

ಎಷ್ಟೇ ಎಚ್ಚರ ವಹಿಸಿದರೂ ದುಡ್ಡು ಕೈಯಲ್ಲಿ ನಿಲ್ಲೋದೇ ಇಲ್ಲ. ಇದು ಮಹಿಳೆಯರ ಆದಿರಾಗ. ಉದ್ಯೋಗದಲ್ಲಿ ಅನಿಶ್ಚಿತತೆ, ಆರೋಗ್ಯದಲ್ಲಿ ಏರುಪೇರು ಕಾಮನ್. ಹಣಕಾಸು ನಿರ್ವಹಣೆ ಬಗ್ಗೆ ಅರಿವಿಲ್ಲದಿದ್ದರೆ, ಉಳಿತಾಯ ಮಾಡುವ ಗುಣವಿಲ್ಲದಿದ್ದರೆ ನಿವೃತ್ತಿಯ ಹೊತ್ತಿಗೆ ಕೈಯಲ್ಲಿ ಕಾಸೇ ಇರುವುದಿಲ್ಲ. ಇದರಿಂದ ಇಳಿವಯಸ್ಸಿನ ಬದುಕು ಅತಂತ್ರವಾಗುತ್ತದೆ. ಹಣಕಾಸಿನ ತೊಂದರೆ ಉಂಟಾದರೆ ಬದುಕು ಭಾರ. ಹಾಗಾದರೆ, ಮಹಿಳೆಯರು ಮಾಡುತ್ತಿರುವ ತಪ್ಪೇನು?
ವಾಸ್ತವದಿಂದ ದೂರ
ಕನಸಿನ ಪ್ರಪಂಚದಲ್ಲಿ ಮಹಿಳೆಯರು ಹಣವನ್ನು ಸರಿಯಾಗಿ ತಮ್ಮ ಅವಶ್ಯಕತೆಗಳಿಗನುಗುಣವಾಗಿ, ಕರಾರುವಕ್ಕಾಗಿ ಬಳಸುತ್ತಾರೆ. ಆದರೆ ವಾಸ್ತವಕ್ಕಿಳಿದರೆ ಹೆಚ್ಚು ಬೆಲೆಯ ಚಪ್ಪಲಿಗಳನ್ನು ಕೊಂಡು ನಂತರ ಕೊಳ್ಳಬಾರದಿತ್ತೇನೋ ಎನ್ನುತ್ತಾರೆ. ಯಾವುದೇ ರೀತಿಯ ಬಜೆಟ್ ಇಟ್ಟುಕೊಳ್ಳುವುದೂ ಇಲ್ಲ. ನಿಮ್ಮ ಬಿಲ್‌ಗಳನ್ನು ತೆರೆದು ಒಮ್ಮೆ ಅವುಗಳ ಮೇಲೆ ಕಣ್ಣಾಡಿಸಿ ನೋಡಿ. ಬೇಕಿಲ್ಲದೆ ಕೊಂಡ ವಸ್ತುಗಳನ್ನು ನಿಮ್ಮ ಒಳಮನಸ್ಸಿಗೆ ಹಾಕಿ ಮುಂದೆ ಇಂಥ ಅಚಾತುರ್ಯ ಆಗದಂತೆ ಎಚ್ಚರವಹಿಸಿ.
ಕಡಿವಾಣ ಮುಖ್ಯ
ಮಹಿಳೆಯರಲ್ಲಿರುವ ಅಯ್ಯೋ ಪಾಪ ಮನೋಭಾವನೆಯಿಂದ ಯಾರದ್ದೋ ಹಣವನ್ನು ಮತ್ಯಾರದೋ ಪರಿಸ್ಥಿತಿಗೆ ಮರುಗಿ ಕೊಟ್ಟುಬಿಡುವುದು ಅಥವಾ ಬೇರೆಯವರಿಂದ ತೆಗೆದುಕೊಂಡ ಹಣವನ್ನು ವಾಪಸು ಕೊಡದೆ ಶಾಪಿಂಗ್ ಮಾಡಿ ಬಂದು ನಂತರ ಯೋಚಿಸುವುದು. ಈ ರೀತಿಯ ಮನಸ್ಥಿತಿಗೆ ಕಡಿವಾಣ ಹಾಕಲೇಬೇಕು.
ಇತರರನ್ನು ಉಳಿಸಲಿಕ್ಕಾಗಿ...
ಮಹಿಳೆಯರು ತಮ್ಮ ನಿಕಟವರ್ತಿಗಳು ಸಮಸ್ಯೆಗೀಡಾದಾಗ ತಮಗೇ ಸಂಕಟ ಎದುರಾಗಿದೆಯೇನೋ ಎನ್ನುವಂತೆ ವರ್ತಿಸುತ್ತಾರೆ. ಸ್ನೇಹಿತರಲ್ಲಿ ಅಥವಾ ಸಂಬಂಧಿಗಳಲ್ಲಿ ಆರ್ಥಿಕ ಕುಸಿತ ಕಂಡಾಗ ತಮ್ಮದೇ ಮನೆಯನ್ನು ಉಚಿತವಾಗಿ (ಕಡಿಮೆ ಬಾಡಿಗೆಗೆ) ನೀಡುವುದು, ತಮ್ಮ ಕ್ರೆಡಿಟ್ ಕಾರ್ಡ್ ಬಳಸಲು ಅವಕಾಶ ಕೊಡುವುದು- ತಮಗೆ ತಾವೇ ತಂದುಕೊಂಡ ಅವಸ್ಥೆ ದಿನಗಳುರುಳಿದಂತೆ ಭರಿಸಲಾರದಂತಾಗುತ್ತದೆ.
ಚಿಲ್ಲರೆ ಚಿಕಿತ್ಸೆ
ಮನಸ್ಥಿತಿಯನ್ನು ಉತ್ತಮಗೊಳಿಸಲು ಮತ್ತು ತಮ್ಮನ್ನು ಹುರಿದುಂಬಿಸಲು ಶಾಪಿಂಗ್ ಮೊರೆ ಹೋಗುವುದು ಮಹಿಳೆಯರಿಗೆ ವ್ಯಯಿಸಲಿಕ್ಕಿರುವ ದಾರಿ. ಮೂಡ್ ಸರಿಯಾಗಿಸಲು ಯೋಗ ಮಾಡಿ, ಹಾಡು ಕೇಳಿ. ನಿಮ್ಮ ಬಜೆಟ್ ಬಗ್ಗೆ ಮೊದಲೇ ಯೋಚಿಸಿರಿ. ಎರಡು ಕೊಳ್ಳುವ ಜಾಗದಲ್ಲಿ ಒಂದಕ್ಕೇ ತೃಪ್ತಿ ಪಡಿ ಅಥವಾ ವಿಂಡೋ ಶಾಪಿಂಗ್ ಮಾಡಿ.
ಮೆಚ್ಚಿಸುವ ಖಯಾಲಿ
ಈ ಕೆಲಸ ನನ್ನಿಂದಾಗದು, ನನ್ನ ಬಳಿ ಹಣ ಇಲ್ಲ, ಕೊಡುವ ಹಣದ ಒಪ್ಪಂದಕ್ಕೆ ಸಹಿ ಹಾಕಬೇಕು ಅಥವಾ ಈ ಕೂಡಲೇ ಕೊಟ್ಟಿರುವ ಹಣವನ್ನು ಹಿಂತಿರುಗಿಸಿ ಎಂದು ಹೇಳುವ ಯಾವುದೇ ಕೆಲಸವನ್ನು ಬಹಳಷ್ಟು ಮಹಿಳೆಯರು ಮಾಡಲು ಹಿಂಜರಿಯುತ್ತಾರೆ. ಎಲ್ಲರಿಗೂ ಒಳ್ಳೆಯವರಾಗಬೇಕು, ಉತ್ತಮ ಹೆಸರನ್ನು ಪಡೆಯಬೇಕು ಎಂಬ ಬೇಗುದಿಗೆ ಬಿದ್ದು ತಮ್ಮನ್ನೇ ತಾವು ಕಷ್ಟದ ಪರಿಸ್ಥಿತಿ ತಳ್ಳಿಕೊಳ್ಳುತ್ತಾರೆ. ಎಲ್ಲರನ್ನೂ ಮೆಚ್ಚಿಸಲು ಆ ಭಗವಂತನಿಂದಲೂ ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ.
ಅವಲಂಬನೆ
ನಿಮ್ಮದೇ ಹಣಕಾಸು ನಿರ್ವಹಣೆಗೆ ಬೇರೊಬ್ಬರನ್ನು ಸಂಪೂರ್ಣ ಅವಲಂಬಿಸುವುದು ತಪ್ಪು. ಉತ್ತಮವಾಗಿ ಜಾಗರೂಕತೆಯಿಂದ ಹಣಕಾಸಿನ ವ್ಯವಹಾರ ನಿರ್ವಹಿಸುವುದನ್ನು ಚಿಕ್ಕವಯಸ್ಸಿನಿಂದಲೇ ಕಲಿಯಿರಿ. ನಿಮ್ಮ ಬ್ಯಾಂಕ್ ವ್ಯವಹಾರಗಳನ್ನು ನೀವೇ ನಿರ್ವಹಿಸಿ. ಇದರಿಂದ ಹೆಚ್ಚು ಹೆಚ್ಚು ಉಪಯುಕ್ತ ಯೋಜನೆಗಳ ಬಗ್ಗೆ ಅರಿವು ಮೂಡುತ್ತದೆ. ನಿವೃತ್ತಿಯ ಕಾಲಕ್ಕೆ ಉಳಿಸಲು ಕೂಡ ಸಾಧ್ಯ.
ಚರ್ಚಿಸದೇ ಇರುವುದು
ಇಂದಿನ ದಿನಗಳಲ್ಲಿ ಸಂಗಾತಿಗಳು ಆಪತ್ತು ಬಂದೆರಗುವವರೆಗೆ ಹಣಕಾಸಿನ ವ್ಯವಹಾರದ ಬಗ್ಗೆ ಚರ್ಚಿಸದೇ ಇರುವುದು ಹೆಚ್ಚುತ್ತಿದೆ. ದಂಪತಿಗಳಲ್ಲಿನ ಜಗಳಕ್ಕೆ ಬಹುಮುಖ್ಯ ಕಾರಣವೇ ಆರ್ಥಿಕ ತೊಂದರೆ. ಬಾಳ ಬಂಡಿ ಏರುತಗ್ಗು ಇಲ್ಲದೆ ಸಾವಧಾನದಿಂದ ಸಾಗಲು ಇಬ್ಬರಿಗೂ ಹಣಕಾಸಿನ ಅರಿವು ಮತ್ತು ಪರಿಣತಿ ಬೇಕು. ಮದುವೆಗೆ ಮೊದಲೇ ನಿಮ್ಮ ಹಣಕಾಸಿನ ಸ್ಥಿತಿಗತಿಗಳನ್ನು ಹಂಚಿಕೊಂಡರೆ ಒಬ್ಬರಿಗೊಬ್ಬರು ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಹೊಂದಿಕೊಂಡು ಹೋಗಲು, ನಿಭಾಯಿಸಲು ಸಾಧ್ಯವಾಗುತ್ತದೆ.
ನಮ್ಮದೇ ದುಡಿಮೆ, ನಮ್ಮದೇ ಹಣ, ನಮ್ಮದೇ ಕನಸುಗಳು, ನಮ್ಮದೇ ನಾಳೆಗಳು, ನಮ್ಮದೇ ಬದುಕು ಕಟ್ಟಿಕೊಳ್ಳಲೊಂದಿಷ್ಟು ಜಾಣ್ಮೆ, ಜಾಗರೂಕತೆ ಅಗತ್ಯ ನಾರಿ. ಅದನ್ನು ನೀನು ಅರಿತರೆ ಹಿಂತಿರುಗಿ ನೋಡಬೇಕಿಲ್ಲ ಬಾರಿ ಬಾರಿ.
- ಜಮುನಾರಾಣಿ