಟೂರು ಡ್ಯಾಂ ನಲ್ಲಿ ಸಾಕಷ್ಟು ನೀರಿದ್ದು, ಸಾಂಬಾ ಬೆಳೆಗೆ ಬೇಕಾದಷ್ಟು ನೀರನ್ನು ತಮಿಳುನಾಡು ಸರ್ಕಾರ ಡ್ಯಾಂ ಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದೆ. ಆದರೂ  ಕರ್ನಾಟಕದಿಂದ ಕಾವೇರಿ ನೀರು ಬಿಡಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ಕೂಡ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಈ ಬಗ್ಗೆ ಸೆಪ್ಟೆಂಬರ್ 6 ರಂದು  ನಡೆದ ಸರ್ವಪಕ್ಷ ಸಭೆಯಲ್ಲಿ ಕರ್ನಾಟಕದ ಬಿಜೆಪಿ ಮುಖಂಡರೂ ಕೂಡ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದಂತೆಯೂ ತಮಿಳುನಾಡಿಗೆ ನೀರು ಬಿಡದಂತೆ ಹೇಳಿದರು".

ಆದರೆ ನಾನೊಬ್ಬ ಸಾಂವಿಧಾನಿಕ ಪ್ರತಿನಿಧಿಯಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡಲು ಸಮ್ಮತಿ ಸೂಚಿಸಿದೆ. ಆದರೆ ಕರ್ನಾಟಕದಲ್ಲಿ ಕುಡಿಯುವ ನೀರಿಗೂ  ಹಾಹಾಕಾರವಿದ್ದು, ಈಗಿರುವ ನೀರಿನ ಪ್ರಮಾಣ ರೈತರ ಮೊದಲ ಬೆಳೆಗೇ ಸಾಲದಷ್ಟು ಪ್ರಮಾಣದಲ್ಲಿದೆ. ತಮಿಳುನಾಡಿಗೆ ನೀರು ಬಿಟ್ಟಿದ್ದರಿಂದ ಕರ್ನಾಟಕದಲ್ಲಿ ಬಿಗುವಿನ ಪರಿಸ್ಥಿತಿ  ನಿರ್ಮಾಣವಾಗಿದ್ದು, ತಾಂತ್ರಿಕ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಇನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬಿಗುವಿನ ವಾತಾವರಣೆ ನಿರ್ಮಾಣವಾಗಿದ್ದು, ರಾಜ್ಯದ ಬೊಕ್ಕಸಕ್ಕೆ  ಹೆಚ್ಚು ಆದಾಯ ತಂದುಕೊಡುತ್ತಿದ್ದ ಐಟಿ ಕ್ಷೇತ್ರಕ್ಕೆ ಬಂದ್ ನಿಂದಾಗಿ ತೊಂದರೆಯಾಗಿದೆ. ಈ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಹೀಗಾಗಿ ಕೂಡಲೇ ನಿಮ್ಮ ನೇತೃತ್ವದಲ್ಲಿ ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶಿಸಿ  ಕರ್ನಾಟಕಕ್ಕೆ ಆಗಿರುವ ಅನ್ಯಾವನ್ನು ಸರಿಪಡಿಸಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com