

ಬೆಳಿಗ್ಗೆ ಐದು ಗಂಟೆಗೆ ಅಲಾರಾಂ ಹೊಡೆಯಿತು. ಏನೇನೋ ಕನಸು ಕಾಣುತ್ತಾ ಬೆಳಗಿನ ಜಾವದ ಸಿಹಿ ನಿದ್ದೆಯಲ್ಲಿದ್ದ ಆಕೆಗೆ ಏಳುವ ಮನಸ್ಸಿಲ್ಲ. ಹಾಗಂತ ಮಲಗಿದರೆ ಆದೀತೇ? ಗಡಬಡಿಸಿ ಎದ್ದು ಓಡುವಾಗ ಪಕ್ಕದಲ್ಲೇ ಮುಸುಕೆಳೆದು ಮಲಗಿದ್ದ ಆತನ ಗೊಣಗಾಟ 'ಲೈಟ್ ಹಾಕಬೇಡ, ಶಬ್ದ ಮಾಡಬೇಡ. ನನ್ನ ನಿದ್ದೆ ಹಾಳಾಗುತ್ತೆ.'
ಹೇಗೋ ಕತ್ತಲಲ್ಲೇ ಎದ್ದು ತಡವರಿಸಿ ಬಚ್ಚಲು ಮನೆಗೆ ಬಂದು ಮುಖ ತೊಳೆದು ಗೀಸರ್ ಸ್ವಿಚ್ ಹಾಕಿ, ಹಲ್ಲುಜ್ಜಿ ಅಡಿಗೆ ಮನೆಗೆ ಬಂದರೆ ಕೆಲಸಗಳ ರಾಶಿ. ಡಿಕಾಕ್ಷನ್ ಹಾಕಿ, ಚಪಾತಿ ಹಿಟ್ಟು ಕಲೆಸಿ, ಪಲ್ಯ ಮಾಡಿ ಗಂಡ-ಮಕ್ಕಳಿಗೆ ಡಬ್ಬಿ ತುಂಬುವ ತರಾತುರಿ. ಆತನಿಗೆ ಎಚ್ಚರವಾಗಿ 'ಕಾಫಿ ಕೊಡೇ' ಎನ್ನುವ ಕೂಗಿಗೆ ಬೆಡ್‌ಕಾಫಿ ಸಪ್ಲೈ. ಮಲಗಿದ್ದ ಮಕ್ಕಳನ್ನು ಎಬ್ಬಿಸಿ ಸ್ನಾನ ಮಾಡಿಸಿ, ಬಟ್ಟೆ ಹಾಕಿ, ತಲೆ ಬಾಚಿ ತಯಾರು ಮಾಡುವಷ್ಟರಲ್ಲಿ ಬೆಳಗಿನ ವಾಕ್ ಮುಗಿಸಿ ಬೆವರು ಸುರಿಸುತ್ತಾ ಆತ ಹಾಜರ್.
ಮತ್ತರ್ಧ ಗಂಟೆ ಪೇಪರ್ ಓದಿ, ಬಿಸಿ ನೀರಲ್ಲಿ ಸ್ನಾನ ಮುಗಿಸಿ, ಇಸ್ತ್ರಿ ಮಾಡಿಟ್ಟ ಬಟ್ಟೆ ಧರಿಸಿ ಶಿಸ್ತಾಗಿ ಸಿದ್ಧನಾದ ಆತನಿಗೆ ಹಸಿವು. 'ಚಪಾತಿ ತೆಳ್ಳಗಿರಬೇಕಿತ್ತು, ಪಲ್ಯ ಸಪ್ಪೆ' ಎನ್ನುವ ಆಕ್ಷೇಪದೊಂದಿಗೇ ತಿಂಡಿ ಸೇವನೆ. ಅರ್ಧ ತಿಂಡಿ ತಿನ್ನುವಾಗ ಇನ್ನೊಂದು ರೌಂಡ್ ಕಾಫಿ. ಸೊರ್ ಎಂದು ಹೀರಿ ಆತ, ಸಿದ್ಧರಾಗಿರುವ ಮಕ್ಕಳನ್ನು ಸ್ಕೂಟರ್ ಮೇಲೆ ಹತ್ತಿಸಿಕೊಂಡು ಬುರ್ರ್ ಅಂತ ಹೊರಟರೆ ಮನೆಯಿಡಿ ಖಾಲಿ. ಆದರೂ ಕೆಲಸ ಮುಗಿದಿಲ್ಲ. ತಿಂಡಿ ಆಗಿಲ್ಲ.
ಕಸ ಗುಡಿಸಿ, ನೆಲ ಒರೆಸಲು ಬಂದ ಕೆಲಸದವಳ ಜತೆ ಕಾಫಿ-ತಿಂಡಿ ತಿಂದು, ಹಾಲು ಕಾಯಿಸಿ, ಬಟ್ಟೆ ವಾಶಿಂಗ್ ಮಶೀನ್‌ಗೆ ಹಾಕಿದರೂ ಆತನ ಬಟ್ಟೆ ಆಕೆ ಒಗೆಯಬೇಕು. ಏಕೆಂದರೆ ಆತ, ಮಿ. ಕ್ಲೀನ್. ಉಜ್ಜಿ ಉಜ್ಜಿ ಬೆವರ ಕಲೆ ತಿಕ್ಕಿ ಬಟ್ಟೆ ತೊಳೆದು, ಸ್ನಾನ- ದೇವರ ಪೂಜೆ ಮುಗಿಸಿ ಅಡಿಗೆಗೆ ತಯಾರಿ. ಸಾರು, ಪಲ್ಯ, ಅನ್ನ ಮಾಡಿ ಮಧ್ಯಾಹ್ನ ಒಂದಿಷ್ಟು ತಿನ್ನುವಷ್ಟರಲ್ಲಿ ಆಗಲೇ ಮೂರು ಗಂಟೆ. ಇದರ ಮಧ್ಯೆ ಮರುದಿನಕ್ಕೆ ತರಕಾರಿ ತರಬೇಕು, ನೀರಿನ ಬಿಲ್ ಕಟ್ಟಿ ಬರಬೇಕು, ಯೂನಿಫಾರಂನ ಗುಂಡಿ ಹೊಲಿಯಬೇಕು, ಇಂಥಾ ಹತ್ತಾರು ಸಣ್ಣ-ಪುಟ್ಟ ಕೆಲಸಗಳು.
ಸಂಜೆ ಐದಕ್ಕೆ ಮಕ್ಕಳನ್ನು ಕರೆ ತರುವ ಜವಾಬ್ದಾರಿಯೂ ಆಕೆಯದ್ದೇ. ಶಾಲೆಯಲ್ಲಿ ಆಗಿದ್ದೆಲ್ಲಾ ಕೇಳಿ, ಹಾಲು ಕೊಟ್ಟು, ಹೋಂ ವರ್ಕ್ ಮಾಡಿಸಿ, ಪ್ರಾಜೆಕ್ಟ್ ವರ್ಕ್‌ಗೆ ಏನೇನೋ ಕತ್ತರಿಸಿ, ಮಕ್ಕಳ ಜಗಳ ಬಿಡಿಸುವ ಹೊತ್ತಿಗೆ ಎಲ್ಲಿಲ್ಲದ ಸುಸ್ತು. ಅಷ್ಟರಲ್ಲಿ ಕರೆ ಗಂಟೆ, ಆತ ಆಫೀಸಿನಿಂದ ಬಂದಾಯ್ತು.
ಮತ್ತೆ ಕಾಫಿ-ತಿಂಡಿ ಎಂದು ಕುಣಿದಾಟ. ಆತ ಕ್ಲಬ್‌ಗೆ ಹೊರಟರೆ ಆಕೆ ಮರುದಿನದ ತಯಾರಿಯಲ್ಲಿ ವ್ಯಸ್ತೆ. ಅಂತೂ ಮಕ್ಕಳು ಆಟ ಮುಗಿಸಿ, ಆತನೂ ತಿರುಗಿ ಬಂದಾಗ ಊಟ. ಹೇಗೋ ಮುಗಿಸಿ, ಮಕ್ಕಳನ್ನು ಮಲಗಿಸಿ, ರಾತ್ರಿ ಹತ್ತಕ್ಕೆ ಬಿರುಕು ಬಿಟ್ಟು ರಕ್ತ ಒಸರುವ ಹಿಮ್ಮಡಿಗೆ ಒಂದಿಷ್ಟು ವ್ಯಾಸಲೀನ್ ಮೆತ್ತುತ್ತಾ ಕುಳಿತವಳನ್ನು ಕಂಡು ಆತ ಹೇಳಿದ್ದು, 'ಎಂಥಾ ಸುಖದ ಜೀವನ! ಮನೆಯಲ್ಲೇ ಆರಾಮಾಗಿ ಇರೋದು. ಬೇಕಾದಾಗ ತಿನ್ನೋದು. ಕೆಲಸಕ್ಕೆ ಆಳು, ಮಿಕ್ಸರ್, ವಾಶಿಂಗ್ ಮಶೀನ್, ಯಾವುದಕ್ಕೂ ತಲೆ ಬಿಸಿಯಿಲ್ಲದ ತಂಪಾದ ಬಾಳು. ಎಲ್ಲ ಅವರವರ ಭಾಗ್ಯ.
ಆಕೆ ನಸು ನಕ್ಕು ನುಡಿದಳು 'ನಿಜ, ಎಲ್ಲ ಅವರವರ ಭಾಗ್ಯ!'
- ಡಾ. ಕೆ.ಎಸ್. ಚೈತ್ರಾ