

ಕಲಿಕೆ ಎಂಬುದು ಶಿಕ್ಷೆಯಾಗಬಾರದು, ಅದು ಫನ್ ಆಗಿರಬೇಕೆಂದು ತೋರಿಸಿದ 'ತ್ರೀ ಈಡಿಯಟ್ಸ್' ಮತ್ತು ಎಲ್ಲ ಮಕ್ಕಳಲ್ಲಿಯೂ ಒಂದಲ್ಲ ಒಂದು ವಿಧದ ಪ್ರತಿಭೆ ಇದ್ದೇ ಇರುತ್ತದೆ, ಅದನ್ನು ಗುರುತಿಸಬೇಕಾದವರು ಶಿಕ್ಷಕರು ಎಂದು ತೋರಿಸಿದ 'ತಾರೆ ಜಮೀನ್ ಪರ್' ಚಿತ್ರಗಳನ್ನು ನೆನಪಿಸಿಕೊಳ್ಳಿ. ಈ ಎರಡೂ ಚಿತ್ರಗಳು ಸಾರಿದ ಸಂದೇಶವನ್ನು ಪ್ರಾಕ್ಟಿಕಲ್ ಆಗಿ ಮಾಡಿ ತೋರಿಸಿದವರು ಶ್ರೀಲಕ್ಷ್ಮೀ ಶಾಸ್ತ್ರಿ. ಗ್ರಾಮೀಣ ಪ್ರದೇಶದಿಂದ ಬೆಂಗಳೂರಿಗೆ ಬಂದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಹಾಗೂ ಅವರಲ್ಲಿ ನಾಯಕತ್ವ ಗುಣವನ್ನು ಬೆಳೆಸಲು ಸಹಕಾರಿಯಾಗುವಂತೆ 'ಚಿರಂತನ ಕಿಡ್ಸ್' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸದ್ದಿಲ್ಲದೆ ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆ, ಅರಕೆರೆಯಲ್ಲಿರುವ ಶ್ರೀಲಕ್ಷ್ಮೀ ಶಾಸ್ತ್ರಿ ಅವರ ನಿವಾಸ 'ಶ್ರೀಮಹಾಲಕ್ಷ್ಮೀ ಕೃಪಾ'ದಲ್ಲಿ ಪ್ರತಿ ಶುಕ್ರವಾರ ಸಂಜೆ ಮಕ್ಕಳ ಕಲರವ. ಸಂಜೆ 5 ರಿಂದ 6 ಗಂಟೆಯವರೆಗೆ ಮನೆಯ ಸುತಮುತ್ತಲಿನ ಮಕ್ಕಳು ಇಲ್ಲಿ ಒಂದಾಗಿ ಕಲಿಯುತ್ತಾರೆ, ನಲಿಯುತ್ತಾರೆ. ಒಂದು ಗಂಟೆ ಕಾಲ ಪಠ್ಯೇತರ ಚಟುವಟಿಕೆಗಳಲ್ಲಿ ಮಗ್ನರಾಗುತ್ತಾರೆ. ಈ ಕಾರ್ಯಕ್ರಮದ ಹೆಸರೇ 'ಚಿರಂತನ ಕಿಡ್ಸ್'.
ಏನಿದು ಕಾರ್ಯಕ್ರಮ?
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಕಲಿತು ಇದೀಗ ಕಿಂಗ್ಡಮ್ ಆಫ್ ಚೈಲ್ಡ್ಹುಡ್ ಶಾಲೆಯ ಶಿಕ್ಷಕಿಯಾಗಿರುವ ಶ್ರೀಲಕ್ಷ್ಮೀ ಶಾಸ್ತ್ರಿ ನೆರೆಹೊರೆಯ ಮಕ್ಕಳನ್ನು ತನ್ನ ಮನೆಯಲ್ಲಿ ಒಟ್ಟು ಸೇರಿಸಿ, ಪ್ರತಿ ವಾರ ಒಂದು ಗಂಟೆ ಕಾಲ ಅವರಿಗೆ ಪಠ್ಯೇತರ ವಿಷಯಗಳನ್ನು ಹೇಳಿಕೊಡುತ್ತಿದ್ದಾರೆ. ಚಿರಂತನ ಕಿಡ್ಸ್ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರದೇಶದಿಂದ ಬಂದ ಮಕ್ಕಳಿಗೆ ನಾಟಕ, ಪ್ರಕೃತಿ ಪರಿಚಯ, ಶ್ಲೋಕ, ಹಾಡು, ಕರಕುಶಲಕಲೆ ಎಲ್ಲವನ್ನೂ ಒಂದೇ ಸೂರಿನಡಿಯಲ್ಲಿ ಹೇಳಿಕೊಡಲಾಗುತ್ತದೆ. ಈ ಮೂಲಕ ಪುಟ್ಟ ಮಕ್ಕಳಲ್ಲಿ ಐಕ್ಯತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲಾಗುತ್ತದೆ.
ಚಿರಂತನದಲ್ಲಿ ಏನಿದೆ ವಿಶೇಷ?
ಶಾಲೆ ಬಿಟ್ಟರೆ ಟ್ಯೂಷನ್ನು, ಸ್ಪೆಷಲ್ ಕ್ಲಾಸು ಎಂದು ತಲೆಕೆಡಿಸಿಕೊಂಡು ಓಡಾಡುವ ಮಕ್ಕಳು ಒಂದೆಡೆಯಾದರೆ, ಯಾವುದೇ ಸವಲತ್ತುಗಳಿಲ್ಲದೆ ಸರ್ಕಾರಿ ಶಾಲೆಗಳಲ್ಲಿ ಓದುವ, ಗ್ರಾಮೀಣ ಪ್ರದೇಶದಿಂದ ಮಕ್ಕಳಿಗೆ ಉತ್ತೇಜನ ನೀಡುವಲ್ಲಿ ಚಿರಂತನ ಕಾರ್ಯವೆಸಗುತ್ತಿದೆ. ಇಲ್ಲಿ ಮಕ್ಕಳು ಆಟಗಳ ಮೂಲಕ ಅಥವಾ ಪದ್ಯಗಳ ಮೂಲಕ ವಿಷಯಗಳನ್ನು ಕಲಿಯುತ್ತಾರೆ. ಯಾವುದೇ ವಿಷಯವಾಗಲಿ ಅದನ್ನು ಸುಲಭವಾಗಿ, ಮಜಾ ಎನಿಸುವಂತೆ ಕಲಿತರೆ ಆ ವಿಷಯ ಮಕ್ಕಳಿಗೆ ಬೇಗ ಅರ್ಥವಾಗುತ್ತದೆ. ರಾಜ್ಯಗಳ ಹೆಸರನ್ನು ನೆನಪಿಡಲು ಪದ್ಯಗಳು, ಗಣಿತವನ್ನು ಸುಲಭವಾಗಿಸುವ ವಿಧಾನಗಳನ್ನು ಹೇಳಿಕೊಡುವ ಜತೆಗೆ ಮಕ್ಕಳಲ್ಲಿನ ಸೃಜನಶೀಲತೆಯನ್ನು ಇಲ್ಲಿ ಗುರುತಿಸಲಾಗುತ್ತದೆ.
ಚಟುವಟಿಕೆಗಳು ಹೇಗಿರುತ್ತವೆ?
ಚಿರಂತನ ಎಂಬ ವಿಭಿನ್ನ ಅಭಿಯಾನ ಶುರುವಾಗಿ ಒಂದು ವರುಷ ಕಳೆದಿದೆ. ಈ ಅವಧಿಯಲ್ಲಿ ಕಾರ್ಯಕ್ರಮದಲ್ಲಿ ಸುಮಾರು 35 ರಿಂದ 40 ಮಕ್ಕಳು ಭಾಗಿಯಾಗಿದ್ದಾರೆ. 5 ವರ್ಷದಿಂದ 13 ವರ್ಷದೊಳಗಿನ ಮಕ್ಕಳು ಇಲ್ಲಿ ಭಾಗವಹಿಸುತ್ತಿದ್ದು, ಇವರನ್ನು ತಂಡಗಳಾಗಿ ವಿಭಜಿಸಲಾಗಿದೆ. ವಿಶೇಷವೇನೆಂದರೆ ಈ ತಂಡಗಳ ಹೆಸರು ಸಂಪಿಗೆ, ಮಲ್ಲಿಗೆ, ವೀರ ಸಾವರ್ಕರ್, ಭಗತ್ ಸಿಂಗ್! ತಮ್ಮ ತಂಡಗಳಿಗೆ ಈ ಹೆಸರುಗಳನ್ನಿಟ್ಟುಕೊಂಡಿದ್ದು ಕೂಡ ಮಕ್ಕಳೇ. ಪ್ರತಿಯೊಂದು ತಂಡಗಳಿಗೂ ವಿವಿಧ ರೀತಿಯ ಕೆಲಸಗಳನ್ನು ವಹಿಸುವ ಮೂಲಕ ಮಕ್ಕಳಲ್ಲಿ ಒಗ್ಗಟ್ಟು ಮತ್ತು ನಾಯಕತ್ವ ಗುಣವನ್ನು ಬೆಳೆಸಲಾಗುತ್ತದೆ. ಮಕ್ಕಳು ಕೂಡ ಶಾಲೆ ಬಿಟ್ಟ ನಂತರ ಲವಲವಿಕೆಯಿಂದಲೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಅಂತಾರೆ ಶ್ರೀಲಕ್ಷ್ಮೀ.
ಎಲ್ಲರ ಸಹಕಾರದಿಂದ ಸಾಕಾರ
ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ನಾನು ಶಿಕ್ಷಕಿ ಆಗಿರುವುದರಿಂದ ಗ್ರಾಮೀಣ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕು ಎಂಬ ಅದಮ್ಯ ಆಸೆಯಿಂದ ಈ ಕಾರ್ಯಕ್ರಮವನ್ನು ಹುಟ್ಟು ಹಾಕಿದೆ. ನನ್ನ ಮನೆಯಲ್ಲಿಯೇ ಈ ಕಾರ್ಯಕ್ರಮ ನಡೆಯುತ್ತಿದ್ದು, ನನ್ನ ಪತಿ, ಮಾವ ಎಲ್ಲರ ಸಹಕಾರ ನನಗಿದೆ. ನಮ್ಮನೆಯಲ್ಲಿ ನಮಗೆ ಗೊತ್ತಿರುವ ಎಲ್ಲ ವಿಷಯಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ. ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಹೊರತರುವುದಕ್ಕಾಗಿಯೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದು ನನಗೆ ಖುಷಿ ನೀಡಿದೆ. ಈ ಮೊದಲು ಕಾರ್ಯಕ್ರಮ ಶುರುಮಾಡುವಾಗ ಹತ್ತಿರದ ಮನೆಯವರಲ್ಲಿ, ಈ ವಿಷಯ ಪ್ರಸ್ತಾಪಿಸಿ ಮಕ್ಕಳನ್ನು ಕಳುಹಿಸಿಕೊಡುವಂತೆ ಹೇಳಿದ್ದೆ. ಎಲ್ಲರ ಸಹಕಾರ ಚೆನ್ನಾಗಿದೆ ಮತ್ತು ಮಕ್ಕಳ ಪರ್ಫಾರ್ಮೆನ್ಸ್ನಲ್ಲಿ ಸಾಕಷ್ಟು ಸುಧಾರಣೆ ಆಗಿರುವುದನ್ನು ನೋಡಿದಾಗ ಖುಷಿಯಾಗುತ್ತಿದೆ.
- ಶ್ರೀಲಕ್ಷ್ಮೀ ಶಾಸ್ತ್ರಿ
- ರಶ್ಮಿ ಕಾಸರಗೋಡು