ಜೈ ಜೈ ವಿಟ್ಲ

ಜೈ ಜೈ ವಿಟ್ಲ
Updated on: 

ಇತಿಹಾಸದ ಪುಟ ತಿರುವಿದಾಗ ಅನೇಕ ರಾಜವಂಶಗಳು, ಅರಮನೆಗಳು, ಅಳಿಸಿಹೋದ ಕಥೆಗಳು ಸಾಕಷ್ಟು ಸಿಗುತ್ತವೆ. ಇಂತಹ ರಾಜವಂಶಗಳಲ್ಲಿ ವಿಟ್ಲದ ಡೊಂಬ ಹೆಗ್ಗಡೆ ಮನೆತನವೂ ಒಂದು. ಈ ಹಿಂದೆ 11 ಗ್ರಾಮಗಳನ್ನು ಒಳಗೊಂಡ ವಿಟ್ಲ ಸೀಮೆಯನ್ನು ಶತಮಾನಗಳಿಗೂ ಅಧಿಕ ಆಳಿದ ಪರಂಪರೆ ಇವರದು.
ಈ ಸೀಮೆಯನ್ನು ವಿಟ್ಲ ಕಸಬಾ, ವಿಟ್ಲ ಮುಡ್ನೂರು, ವಿಟ್ಲ ಪಡ್ನೂರು, ಬಾಯಾರು, ಎರುಂಬು, ಚಿಪ್ಪಾರು, ಅಳಿಕೆ, ಪೆರುವಾಯಿ, ಮಾಣಿಲ, ಪುಣಚ, ಕೇಪು, ಕನ್ಯಾನ, ಕರೋಪಾಡಿ, ಕುಡಾಲು ಮೇರ್ಕಳ, ಸಾಲೆತ್ತೂರು, ಕುಳ, ಒಕ್ಕೆತ್ತೂರು, ಪೈವಳಿಕೆ, ಕೊಳ್ನಾಡು ಎಂದು 19 ಮಾಣೆಗಳಾಗಿ ವಿಂಗಡಿಸಲಾಗಿದೆ.
ಮಂಗಳೂರಿನಿಂದ ಕಲ್ಲಡ್ಕ ಮಾರ್ಗವಾಗಿ ಕಲ್ಲಡ್ಕ- ಕಾಸರಗೋಡು ಹೈವೇ ಮಧ್ಯೆ 40 ಕಿ.ಮೀ. ದೂರದಲ್ಲಿ ಈ ವಿಟ್ಲ ಸಿಗುತ್ತದೆ. ಇದರ ಮೂಲ ಕೆದಕುತ್ತಾ ಹೋದಂತೆ ವಿಶಿಷ್ಟ ಕಥೆಗಳು ಸಿಗುತ್ತಾ ಹೋಗುತ್ತವೆ. ಹಿಂದೆ ಡೊಂಬ ಹೆಗ್ಗಡೆ ವಂಶದ ಸದಸ್ಯರನ್ನು ಬಾಧಿಸುತ್ತಿದ್ದ ರೋಗ ಗುಣಪಡಿಸಲು ಇಷ್ಠಿಕಾ ಎಂಬ ಯಜ್ಞ ನಡೆಸುತ್ತಿದ್ದರು. ಇದರಿಂದ ವಿಟ್ಲವನ್ನು ಇಷ್ಠಿಕಾಪುರ ಎಂದು ಕರೆಯಲಾಗುತಿತ್ತು. ಕ್ರಿ.ಶ 1571ರ ಹೊತ್ತಿಗೆ ಇಷ್ಠಿಕಾಪುರ ಹೋಗಿ ವಿಠಲ ಅಥವಾ ವಿಟ್ಲ ಎಂದು ರೂಪಾಂತಗೊಂಡಿತು ಎಂದು ಶಾಸನದಿಂದ ತಿಳಿಯುತ್ತದೆ ಎಂದು ಇತಿಹಾಸ ತಜ್ಞ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರು 'ವಿಟ್ಲದ ಕ್ರಾಂತಿ' ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
ಟಿಪ್ಪು ದಾಳಿ
ಕ್ರಿ.ಶ.1426ರ ತಾಮ್ರಶಾಸನ ಪ್ರಕಾರ ಮುಂಡೀ ಸಿದ್ಧ ಶೇಖನು ವಿಟ್ಲವನ್ನಾಳಿದ ಪ್ರಥಮ ವ್ಯಕ್ತಿ. ನಂತರ ಕ್ರಿ.ಶ.1784ರಲ್ಲಿ ಮೈಸೂರನ್ನಾಳುತ್ತಿದ್ದ ಹೈದರಾಲಿಯ ಪುತ್ರ ಟಿಪ್ಪು ಸುಲ್ತಾನ್ ವಿಟ್ಲದ ಮೇಲೆ ದಾಳಿ ಮಾಡಿ, ಆ ವೇಳೆ ವಿಟ್ಲವನ್ನಾಳುತ್ತಿದ್ದ ಅಚ್ಯುತ ಹೆಗ್ಗಡೆಯನ್ನು ಬಂಧಿಸಿ ತಲೆಕಡಿದು ಕೊಂದ. ಆಗ ಭಯಗೊಂಡಿದ್ದ ಅರಮನೆಯ ಇತರೆ ಸದಸ್ಯರು ವಿಟ್ಲ ಸಮೀಪದ ಎರುಂಬಿನಲ್ಲಿರುವ ಇನ್ನೊಂದು ಸಣ್ಣ ಅರಮನೆಯಲ್ಲಿದ್ದರು. ಈ ಘಟನೆ ಬಳಿಕ ಟಿಪ್ಪು ವಿಟ್ಲದ ಅರಮನೆಯನ್ನು ಸುಡುತ್ತಾನೆ. ಈಗ ಇರುವುದು ಇದರ ಅವಶೇಷ ಮಾತ್ರ.
ಇದರ ಕುರುಹುಗಳಾದ ದೊಡ್ಡದಾದ ಕಲ್ಲಿನ ಆನೆಬಾಗಿಲು, ಅರಮನೆಯ ಅಂಗಳವಾಗಿದ್ದ ಈಗಿನ ಬಾಕಿಮಾರು ಗದ್ದೆ, ಕೆಲವು ಅಳಿದುಳಿದ ಕಲ್ಲಿನ ದ್ವಾರಕಗಳು ಮಾತ್ರ ಇವೆ. ಅರಮನೆ ನಾಶವಾದ ಮೇಲೆ ಉಳಿದವರು ಇನ್ನೊಂದು ಅರಮನೆ ಕಟ್ಟಿದರು. ಈಗಲೂ ಆ ಅರಮನೆ ಇದೆ. ಅಲ್ಲಿ ಈಗಲೂ ನೂರಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ!
ವಿಟ್ಲ ಸೀಮೆಗೆ ಸೇರಿದ್ದ ತಿಮ್ಮಣ್ಣ ಶಾಸ್ತ್ರಿ, ಭೀಮ ಶಾಸ್ತ್ರಿ ಮುಂತಾದವರು 100 ವರ್ಷಗಳ ಹಿಂದೆಯೇ ಪಂಚಾಂಗ ತಯಾರಿಸಲು ಬೇಕಾದ ವಿಷಯಗಳನ್ನು ತುಳು ಲಿಪಿಯಲ್ಲಿ ತಾಳೆಗರಿಯಲ್ಲಿ ಉಲ್ಲೇಖಿಸಿದ್ದರು ಎಂದು ತಿಳಿಯುತ್ತದೆ. ಕ್ರಿ.ಶ. 1887ರಲ್ಲಿ ತುಳು ಯಕ್ಷಗಾನವೊಂದನ್ನು ಬರೆಯಿಸಿದ್ದರು ಎಂದು ಇತಿಹಾಸ ಮೆಲುಕು ಹಾಕಿದಾಗ ತಿಳಿದುಬರುತ್ತದೆ. ಪ್ರಸ್ತುತ ಜನಾರ್ದನ ವರ್ಮ ಅರಸರು ವಿಟ್ಲ ಅರಮನೆಯ ರಾಜರು!
- ಉದಯ್ ವಿಟ್ಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com