

ಕೊಲಂಬಸ್: ಅಮೆರಿಕದಲ್ಲಿ ವಲಸೆ ವಿರೋಧಿ ಮತ್ತು ಜನಾಂಗೀಯ ವೈಷಮ್ಯ ಕೊನೆಯಾಗುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ. ಇದಕ್ಕೆ ಇಂಬು ನೀಡುವಂತೆ ಅಮೆರಿಕದ ವಲಸೆ ವಿರೋಧಿ ವೆಬ್ ಸೈಟ್ ಭಾರತೀಯ ವಿಡಿಯೋ ಅಪ್ಲೋಡ್ ಮಾಡಿ ಟೀಕಿಸಲಾಗಿದೆ.
ಸೇವ್ ಅಮೆರಿಕನ್ ಐಟಿ ಜಾಬ್ಸ್ ಎಂಬ ಫೇಸ್ ಬುಕ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ವಿಡಿಯೋದಲ್ಲಿ ಅಮೆರಿಕದಲ್ಲಿರುವ ಭಾರತೀಯರು ಹೇಗೆ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತೋರಿಸಲಾಗಿದೆ. ಅಮೆರಿಕದ ಕೆಲಸಗಳನ್ನು ತಾವು ಕಿತ್ತುಕೊಂಡು ಅಮೆರಿಕ ನೆಲದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದರ ವಿರುದ್ಧ ನಾವು ಸಿಡಿದೇಳಬೇಕು ಎನ್ನುವ ರೀತಿಯಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.
ಅಮೆರಿಕದ ಒಹಿಯೋದಲ್ಲಿರುವ ಕೊಲಂಬಸ್ ನ ಪಾರ್ಕ್ ವೊಂದರಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಪಾರ್ಕ್ ಒಂದು ರೀತಿಯ ಮಿನಿ ಮುಂಬೈ ಆಗಿ ಬದಲಾಗಿದೆ. ನಮ್ಮ ಅಮೆರಿಕನ್ನರಿಗೆ ಏನಾಗಿದೆ. ಬೇರೆ ದೇಶದವರನ್ನು ಬಿಟ್ಟುಕೊಂಡಿದ್ದಾರೆ. ಇವರ ಈ ಐಶಾರಾಮಿ ಜೀವನಕ್ಕೆ ಹಣ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದ್ದಾನೆ. ಅಲ್ಲದೆ ಭಾರತವನ್ನು ನರಕದ ರಂದ್ರ ಎಂದೂ ಟೀಕಿಸಿದ್ದಾನೆ. ರಹಸ್ಯವಾಗಿ ಚಿತ್ರೀಕರಿಸಿರುವ ಈ ವಿಡಿಯೋವನ್ನು ಸೇವ್ ಅಮೆರಿಕನ್ ಐಟಿ ಜಾಬ್ಸ್ ಡಾಟ್ ಒಆರ್ ಜಿ ಎಂಬ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ್ದಾನೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಮೆರಿಕದಲ್ಲಿರುವ ಭಾರತೀಯರು ಆತಂಕದ ನಡುವೆ ಜೀವನ ನಡೆಸುವಂತಾಗಿದೆ. ಇತ್ತೀಚೆಗಷ್ಟೇ ಕಾನ್ಸಾಸ್ ನಲ್ಲಿ ಓರ್ವ ಭಾರತೀಯ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಇದರ ಬೆನ್ನಲ್ಲೇ ಮತ್ತೋರ್ವ ಭಾರತೀಯ ಸಿಖ್ ಪ್ರಜೆಯನ್ನು ಕೊಲ್ಲಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಲಸೆ ವಿರೋಧಿ ಕಾಯ್ದೆ ಜಾರಿಗೆ ತಂದ ಬಳಿಕವಂತೂ ಅಮೆರಿದಲ್ಲಿ ಜನಾಂಗೀಯ ದಾಳಿಗಳು ಹೆಚ್ಚಾಗುತ್ತಿದ್ದು, ಐಟಿ ವಲಯದಲ್ಲಿ ಬಹುಪಾಲ ಉದ್ಯೋಗಗಳಿಸಿರುವ ಭಾರತೀಯರು ಹೆಚ್ಚಾಗಿ ಆತಂಕ ಎದುರಿಸುತ್ತಿದ್ದಾರೆ.