ಮನಸಖ

ಒಂದೇ ಸಮನೆ ಸುರಿಯುತ್ತಿದ್ದ ಮಳೆ ಇದ್ದಕ್ಕಿದ್ದಂತೆ ನಿಂತಿತು. ಒಂದು ವಾರದಿಂದ ಪಿಜಿಯಲ್ಲೇ ಕುಳಿತು ಬೋರು ಎಂದೆನಿಸುತ್ತಿತ್ತು. ಹಾಗೆ ಸುಮ್ಮನೆ ಹೊರಗಡೆ ಸುತ್ತಾಡುವ ...
ಮನಸಖ
Updated on: 

ಒಂದೇ ಸಮನೆ ಸುರಿಯುತ್ತಿದ್ದ ಮಳೆ ಇದ್ದಕ್ಕಿದ್ದಂತೆ ನಿಂತಿತು. ಒಂದು ವಾರದಿಂದ ಪಿಜಿಯಲ್ಲೇ ಕುಳಿತು ಬೋರು ಎಂದೆನಿಸುತ್ತಿತ್ತು. ಹಾಗೆ ಸುಮ್ಮನೆ ಹೊರಗಡೆ ಸುತ್ತಾಡುವ ಹಂಬಲ. ಹಾಗಂತ ಒಬ್ಬಳೇ ಹೋಗೋದಾ? ನಾನೊಲ್ಲೆ! ಸೋಮಾರಿ ಹಾಗೆ ಬೆಡ್ ಮೇಲೆ ಬಿದ್ಕೊಂಡಿದ್ದ ಗೆಳತಿಯನ್ನು ಪುಸಲಾಯಿಸಲು ಅಣಿಯಾದೆ. ಅವಳಿಗೂ ಅದೇನೋ ಕಂಡೀಶನರ್, ಫೇಸ್ವಾಶ್, ಶ್ಯಾಂಪೂ ಅಂತೆಲ್ಲಾ ತಗೋಬೇಕು ಅಂತಿದ್ಲು. 'ಫ್ಯಾನ್ಸಿಗೆ ಹೋಗೋಣ, ನಿಂಗೆ ಬೇಕಾದ ವಸ್ತುಗಳನ್ನೆಲ್ಲಾ ತಕೊಂಡ ಹಾಗೂ ಆಗತ್ತೆ ಬಾ ಮಾರಾಯ್ತಿ' ಎಂದಾಗ ತಡವರಿಸಿ ರೆಡಿಯಾದಳು.
ಫ್ಯಾನ್ಸಿಯಲ್ಲಿ ನನ್ನ ಕಣ್ಣಿಗೆ ಕಂಡದ್ದು ಶೋಕೇಸ್ನಲ್ಲಿ ಆರಾಮವಾಗಿ ಕುಳಿತಿದ್ದ ತಿಳಿ ನೀಲಿ ಬಣ್ಣದ ಟೆಡ್ಡಿಬೇರ್. ಅವಳಿಗೆ ಬೇಕಾದ್ದೆಲ್ಲಾ ಕೊಂಡ ನಂತರ ಹೊರಬಂದೆವು. 'ಅಯ್ಯೋ, ಅದನ್ಯಾಕೆ ತಗೊಂಡೆ, ರೂಂನಲ್ಲಿ ಅಷ್ಟೊಂದು ಇದೆಯಲ್ಲಾ?' ಎಂದು ಬೊಬ್ಬೆ ಹಾಕಿದಳು. ನನ್ನ ಕೈಯಲ್ಲಿ ಆ ತಿಳಿ ನೀಲಿ ಟೆಡ್ಡಿಯಿತ್ತು.
ನನಗೆ ಟೆಡ್ಡಿ ಎಂದರೆ ತುಂಬಾ ಇಷ್ಟ. ಅದು ನನ್ನ ಪ್ರೀತಿಯ ಸಂಗಾತಿ. ನನ್ನ ಬೆಡ್ ಮೇಲೆ, ಬರೆಯುವ ಟೇಬಲ್ ಮೇಲೆ, ಮುದ್ದಾಡಲು ಒಂದಾದರೆ, ಮಲಗುವಾಗ ಇನ್ನೊಂದು... ಹೀಗೆ ಟೆಡ್ಡಿಗಳ ಸಾಮ್ರಾಜ್ಯವೇ ನನ್ನ ಬಳಿಯಿದೆ. ಬ್ಯಾಗ್ನಲ್ಲೂ ಟೆಡ್ಡಿ ಕೀ ಪಂಚ್ ಸಿಕ್ಕಿಸಿಕೊಂಡಿದ್ದೇನೆ.
ಸದಾ ಕಾಲ ಆಫೀಸ್ ಕೆಲಸದಲ್ಲೇ ಮುಳುಗಿ ಹೋಗುತ್ತಿದ್ದ ಅಪ್ಪನಿಗೆ ಕೆಲಸದ ಹೊರತು ಬೇರೇನೂ ನೆನಪಿರೋದಿಲ್ಲ. ಮನೆಗೆ ಬಂದೊಡನೆ ಲ್ಯಾಪ್ಟಾಪ್ ಆನ್ ಮಾಡಿ ಟಕಟಕ ಶಬ್ದದೊಂದಿಗೆ ಕೆಲಸ ಶುರು. ಅಮ್ಮನೋ ಹಗಲೆಲ್ಲಾ ಅಡುಗೆ ಕೋಣೆಯಲ್ಲಿ. ಸಂಜೆ ಹತ್ತಿರದ ಪಾರ್ಕ್ನಲ್ಲಿ ವಾಕಿಂಗ್. ವಾಪಾಸು ಬರುವಾಗ ಕತ್ತಲು ಆವರಿಸಿರುತ್ತದೆ. ತಮ್ಮನೋ ಮನೆಗೆ ಬಂದಂತೆ ಬ್ಯಾಗ್ ಎಸೆದು ಆಟದ ಮೈದಾನಕ್ಕೆ ಓಡಿಬಿಡುತ್ತಾನೆ. ಅಮ್ಮನ ಬೈಗುಳ ಕೇಳಿದ ಮೇಲೆಯೇ ಮನೆ ಒಳಗೆ ಕಾಲಿಡುವ ಜಾತಿಯವನು. ಇನ್ನು ತಂಗಿಗೋ, ಫೇಸ್ಬುಕ್ ಒಂದೇ ಪ್ರಪಂಚ.  
ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದ ನನಗೆ ಪ್ರೀತಿಯ ಧಾರೆ ಎರೆಯುತ್ತಿರುವುದು ಈ ಟೆಡ್ಡಿ. ಭಾವನೆಗಳನ್ನು ಹಂಚಿಕೊಳ್ಳಲು ನನಗೆ ಸಿಕ್ಕ ಸಂಗಾತಿ. ನಿನಗೇನೂ ಬೇಕು ಎಂದು ಯಾರಾದರೂ ಕೇಳಿದರೆ ನಾನು ಮರುಮಾತಾಡದೆ ಮೌನವಾಗಿ ಟೆಡ್ಡಿಯತ್ತ ಕೈ ಮಾಡಿ ಸುಮ್ಮನಾಗಿ ಬಿಡುತ್ತಿದ್ದೆ.
ಟೆಡ್ಡಿ... ಮಾನಿನಿಯರ ಸಖ. ಕಷ್ಟ-ಸುಖ, ನೋವು ನಲಿವಿನಲ್ಲಿ ಜೊತೆಯಾಗಿರುವ ಸಂಗಾತಿ. ಸದಾ ಕಾಲ ಜೊತೆಗಿರುವ ಟೆಡ್ಡಿ ಏಕ ಕಾಲದಲ್ಲಿ ಅಪ್ಪ, ಅಮ್ಮ, ಅಣ್ಣ, ತಂಗಿ, ಗೆಳತಿ ಅಷ್ಟೇ ಅಲ್ಲದೆ ಪ್ರಿಯತಮನ ಪಾತ್ರವನ್ನೂ ನಿರ್ವಹಿಸಬಲ್ಲ. ಒಟ್ಟಿನಲ್ಲಿ ಟೆಡ್ಡಿಗೆ ಮಾನಿನಿಯರ ಮನಸಲ್ಲಿ ಅಗಾಧವಾದ ಸ್ಥಾನ. ಓಹ್, ಬರೆಯುತ್ತಾ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಟೆಡ್ಡಿ ನನ್ನ ಬರುವಿಕೆಗಾಗಿ ಕಾದು ಕುಳಿತಿದ್ದಾನೆ. ನಾನು ಹೋಗಿ ಮುದ್ದಾಡಬೇಕಿದೆ...

- ಅನಿತಾ ಬನಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com