ಗಂಡ, ಹೆಂಡತಿ ಮತ್ತೆ ಒಂದು!
ಈ ಅಡಿಬರಹ ನೋಡಿದರೆ ಎಲ್ಲರಿಗೂ ಅನ್ನಿಸುವುದು 'ಮತ್ತೊಂದು' ಸಂಬಂಧ ಎಂದೇ. ಆದರೆ ಇದು 'ಆ' ಕಥೆಯಲ್ಲ. ಇದು ಸ್ವಲ್ಪ ಡಿಫರೆಂಟ್.
ಅದೊಂದು ಸುಂದರ ಕುಟುಂಬ. ಅಲ್ಲಿ ಗಂಡ- ಹೆಂಡತಿ ಇಬ್ಬರೇ. ಬೇರೆಯವರಿಗೆ ಪ್ರವೇಶವಿಲ್ಲ. ಹಾಗೆಂದ ಮಾತ್ರಕ್ಕೆ ಯಾರೂ ಬಂದು ಹೋಗುವುದಿಲ್ಲವೆಂದಲ್ಲ. ಅವರಿಬ್ಬರ ಮಧ್ಯೆ ಪ್ರೀತಿ ವಿಷಯಕ್ಕೆ ಬಂದಾಗ ಉಳಿದವರಿಗೆ ನೋ ಎಂಟ್ರಿ ಅಷ್ಟೆ. ಮದುವೆಯಾಗಿ 4 ವರ್ಷಗಳೇ ಕಳೆದಿವೆ. ಇಬ್ಬರೂ ಉದ್ಯೋಗಸ್ತರು. ಬಿಡುವಿಲ್ಲದ ಕೆಲಸಗಳ ಮಧ್ಯೆಯೇ ಫೋನ್ ಇನ್ ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ. ಮನೆಗೆ ಬಂದ ಮೇಲೂ ಸ್ವಲ್ಪ ಹೊತ್ತು ಹರಟೆ, ಸರಸ, ಸಲ್ಲಾಪಗಳು ಮಾಮೂಲಿ. ವಾರಕ್ಕೊಂದು ಔಟಿಂಗ್, ಹೋಟೆಲ್‌ಗಳಲ್ಲಿ ತಿನ್ನಿಂಗ್, ಸಾಧ್ಯವಾದರೆ ಒಂದು ಸಿನಿಮಾವನ್ನೂ ನೋಡಿ ಬರುತ್ತಿದ್ದರು. ಶಾಪಿಂಗ್ ಬಗ್ಗೆ ಮತ್ತೆ ಹೇಳುವುದು ಬೇಡ ಬಿಡಿ. ಎಲ್ಲವೂ ಅವುಗಳ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದವು. ಹೀಗೇ ಸಾಗುತ್ತಿದ್ದ ಜೀವನದಲ್ಲಿ ಒಂದು ಸಂತೋಷದ ಘಳಿಗೆ ಬಂತು. ಅದೇ ಆಕೆ ಪ್ರಗ್ನೆಂಟ್. ಆಗ ಗಂಡನ ಕೇರ್ ಇನ್ನೂ ಹೆಚ್ಚಾಯಿತು. ಮನೆ ಕೆಲಸಗಳನ್ನೂ ಅವನೇ ಮಾಡಿಕೊಂಡು ಹೋಗುತ್ತಿದ್ದ. ಆಕೆ ಕೈಯಿಂದ ಒಂದು ಚಮಚವನ್ನೂ ಎತ್ತಲು ಬಿಡುತ್ತಿರಲಿಲ್ಲ. ಅಷ್ಟರ ಮಟ್ಟಿನ ಎಚ್ಚರ, ಕಾಳಜಿ ವಹಿಸುತ್ತಿದ್ದ. ಮುದ್ದಾದ ಹೆಣ್ಣು ಮಗುವೂ ಹುಟ್ಟಿತು. ಆ ಮಗುವಿನ ಆರೈಕೆ, ಪಾಲನೆಯಲ್ಲಿ ದಿನೇ ಹೋಗಿದ್ದೇ ಗೊತ್ತಾಗಲಿಲ್ಲ. ಮಗುವಿಗೆ 'ಆರಾಧ್ಯ' ಎಂದು ನಾಮಕರಣವನ್ನೂ ಮಾಡಲಾಗಿತ್ತು. ಇವರಿಗಿದು ಕನಸಿನ ಕೂಸು.
ಸರಿ. ಮಾಮೂಲಿಯಂತೆ ಇವರಿಬ್ಬರೂ ತಮ್ಮ ತಮ್ಮ ಉದ್ಯೋಗಕ್ಕೆ ಹೋಗಿ ಬರುತ್ತಿದ್ದರು. ಬಂದ ಕೂಡಲೇ ಮಗುವನ್ನು ಮಾತನಾಡಿಸುವುದು, ಅದರ ಆಟ, ತೊದಲು ಮಾತುಗಳನ್ನು ಎಂಜಾಯ್ ಮಾಡುವುದು ಹೀಗೆ ಸಾಗಿತ್ತು. ಆದರೆ ಎಲ್ಲೋ ಒಂದು ಮೂಲೆಯಲ್ಲಿ ಇವರಿಬ್ಬರಲ್ಲಿ ಒಂದು ಸಣ್ಣ ಚಿಂತೆ, ಆತಂಕ ಮನೆ ಮಾಡಿತ್ತು. ಆದರೆ, ಅದನ್ನು ಬಾಯಿಬಿಟ್ಟು ಒಬ್ಬರಿಗೊಬ್ಬರು ಹೇಳಿಕೊಂಡಿರಲಿಲ್ಲ.
ಅದೇನೆಂದರೆ ಆರಾಧ್ಯ ಬಂದ ಮೇಲೆ ನನ್ನಾಕೆಗೆ ನನ್ನ ಮೇಲೆ ಮೊದಲಿನ ಪ್ರೀತಿ ಇಲ್ಲ. ಆಕೆ ಹೆಚ್ಚು ಮಗಳ ಮೇಲೇ ಒಲವು ತೋರುತ್ತಿದ್ದಾಳೆ ಎಂಬ ಕಳವಳ ಇವನ ತಲೆಯಲ್ಲಿ ಮನೆಮಾಡಿತ್ತು. ಆಕೆಗೂ ಹಾಗೇ... ಗಂಡ ಮನೆಗೆ ಬಂದ ತಕ್ಷಣ ನನ್ನನ್ನು ವಿಚಾರಿಸುವ ಗೋಜಿಗೆ ಹೋಗದೇ ಸೀದಾ ಮಗುವನ್ನು ಎತ್ತಿ ಆಡಿಸುವುದರಲ್ಲೇ ನಿರತನಾಗಿರುತ್ತಾನೆ. ಮಗುವಿನ ಊಟ, ಆರೈಕೆ ಬಗ್ಗೆಯೇ ವಿಚಾರಿಸುತ್ತಾನೆ. ನನ್ನ ಬಗ್ಗೆ ಅಷ್ಟಾಗಿ ಏನೂ ಕೇಳುತ್ತಿಲ್ಲ ಎಂಬ ಚಿಂತೆ.
ಅವನು ಕಚೇರಿಗೆ ಹೋದರೂ ಅದೇ ಯೊಚನೆ. ನಾನು ಕಚೇರಿ ಮುಗಿಸಿ ಮನೆಗೆ ಹೋಗುವ ವೇಳೆಗೆಲ್ಲಾ ಅವಳು ಕೆಲಸ ಮುಗಿಸಿ ಬಂದಿರುತ್ತಾಳೆ. ನಾ ಬರುವುದನ್ನೇ ಕಾಯುತ್ತಿರುತ್ತಿದ್ದಳು. ಹೋದ ಕೂಡಲೇ ಕುಡಿಯಲು, ತಿನ್ನಲು ಕೊಡುತ್ತಿದ್ದಳು. ಒಂದಷ್ಟು ತಮಾಷೆ, ಮಾತುಕತೆಗಳು ನಡೆಯುತ್ತಿದ್ದವು. ಈಗ ಅದಾವುದೂ ಇಲ್ಲ. ನನ್ನ ಮೇಲಿನ ಪ್ರೀತಿ ಕಡಿಮೆಯಾಯಿತೇ. ನನಗಿಂತಲೂ ಆರಾಧ್ಯಳೇ ಹೆಚ್ಚಾದಳೇ ಎಂಬ ಪ್ರಶ್ನೆ ಕಾಡುತ್ತಿತ್ತು.
ವಾಸ್ತವದಲ್ಲಿ ಹೀಗೆ ಆಗಿರುವುದೇ ಇಲ್ಲ. ಇವರಿಬ್ಬರೂ ತಮಗನ್ನಿಸಿದ್ದನ್ನು ಪರಸ್ಪರ ಹೇಳಿಕೊಳ್ಳದೆ ತಮ್ಮಲ್ಲೇ ಕೊರಗುತ್ತಿದ್ದರು. ಗಂಡ- ಹೆಂಡತಿ ಮಧ್ಯೆ 'ಸಂಪ್ರೀತಾ' ಮತ್ತೆ ಒಂದು ಎಂಬಂತೆ ಸೇರಿದ್ದಳು. ಹೀಗೆ ವಾರದ ರಜೆ ಇದ್ದಾಗ ಆರಾಧ್ಯ ಜತೆ ಇಬ್ಬರೂ ಹೊರಗಡೆ ಸುತ್ತಾಡಲು ಹೋದರು. ಆಗ ಒಂದೇ ಬಾರಿಗೆ ಇವರಿಬ್ಬರ ಮಧ್ಯೆ ಬಂದ ಮಾತು.... ನಾವಿಬ್ಬರೂ ಈ ರೀತಿ ಸುತ್ತಾಡಿ ಎಷ್ಟು ದಿನವಾಯಿತು ಅಲ್ಲವೇ?
ಹೀಗೆ ಶುರುವಾದ ಮಾತುಗಳು, ಈಗ ಮನಸ್ಸಿನಲ್ಲಿ ಕೊರೆಯುತ್ತಿರುವ ಅಂಶಗಳ ಬಗ್ಗೆಯೂ ಹರಿಯಿತು. ಅರೆ! ನಾನೂ ಹೀಗೆಯೇ ಯೋಚಿಸಿದ್ದೆ ಎಂಬ ಸ್ಟೇಟ್‌ಮೆಂಟ್ ಎರಡೂ ಕಡೆಯಿಂದಲೂ ಬಂತು. ತಮ್ಮ ತಪ್ಪು ತಿಳಿವಳಿಕೆಗೆ ಸುಮ್ಮನೆ ನಕ್ಕುರು. 'ಮತ್ತೆ ಒಂದಾ'ದರು.
-ಆದರ್ಶ ಎಸ್. ಅಂಚೆ
adianche@gmail.com