

ಹೆಣ್ಣು ಈ ಸಮಾಜದ ಕಣ್ಣು. ಆದರೆ, ಆ ಕಣ್ಣಿನ ದೃಷ್ಟಿಯನ್ನೇ ಮಂಕಾಗಿಸುವ ಯತ್ನ ಈ ಸಮಾಜದ ಕಡೆಯಿಂದಾಗುತ್ತಿದೆ. ಹೆಣ್ಣನ್ನು ಪೂಜಿಸಬೇಕಾದ ನಾಡಿನಲ್ಲಿ ಅವಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಲೈಂಗಿಕ ಕಿರುಕುಳ, ಮಾರಾಟ ನಿತ್ಯ ನಡೆಯುತ್ತಿದೆ. ದಿಲ್ಲಿಯಲ್ಲಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ದಾನವರ ದಂಡು ಎರಗಿ ಅವಳ ಸಾವಿಗೆ ಕಾರಣವಾದ ಮೇಲೆ ಈ ದೇಶದಲ್ಲಿ ಅವೆಷ್ಟೋ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇರುವೆ ಸಾಲಿನಂತೆ ಹೊರಬರುತ್ತಿವೆ. ಸ್ತ್ರೀ ಎಂದರೆ ಭೋಗದ ವಸ್ತು ಮಾತ್ರ ಎಂಬ ಮನೋಭಾವವನ್ನು ಸದ್ಯದ ಸಮಾಜ ಪ್ರತಿಬಿಂಬಿಸುತ್ತಿದೆ.
ಮಹಿಳೆಯ ದೌರ್ಬಲ್ಯ ಹಾಗೂ ಸೌಂದರ್ಯ ಅವಳನ್ನು ಕುಗ್ಗಿಸುತ್ತಿದೆ. ಹೆಣ್ಣಿನ ಮೇಲಿನ ದೌರ್ಜನ್ಯವನ್ನು ತೊಡೆಯಲು ಕಾನೂನೇನೋ ಜಾರಿಗೆ ಬರಬಹುದು. ಅಂದಮಾತ್ರಕ್ಕೆ ಅವಳ ಮೇಲಾಗುತ್ತಿರುವ ಶೋಷಣೆ ತೊಲಗುತ್ತದೆ ಎಂಬುದು ಎಷ್ಟು ಸತ್ಯ?
ಇವಕ್ಕೆಲ್ಲ ಹೆದರಿ ಮನೆಯೊಳಗೆ ಮುದುಡಿ ಕೂರಲಾಗುವುದಿಲ್ಲ. ಎಲ್ಲ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿರುವ ಮಹಿಳೆ ತನ್ನ ರಕ್ಷಣೆಗೂ ತಾನೇ ಮುಂದಾಗಬೇಕು. ಆಕೆಯ ಜಾಗರೂಕತೆಯನ್ನು ಅವಳೇ ಮಾಡಿಕೊಳ್ಳಬೇಕು. ಅದಕ್ಕಾಗಿ ಇಲ್ಲಿದೆ ಕೆಲ ಸಲಹೆಗಳು...
- ಮೊದಲನೆಯದಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಏನೇ ಬಂದರೂ ಎದುರಿಸಿಯೇ ತೀರುತ್ತೇನೆ ಎಂಬ ಧೈರ್ಯಾಸ್ತ್ರ ನಿಮ್ಮ ಬತ್ತಳಿಕೆಯಲ್ಲಿರಲಿ.
- ಸಾಧ್ಯವಾದಷ್ಟು ರಾತ್ರಿ ಪ್ರಯಾಣದಿಂದ ದೂರವಿರಿ. ಹೋಗಲೇಬೇಕಾಗಿ ಬಂದಾಗ ಮಹಿಳೆಯರ ಸೀಟು ಪಡೆಯಿರಿ.
- ಸದಾ ನಿಮ್ಮ ಬ್ಯಾಗಿನಲ್ಲಿ ಚಾಕು ಹಾಗೂ ಪೆಪ್ಪರ್ ಸ್ಪ್ರೇ ಇರಲಿ.
- ಸಾರ್ವಜನಿಕ ಸ್ಥಳ, ಆಫೀಸುಗಳಲ್ಲಿ ಪ್ರತಿದಿನ ಸಿಗುತ್ತಾರೆಂದು ಅತಿಯಾದ ಸಲಿಗೆ ಬೇಡ.
-ಹೊರಗೆ ಸಂಚರಿಸುವಾಗ ನೀವು ಎಲ್ಲಿರುವಿರೆಂಬ ಅರಿವು ನಿಮಗಿರಲಿ.
- ಸಂದರ್ಭ ಬಂದಾಗ ಮೊಣಕೈ ಹಾಗೂ ಮೊಣಕಾಲುಗಳನ್ನು ಬಳಸಲು ಹಿಂಜರಿಯಬೇಡಿ.
- ಸೈಬರ್ಗಳಲ್ಲಿ ನಿಮ್ಮ ಖಾತೆಯನ್ನು ಸೈನ್ಔಟ್ ಮಾಡದೆ ಬರಬೇಡಿ. ಫೇಸ್ಬುಕ್ನಲ್ಲೂ ಅನವಶ್ಯಕ ಗೆಳೆತನ ಬೇಡ.
- ಪುರುಷರನ್ನು ಹೆಚ್ಚು ಗಮನಿಸಿ ನೋಡಬೇಡಿ. ಅವಶ್ಯಕತೆ ಬಿದ್ದರೆ ಮಾತ್ರ ಅವರ ಪರಿಚಯಕ್ಕೆ ಮುಂದಾಗಿ.
- ಯಾರಾದರೂ ನಿಮ್ಮ ಜೊತೆ ಅಸಭ್ಯವಾಗಿ ವರ್ತಿಸಿದರೆ ದೂರು ನೀಡಿ, ಅವರಿಂದ ದೂರವಿರಿ.
- ಟ್ರೈನ್ಗಳಲ್ಲಿ ಹೋಗುವಾಗ ನಿಮ್ಮ ಮುಂದೆ ಅಕ್ಕಪಕ್ಕ ಕೂತವರ ಮೇಲೆ ಸ್ವಲ್ಪ ನಿಗಾ ಇರಲಿ.
- ಸಂದರ್ಭಕ್ಕೆ ತಕ್ಕಂತೆ ನಿಮ್ಮ ಡ್ರೆಸ್ ಕೋಡ್ ಬಳಸಿ. ಹೆಚ್ಚು ಎಕ್ಸ್ಪೋಸ್ ಬೇಡ.
- ಮೊಬೈಲ್ ರಿಚಾರ್ಜ್ ಮಾಡಿಸುವಾಗ ನಿಮ್ಮ ನಂಬರ್ನ್ನು ಬೇರೆಯವರು ಆ್ಯಡ್ ಮಾಡಿಕೊಳ್ಳಬಹುದು. ಹೀಗಾಗಿ ಆದಷ್ಟು ಕೂಪನ್ ಬಳಸಿ.
- ಮನೆಯೊಳಗೆ ಒಂಟಿಯಾಗಿದ್ದಾಗ ಪರಿಚಿತರೇ ಬಂದರೂ ಬಾಗಿಲು ತೆರೆಯುವುದು ಬೇಡ. ಏನೆಂದುಕೊಳ್ಳುತ್ತಾರೋ ಎಂಬ ಸಂಕೋಚ ಬಿಟ್ಟುಬಿಡಿ.
ದೌರ್ಜನ್ಯ ಎಸಗುವ ಗಂಡು ನಿಮ್ಮ ಮನೆಯವನೇ ಆಗಿರಬಹುದು. ಹಾಗೆಂದು ಯಾವುದೇ ಕಾರಣಕ್ಕೂ ಬೇಡ ಸಿಂಪತಿ, ಸಹಕಾರ.. ದಾರ್ಷ್ಟ್ಯಕ್ಕಿರಲಿ ಧಿಕ್ಕಾರ... ಜಡೆಗಳು ಒಟ್ಟಾದರೆ ಸಮಾಜವನ್ನು ಸರಿದಾರಿಗೆ ತರುವುದು ಕಷ್ಟವೇನಿಲ್ಲ.
-ವಿಜಯ್ ಆರ್. ಹೊಸನಗರ