ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡಿನ ಶತಮಾನದಿಂದೀಚಿಗಿನ ಗೋಡೆಗಳ ಗಾರೆ ಕೆರೆದು ನೋಡಿದರೆ ವ್ಯವಸ್ಥಿತವಾಗಿ ಜೋಡಿಸಿದ ಕೆಂಪು ಕಲ್ಲುಗಳ ದರ್ಶನ ಸಾಮಾನ್ಯ. ಪ್ರಾದೇಶಿಕವಾಗಿ ಇದಕ್ಕೆ ಮುರಗಲ್ಲು ಎನ್ನುತ್ತಾರೆ. ಅದರ ಮೂಲದ್ರವ್ಯ ಒಂದು ವಿಧದ ಗಟ್ಟಿ ಮಣ್ಣಾಗಿದ್ದರೂ ಸಿಮೆಂಟಿನ ಗಾರೆ ಹಾಕಿ ಕಟ್ಟಿದರೆ ಎಷ್ಟು ಅಂತಸ್ತುಗಳಿದ್ದರೂ ತಾರಸಿ ಮನೆಯ ಭಾರವನ್ನು ದೃಢವಾಗಿ ತಾಳಿಕೊಳ್ಳಬಲ್ಲ ಶಕ್ತಿ ಇದಕ್ಕಿದೆ. ಅಂತಹ ಗುಣ ಇದರದು.
ಎಲ್ಲ ಕಡೆ ಇಂಥ ಮುರಗಲ್ಲಿನ ನಿಕ್ಷೇಪಗಳಿಲ್ಲ. ಅದರ ಇರವನ್ನು ಗುರುತಿಸಿ ಮೇಲ್ಮಣ್ಣು ತೆಗೆದು ಆಳದಲ್ಲಿ ಪದರವಾಗಿರುವ ಈ ಕಲ್ಲನ್ನು ತೆಗೆಯಬೇಕು. ಇದಕ್ಕೆ ಮಾನವ ಶ್ರಮವೇ ಬೇಕು. ಜತೆಗೆ ಇದನ್ನು ತೆಗೆಯಲು ಸಂಬಂಧಿಸಿದ ಆಯುಧ (ಕೊಡಲಿ)ವೇ ಬೇಕು.
ಒಂಬತ್ತು ಇಂಚು ಅಗಲ, ಒಂದೂವರೆ ಅಡಿ ಉದ್ದವಾಗಿ ಕತ್ತರಿಸುವ ಒಂದೊಂದು ಕಲ್ಲು ಮೂವತ್ತೈದು ಕಿಲೋ ಭಾರವಿದೆ. ನಂತರದ ದಿನಗಳಲ್ಲಿ ಪವರ್ ಟಿಲ್ಲರ್ ಮೂಲಕ ಇದನ್ನು ಕತ್ತರಿಸುವ ವ್ಯವಸ್ಥೆ ಬಂದಿತು. ಆಗ ಇನ್ನೂ ಹೆಚ್ಚು ಉದ್ದವಿರುವ ಕಲ್ಲುಗಳು ಸಿಗತೊಡಗಿದವು. ಈ ಕಲ್ಲುಗಳಲ್ಲಿಯೂ ಒಂದೊಂದು ಊರಿನದು ಅದರದೇ ಖ್ಯಾತಿ (ಕೆಲವು ಕಳಪೆಯೂ ಆಗಿದ್ದಿದೆ) ಇದೆ.
ಹೆಚ್ಚಾಗಿ ಇಂತಹ ಕೆಂಪು ಕಲ್ಲುಗಳನ್ನು ಕಾಂಪೌಂಡ್, ಶೌಚಾಲಯದ ಗೋಡೆ ನಿರ್ಮಾಣಕ್ಕೆ ಮಾತ್ರ ಬಳಕೆಯಾಗುವುದೂ ಇದೆ. ನಿಸರ್ಗದ ಈ ಕೊಡುಗೆ ಮನೆ ಕಟ್ಟುವವರಿಗೆ ಸುಲಭ ದರದಲ್ಲಿ ಸಿಗುತ್ತಿತ್ತು. ಅದರ ಕೆಲಸಗಾರರಿಗೆ ಸಾಗಿಸುವ ಲಾರಿಯವರಿಗೆ ದಲ್ಲಾಲಿಗಳಿಗೆ ನಿಶ್ಚಿಂತ ಬದುಕಿಗೂ ನೆರವಾಗಿತ್ತು. ಆದರೆ ಸರ್ಕಾರದ ಗಣಿ ನಿಯಂತ್ರಣದ ಬಿಗಿ ಕಾನೂನಿನಿಂದಾಗಿ ಮನಬಂದಲ್ಲಿ ಈ ಕಲ್ಲನ್ನು ಕೀಳುವಂತಿಲ್ಲ.
ಹೀಗಾಗಿ ಒಂದು ಕಲ್ಲು ಮನೆ ಕಟ್ಟುವ ಜಾಗ ತಲುಪಿದಾಗ ಅದರ ಬೆಲೆ 30 ಆಗುತ್ತದೆ. ಇದರ ಓರೆ ಕೋರೆಗಳನ್ನು ಸರಿಯಾಗಿ ಕೆತ್ತಿ ಕಟ್ಟಲು ಒಂದು ಕಲ್ಲಿಗೆ 8 ಕೂಲಿ. ಸಿಮೆಂಟು ಮರಳಿನ ಲೆಕ್ಕ ಹಾಕಿದರೆ ಒಂದು ಅಡಿ ಗೋಡೆಗೆ 60- 70 ಖರ್ಚು ಬೀಳುತ್ತದೆ.
ಬಡವರಿಗೆ ಬಿಡಿ, ಉಳ್ಳವರಿಗೂ ನಿಸರ್ಗದ ಈ ಕೆಂಪು ಕಲ್ಲು ಈಗ ದುಬಾರಿ ಎನಿಸಿಬಿಟ್ಟಿದೆ. ಅಲ್ಲದೆ ಒಳ್ಳೆಯ ಮುರಗಲ್ಲಿನ ಗಣಿಗಳು ಖಾಲಿಯಾಗಿ ದೂರದ ಕಾಸರಗೋಡಿನಿಂದ ದ.ಕನ್ನಡಕ್ಕೆ ಈ ಕಲ್ಲನ್ನು ತರಿಸಬೇಕಾಗಿರುವುದು ಮತ್ತಷ್ಟು 'ಭಾರ'.
- ಪ.ರಾಮಕೃಷ್ಣ ಶಾಸ್ತ್ರಿ